ಶುಕ್ರವಾರ, ಮೇ 29, 2020
27 °C

ಮೆಟ್ರೊ ಕುತೂಹಲ

ಮಾಲತಿ ಭಟ್ Updated:

ಅಕ್ಷರ ಗಾತ್ರ : | |

ಮೆಟ್ರೊ ಕುತೂಹಲ

ನಗರದ ಜನ ಕಾಲು ಶತಮಾನದಿಂದ ಕಾಯುತ್ತಿದ್ದ ಶುಭ ಸಮಯ ಹತ್ತಿರ ಬಂದಿದೆ. ಗುರುವಾರ `ನಮ್ಮ ಮೆಟ್ರೊ~ ಮೊದಲ ಬಾರಿಗೆ ಪ್ರಯಾಣಿಕರನ್ನು ಹೊತ್ತು ಸಾಗಿಸಲಿದೆ. ಉದ್ಯಾನ ನಗರಿ, ಐಟಿ ನಗರಿ ಎಂದೆಲ್ಲ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರಿನ ಪ್ರತಿಷ್ಠೆಗೆ ಮತ್ತೊಂದು ಗರಿ.ಸಿಗ್ನಲ್‌ಗಳಲ್ಲಿ ಐದೈದು ನಿಮಿಷ ನಿಲ್ಲುತ್ತ, ಬುಸ್‌ಗುಡುವ ವಾಹನಗಳ ಹೊಗೆ ಕುಡಿಯುತ್ತ ಆಟೊಗಳಲ್ಲಿ, ಟ್ಯಾಕ್ಸಿಗಳಲ್ಲಿ, ದ್ವಿಚಕ್ರ ವಾಹನಗಳಲ್ಲಿ, ತುಂಬಿ ತುಳುಕುವ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದ ಕೆಲವು ಮಂದಿಯಾದರೂ ದೊಡ್ಡ ನಿಟ್ಟುಸಿರು ಬಿಡಲಿದ್ದಾರೆ.ಹಲವು ವಿಘ್ನ, ಅಡಚಣೆಗಳ ನಡುವೆಯೂ `ಮೆಟ್ರೊ~ ಕನಸು ನನಸಾಗುವ ಖುಷಿ ಅವರಿಗೆ.

