ಬುಧವಾರ, ಜೂನ್ 23, 2021
30 °C

ಹಾಲಿ ಮೇಯರ್, ಉಪಮೇಯರ್ ಅವಧಿ ಏ. 23ಕ್ಕೆ ಅಂತ್ಯ

ಶಿವರಾಂ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇಯರ್ ಪಿ. ಶಾರದಮ್ಮ  ಹಾಗೂ ಉಪ ಮೇಯರ್ ಎಸ್.ಹರೀಶ್ ಅವರ ಅಧಿಕಾರ ಅವಧಿ ಇನ್ನು ಕೇವಲ ಒಂದು ತಿಂಗಳು ಉಳಿದಿರುವಂತೆಯೇ ಹೊಸ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ `ತೆರೆಮರೆಯಲ್ಲಿ ಕಸರತ್ತು~ ಆರಂಭವಾಗಿದೆ.ಹಾಲಿ ಮೇಯರ್ ಹಾಗೂ ಉಪ ಮೇಯರ್ ಅವಧಿ ಏಪ್ರಿಲ್ 23ಕ್ಕೆ ಕೊನೆಗೊಳ್ಳಲಿದೆ. ಬಿಜೆಪಿ ಆಡಳಿತಾವಧಿಯ ಮೂರನೇ ಅವಧಿಯ ಮೇಯರ್ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ದೊಡ್ಡ ಸಂಖ್ಯೆಯಲ್ಲಿದ್ದರೂ ಪ್ರಮುಖವಾಗಿ ಐದಾರು ಅಭ್ಯರ್ಥಿಗಳು ಬೆಂಗಳೂರಿನ ಪ್ರಥಮ ಪ್ರಜೆಯಾಗಲು ತೀವ್ರ ಲಾಬಿ ನಡೆಸುತ್ತಿದ್ದಾರೆ.ಈ ಬಾರಿ ಮೇಯರ್ ಸ್ಥಾನವು ಹಿಂದುಳಿದ ವರ್ಗಗಳ `ಎ~ ವರ್ಗಕ್ಕೆ ಮೀಸಲಾಗಿದ್ದರೆ, ಉಪ ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಸದಸ್ಯರ ಹಿರಿತನದ ಜತೆಗೆ, ಜಾತಿ ರಾಜಕಾರಣ ಕೂಡ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಭಾವ ಬೀರುವ ಲಕ್ಷಣಗಳು ಗೋಚರಿಸುತ್ತಿವೆ. ಈ ಕಾರಣಕ್ಕಾಗಿಯೇ ಪ್ರತಿ ಆಕಾಂಕ್ಷಿ ಕೂಡ ಜಾತಿ ಮಾನದಂಡದ ಜತೆಗೆ ತಮ್ಮ `ರಾಜಕೀಯ ಗುರು~ಗಳ ಬೆಂಬಲ ಪಡೆದು ಗದ್ದುಗೆಗೇರಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.ಮೇಯರ್ ಸ್ಥಾನಕ್ಕೆ ಎ.ಎಚ್. ಬಸವರಾಜು (ಬನಶಂಕರಿ ದೇವಸ್ಥಾನ), ಡಿ. ವೆಂಕಟೇಶಮೂರ್ತಿ (ಕತ್ರಿಗುಪ್ಪೆ), ಬಿ. ವಿ. ಗಣೇಶ್ (ಚಾಮರಾಜಪೇಟೆ), ವಿ. ಸೋಮಶೇಖರ್ (ಶಾಖಾಂಬರಿನಗರ), ಎಂ. ನಾಗರಾಜ್ (ಗಂಗೇನಹಳ್ಳಿ) ಹಾಗೂ ಎನ್. ಶಾಂತಕುಮಾರಿ (ಮೂಡಲಪಾಳ್ಯ) ಆಕಾಂಕ್ಷಿಗಳಾಗಿದ್ದಾರೆ. ಮೂಲಗಳ ಪ್ರಕಾರ, ಬಸವರಾಜು, ವೆಂಕಟೇಶಮೂರ್ತಿ ಹಾಗೂ ಗಣೇಶ್ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.ತಿಗಳ ಸಮುದಾಯಕ್ಕೆ ಸೇರಿದ ಸದಸ್ಯ ಬಸವರಾಜು ಅವರು ಗೃಹ ಸಚಿವ ಆರ್. ಅಶೋಕ್ ಹಾಗೂ ಕುರುಬ ಸಮುದಾಯಕ್ಕೆ ಸೇರಿದ ವೆಂಕಟೇಶಮೂರ್ತಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪನವರ ಬೆಂಬಲದೊಂದಿಗೆ ಮೇಯರ್ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.ಎರಡು ಬಾರಿ ಗೆದ್ದಿರುವ ದೇವಾಂಗ ಜನಾಂಗದ ಬಿ.ವಿ. ಗಣೇಶ್, ಸಚಿವರಾದ ವಿ. ಸೋಮಣ್ಣ, ಆರ್. ಅಶೋಕ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹಾಗೂ ಪಕ್ಷದ ನಗರ ಘಟಕದ ಅಧ್ಯಕ್ಷ ಸುಬ್ಬಣ್ಣ ಅವರ ಬೆಂಬಲ ಪಡೆದು `ಅದೃಷ್ಟ ಪರೀಕ್ಷೆ~ಗಿಳಿದಿದ್ದಾರೆ. ಈಗಾಗಲೇ ದಕ್ಷಿಣ ಹಾಗೂ ಉತ್ತರ ಬೆಂಗಳೂರಿಗೆ ಮೇಯರ್ ಸ್ಥಾನ ಸಿಕ್ಕಿದೆ. ಈ ಬಾರಿ ಮಧ್ಯೆ ಬೆಂಗಳೂರಿಗೆ ಮೇಯರ್ ಸ್ಥಾನ ಬಿಟ್ಟುಕೊಡಬೇಕು ಎಂಬುದು ಬಿ.ವಿ. ಗಣೇಶ್ ಬೇಡಿಕೆ. ಪಾಲಿಕೆ ಸದಸ್ಯರ ಬೆಂಬಲದ ಮೇಲೆ ಮೇಯರ್ ಆಯ್ಕೆ ನಡೆಯಲಿ ಎಂಬುದು ಕೂಡ ಅವರ ಮನವಿ.ರಾಜಕೀಯದಲ್ಲಿ ಇದುವರೆಗೆ ತಿಗಳ ಸಮುದಾಯಕ್ಕೆ ಅಷ್ಟಾಗಿ ಆದ್ಯತೆ ಸಿಕ್ಕಿಲ್ಲ. ಸಚಿವ ಸಂಪುಟ, ನಿಗಮ-ಮಂಡಳಿಗಳಲ್ಲಿಯೂ ಈ ