ಶುಕ್ರವಾರ, ಮೇ 27, 2022
22 °C
ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ 6 ಅಡಿ ನೀರು

ಮಳೆಗೆ ಐವರ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಬುಧವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಗುರುವಾರ ಪ್ರವಾಹ ಬಂದಿದ್ದು, ಜಿಲ್ಲೆಯಲ್ಲಿ ನಾಲ್ವರು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಬ್ಬರು ಮಳೆ ನೀರಿಗೆ ಸಿಲುಕಿ ಮೃತಪಟ್ಟಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಹಲವು ಮನೆಗಳು ಹಾನಿಗೊಂಡಿವೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದ್ದು ಜನಜೀವನ ಸಹಜಸ್ಥಿತಿಗೆ ಮರಳತೊಡಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಮಳವೂರು ಕಿಂಡಿ ಅಣೆಕಟ್ಟೆಯ ದಂಡೆ ಗುರುವಾರ ಬೆಳಿಗ್ಗೆ ಒಡೆದಿದ್ದು, 20 ಮನೆಗಳು ಅಪಾಯಕ್ಕೆ ಸಿಲುಕಿವೆ. ಅಣೆಕಟ್ಟೆಯ ದಂಡೆಯನ್ನು ನಿಗದಿತ ಪ್ರಮಾಣಕ್ಕೆ ಎತ್ತರಿಸದಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಜಿಲ್ಲೆಯಲ್ಲಿ ನೇತ್ರಾವತಿ ಮತ್ತು ಇತರ ನದಿಗಳು ತುಂಬಿ ಹರಿಯುತ್ತಿರುವುದರಿಂದ ಉಪ್ಪಿನಂಗಡಿ, ಉಳ್ಳಾಲ, ಮಂಗಳೂರು ಹೊರವಲಯ ಸಹಿತ ಹಲವೆಡೆ ಪ್ರವಾಹದಂತಹ ಸ್ಥಿತಿ ನಿರ್ಮಾಣವಾಗಿದೆ.ನೀರು ಪಾಲು: ಬಂಟ್ವಾಳ ತಾಲ್ಲೂಕಿನ ಕರಿಯಂಗಳ ಗ್ರಾಮದ ಅಮ್ಮುಂಜೆಯಲ್ಲಿ ಫಲ್ಗುಣಿ ನದಿಯಲ್ಲಿ ಪ್ರವಾಹ ಬಂದಿದ್ದನ್ನು ನೋಡಲು ಹೋದ ಇಜಾದ್ (18) ಮತ್ತು ರಜಾಕ್ (18) ಎಂಬುವವರು ಗುರುವಾರ ಬೆಳಿಗ್ಗೆ ನೀರುಪಾಲಾಗಿದ್ದು, ಸಂಜೆ ಅದೇ ಸ್ಥಳದಲ್ಲಿ ಮೃತದೇಹಗಳು ಪತ್ತೆಯಾಗಿವೆ.ಇದೇ ತಾಲ್ಲೂಕಿನ ಹರೇಕಳದಲ್ಲಿ ಗುರುವಾರ ಸಂಜೆ ಖಲಂದರ್ ಎಂಬುವವರು ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟರು. ಕೊಜೆಪಾಡಿ ಎಂಬಲ್ಲಿ ನಡೆದು ಹೋಗುತ್ತಿದ್ದ ಅವರು ಪ್ರವಾಹದಿಂದ ನೀರು ತುಂಬಿದ್ದ ರಸ್ತೆಯಲ್ಲಿ ಕೆಸರಿಗೆ ಬಿದ್ದರು. ಮೇಲೇಳುವುದು ಸಾಧ್ಯವಾಗದೆ ಅವರು ಮೃತಪಟ್ಟರು.ಬೆಳ್ತಂಗಡಿ ತಾಲ್ಲೂಕಿನ ನಾವೂರು ಗ್ರಾಮದ ಪರಾರಿ ಮನೆ ನಿವಾಸಿ ಮಹಾಬಲ ಮೂಲ್ಯ (26) ಎಂಬುವವರು ಗುರುವಾರ ಬೆಳಿಗ್ಗೆ  ಮರದ ಸೇತುವೆ ಮೇಲೆ ಹೋಗುವಾಗ ಆಯ ತಪ್ಪಿ ನದಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.