ಮೊದಲ ಹಂತದ ಮೆಟ್ರೊ ರೈಲು ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿಯವರೆಗೆ ಸಂಚರಿಸಲಿದೆ. ಕೆ.ಆರ್. ಪುರ, ಓಎಂಬಿಆರ್ ಲೇಔಟ್, ರಾಮಮೂರ್ತಿ ನಗರ, ಮಹಾದೇವಪುರ, ಎನ್‌ಜಿಇಎಫ್ ಬಡಾವಣೆ, ಕಸ್ತೂರಿ ಬಡಾವಣೆ, ಸಿ.ವಿ. ರಾಮನ್ ನಗರದ ನಿವಾಸಿಗಳು, ವೈಟ್‌ಫೀಲ್ಡ್‌ಗೆ ಸಂಚರಿಸುವ ಬಹುರಾಷ್ಟ್ರೀಯ ಕಂಪೆನಿಗಳ ನೌಕರರೆಲ್ಲ `ನಮ್ಮ ಮೆಟ್ರೊ~ ದಲ್ಲಿ ಸಂಚರಿಸಲು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಮೆಟ್ರೊ ಉದ್ಘಾಟನೆಯ ಸಂತಸ ಕೇವಲ ನಗರದ ಪೂರ್ವಭಾಗಕ್ಕೆ ಸೀಮಿತವಾಗಿಲ್ಲ. ಈ ರೈಲಿನ ಕುರಿತ ಕುತೂಹಲ ನಗರದ ಎಲ್ಲ ಬಡಾವಣೆಯ ಜನರಲ್ಲಿ ಎದ್ದು ಕಾಣುತ್ತಿದೆ. ಅದಕ್ಕೆ ಕಾರಣ ನಾಲ್ಕೈದು ವರ್ಷಗಳಿಂದ ಬೆಂಗಳೂರಿನ ಜನ ಅನುಭವಿಸುತ್ತಿರುವ ಕಿರಿಕಿರಿ.ಮೆಟ್ರೊ ಕಾಮಗಾರಿಯಿಂದ ಅಗೆದು ಬಿದ್ದ ರಸ್ತೆಗಳಲ್ಲಿ, ಬಾಯಿ ತೆಗೆದ ಗುಂಡಿಗಳಲ್ಲಿ ಸಂಚರಿಸುವ ಮಂದಿಯೆಲ್ಲ, `ಮುಂದೊಂದು ದಿನ ತಾವು ರೈಲಿನಲ್ಲಿ ಪ್ರಯಾಣಿಸಬಹುದು. ಮುಂದಿನ ಪೀಳಿಗೆ ಮಾಲಿನ್ಯದ ಸೋಂಕಿಲ್ಲದ ಪರಿಶುದ್ಧ ಹವೆಯನ್ನು ಉಸಿರಾಡಬಹುದು. ಆಟೊ ಚಾಲಕರ ಕಾಟದಿಂದ ತಪ್ಪಿಸಿಕೊಳ್ಳಬಹುದು, ಬಿಎಂಟಿಸಿ ಬಸ್‌ಗಳ ನೂಕುನುಗ್ಗಲು, ಸೆಕೆಯಿಂದ ಮುಕ್ತಿ ಪಡೆಯಬಹುದು~ ಎಂಬ ಕನಸಿನಲ್ಲೇ ದಿನದೂಡುತ್ತಿದ್ದರು.ಮೆಟ್ರೊ ಕಾಮಗಾರಿಯಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದರೂ ಭಾರಿ ಪ್ರತಿಭಟನೆ ಎಲ್ಲಿಯೂ ನಡೆಯಲಿಲ್ಲ. ಬೆಂಗಳೂರು ಭಾಷೆಯಲ್ಲೇ ಹೇಳುವುದಾದರೆ ಭವಿಷ್ಯದಲ್ಲಿ ಭಾರಿ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಈ ಒಂದೆರಡು ವರ್ಷ `ಅಡ್ಜಸ್ಟ್ ಮಾಡಿಕೊಂಡು ಹೋಗಬೇಕು~ ಎಂಬ ಮನೋಭಾವವೇ ಎಲ್ಲರಲ್ಲೂ ಕಾಣುತ್ತಿತ್ತು. ಆದರೆ, ಜನರ ಸಹನೆಯ ಮಿತಿ ಪರೀಕ್ಷಿಸುವಂತೆ ಕಾಮಗಾರಿ `ಬಸವನ ಹುಳು~ವಿನ ವೇಗದಲ್ಲಿ ಸಾಗಿತ್ತು.ವಿಜಯನಗರ, ರಾಜಾಜಿನಗರ, ಕಾರ್ಡ್ ರೋಡ್, ಆರ್.ವಿ. ರಸ್ತೆ, ತುಮಕೂರು ರಸ್ತೆಗಳಲ್ಲಿ ಕುಂಟುತ್ತ ನಡೆಯುತ್ತಿರುವ ಮೆಟ್ರೊ ಕಾಮಗಾರಿಯಿಂದ ಬೇಸತ್ತಿರುವ ಜನರೆಲ್ಲ ತಮ್ಮ ಬೇಸರವನ್ನು ಬದಿಗಿಟ್ಟು ಈಗ ಸಂಭ್ರಮ ಪಡುತ್ತಿದ್ದಾರೆ. ಹವಾನಿಯಂತ್ರಿತ ಅತ್ಯಾಧುನಿಕ ಬೋಗಿಯ ಮೆಟ್ರೊ ರೈಲು ಹತ್ತಿ ಬರಬೇಕು ಎಂಬ ಮಗು ಸಹಜ ಕುತೂಹಲ ಎಲ್ಲರಲ್ಲೂ ಕಾಣುತ್ತಿದೆ.`ಒಮ್ಮೆ ಎಂ.ಜಿ. ರಸ್ತೆಗೆ ಹೋಗ್ಬೇಕ್ರಿ, ನಮ್ ಮಗ್ನ ಮನೆಗೆ ಹೋಗಿದ್ದಾಗ ಡೆಲ್ಲಿಲಿ ಟ್ರೇನ್ ಹತ್ತಿದ್ದೆ. ಅದರ ಮಜವೇ ಬೇರೆ~ ಎನ್ನುತ್ತಾರೆ ರಾಜಾಜಿನಗರದ ಮುಖೇಶ್ ಪಟೇಲ್.

