ಶುಕ್ರವಾರ, ಜೂನ್ 18, 2021
23 °C

ಮಾಜಿ ಪ್ರಧಾನಿಯೇ ಇಲ್ಲಿ ಸೋತಿದ್ದರು!

ಉದಯ ಯು. / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಚಿಕ್ಕಮಗಳೂರು ಜಿಲ್ಲೆಯ ಕಡೂರನ್ನೂ ಒಳಗೊಂಡಂಥ ಹಾಸನ ಲೋಕಸಭಾ ಕ್ಷೇತ್ರವನ್ನು ಒಂದು ದಶಕದಿಂದ ಜಾತ್ಯತೀತ ಜನತಾದಳ ತನ್ನ ಭದ್ರ ಕೋಟೆಯಾಗಿಸಿಕೊಂಡಿದೆ. ಇಡೀ ರಾಜ್ಯವೇ ಇತ್ತ ನೋಡುವಂತೆ ಮಾಡಿದೆ.



1991ರ (ಆಗ ಜನತಾ ಪರಿವಾರ) ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್‌.ಸಿ. ಶ್ರೀಕಂಠಯ್ಯ ಅವರನ್ನು ಸೋಲಿಸಿ ಸಂಸತ್ತನ್ನು ಪ್ರವೇಶಿಸಿದ ಎಚ್‌.ಡಿ. ದೇವೇಗೌಡ ಅವರು ಅಲ್ಲಿಂದ ಇಲ್ಲಿಯವರೆಗೂ ಈ ಕ್ಷೇತ್ರದಲ್ಲಿ ಹಿಡಿತವನ್ನು ಬಲಗೊಳಿಸುತ್ತಲೇ ಬಂದಿದ್ದಾರೆ. 



ಜೆಡಿಎಸ್‌ ಕ್ಷೇತ್ರದಲ್ಲಿ ಬಲಿಷ್ಠವಾಗಿದೆ ಎಂಬುದು ನಿಜವಾಗಿ­ದ್ದರೂ, ದೇವೇಗೌಡ ಅವರು ಪ್ರಧಾನಿ ಹುದ್ದೆಯಿಂದ ಇಳಿದ ಬಳಿಕವೂ ಇಲ್ಲಿಯ ಜನ ಅವರನ್ನು ಸೋಲಿಸಿದ ಉದಾಹರಣೆಯೂ ಇದೆ. ಕಳೆದ ಚುನಾವಣೆಯಲ್ಲಿ (2009) ಎರಡು ಲಕ್ಷ ಮತಗಳಿಗೂ ಹೆಚ್ಚು ಅಂತರದ ಗೆಲುವನ್ನೂ ಕೊಟ್ಟಿದ್ದಾರೆ.



ಈವರೆಗೆ ನಡೆದ 15 ಚುನಾವಣೆಗಳಲ್ಲಿ ಎಂಟು ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ ರಾಷ್ಟ್ರದಾದ್ಯಂತ ಕಾಂಗ್ರೆಸ್‌ ಅಲೆ ಇದ್ದಾಗಲೂ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋತಿ­ದ್ದಾರೆ. 1957 ಮತ್ತು 1962ರಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಸಿದ್ದನಂಜಪ್ಪ ಗೆಲುವು ಸಾಧಿಸಿದ್ದರೆ, 1967ರಲ್ಲಿ ಸ್ವತಂತ್ರ ಅಭ್ಯರ್ಥಿ ಶಿವಪ್ಪ ಗೆದ್ದಿದ್ದರು. ಅನಂತರದ ಎರಡು ಚುನಾವಣೆ (1971, 1974) ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದರೆ 1977ರಲ್ಲಿ ಭಾರತೀಯ ಲೋಕದಳದ ಟಿಕೆಟ್‌ನಲ್ಲಿ (ಐಎಲ್‌ಡಿ) ಎಸ್. ನಂಜೇಶಗೌಡ ಆಯ್ಕೆಯಾಗಿದ್ದರು.