ಸುಬ್ರಹ್ಮಣ್ಯ ದ್ವೀಪ: ಬುಧವಾರ ಸಂಜೆಯಿಂದ ಗುರುವಾರ ಮಧ್ಯಾಹ್ನದ ವರೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ಎಲ್ಲಾ ರಸ್ತೆಗಳೂ ನೆರೆ ನೀರಿನಲ್ಲಿ ಮುಚ್ಚಿ ಹೋಗಿದ್ದರಿಂದ ಸುಬ್ರಹ್ಮಣ್ಯ ಅಕ್ಷರಶಃ ದ್ವೀಪವಾಯಿತು. ಸುಳ್ಯ-ಗುತ್ತಿಗಾರು ಕಡೆಯಿಂದ ಸುಬ್ರಹ್ಮಣ್ಯಕ್ಕೆ ಬರುವುದಕ್ಕೆ ಮಾತ್ರ ಅಡ್ಡಿ ಉಂಟಾಗಲಿಲ್ಲ. ಉಪ್ಪಿನಂಗಡಿಯಲ್ಲಿ ನೇತ್ರಾವತಿ- ಕುಮಾರಧಾರಾ ನದಿಗಳು ಸಂಗಮವಾಗಿದ್ದು, ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರರಮಣೀಯ ದೃಶ್ಯ ಕಂಡುಬಂತು. ಉಪ್ಪಿನಂಗಡಿ ಸಮೀಪ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ, ಬಿ.ಸಿ.ರೋಡ್- ಕಡೂರು ಹೆದ್ದಾರಿಗಳಲ್ಲಿ ನೀರು ನಿಂತಿದ್ದರಿಂದ ಹಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.ರೈಲು ಪುನರಾರಂಭ: ಎಡಕುಮೇರಿ ಸಮೀಪ ಗುಡ್ಡ ಕುಸಿದು ರೈಲು ಸಂಚಾರಕ್ಕೆ ಉಂಟಾಗಿದ್ದ ಅಡಚಣೆ ನಿವಾರಿಸಲಾಗಿದ್ದು, ಗುರುವಾರದಿಂದ ಬೆಂಗಳೂರು- ಮಂಗಳೂರು ನಡುವೆ ರೈಲು ಓಡಾಟ ಆರಂಭವಾಗಿದೆ.ಮೂಡುಬಿದಿರೆಯ ನೆಲ್ಲಿಕಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿದಮಲೆ- ಪೆಂಚಾರು ಕೂಡುರಸ್ತೆ ಕೊಚ್ಚಿ ಹೋದರೆ, ಬೋರುಗುಡ್ಡೆಯ ಅಗ್ಗಬೆಟ್ಟು, ಪಣಪಿಲ ಮೂಡಬೈಲು ಹಾಗೂ ವಾಲ್ಪಾಡಿ ಅರ್ಬಿ ಎಂಬಲ್ಲಿ ಕಟ್ಟಪುಣಿಗಳು ಒಡೆದು ನೂರಾರು ಎಕರೆ ಕೃಷಿ ಭೂಮಿಗಳಿಗೆ ಹಾನಿಯಾಗಿದೆ. ಉಳ್ಳಾಲ ಸಮೀಪದ ನೇತ್ರಾವತಿ ಸೇತುವೆ ಆಸುಪಾಸಿನ ನೂರಾರು ಮನೆ, ಕಟ್ಟಡಗಳು ನೆರೆನೀರಿನಿಂದ ಆವೃತವಾಗಿದ್ದು ಇಡೀ ಪ್ರದೇಶ ಸಾಗರದಂತೆ ಗೋಚರಿಸುತ್ತಿತ್ತು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ-ಕಾಲೇಜುಗಳಿಗೆ ಶುಕ್ರವಾರ ರಜೆ ಸಾರಲಾಗಿದೆ.  ಉಡುಪಿ ಜಿಲ್ಲೆಯಲ್ಲೂ ವರುಣನ ಆರ್ಭಟ ಮುಂದುವರೆದಿದೆ. ಆದರೆ ಸಾವು-ನೋವಿನ ವರದಿಯಾಗಿಲ್ಲ.ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಮಾಗುಂಡಿಯಲ್ಲಿ ಬುಧವಾರ ಬೈಕ್‌ನಲ್ಲಿ ತೆರಳುತ್ತಿದ್ದ ಜುಲ್ಫಿಕರ್ ಎಂಬುವವರು ಭದ್ರಾ ನದಿಯ ಪ್ರವಾಹಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ. ಅವರ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ. ತುಂಗಾ, ಭದ್ರಾ, ಮತ್ತು ಹೇಮಾವತಿ ನದಿ ನೀರಿನ ಪ್ರವಾಹ ಸ್ವಲ್ಪಮಟ್ಟಿಗೆ ತಗ್ಗಿದೆ.ಭಾಗಮಂಡಲ ಜಲಾವೃತ: ಕೊಡಗು ಜಿಲ್ಲೆಯಾದ್ಯಂತ ಗುರುವಾರ ಧಾರಾಕಾರವಾಗಿ ಮಳೆ ಸುರಿದಿದೆ. ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ನದಿಯ ದಡದಲ್ಲಿರುವ ಕೆಲವು ಮನೆಗಳಿಗೆ ಹಾನಿಯಾಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜನರಿಗೆ ಜಿಲ್ಲಾಡಳಿತ ಸೂಚಿಸಿದೆ.ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಶುಕ್ರವಾರ ರಜೆ ಘೋಷಿಸಿದ್ದಾರೆ. ಆದರೆ ದ್ವಿತೀಯ ಪಿಯು ಪೂರಕ ಪರೀಕ್ಷೆಗಳು ಮಾತ್ರ ಎಂದಿನಂತೆ ನಡೆಯಲಿವೆ ಎಂದು ಹೇಳಿದ್ದಾರೆ.ಕಾವೇರಿ ಉಕ್ಕಿ ಹರಿದಿರುವ ಪರಿಣಾಮವಾಗಿ ಭಾಗಮಂಡಲ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಮಳೆಯ ಅಬ್ಬರಕ್ಕೆ ಹಲವು ಕಡೆ ಮನೆಗಳು ಕುಸಿದಿವೆ. ರಸ್ತೆಬದಿಯ ಮಣ್ಣು ಕುಸಿದು ಮಡಿಕೇರಿ- ಮಂಗಳೂರು ರಸ್ತೆ ಸಂಚಾರಕ್ಕೆ ಕೆಲವು ಗಂಟೆಗಳ ಕಾಲ ತಡೆಯುಂಟಾಗಿತ್ತು.ಮಡಿಕೇರಿಯ ರಾಜರ ಗದ್ದುಗೆ ಬಳಿಯ ಮನೆಯೊಂದು ಕುಸಿದು ಪತಿ-ಪತ್ನಿ ಗಾಯಗೊಂಡಿದ್ದಾರೆ. ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರಾಣಿಪೇಟೆ, ಮಂಗಳಾದೇವಿ ನಗರದಲ್ಲಿ ಮಣ್ಣು ಕುಸಿತ ಸಂಭವಿಸಿದೆ.ನಾಪೋಕ್ಲು- ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆ ಜಲಾವೃತವಾಗಿದ್ದು, ವಾಹನ ಸಂಚಾರ ಕಡಿತಗೊಂಡಿದೆ. ಸಮೀಪದ ಬಲ್ಲಮಾವಟಿ ಬಳಿ ತಂಡ್ರಹೊಳೆ ಸೇತುವೆ ಮೇಲೆ ಪ್ರವಾಹ ಬಂದಿದ್ದು ಸಂಚಾರ ಸ್ಥಗಿತಗೊಂಡಿದೆ.ಭಾಗಮಂಡಲದಲ್ಲಿ ಕಾವೇರಿ ನದಿಯ ಪ್ರವಾಹದಿಂದ ನಾಪೋಕ್ಲು ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಕೋರಂಗಾಲ, ಅಯ್ಯಂಗೇರಿ, ಸಣ್ಣ ಪುಲಿಕೋಟು, ದೊಡ್ಡ ಪುಲಿಕೋಟು, ಪೇರೂರು ಗ್ರಾಮಗಳ ಕೆಲವು ಪ್ರದೇಶಗಳು ಜಲಾವೃತವಾಗಿವೆ. ನಾಪೋಕ್ಲುವಿನಿಂದ ಭಾಗಮಂಡಲ ಕಡೆಗೆ ತೆರಳುವ ಬಸ್ಸುಗಳು ಬಲ್ಲಮಾವಟಿ ಗ್ರಾಮದವರೆಗೆ ತೆರಳುತ್ತಿವೆ. ನಾಪೋಕ್ಲು ವಿರಾಜಪೇಟೆ ರಸ್ತೆ ಕಕ್ಕಬ್ಬೆಯಲ್ಲಿ `ಕಕ್ಕಬ್ಬೆ ಹೊಳೆ' ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.ವಿರಾಜಪೇಟೆ ತಾಲ್ಲೂಕಿನ ನೆಲ್ಲಿಹುದಿಕೇರಿಯ ಬೆಟ್ಟದಕಾಡು ಬಳಿಯ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಕರಡಿಗೋಡಿನ ಆರು ಮನೆಗಳು ಜಲಾವೃತವಾಗಿವೆ. ಬರಡಿ, ಕರಡಿಗೋಡು, ನಾಪೋಕ್ಲು ಸ್ಥಳಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ಇಲ್ಲಿಗೆ ತೆರಳುವಂತೆ ಸ್ಥಳೀಯ ಜನರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ಸೂಚನೆ: ಕಾವೇರಿ ನದಿಯ ದಂಡೆಯ ಚೆರಿಯಪರಂಬು ಬಳಿ ವಾಸವಿರುವ ಜನರಿಗೆ ಗುಡಿಸಲು ತೊರೆದು, ಸುರಕ್ಷಿತ ಸ್ಥಳಗಳಿಗೆ ತೆರಳಲು ಅಧಿಕಾರಿಗಳು ಸೂಚನೆ ನೀಡಲಾಗಿದೆ.