ಮಂಗಳವಾರ, ಮೇ 24, 2022
26 °C

ಯುವ ದಸರಾ...

ಧನ್ಯ ಅನುವನಹಳ್ಳಿ Updated:

ಅಕ್ಷರ ಗಾತ್ರ : | |

ಯುವ ದಸರಾ...

ವಿಶ್ವ ವಿಖ್ಯಾತ ದಸರಾ ಅಂಗವಾಗಿ ಮೈಸೂರಿನ  ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ `ಯುವ ದಸರಾ~ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ  ತಂಡಗಳು ಪ್ರಸ್ತುತಪಡಿಸಿದ ಹಾಡು, ನೃತ್ಯ ಪ್ರದರ್ಶನಗಳು ಸಾಂಸ್ಕೃತಿಕ ನಗರಿಯನ್ನು ಸಂತಸದ ಅಲೆಯಲ್ಲಿ  ನಲಿಯುವಂತೆ ಮಾಡಿದವು.ಅರಮನೆ ಊರಿನ ಮಹಾರಾಜ ಕಾಲೇಜು ಮೈದಾನದ `ಯುವ ದಸರಾ~ ವೇದಿಕೆಯಲ್ಲಿ ಇಳಿಸಂಜೆ ಹೊತ್ತಿನಲ್ಲಿ ಯುವ ಪಡೆಯ ಹಾಡು, ನೃತ್ಯ, ಸಂಗೀತ ಮನರಂಜನೆಯು ರಸದೌತಣ ಬಡಿಸಿತು.ಪಾರಂಪರಿಕ ನಗರಿ, ರಾಜ್ಯದ ಕಾಲೇಜು, ಜೊತೆಗೆ ಹರಿಯಾಣ, ಒಡಿಶಾ, ಪಂಜಾಬ್, ಅಸ್ಸಾಂ, ಮಿಜೋರಾಂ, ರುವಾಂಡ, ಶ್ರೀಲಂಕಾ, ಟಿಬೆಟ್, ನೇಪಾಳಿ ಹುಡುಗ-ಹುಡುಗಿಯರ ತಂಡಗಳ ಮೈನವಿರೇಳಿಸುವ ನೃತ್ಯಗಳು ಪ್ರೇಕ್ಷಕರನ್ನು ಆನಂದ ಸಾಗರದಲ್ಲಿ ಮಿಂದು ಏಳುವಂತೆ ಮಾಡಿದವು.ದಸರಾ ಸೊಬಗನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದವರಿಗೆ ಯುವ ಕಲಾವಿದರ ಸಾಂಸ್ಕೃತಿಕ ವೈಭೋಗದ ಸೊಬಗಿನ ಸಂಗೀತ, ಕುಣಿತ ನಾದಗಳು ಕಿಕ್ಕಿರಿದು ಸೇರಿದ್ದ ಕಲಾರಾಧಕರಲ್ಲಿ ಖುಷಿಯ ಕಿಚ್ಚು ಹಚ್ಚಿ ಹುಚ್ಚೆದ್ದು ಗ್ಯಾಲರಿಯಲ್ಲೇ ಸ್ಟೆಪ್ ಹಾಕುವಂತೆ ಮಾಡಿದವು.ಅದ್ದೂರಿ ವೇದಿಕೆ, ಅಬ್ಬರದ ಸಂಗೀತ, ವಸ್ತ್ರಾಡಂಬರ, ಜಗಮಗಿಸುವ ವಿದ್ಯುತ್ ದೀಪಗಳ ಹಿನ್ನೆಲೆ,  ಪೌರಾಣಿಕ- ಸಾಂಪ್ರದಾಯಿಕ-ಪಾಶ್ಚಾತ್ಯ ಹಾಡುಗಳ ಮೋಡಿ, ಭರ್ಜರಿ ನೃತ್ಯ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದವು.ಮೈದಾನದ ತುಂಬೆಲ್ಲಾ ರೋಮಾಂಚನ, ಹರ್ಷೋದ್ಗಾರ ಹರಡಿತು. ನೃತ್ಯಕ್ಕೆ ತಕ್ಕ ವಸ್ತ್ರ, ಹಾಡಿಗೆ ತಕ್ಕ ಹೆಜ್ಜೆ-ಗೆಜ್ಜೆ ನಾದವು ಅಲ್ಲಿ ಹದವಾಗಿ ಮೇಳೈಸಿತ್ತು.ಚೆಲ್ಲಿದರೂ ಮಲ್ಲಿಗೆಯಾ ಬಾನಾ ಸೂರೇರಿ ಮ್ಯಾಗೆ... ಎಲ್ಲೋ ಜೋಗಪ್ಪ ನಿನ್ನ ಅರಮನೆ.. ವಂದೇ ಮಾತರಂ...ಇಂಪಾದ ಹಾಡುಗಳಿಗೆ ಯುವಕ - ಯುವತಿಯರು ಹೆಜ್ಜೆ ಹಾಕಿದರು. ಕುಣಿತದ ಜತೆ, ಹಾಡು, ಸಂಗೀತದ ಹಿನ್ನೆಲೆಯು ನೃತ್ಯ- ಸಂಗೀತ ಪ್ರಿಯರನ್ನು ಏಕಕಾಲಕ್ಕೆ ಸಂತಸದ ಅಮಲಿನಲ್ಲಿ ತೇಲಿಸಿತು.ನೃತ್ಯಗಳು ರಂಜನೆಯ ಜೊತೆ ಜೊತೆಗೆ ಸಂದೇಶ ಸಾರುತ್ತ ಸಾಂಸ್ಕೃತಿಕ ವೈಶಿಷ್ಟ್ಯತೆ  ಬಿಂಬಿಸುತ್ತಿದ್ದವು. ವಿದೇಶಿ ತಂಡಗಳೂ ಆ ದೇಶಗಳ ನಾಟ್ಯ ಸೊಬಗನ್ನು ಅನಾವರಣಗೊಳಿಸಿದವು.ರಾಮ-ರಾವಣರ ಯುದ್ಧ, ಬಣ್ಣಗಳ ಚಿತ್ತಾರ, ಗ್ರಾಮೀಣ ಸೊಬಗು, ನವಿಲಿನ ನಾಟ್ಯ, ದಶಾವತರ ದರ್ಶನ, ಭ್ರಷ್ಟಾಚಾರ ವಿರುದ್ಧದ ಹೋರಾಟ ಇತ್ಯಾದಿ ಸಾರ ಒಳಗೊಂಡ ನೃತ್ಯಗಳು ನೆರೆದಿದ್ದವರ ಖುಷಿಗೆ ಕಿಚ್ಚು ಹಚ್ಚಿದ್ದವು. ಯುವ ಹೃದಯಗಳ ಹೆಜ್ಜೆ-ಗೆಜ್ಜೆ ಕುಣಿತದ ಸಪ್ಪಳದ ಗುಂಗಿಗೆ ಪ್ರೇಕ್ಷಕ ಸಾಗರದಲ್ಲಿ ಶಿಳ್ಳೆ, ಚಪ್ಪಾಳೆ, ಚೀರಾಟದ ಸದ್ದಿನದ್ದೇ ದರ್ಬಾರು.ಭರತನಾಟ್ಯ, ನೃತ್ಯರೂಪಕ, ಜಾಯ್ ಆಫ್ ಕಲರ್, ಫ್ಯೂಷನ್, ಧಮಾಲ್,ದಶಾವತಾರ, ಅರೆ ಶಾಸ್ತ್ರೀಯ ಕುಣಿತ, ತಾಲ್ ರಿದಂ ಆಫ್ ಲೈಫ್, ಋತುವೈಭವ, ಗೋಟಿಪುವಾ, ಬಾಂಗ್ಡಾ-ಚೀನಿ-ಬಂಬೂ- ಒಡಿಶಾ-ಬೀಹೂ-ರಾಜಸ್ತಾನಿ ನೃತ್ಯ, ರಾಮಾಯಣ ಡ್ಯಾನ್ಸ್ ಡ್ರಾಮಾ, ಕಂಟೆಪರರಿ, ಬ್ಯಾಲೆ, ಜಾನಪದ ನೃತ್ಯಗಳ ಅದ್ಭುತ ಪ್ರದರ್ಶನಗಳು ಸಾಂಸ್ಕೃತಿಕ ಸಗ್ಗದ ಸಿರಿಯನ್ನು ಅಲ್ಲಿ ಸೃಷ್ಟಿಸಿದವು.ಗಾಯಕರಾದ ಹರಿಹರನ್, ವಸುಂಧರಾ ದಾಸ್, ಕವಿತಾ ಕೃಷ್ಣಮೂರ್ತಿ, ವಿಶಾಲ್ ಶೇಖರ್, ಉದಿತ್ ನಾರಾಯಣ್, ನಂದಿತಾ-ಹೇಮಂತ್ ಇವರ ಸಂಗೀತ ಸುಧೆಗಳು ಆ ಮೈದಾನದಲ್ಲಿ ಪ್ರೇಕ್ಷಕ ದುಂಬಿಗಳ ಜೇನುಗೂಡನ್ನೇ ಕಟ್ಟಿಸಿದ್ದವು.

   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.