`ಅಂತೂ ಅಲ್ಲಿ ಶುರುವಾಯ್ತು ಅಂದ್ರೆ ಇಲ್ಲಿ ಒಂದೆರಡು ವರ್ಷದ ಮೇಲಾದ್ರೂ ರೈಲು ಬರುತ್ತಲ್ಲ~ ಎನ್ನುತ್ತಾರೆ ಕೆಲಸದ ನಿಮಿತ್ತ ವಿಜಯನಗರದಿಂದ ಪೀಣ್ಯಕ್ಕೆ ನಿತ್ಯ ಸಂಚರಿಸುವ ಪ್ರಕಾಶ್.ಎಂ.ಜಿ. ರಸ್ತೆಯ ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ದಿವ್ಯಾ ಸಹೋದ್ಯೋಗಿಗಳೊಂದಿಗೆ ರೈಲು ಹತ್ತುವ `ಪ್ಲಾನ್~ ಮಾಡುತ್ತಿದ್ದಾರೆ. `ನಮ್ಮನೆ ಇರೋದು ಯಶವಂತಪುರ, ಆದ್ರೆ ಎತ್ತರದಿಂದ ಬೆಂಗಳೂರು ಹೇಗೆ ಕಾಣುತ್ತೆ. ನಾವು ಓಡಾಡುವ ಜಾಗ, ನಮ್ಮ ಆಫೀಸ್ ಹೇಗೆ ಕಾಣುತ್ತೆ ಅಂತ ನೋಡ್ಬೇಕು~ ಅಂತಾರೆ ಆಕೆ.ಸಮರೋಪಾದಿಯಲ್ಲಿ ತಾಲೀಮು

ಇತ್ತ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಸಿಬ್ಬಂದಿ ಸಮರೋಪಾದಿಯಲ್ಲಿ ಉದ್ಘಾಟನೆಗೆ ತಾಲೀಮು ನಡೆಸಿದ್ದಾರೆ. ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣದ ಕಡೆ ಹಾಯ್ದವರಿಗೆ ಉದ್ಘೋಷಕಿಯ ಇಂಪಾದ ಧ್ವನಿ ಆಗಾಗ್ಗೆ ಕಿವಿಯ ಮೇಲೆ ಬೀಳುತ್ತಿದೆ.ಯುನಿಫಾರಂ ಧರಿಸಿದ ಸಿಬ್ಬಂದಿ ಪ್ರಯಾಣಿಕರನ್ನು ಸ್ವಾಗತಿಸಲು ಸಿದ್ಧವಾಗಿದ್ದಾರೆ. ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿಯವರೆಗೆ ದಿನಕ್ಕೆ ಹತ್ತಾರು ಬಾರಿ ರೈಲು ಪರೀಕ್ಷಾರ್ಥ ಸಂಚರಿಸುತ್ತಿದೆ.ಬಿಬಿಎಂಪಿ, ಬಿಎಂಟಿಸಿ ಸಹ `ನಮ್ಮ ಮೆಟ್ರೊ~ ಸಂಚಾರಕ್ಕೆ ಸಿದ್ಧತೆ ನಡೆಸಿವೆ. ಬಿಎಂಟಿಸಿ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಫೀಡರ್ ಸೇವೆ ಆರಂಭಿಸುತ್ತಿದೆ. ಬೈಯಪ್ಪನಹಳ್ಳಿ ನಿಲ್ದಾಣದ ಬಳಿ ವಾರದಿಂದ ಈಚೆಗೆ ಹೊಸ ವಾಣಿಜ್ಯ ಸಂಕೀರ್ಣ, ಮಾಲ್ ಉದ್ಘಾಟನೆಗೊಂಡಿವೆ. ಸಮೂಹ ಸಾರಿಗೆ ವ್ಯವಸ್ಥೆಯೊಂದು ಜನರ ಜೀವನಶೈಲಿಯನ್ನು ಹೇಗೆ ಬದಲಿಸಬಲ್ಲದು ಎಂಬುದರ ಮೊದಲ ಸೂಚನೆ ಇದು.ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ ಎಂ. ಜಿ. ರಸ್ತೆಗೆ ಮತ್ತೊಂದು ಕೋಟ್ ಡಾಂಬರು ಬಳಿಯಲಾಗಿದೆ. ಮಾಣೆಕ್ ಶಾ ಪೆರೇಡ್ ಮೈದಾನ, ಕಾರಿಯಪ್ಪ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ಭಾಗದಲ್ಲಿ ಫುಟ್‌ಪಾತ್ ನಿರ್ಮಿಸುವ ಕೆಲಸ ಭರದಿಂದ ಸಾಗಿದೆ.