ಕೈಕೊಟ್ಟ ದೋಣಿ: ಭಾಗಮಂಡಲವು ಜಲಾವೃತಗೊಂಡಿರುವ ಪರಿಣಾಮ ಜನರ ಸಾಗಾಟಕ್ಕೆ ಬಳಸಿದ್ದ ಮೋಟಾರ್ ದೋಣಿಯು ಗುರುವಾರ ಬೆಳಿಗ್ಗೆ ಕೆಟ್ಟು ನಿಂತಿತು. ಇದರಿಂದಾಗಿ ಸ್ಥಳೀಯ ವ್ಯಕ್ತಿಯೊಬ್ಬರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ನದಿ ದಾಟಿ ಒಯ್ಯಲು ಸ್ಥಳೀಯರು ಹರಸಾಹಸಪಟ್ಟರು.ಮೋಟಾರ್ ದೋಣಿ ಕೆಟ್ಟುಹೋಗಿದ್ದರಿಂದ ಇದಕ್ಕೆ ಪರ್ಯಾಯವಾಗಿ ಬಳಸಲು ದುಬಾರೆ ಕ್ಯಾಂಪ್‌ನಿಂದ `ರಬ್ಬರ್ ದೋಣಿ'ಯನ್ನು (ರ‌್ಯಾಫ್ಟ್) ತರಿಸಿಕೊಳ್ಳಲಾಯಿತು. ಸಂಜೆಯಿಂದಲೇ ಅದು ಕಾರ್ಯಾಚರಣೆ  ಆರಂಭಿಸಿದೆ.ಮಳೆ ವಿವರ: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 124.96 ಮಿ.ಮೀ ಮಳೆಯಾಗಿದೆ. ಭಾಗಮಂಡಲದಲ್ಲಿ 215.2 ಮಿ.ಮೀ, ಶ್ರೀಮಂಗಲದಲ್ಲಿ 171.2 ಮಿ.ಮೀ, ಶಾಂತಳ್ಳಿಯಲ್ಲಿ 180 ಮಿ.ಮೀ, ಮಡಿಕೇರಿಯಲ್ಲಿ 164.4 ಮಿ.ಮೀ ಮಳೆಯಾಗಿದೆ.ಕೆಆರ್‌ಎಸ್‌ಗೆ 2 ಅಡಿ ನೀರು: ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದ ಒಳಹರಿವಿನಲ್ಲಿ ತೀವ್ರ ಹೆಚ್ಚಳವಾಗಿದೆ. ಒಂದೇ ದಿನ ಎರಡು ಅಡಿಗೂ ಹೆಚ್ಚು ನೀರು ಬಂದಿದೆ.ಕಬಿನಿ ಜಲಾಶಯ ಭರ್ತಿ: ಕಬಿನಿ ಜಲಾಶಯ ಭರ್ತಿಯಾಗಿದ್ದು, 60 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.  ನದಿ ಪಾತ್ರದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ ಎಂದು ಕರ್ನಾಟಕ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಕೆ. ಶಿವಮೂರ್ತಿ ತಿಳಿಸಿದ್ದಾರೆ.ಜನಜೀವನ ಸಹಜ ಸ್ಥಿತಿಗೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ದಿನಗಳಿಂದ ಕರಾವಳಿ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಧಾರಾಕಾರ ಸುರಿದ ಮಳೆಯ ಆರ್ಭಟ ಗುರುವಾರ ಕಡಿಮೆಯಾಗಿದೆ. ಅಂಕೋಲಾ, ಕುಮಟಾ, ಶಿರಸಿ, ಹೊನ್ನಾವರ ತಾಲ್ಲೂಕುಗಳಲ್ಲಿ ಪ್ರವಾಹ ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಶಿರಸಿ, ಸಿದ್ದಾಪುರ ಸೇರಿದಂತೆ ಕೆಲವೆಡೆ ಬುಧವಾರ ಮಧ್ಯಾಹ್ನದಿಂದಲೇ ಮಳೆ ಇಳಿಮುಖವಾಗಿದೆ.