ಬೆಂಗಳೂರು: 1983ರಲ್ಲಿನ ಸಂಭ್ರಮ ಮರುಕಳಿಸಬೇಕು. ಕಪಿಲ್ ದೇವ್ ಅವರಂತೆಯೇ ಮಹೇಂದ್ರ ಸಿಂಗ್ ದೋನಿ ಕೂಡ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಬೇಕು. ಇದೇ ಆಶಯದೊಂದಿಗೆ ಭಾರತ ತಂಡವು ಈ ಬಾರಿಯ ವಿಶ್ವಕಪ್‌ಗೆ ಬುಧವಾರ ಇಲ್ಲಿ ತಾಲೀಮು ಆರಂಭಿಸಿತು.
‘ಮಹಿ’ ಬಳಗದ ಹದಿನೈದು ಆಟಗಾರರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂಥ ವ್ಯಾಯಾಮದಲ್ಲಿ ತೊಡಗಿದರು. ಕೋಚ್ ಗ್ಯಾರಿ ಕರ್ಸ್ಟನ್ ಮಾತ್ರ ಮೊದಲ ದಿನದ ತಾಲೀಮಿನಲ್ಲಿ ಹೆಚ್ಚಿನ ಗಮನ ನೀಡಿದ್ದು ಗಾಯಗೊಂಡು ಚೇತರಿಸಿಕೊಂಡಿರುವ ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಕಡೆಗೆ.
ವಿಶ್ವಕಪ್‌ನಲ್ಲಿ ದೆಹಲಿಯ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಪ್ರಮುಖ ಪಾತ್ರ ವಹಿಸುವರು ಎನ್ನುವುದು ಕರ್ಸ್ಟನ್‌ಗೂ ಸ್ಪಷ್ಟವಾಗಿದೆ. ಆದ್ದರಿಂದಲೇ ಆಕ್ರಮಣಕಾರಿ ಆಟವಾಡಬಲ್ಲ ‘ಗೌಥಿ’ ಹಾಗೂ ‘ವೀರೂ’ ಅವರು ಬ್ಯಾಟ್ ಬೀಸಲು ಎಷ್ಟರ ಮಟ್ಟಿಗೆ ಸಮರ್ಥರಾಗಿದ್ದಾರೆಂದು ಕೋಚ್ ಸೂಕ್ಷ್ಮವಾಗಿ ಗಮನಿಸಿದರು.
ಕ್ರಮವಾಗಿ ತೋಳು ಹಾಗೂ ಮೊಣಕೈ ಗಾಯದಿಂದ ಬಳಲಿದ್ದ ಸೆಹ್ವಾಗ್ ಮತ್ತು ಗಂಭೀರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಪಾಲ್ಗೊಂಡಿರಲಿಲ್ಲ. ವಿಶ್ವಕಪ್‌ಗಾಗಿ ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳುವ ಉದ್ದೇಶದಿಂದ ಇವರಿಬ್ಬರಿಗೆ ವಿಶ್ರಾಂತಿ ನೀಡಲಾಗಿತ್ತು. ಚಿಕಿತ್ಸೆ ಹಾಗೂ ವಿಶ್ರಾಂತಿಯ ನಂತರ ಮಹತ್ವದ ಟೂರ್ನಿಯಲ್ಲಿ ಆಡಲು ಅವರು ಸಜ್ಜಾಗಿದ್ದಾರೆನ್ನುವುದೂ ಸ್ಪಷ್ಟವಾಗಿದೆ. ಈಗ ಯಾವುದೇ ದೈಹಿಕ ಸಮಸ್ಯೆ ಅವರಿಗೆ ಕಾಡುತ್ತಿಲ್ಲ ಎನ್ನುವುದೂ ಖಚಿತವಾಗಿದೆ.
ಮೊದಲು ನೆಟ್ಸ್‌ನಲ್ಲಿ ಕಾಣಿಸಿಕೊಂಡ ವೀರೂ ಸುಮಾರು ಮೂವತ್ತು ನಿಮಿಷಗಳ ಕಾಲ ಬೌಲರ್‌ಗಳನ್ನು ಎದುರಿಸಿದರು. ಆನಂತರ ಗಂಭೀರ್ ತಮ್ಮ ಸಹಜ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಯಾವುದೇ ತೊಂದರೆ ಇಲ್ಲ ಎನ್ನುವಂತೆ ತಮ್ಮ ಕೋಚ್ ಕಡೆಗೆ ನೋಡಿದರು. ಯುವರಾಜ್ ಸಿಂಗ್ ನೆಟ್ಸ್‌ನಲ್ಲಿ ಇದ್ದಾಗಲೂ ಕರ್ಸ್ಟನ್ ಸಾಕಷ್ಟು ಹೊತ್ತು ಅವರು ಆಡುವ ರೀತಿಯನ್ನು ನೋಡಿದ್ದು ಗಮನ ಸೆಳೆಯಿತು.
