ಶುಕ್ರವಾರ, ಫೆಬ್ರವರಿ 26, 2021
20 °C

ಲೋಕಚರಿತ ‘ಸಿನಿಮಾ ಸಂಡೇ’ ಹಂಗಾಮ

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

ಲೋಕಚರಿತ ‘ಸಿನಿಮಾ ಸಂಡೇ’ ಹಂಗಾಮ

ಸೃಜನಶೀಲ ಕಲೆಗಳ ಬಗ್ಗೆ ತಿಳಿದುಕೊಳ್ಳುವ, ಇದೇ ಉದ್ದೇಶದಿಂದಲೇ ಪ್ರತಿ ತಿಂಗಳ ಒಂದು ಭಾನುವಾರ ಒಟ್ಟಿಗೇ ಸೇರಿ ಆಸಕ್ತಿಕರ ಚಟುವಟಿಕೆಗಳನ್ನು ನಡೆಸುವ ಸಮಾನ ಉತ್ಸಾಹಿತರ ಆಪ್ತವಲಯ ‘ಲೋಕಚರಿತ’.ಸಹೃದಯರೂ ಒಟ್ಟಾಗಿ ಸೇರಿ ಸಮಾಜಮುಖಿ ಚಿಂತನೆ ನಡೆಸಬೇಕು, ಅದನ್ನು ನಮ್ಮ ಯುವ ಜನಾಂಗಕ್ಕೆ ಅದರಲ್ಲೂ ವಿದ್ಯಾರ್ಥಿಗಳಿಗೆ ತುರ್ತಾಗಿ ಮುಟ್ಟಿಸಬೇಕು ಎನ್ನುವುದು ‘ಲೋಕಚರಿತ’ದ ಪ್ರಮುಖ ಆಶಯಗಳಲ್ಲೊಂದು.ತಿಂಗಳಿಗೊಂದು ದಿನ ಅರ್ಧ ದಿನ ಆಪ್ತವಲಯದಲ್ಲಿ ‘ಲೋಕಚರಿತ ಕೂಟ’ ನಡೆಸುವ ಈ ತಂಡವು ಆಗೀಗ ಭಿನ್ನ ರೀತಿಯ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತದೆ. ಈಗ ‘ಸಿನಿಮಾ ಸಂಡೇ’ ಎಂಬ ಹೆಸರಿನಲ್ಲಿ ಮತ್ತೆ ಒಂದು ದಿನದ ಕಿರು ಚಿತ್ರೋತ್ಸವ ನಡೆಸಲು ಸಜ್ಜಾಗಿದೆ. ಇವರ ಪ್ರಯತ್ನಕ್ಕೆ ಎಂಇಎಸ್‌ ಲಿಟರರಿ ಕ್ಲಬ್‌ ಸಹಯೋಗವೂ ದೊರಕಿದೆ. ಇದೇ ಭಾನುವಾರ (ಜ.24)ರಂದು ಮಲ್ಲೇಶ್ವರದ ಎಂಇಎಸ್‌ ಕಾಲೇಜಿನಲ್ಲಿ ಈ ಸಿನಿಮೋತ್ಸವ ನಡೆಯಲಿದೆ.ಕನ್ನಡದ ಚಲನಚಿತ್ರ ನಿರ್ದೇಶಕ  ಬಿ.ಎಂ. ಗಿರಿರಾಜ್ ಈ ಸಲದ ಚಿತ್ರೋತ್ಸವದ ನಿರ್ದೇಶಕರಾಗಿದ್ದಾರೆ. ಅವರು ಈ ಉತ್ಸವದಲ್ಲಿ ಪ್ರದರ್ಶಿತವಾಗಲಿರುವ ಚಿತ್ರಗಳನ್ನು ಆಯ್ಕೆಮಾಡಿರುವುದಲ್ಲದೇ ಆ ದಿನದ ಸಂವಾದವನ್ನು ನಡೆಸಿಕೊಡುತ್ತಾರೆ. ಈ ಕಿರು ಚಿತ್ರೋತ್ಸವದ ಬಗ್ಗೆ ಕೇಳಿದರೆ ಅವರು ಉತ್ಸಾಹದಿಂದಲೇ ಮಾತನಾಡುತ್ತಾರೆ.ಮುಖ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅದನ್ನು ಹತ್ತಿಕ್ಕುವ ಪ್ರಯತ್ನಗಳು ಎಂಬ ವಿಷಯವನ್ನು ಗಮನದಲ್ಲಿರಿಸಿಕೊಂಡು ಆ ಕುರಿತಾಗಿ ತಯಾರಿಸಲಾದ ಸಿನಿಮಾಗಳನ್ನು ಗಿರಿರಾಜ್‌ ಆಯ್ಕೆ ಮಾಡಿದ್ದಾರೆ. ಮೂರು ಕಿರುಚಿತ್ರ, ಒಂದು ಸಾಕ್ಷ್ಯಚಿತ್ರ ಮತ್ತು ಒಂದು ಪೂರ್ಣಪ್ರಮಾಣದ ಸಿನಿಮಾ ಇಲ್ಲಿ ಪ್ರದರ್ಶಿತವಾಗಲಿವೆ.‘ಈ ಚಿತ್ರೋತ್ಸವದಲ್ಲಿ ಮಾತು ಮತ್ತು ಅದರ ಅಭಿವ್ಯಕ್ತಿ–ಅತಿಕ್ರಮಣಗಳ ಎಲ್ಲಾ ಆಯಾಮಗಳನ್ನು ಒಳಗೊಳ್ಳಲು ಪ್ರಯತ್ನಿಸಿದ್ದೇವೆ’ ಎಂದು ಗಿರಿರಾಜ್‌ ಹೇಳುತ್ತಾರೆ.ಸಿನಿಮಾ ಪ್ರದರ್ಶನಕ್ಕೆ ಮಾತ್ರ ‘ಸಿನಿಮಾ ಸಂಡೆ’ ಸೀಮಿತಗೊಂಡಿಲ್ಲ. ಇನ್ನೂ ಅನೇಕ ಚಟುವಟಿಕೆಗಳನ್ನು ಅದು ಒಳಗೊಂಡಿದೆ. ಕಥೆ ಹೇಳುವುದು, ಸಿನಿಮಾಗಳ ಬಗ್ಗೆ ಸಂವಾದಗಳೂ ಇರುತ್ತದೆ.‘ಲೋಕಚರಿತ ಸಿನಿಮಾ ಸಂಡೆಯಲ್ಲಿ ಪಾಲ್ಗೊಳ್ಳುವ ಬಹುತೇಕರು ಕಲಾತ್ಮಕ ಮನಸ್ಥಿತಿ ಹೊಂದಿರುವವರೇ. ವಿವಿಧ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರೇ. ಆದ್ದರಿಂದ ಆರೋಗ್ಯಕರ ಚರ್ಚೆ ನಡೆಯುತ್ತದೆ. ಅಂಥ ಆರೋಗ್ಯಕರ ಚರ್ಚೆಗೆ ಪ್ರೇರಣೆ ನೀಡಬಹುದು ಎಂಬುದು ನಮ್ಮ ನಿರೀಕ್ಷೆ’ ಎಂದು ಅವರು ಈ ಉತ್ಸವದ ಉದ್ದೇಶದ ಕುರಿತು ಹೇಳುತ್ತಾರೆ. ಪ್ರತಿ ಸಿನಿಮಾದ ಕುರಿತೂ ಅನೌಪಚಾರಿಕ ಚರ್ಚೆಯೂ ಇರುತ್ತದೆ.ಇಂತಹ ಕಿರುಚಿತ್ರೋತ್ಸವಗಳ ಉಪಯೋಗದ ಕುರಿತು ಗಿರಿರಾಜ್‌ ಆಶಾವಾದಿಯಾಗಿರುವುದು ಅವರ ಮಾತುಗಳಲ್ಲಿ ಗೋಚರವಾಗುತ್ತದೆ. ‘ಇಂದು ಮುಖ್ಯವಾಹಿನಿಯಲ್ಲಿ ಸಿನಿಮಾದ ಕುರಿತಾದ ಗಂಭೀರ ಚರ್ಚೆಗಳಿಗೆ ಅವಕಾಶವೇ ಇಲ್ಲವಾಗಿದೆ. ಚಿತ್ರಮಂದಿರ, ವಿತರಣೆ ಇವುಗಳ ಸಮಸ್ಯೆಗೆ ಹೆದರಿ ಸಿನಿಮಾ ಮಾಡುವ ಯೋಚನೆಯನ್ನೇ ಕೈಬಿಡುವ ಪರಿಸ್ಥಿತಿ ಇದೆ.

ಧೈರ್ಯಮಾಡಿ ಸಿನಿಮಾ ಮಾಡಿ, ಎಲ್ಲ ಸಮಸ್ಯೆಗಳನ್ನು ಹೇಗೋ ನಿಭಾಯಿಸಿ ಬಿಡುಗಡೆ ಮಾಡಿದರೂ ಜನ ಚಪ್ಪಾಳೆ ತಟ್ಟುತ್ತಾರೆಯೇ ಹೊರತು ಹಣ ಕೊಡಲ್ಲ. ಇಂಥ ಸಂದರ್ಭದಲ್ಲಿ ಹೀಗೆ ಸಣ್ಣ ಸಣ್ಣ ಗುಂಪುಗಳು ಸಿನಿಮಾ ಗುಂಪುಗಳು ಚರ್ಚೆ ನಡೆಸಲು ಶುರುಮಾಡಿದರೆ ಅದರಿಂದ ಖಂಡಿತ ಲಾಭ ಇದೆ. ಸ್ಪಾನಿಷ್‌, ಇಟಲಿ, ಅಮೆರಿಕದಲ್ಲಿ ಇಂಥ ಸಣ್ಣ ಸಣ್ಣ ಬಳಗಗಳು ಸೇರಿಕೊಂಡು ಸಿನಿಮಾ ಪ್ರದರ್ಶಿಸಿ, ಅದರ ಕುರಿತಾದ ಚರ್ಚೆಯನ್ನು ನಡೆಸುತ್ತಿದ್ದಾರೆ.