ಗುರುವಾರ ಮಳೆರಾಯ ಬಿಡುವು ನೀಡಿದ್ದರಿಂದ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಗಂಗಾವಳಿ ಪ್ರವಾಹ ಇಳಿಮುಖವಾಗಿದ್ದು, ವಾಹನ ಸಂಚಾರ ಸುಗಮಗೊಂಡಿದೆ. ಕುಮಟಾದ ಅಘನಾಶಿನಿ, ಹೊನ್ನಾವರದ ಶರಾವತಿ, ಕಾರವಾರ ತಾಲ್ಲೂಕಿನ ಕಾಳಿ ನದಿಯಲ್ಲಿ ನೀರಿನ ಅಬ್ಬರ ಕಡಿಮೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ (ಅಂಕೋಲಾ - ಹುಬ್ಬಳ್ಳಿ)  ಸಂಚಾರ ಸುಗಮವಾಗಿತ್ತು.  ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕುಗಳಲ್ಲಿಯೂ ಮಳೆ ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ಗುರುವಾರ ಶಾಲೆ-ಕಾಲೇಜು ಎಂದಿನಂತೆ ತೆರೆದಿದ್ದವು. ಶಿರಸಿ ತಾಲ್ಲೂಕಿನ ಶಾಲ್ಮಲಾ ಹಾಗೂ ವರದಾ ನದಿ, ಕೆಂಗ್ರೆಹೊಳೆಯ ಪ್ರವಾಹ ಇಳಿಮುಖವಾಗಿದ್ದು, ರಸ್ತೆ ಸಂಚಾರ ಸುಗಮವಾಗಿದೆ.ಆಲಮಟ್ಟಿ ಜಲಾಶಯದ ಒಳಹರಿವು ಗುರುವಾರ 24,654 ಕ್ಯೂಸೆಕ್‌ಗೆ ಹೆಚ್ಚಿದೆ.ಮುಂದುವರಿದ ಪ್ರವಾಹ: ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಗುರುವಾರ ಕಡಿಮೆಯಾಗಿದ್ದರೂ ನದಿಗಳಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.ಮಂಡಗದ್ದೆಯಲ್ಲಿ ತುಂಗಾ ಜಲಾಶಯ ಹಿನ್ನೀರಿನಲ್ಲಿ ಶಿವಮೊಗ್ಗ-ಮಂಗಳೂರು ರಸ್ತೆ ಮುಳುಗಿದ್ದು, ಗುರುವಾರವೂ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.ತುಂಗಾ ಜಲಾಶಯದಿಂದ ಸುಮಾರು 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಶಿವಮೊಗ್ಗ ನಗರದಲ್ಲಿ ತುಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಲಿಂಗನಮಕ್ಕಿ ಜಲಾಶಯಕ್ಕೆ ದಾಖಲೆಯ 1,03,587 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಒಂದೇ ದಿನದಲ್ಲಿ 6 ಅಡಿ ನೀರು ಬಂದು ಜಲಾಶಯದ ನೀರಿನಮಟ್ಟ 1,778 ಅಡಿಗೆ ಮುಟ್ಟಿದೆ. ಜಲಾನಯನ ಪ್ರದೇಶದಲ್ಲಿ 194.6 ಮಿ.ಮೀ. ಮಳೆ ಸುರಿದಿದೆ.ಭದ್ರಾ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದ್ದು, 38,590 ಕ್ಯೂಸೆಕ್ ನೀರು ಜಲಾಶಯದ ಒಡಲು ಸೇರುತ್ತಿದೆ. 24 ಗಂಟೆಗಳಲ್ಲಿ 4 ಅಡಿ ನೀರು ಬಂದಿದ್ದು, ನೀರಿನಮಟ್ಟ 142.9 ಅಡಿಗೆ ತಲುಪಿದೆ.ಜಿಲ್ಲೆಯ ಹಲವೆಡೆ, ಭತ್ತ, ಅಡಿಕೆ, ಬಾಳೆ, ಶುಂಠಿ ಬೆಳೆಗಳಿಗೆ ನಷ್ಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.