1980 ಮತ್ತು 1984ರಲ್ಲಿ ಕಾಂಗ್ರೆಸ್‌ನ ಎಚ್‌.ಎನ್‌. ನಂಜೇಗೌಡ ಮತ್ತು 1989ರಲ್ಲಿ ಎಚ್‌.ಸಿ. ಶ್ರೀಕಂಠಯ್ಯ ಆಯ್ಕೆ­ಯಾದರು. ಅಲ್ಲಿಯವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಲಿಷ್ಠ­ವಾಗಿಯೇ ಇತ್ತು. 1991ರ ಚುನಾವಣೆಯಲ್ಲಿ ಇಲ್ಲಿ ಹೊಸ ಅಧ್ಯಾಯ ಆರಂಭವಾಯಿತು.



ಮೊದಲ ಬಾರಿಗೆ ಜನತಾ ಪಕ್ಷದ ಅಭ್ಯರ್ಥಿಯಾಗಿ ಎಚ್‌.ಡಿ. ದೇವೇಗೌಡ ಆಯ್ಕೆಯಾ­ದರು. ಆದರೆ ಅವರ ಗೆಲುವಿನ ಅಂತರ ಕೇವಲ 3191 ಮತಗಳು.



1994ರಲ್ಲಿ ದೇವೇಗೌಡರು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು  ರಾಜ್ಯ ರಾಜಕೀಯಕ್ಕೆ ಮರಳಿ ಮುಖ್ಯಮಂತ್ರಿ ಆದರು. ಮುಂದೆ 96ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ವೈ.ಎನ್‌. ರುದ್ರೇಶಗೌಡ (ಇವರು ಈಗ ಬೇಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ) ಆಯ್ಕೆಯಾದರು.



ರಾಜಕೀಯ ಸ್ಥಿತ್ಯಂತರದ ಪರಿಣಾಮ­ವಾಗಿ ದೇವೇಗೌಡ  1996ರ ಜೂನ್‌ 1ರಿಂದ 1997ರ ಏಪ್ರಿಲ್‌ 21ರವರೆಗೆ  ಪ್ರಧಾನಿಯಾಗಿದ್ದರು. 1998 ರ ಚುನಾವಣೆಯಲ್ಲಿ  ಮತ್ತೆ ಇಲ್ಲಿ ಜನತಾ ದಳದಿಂದ ಕಣಕ್ಕಿಳಿದು  ಗೆದ್ದರು.



1999ರ ಚುನಾವಣೆಯಲ್ಲಿ ಹಾಸನದ ರಾಜಕೀಯ ಚಿತ್ರಣ ಬದಲಾ­ಯಿತು. ಜಾತ್ಯತೀತ ಜನತಾ ದಳದ ಪ್ರಶ್ನಾತೀತ ನಾಯಕ  ದೇವೇಗೌಡರನ್ನು ಇಲ್ಲಿ ಕಾಂಗ್ರೆಸ್‌ನ ಜಿ. ಪುಟ್ಟಸ್ವಾಮಿ ಗೌಡ  ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಸೋಲಿಸಿದರು.



ಆದರೆ, 2004 ಮತ್ತು 2009ರಲ್ಲಿ ಕ್ರಮವಾಗಿ ಕಾಂಗ್ರೆಸ್‌ನ ಶ್ರೀಕಂಠಯ್ಯ ಹಾಗೂ ಬಿಜೆಪಿಯ ಕೆ.ಎಚ್‌. ಹನುಮೇಗೌಡ ಅವರನ್ನು ಸೋಲಿಸಿದ ದೇವೇಗೌಡ ಅವರು  ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಕಾಂಗ್ರೆಸ್‌ನ ಸಿದ್ದ­ನಂಜಪ್ಪ  (1957, 1962) ಹಾಗೂ ಎಚ್‌.ಎನ್‌. ನಂಜೇ­ಗೌಡ (1980, 1984) ಅವರು ಈ ಕ್ಷೇತ್ರ­ದಿಂದ ಎರಡೆರಡು ಬಾರಿ ಆಯ್ಕೆಯಾಗಿದ್ದರು. ಈ ಸಾಧನೆ­ಯನ್ನು ಮುರಿದ ಶ್ರೇಯಸ್ಸು ದೇವೇಗೌಡ ಅವರಿಗೆ ಸಲ್ಲುತ್ತದೆ. 1991ರಲ್ಲಿ ಮೊದಲ ಬಾರಿ ಈ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ ದೇವೇ­ಗೌಡನಂತರ ಮೂರು ಚುನಾವಣೆಗಳಲ್ಲಿ ಆಯ್ಕೆಯಾಗಿದ್ದಾರೆ.



ಬಲಿಷ್ಠ ಹಿಡಿತ: 1991ರ ಬಳಿಕ ಹಾಸನದಲ್ಲಿ ಜನತಾ ಪರಿವಾರ ಗಟ್ಟಿಗೊಳ್ಳುತ್ತಾ ಹೋಯಿತು ಎಂಬುದು ಒಂದೆಡೆ­ಯಾದರೆ, ಶ್ರೀಕಂಠಯ್ಯ ಬಳಿಕ ಕಾಂಗ್ರೆಸ್‌ನಲ್ಲಿ ಅಂಥ ನಾಯಕರೂ ಸೃಷ್ಟಿಯಾಗಿಲ್ಲ ಎಂಬುದೂ ಅಷ್ಟೇ ನಿಜ. ವಿಧಾನಸಭಾ ಕ್ಷೇತ್ರ ವಿಂಗಡಣೆಯ ಬಳಿಕ ಮಾಜಿ ಸಚಿವ ಬಿ. ಶಿವರಾಂ ಅವರಿಗೂ ಗೆಲುವಿನ ರುಚಿ ಸಿಕ್ಕಿಲ್ಲ. ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್‌ನಲ್ಲಿದ್ದ ಕೆಲವು ಮುಖಂಡರು ಕ್ರಮೇಣ ಜೆಡಿಎಸ್‌ ತೆಕ್ಕೆಗೆ ಜಾರಿಕೊಂಡರು. ಹೀಗಾಗಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಜೆಡಿಎಸ್‌ ಶಾಸಕರೇ ಗೆದ್ದರು. ಕಾಂಗ್ರೆಸ್‌ ಪಕ್ಷ ಅರಕಲಗೂಡು ಹಾಗೂ ಬೇಲೂರು ಕ್ಷೇತ್ರಗಳಿಗೆ ಸೀಮಿತವಾಯಿತು.



ಹಂತ ಹಂತವಾಗಿ ಎಲ್ಲ ಸ್ಥಳೀಯ ಸಂಸ್ಥೆಗಳೂ ಜೆಡಿಎಸ್‌ ತೆಕ್ಕೆಗೆ ಬಂದವು. ಅಲ್ಲಿಯೂ ಕೆಳ ಹಂತದ ನಾಯಕರು ಜೆಡಿಎಸ್‌ ಕಡೆ ಜಾರಿಕೊಂಡರು. ‘ಕಾಂಗ್ರೆಸ್‌ನೊಂದಿಗೆ ಹಿಂದಿನಿಂದಲೇ ಗುರುತಿಸಿಕೊಂಡವರು ಈಗ ಕಾಂಗ್ರೆಸ್‌ ಮುಖಂಡರಾಗಿದ್ದಾರೆ. ಉಳಿದವರು ಮತದಾರರು. ನಮ್ಮಲ್ಲಿ ಕಾರ್ಯಕರ್ತರೇ ಇಲ್ಲ’ ಎಂದು ಈಗ ಕಾಂಗ್ರೆಸ್‌ನ ನಾಯಕರೇ ಹೇಳುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.