ನಮ್ಮಲ್ಲೂ ಇಂಥ ಗುಂಪುಗಳು ಹೆಚ್ಚಿ, ಪ್ರಭಾವಶಾಲಿ ಆದರೆ ಒಬ್ಬ ಸಿನಿಮಾ ನಿರ್ದೇಶಕನಿಗೂ ಒಂದು ಧೈರ್ಯ ಇರುತ್ತದೆ. ತನ್ನ ಸಿನಿಮಾಗಳಿಗೂ ಒಂದು ಪ್ರೇಕ್ಷಕವರ್ಗ ಇದೆ ಎಂಬ ವಿಶ್ವಾಸ ಬರುತ್ತದೆ’ ಎನ್ನುವ ಗಿರಿರಾಜ್‌ ಅವರು ಇಂತಹ ಸಿನಿಮೋತ್ಸವಗಳಿಂದ ಪ್ರೇಕ್ಷಕರ ಮೇಲಾಗುವ ಪರಿಣಾಮದ ಆಯಾಮದ ಕುರಿತೂ ಹೇಳುತ್ತಾರೆ.‘ಈ ರೀತಿಯ ಚಿತ್ರೋತ್ಸವಗಳಲ್ಲಿ ಭಾಗವಹಿಸುವ ಪ್ರೇಕ್ಷಕರೂ ಪ್ರಬುದ್ಧರಾಗಿ ಪರ್ಯಾಯ ಸಿನಿಮಾಗಳತ್ತ ಆಕರ್ಷಿಸುತ್ತಾರೆ. ಲೋಕಚರಿತ ಆಯೋಜಿಸಿದ ಈ ಸಿನಿಮೋತ್ಸವದಲ್ಲಿ ಅದರ ಸದಸ್ಯರಷ್ಟೇ ಅಲ್ಲ, ಇಲ್ಲಿ ಏನೋ ನಡೆಯುತ್ತಿದೆ ನೋಡೋಣ ಎಂದು ಕೊಂಡು ಬೇರೆ ಪ್ರೇಕ್ಷಕರೂ ಬರುತ್ತಾರೆ. ಇಂತಹ ಸಿನಿಮಾಗಳ ಕುರಿತು ಕುತೂಹಲಿಗಳಾಗುತ್ತಾರೆ’  ಎನ್ನುವ ಅವರು  ‘ಇದರಲ್ಲಿ ನಮ್ಮ ಸೃಜನಶೀಲ ಸ್ವಾರ್ಥವೂ ಇದೆ’ ಎಂದು ಒಪ್ಪಿಕೊಳ್ಳುತ್ತಾರೆ.‘ಈ ಚಿತ್ರೋತ್ಸವಕ್ಕೆ ಬರುವವರೆಲ್ಲರೂ ಉತ್ತಮ ಸೃಜನಶೀಲ ಮನಸ್ಸುಗಳೇ ಆಗಿರುವುದರಿಂದ ಒಂದು ಸಿನಿಮಾಗಳನ್ನು ಬೇರೆ ಬೇರೆ ಬಗೆಗಳಲ್ಲಿ ನೋಡುವ, ಅರಿತುಕೊಳ್ಳುವ ಸಾಧ್ಯತೆಗಳೂ ತೆರೆದುಕೊಳ್ಳುತ್ತದೆ. ಒಂದು ಚಿತ್ರವನ್ನು ಹಲವು ದೃಷ್ಟಿಕೋನದಲ್ಲಿ ನೋಡಿ ಅರ್ಥಮಾಡಿಕೊಳ್ಳುವುದಕ್ಕೆ ಸೂಕ್ತ ವೇದಿಕೆ ನಮ್ಮಲ್ಲಿ ಸಿಗುತ್ತಿಲ್ಲ. ಲೋಕಚರಿತ ಸಿನಿಮಾ ಸಂಡೆ ಅಂತಹ ಒಂದು ವೇದಿಕೆಯಾಗಿದೆ. ಇದರಿಂದ ನನಗೂ ಸಾಕಷ್ಟು ಉಪಯೋಗ ಇದೆ’ ಎನ್ನುವುದು ಅವರ ವಿವರಣೆ.ಲೋಕಚರಿತ ‘ಸಿನಿಮಾ ಸಂಡೆ’ಯಲ್ಲಿ ಸಿನಿಮಾ ಮಾಧ್ಯಮದಲ್ಲಿ ಆಸಕ್ತಿಯಿರುವ ಯಾರು ಬೇಕಾದರೂ ಭಾಗವಹಿಸಬಹುದು. ಇದು ಉಚಿತವಾಗಿರುತ್ತದೆ.

ಚಿತ್ರೋತ್ಸವ ನಡೆಯುವ ಸ್ಥಳ:ಎಂ.ಇ.ಎಸ್‌ ಕಾಲೇಜು ಸಭಾಂಗಣ, 15ನೇ ಅಡ್ಡರಸ್ತೆ, ಮಲ್ಲೇಶ್ವರ. ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.