ಹದಿನಾರು ದಿನಗಳ ವಿರಾಮದ ನಂತರ ಒಟ್ಟಿಗೆ ತಾಲೀಮು ನಡೆಸುತ್ತಿರುವ ಭಾರತ ತಂಡದ ಆಟಗಾರರಲ್ಲಿ ಉತ್ಸಾಹ ಕಾಣಿಸಿತು. ಫುಟ್‌ಬಾಲ್ ಆಡುವ ಮೂಲಕವೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದರು. ಎರಡು ತಂಡಗಳಾಗಿ ಆಡಿದ ಮೂವತ್ತು ನಿಮಿಷಗಳ ಫುಟ್‌ಬಾಲ್ ಪಂದ್ಯದಲ್ಲಿ ಕೋಚ್ ಕರ್ಸ್ಟನ್ ಕೂಡ ಪಾಲ್ಗೊಂಡರು.
ಅವರಿಂದ ಚೆಂಡನ್ನು ಕಿತ್ತುಕೊಂಡು ಮುನ್ನುಗ್ಗಲು ಯುವ ಆಟಗಾರರು ಪ್ರಯತ್ನಿಸಿದರು. ಒತ್ತಡದಿಂದ ಮುಕ್ತವಾಗಿ ವಿಶ್ವಕಪ್‌ನಲ್ಲಿ ಹೋರಾಡುವ ವಿಶ್ವಾಸದ ನಗೆಯು ಎಲ್ಲರ ಮುಖದಲ್ಲಿಯೂ ನಲಿದಾಡಿತು. ತಂಡದಲ್ಲಿರುವ ಅತ್ಯಂತ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಚೆಂಡನ್ನು ಗುರಿ ಸೇರಿಸುವ ಹುಮ್ಮಸ್ಸಿನಿಂದ ಮುನ್ನುಗ್ಗಿದರು. ದಣಿವಿಲ್ಲದ ಆಟವಾಡುವ ಛಲವು ಪ್ರವಾಹವಾಗಿ ಹರಿಯಿತು.
ಆನಂತರ ಸಚಿನ್ ಸೇರಿದಂತೆ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ನೆಟ್ಸ್‌ನಲ್ಲಿ ಬ್ಯಾಟ್ ಬೀಸಿದರು. ನಂತರ ಸಾಕಷ್ಟು ಹೊತ್ತು ಎನ್‌ಸಿಎ ಜಿಮ್‌ನಲ್ಲಿ ವ್ಯಾಯಾಮ ಮಾಡಿದರು. ಹರಭಜನ್ ಸಿಂಗ್ ಸೇರಿಂದರೆ ಎಲ್ಲ ಬೌಲರ್‌ಗಳು ಬೌಲಿಂಗ್ ಕೋಚ್ ಎರಿಕ್ ಸಿಮಾನ್ಸ್ ಮಾರ್ಗದರ್ಶನ ಪಡೆದರು. ಸಾಂದರ್ಭಿಕ ಬೌಲರ್‌ಗಳಾದ ಯೂಸುಫ್ ಪಠಾಣ್ ಹಾಗೂ ಯುವರಾಜ್ ಸಿಂಗ್ ಕೂಡ ತಮ್ಮ ಬೌಲಿಂಗ್ ತಂತ್ರದ ಬಗ್ಗೆ ಸಿಮಾನ್ಸ್ ಜೊತೆಗೆ ಚರ್ಚೆ ಮಾಡಿದರು. ಕೊನೆಯಲ್ಲಿ ಸಿಮಾನ್ಸ್ ಅವರು ಪಿಯೂಶ್ ಚಾವ್ಲಾ, ಆರ್.ಅಶ್ವಿನ್ ಹಾಗೂ ಎಸ್.ಶ್ರೀಶಾಂತ್ ಕಡೆಗೆ ಗಮನ ನೀಡಿದರು. ಸಾಕಷ್ಟು ಹೊತ್ತು ಈ ಮೂವರು ಬೌಲಿಂಗ್ ಮಾಡುವುದನ್ನು ಗಮನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.