ಶನಿವಾರ, ಮಾರ್ಚ್ 6, 2021
21 °C

ರಾಷ್ಟ್ರೀಯ ಸೈಬರ್ ನೀತಿ ಪ್ರಕಟ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಸೈಬರ್ ನೀತಿ ಪ್ರಕಟ

ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿ ಬರುವ ಅತಿ ರಂಜನೀಯ  ಪ್ರಸಂಗ `ಆರು ತಿಂಗಳಷ್ಟು ದೀರ್ಘ ಕಾಲ ನಿದ್ರೆಯಲ್ಲಿರುತ್ತಿದ್ದ ಕುಂಭಕರ್ಣನನ್ನು ರಾಕ್ಷಸ ಸಮೂಹ ಎಚ್ಚರಿಸಲು ವಿವಿಧ ರೀತಿಯಲ್ಲಿ ಶ್ರಮಿಸಿದ್ದು'!ಕುಂಭಕರ್ಣನಾದರೋ ಎಷ್ಟೋ ವಾಸಿ. ಒಮ್ಮೆ ಮಲಗಿದನೆಂದರೆ 6 ತಿಂಗಳ ಕಾಲವಷ್ಟೆ ಗೊರಕೆ ಹೊಡೆಯುತ್ತಿದ್ದ. ಆದರೆ ನಮ್ಮಲ್ಲಿನ ಸರ್ಕಾರಗಳು ಸೈಬರ್ ಭದ್ರತೆ ಕುರಿತಂತೆ ಮಲಗಿದ್ದು ವರ್ಷಾನುಗಟ್ಟಳೆ.ಅಂತೂ ಇಂತೂ ಭಾರತ ಸರ್ಕಾರ ದೀರ್ಘ `ಕುಂಭಕರ್ಣ' ನಿದ್ದೆಯಿಂದ ಎಚ್ಚೆತ್ತಿದೆ. ನಿದ್ದೆಯಿಂದ ದಿಗ್ಗನೆ ಎದ್ದವರಂತೆ ಕಳೆದ ಮಂಗಳವಾರವಷ್ಟೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ `ರಾಷ್ಟ್ರೀಯ ಸೈಬರ್ ಭದ್ರತಾ ನೀತಿ'ಯನ್ನು ಪ್ರಕಟಿಸಿದ್ದಾರೆ.

ಈ ನೀತಿಯ ಕರಡು 2011ರ ಮೇ ತಿಂಗಳಲ್ಲೇ ರೂಪುಗೊಂಡಿತ್ತು. ಅದು ಜಾರಿಗೆ ಬರುವುದಕ್ಕೆ ಸರ್ಕಾರ ತೆಗೆದುಕೊಂಡ ಅವಧಿ ಬರೋಬ್ಬರಿ 2 ವರ್ಷಗಳು!ಇಂತಹದ್ದೊಂದು ನೀತಿಯ ಜರೂರು ಬಹಳ ಹಿಂದೆಯೇ ಭಾರತಕ್ಕಿತ್ತು. ಸೈಬರ್ ಸುರಕ್ಷತೆಯನ್ನು ಉಲ್ಲಂಘಿಸಿದ 13 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ಭಾರತದಲ್ಲಿ 2011ರಲ್ಲೇ ನಡೆದಿದ್ದವು. 2012ರಲ್ಲಿ ಭಾರತದ ಉನ್ನತ ಇಲಾಖೆಗಳ 12 ಸಾವಿರ ಮಂದಿಯ ಇ-ಮೇಲ್ ಖಾತೆಗಳಿಗೆ ಕನ್ನ ಹಾಕಲಾಗಿತ್ತು.ಇನ್ನು ಈ ವರ್ಷ ಕಳೆದ ತಿಂಗಳಷ್ಟೆ `ನೋರ್ಟನ್' ಸಂಸ್ಥೆ ಪ್ರಕಟಿಸಿದ `ಅಂತರ್ಜಾಲ ಭದ್ರತೆಗೆ ಬೆದರಿಕೆ' ಎಂಬ ವರದಿಯಂತೂ ಆತಂಕದ ಕಾರ್ಮೋಡಗಳೇ ಭಾರತದ ಸೈಬರ್ ದುನಿಯಾದಲ್ಲಿ ಕವಿಯುವಂತೆ ಮಾಡಿವೆ.ಅದರ ಪ್ರಕಾರ 420 ಲಕ್ಷ ಸೈಬರ್ ಅಪರಾಧ ಪ್ರಕರಣಗಳು ಭಾರತದಲ್ಲಿ ನಡೆಯುತ್ತಿವೆ. ಪ್ರತಿ ನಿಮಿಷಕ್ಕೆ 85 ಮಂದಿ ಭಾರತದಲ್ಲಿ ಹಲವು ವಿಧದ ಸೈಬರ್ ವಂಚನೆಗಳಿಗೆ ಒಳಗಾಗುತ್ತಿದ್ದಾರೆ ಎಂಬ ಬೆಚ್ಚಿ ಬೀಳಿಸುವ ಸಂಗತಿಯನ್ನು ವರದಿ ಪ್ರಸ್ತಾಪಿಸಿದೆ!ವರದಿಯ ಸತ್ಯಾಸತ್ಯತೆ ಏನೇ ಇರಲಿ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸೈಬರ್ ಅಪರಾಧ ಪ್ರಕರಣಗಳು ನಾಯಿಕೊಡೆಗಳಂತೆ ಹೆಚ್ಚುತ್ತಿರುವುದಂತೂ ಸುಸ್ಪಷ್ಟ.ಅಮೆರಿಕ ಜಾಗತಿಕವಾಗಿ ಮಾಡುತ್ತಿರುವ ಸೈಬರ್ ಗೂಢಚರ್ಯೆಯನ್ನು `ಎಡ್ವರ್ಡ್ ಸ್ನೊಡ್ನೆನ್' ಅವರು ಬಹಿರಂಗಗೊಳಿಸಿದ್ದು, ನೆರೆ ರಾಷ್ಟ್ರ ಚೀನಾ ಸದಾ ನಮ್ಮ ಭದ್ರತಾ ಸಂಸ್ಥೆಗಳ ಗಣಕಗಳಿಗೆ ಕನ್ನ ಹಾಕಲು ಹೊಂಚು ಹಾಕುತ್ತಿರುವುದು.. ಇವೆಲ್ಲಾ ಭಾರತೀಯ ಸೈಬರ್ ವಲಯಕ್ಕೆ ಭಾರಿ ಬೆದರಿಕೆಯನ್ನೇ ತಂದೊಡ್ಡಿವೆ.ಇದನ್ನು ಮನಗಂಡೇ ಮಾಜಿ ರಾಷ್ಟ್ರಪತಿ ಹಾಗೂ ಅಣು ವಿಜ್ಞಾನಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ತೀರಾ ಇತ್ತೀಚೆಗೆ ಹೈದರಾಬಾದಿನಲ್ಲಿನ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ಸೇನಾ ಕಾಲೇಜಿನ(ಮಿಲಿಟರಿ ಕಾಲೇಜ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್) ಘಟಿಕೋತ್ಸವದಲ್ಲಿ ಸೈಬರ್ ದಾಳಿ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದರು. ದೇಶದ ರಕ್ಷಣೆಗೆ ಸಂಬಂಧಿಸಿದ ದತ್ತಾಂಶಗಳನ್ನು ಶತ್ರು ರಾಷ್ಟ್ರಗಳು ಬೆಳಕಿನಷ್ಟು ವೇಗದಲ್ಲಿ ನುಂಗಿ ಹಾಕಬಲ್ಲವು ಎಂದು ಆತಂಕ ವ್ಯಕ್ತಪಡಿಸಿದ್ದರು. ಹೊಸ ನೀತಿಯ ಅಂಶಗಳು