`ಪ್ರಜಾವಾಣಿ~ ಕಚೇರಿ ಎದುರು ಇರುವ ಮೆಟ್ರೊ ಆರಂಭಿಕ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿರುವ ಪ್ರಿಪೇಯ್ಡ ಆಟೋ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ಬಿಲ್ಲಿಂಗ್ ಅಳವಡಿಸಲಾಗಿದೆ. ನಿಲ್ದಾಣ ಮತ್ತು ಸುತ್ತಲಿನ ಪ್ರದೇಶ ಭದ್ರತೆ ಕುರಿತು ನಿಗಾ ವಹಿಸಲು ಖುದ್ದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಮೆಟ್ರೊ ರೈಲಿನಲ್ಲಿ ಒಮ್ಮೆಲೇ ಸಾವಿರ ಜನ ಪ್ರಯಾಣಿಸಬಹುದು. ಕುತೂಹಲದಿಂದ ಮೊದಲ ಒಂದೆರಡು ತಿಂಗಳು ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಬಹುದು. ಆದರೆ, ರೈಲು ನಿಂತಾಗ ಒಮ್ಮೆಲೆ ಜನ ಹೇಗೆ ಇಳಿಯುತ್ತಾರೆ. ನೂಕು ನುಗ್ಗಲು ಆಗುತ್ತದೆಯೇ? ಹತ್ತು ನಿಮಿಷಕ್ಕೊಂದರಂತೆ ರೈಲು ಅತ್ತಿಂದಿತ್ತ ಚಲಿಸಲಿದೆ.

 

ಪೀಕ್ ಅವರ್ ಹೊರತುಪಡಿಸಿ ಇತರ ಸಮಯದಲ್ಲಿ ಪ್ರತಿ ರೈಲು ಭರ್ತಿಯಾಗುತ್ತದೆಯೇ? ಅಥವಾ ಖಾಲಿ, ಖಾಲಿ ಓಡುತ್ತದೆಯೇ? ಎಂಬೆಲ್ಲ ಪ್ರಶ್ನೆಗಳು ಈಗ ಉದ್ಭವಿಸುತ್ತಿವೆ. ಎಲ್ಲದಕ್ಕೂ ಗುರುವಾರದವರೆಗೂ ಕಾಯಬೇಕಿದೆ.

 