ಸರ್ಕಾರ ಬಿಡುಗಡೆ ಮಾಡಿರುವ `ರಾಷ್ಟ್ರೀಯ ಸೈಬರ್ ಭದ್ರತಾ ನೀತಿ'ಯತ್ತ ಒಂದು ಪಕ್ಷಿನೋಟ.1. ಸೈಬರ್ ಭದ್ರತಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವುದು.2. ಮುಂದಿನ 5 ವರ್ಷಗಳಲ್ಲಿ ಸೈಬರ್ ಭದ್ರತಾ ನೈಪುಣ್ಯತೆಯುಳ್ಳ 5 ಲಕ್ಷ ಮಂದಿ ವೃತ್ತಿಪರರನ್ನು ರೂಪಿಸುವುದು. (ಸದ್ಯ ಇಂತಹ ಕೌಶಲಯುಕ್ತ ತಂತ್ರಜ್ಞರ ಸಂಖ್ಯೆ 22 ಸಾವಿರ).3. ದಿನದ 24 ತಾಸೂ ಕಾರ್ಯನಿರ್ವಹಿಸುವ ರಾಷ್ಟ್ರೀಯ ಮಟ್ಟದ ಕಂಪ್ಯೂಟರ್ ತುರ್ತು ಸ್ಪಂದನಾ ತಂಡವನ್ನು (ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್) ಕಟ್ಟುವುದು.4. ಈ ತಂಡ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಒಂದು ನೋಡಲ್ ಏಜೆನ್ಸಿಸ್ಥಾಪಿಸುವುದು. ಸಂದಿಗ್ಧ ಸಮಯದ ನಿರ್ವಹಣೆಯ ಜವಾಬ್ದಾರಿಯನ್ನು ಇದಕ್ಕೆ ವಹಿಸುವುದು.5. ಸೈಬರ್ ಭದ್ರತೆ ಕುರಿತಂತೆ ಮುನ್ನಚ್ಚರಿಕೆ ನೀಡುವುದಕ್ಕೆ ಹಾಗೂ ಭದ್ರತಾ ಬೆದರಿಕೆಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವುದಕ್ಕೆ, ಅಪಾಯಕ್ಕೆ ತುತ್ತಾಗುವಂತಹ ಸಂದಿಗ್ಧ ಸಮಯದ ನಿರ್ವಹಣೆ ಮಾಡುವುದಕ್ಕಾಗಿಯೇ ಒಂದು ಯಾಂತ್ರಿಕ ವ್ಯವಸ್ಥೆಯ ರಚನೆ.6. ಸೈಬರ್ ಭದ್ರತೆ ಕುರಿತಂತೆ ತಂತ್ರಜ್ಞಾನದ ಸುಧಾರಣೆ.7. ಸೈಬರ್ ಭದ್ರತೆಗೆ ಸಂಬಂಧಿಸಿದಂತೆ  ತರಬೇತಿಗಾಗಿ ಮೂಲಸೌಕರ್ಯಗಳನ್ನು ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ದೇಶಾದ್ಯಂತ ಒದಗಿಸುವುದು.8. ಸುಸಜ್ಜಿತವಾದ ಸೈಬರ್ ಭದ್ರತಾ ವ್ಯವಸ್ಥೆಯನ್ನು ರೂಪಿಸುವುದಕ್ಕೆ ಹಾಗೂ ಈ ಸಂಬಂಧದ ಹಲವು ವಿಷಯಗಳ ಕುರಿತಂತೆ ಸಮನ್ವಯ ಉಂಟು ಮಾಡಲು ರಾಷ್ಟ್ರೀಯ ಮಟ್ಟದ ಒಂದು ನೋಡಲ್ ಏಜೆನ್ಸಿಯನ್ನು ತೆರೆಯುವುದು.9. ಸೈಬರ್ ಭದ್ರತೆ ಕುರಿತಂತೆ ಒಂದು ಸೂಕ್ತ ನಿಯಂತ್ರಣಾತ್ಮಕ ಚೌಕಟ್ಟನ್ನು ರೂಪಿಸುವುದು.10. ಬಳಕೆದಾರರು ಸೂಕ್ತ ಜಾಗ್ರತೆ ವಹಿಸದೇ ಇರುವುದು ಸೈಬರ್ ಕಳ್ಳರಿಗೆ ಕೋಟೆ ಬಾಗಿಲು ತೆರೆದಿಟ್ಟಂತೆ. ಭಾರತದಲ್ಲಿ ಮುಖ್ಯವಾಗಿ ಮಕ್ಕಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಮಾಹಿತಿಯ ಕೊರತೆಯಿದೆ. ಇದನ್ನು ಮನಗಂಡೇ ಪ್ರಸಕ್ತ ನೀತಿಯು ರಾಷ್ಟ್ರೀಯ ಮಟ್ಟದಲ್ಲಿ ಅಂತರ್ಜಾಲವನ್ನು ಸುರಕ್ಷಿತವಾಗಿ ಬಳಸುವುದಕ್ಕೆ ಸಂಬಂಧಪಟ್ಟ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು, ಶಾಲಾ-ಕಾಲೇಜುಗಳಲ್ಲೇ ಇದಕ್ಕೆ ಸೂಕ್ತ ತರಬೇತಿ ನೀಡುವ ಗುರಿಯನ್ನು ಹೊಂದಿದೆ.ಕಡೆಗೂ ಭಾರತ ಸರ್ಕಾರಕ್ಕೆ ಜ್ಞಾನೋದಯವಂತೂ ಆಗಿದೆ. ಸೈಬರ್ ನೀತಿಯನ್ನು ಈಗಲಾದರೂ ಪ್ರಕಟಿಸಿದೆ. ಆದರೆ ಇದು ಎಷ್ಟರಮಟ್ಟಿಗೆ ಜಾರಿಗೆ ಬರುತ್ತದೆ? ಅದುವೇ ಈಗ ಎದುರಾಗಿರುವ ದೊಡ್ಡ ಪ್ರಶ್ನೆ.ಏಕೆಂದರೆ ನೀತಿಯ ಕರಡು ಪ್ರಕಟಗೊಂಡ ಎರಡು ವರ್ಷಗಳ ನಂತರ ಸರ್ಕಾರ ತನ್ನ ಅಂಗೀಕಾರ ಮುದ್ರೆಯನ್ನು ಒತ್ತಿದೆ. ಹೀಗಿರುವಾಗ ನೀತಿಯಲ್ಲಿನ ಅಂಶಗಳು ಪರಿಣಾಮಕಾರಿಯಾಗಿ ಜಾರಿಗೆ ಬಂದಲ್ಲಿ ಮಾತ್ರ ನಮ್ಮ ದೇಶದ ರಹಸ್ಯ ದತ್ತಾಂಶಗಳು ನಮ್ಮಲ್ಲೆ ಉಳಿಯುತ್ತವೆ.ಹೊಸನೀತಿ ಬಗ್ಗೆ ಟೀಕೆ

ಬಹು ನಿರೀಕ್ಷಿತ ಸೈಬರ್ ಭದ್ರತಾ ನೀತಿಯ ಗಜಪ್ರಸವದ ಬೆನ್ನಲ್ಲೇ ಅದರತ್ತ ಟೀಕಾಸ್ತ್ರಗಳೂ ಪ್ರಯೋಗವಾಗುತ್ತಿವೆ. ಕೆಲವು ತಜ್ಞರು ಇದು ಪ್ರಾಯೋಗಿಕ ಸಾಧುವೇ ? ಎಂಬ ಪ್ರಶ್ನೆ ಎತ್ತಿದ್ದಾರೆ.ಇದರಿಂದ ನಾಗರಿಕ ಸ್ವಾತಂತ್ರ್ಯಕ್ಕೆ ರಕ್ಷಣೆ ಸಿಗುತ್ತದೆಯೇ? ಎಂಬುದು ಬಹುತೇಕರ ಪ್ರಶ್ನೆ.ಏಕೆಂದರೆ ಈ ಬಗ್ಗೆ ನೀತಿಯಲ್ಲಿ ಪ್ರಸ್ತಾವವೇ ಇಲ್ಲ. ಬರೇ ದತ್ತಾಂಶ ರಕ್ಷಣೆ, ಮುನ್ನಚ್ಚರಿಕೆ, ತುರ್ತು ಸಮಯದ ನಿರ್ವಹಣೆ ಎಂದೇ ಹೇಳಲಾಗುತ್ತಿದೆಯೇ ಹೊರತು ಎಲ್ಲಿಯೂ ವ್ಯಕ್ತಿ ಸ್ವಾತಂತ್ರ್ಯ, `ಹ್ಯಾಕ್ಟಿವಿಸಂ' ಕುರಿತ ರಕ್ಷಣೆ ಮೊದಲಾದ ವಿಷಯಗಳ ಬಗ್ಗೆ ಚಕಾರವೇ ಇಲ್ಲಎಂಬುದು ಕೆಲವರ ಅಸಮಾಧಾನದ ನುಡಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.