ಮೂರು ದಶಕಗಳ ಕನಸು

ಈ ಕ್ಷಿಪ್ರ ಸಮೂಹ ಸಾರಿಗೆ ವ್ಯವಸ್ಥೆಯ ಕಲ್ಪನೆ ಮೊಳೆತಿದ್ದು ಮೂರು ದಶಕಗಳ ಹಿಂದೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿಗೆ ವರ್ತುಲ ರಸ್ತೆ, ನಗರ ರೈಲು ವ್ಯವಸ್ಥೆ ನಿರ್ಮಿಸಬೇಕೆಂಬ ಮೂಲ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿತ್ತು. 1982, 83 ಮತ್ತು 88ರಲ್ಲಿ ಈ ಕುರಿತು ಸಮೀಕ್ಷೆ ನಡೆಸಲಾಯಿತು. 1994ರಲ್ಲಿ ಬೆಂಗಳೂರು ಸಮೂಹ ಕ್ಷಿಪ್ರ ಸಾರಿಗೆ ನಿಗಮವನ್ನು (ಬಿಎಂಆರ್‌ಟಿಎಲ್) ಸರ್ಕಾರ ಸ್ಥಾಪಿಸಿತು. ಆಗಲೂ ಅಧ್ಯಯನ, ಸಮೀಕ್ಷೆಗಳಷ್ಟೇ ನಡೆದವು.ಆದರೆ, ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮರೆತೇ ಹೋದಂತಿದ್ದ ಈ ಯೋಜನೆಗೆ ಜೀವ ಬಂತು. 2003ರಲ್ಲಿ ದೆಹಲಿ ಮೆಟ್ರೊ ರೈಲು ನಿಗಮ, ರೈಲ್ವೆ ಇಲಾಖೆ ಸಹಯೋಗದಲ್ಲಿ ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸಲಾಯಿತು. ಹಲವು ಅಡಚಣೆ, ವಿರೋಧದ ನಂತರ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ 2005ರ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಯೋಜನೆಗೆ ಹಸಿರು ನಿಶಾನೆ ತೋರಿತು. 2006ರಲ್ಲಿ ಕೇಂದ್ರ ಸರ್ಕಾರ ಯೋಜನೆ ಅಂಗೀಕರಿಸಿತು. 

ಬಸ್ ಸೇವೆ

`ನಮ್ಮ ಮೆಟ್ರೊ~ ರೈಲು ಸೇವೆಯ ಜತೆಗೇ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ `ಪೂರಕ ಸೇವೆ~ ಆರಂಭಿಸುತ್ತಿದೆ. ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿಯವರೆಗೆ ಸಿಗುವ ಮೆಟ್ರೊದ ಆರು ನಿಲ್ದಾಣಗಳಲ್ಲಿ ತಲಾ ಹತ್ತರಂತೆ 60 ಬಸ್‌ಗಳು ಸಂಚರಿಸಲಿವೆ.

 

ಬಿಎಂಟಿಸಿ ಸೌಲಭ್ಯ ಇಲ್ಲದಿರುವ ಮೆಟ್ರೊ ನಿಲ್ದಾಣಗಳ ಆಸುಪಾಸು ಇರುವ ಬಡಾವಣೆಗಳಿಗೆ ಈ ಬಸ್‌ಗಳು ತೆರಳಲಿವೆ. ವಾಯುವಜ್ರ ಬಸ್‌ಗಳು ವಿಮಾನ ಪ್ರಯಾಣಿಕರಿಗೆ ಸುಲಭ ಸಾರಿಗೆ ಕಲ್ಪಿಸಿದಂತೆ ಈ ಬಸ್‌ಗಳು ಕಾರ್ಯನಿರ್ವಹಿಸಲಿವೆ. ಕಿರುದಾದ ರಸ್ತೆ ಇರುವ ಕಡೆ ಸಂಚರಿಸಲು ಮಿನಿ ಬಸ್ ಸೇವೆ. ಗುಲಾಬಿ ಹಾಗೂ ತಿಳಿ ಬೂದು ಬಣ್ಣದ ಈ ಬಸ್‌ಗಳು ಮೆಟ್ರೊ ಬೋಗಿಗಳ ಪ್ರತಿಕೃತಿಯಂತೆ ಇರುತ್ತವೆ.ಟಿಕೆಟ್ ಕೊಳ್ಳುವ ಕಿರಿಕಿರಿಯಿಲ್ಲದೇ ಮೆಟ್ರೊ ರೈಲು ಹಾಗೂ ಫೀಡರ್ ಬಸ್ ಈ ಎರಡರಲ್ಲೂ ಸಂಚರಿಸಲು ಅನುಕೂಲವಾಗುವಂತೆ ಸಮಗ್ರ ಪಾಸ್ ವಿತರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಸೇವೆ ಹೆಚ್ಚಿಸಲಾಗುವುದು ಎನ್ನುತ್ತಾರೆ ಬಿಎಂಟಿಸಿ ಮುಖ್ಯ ಸಂಚಾರ ಅಧಿಕಾರಿ (ಕಾರ್ಯಾಚರಣೆ) ಪ್ರಭುದಾಸ್.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.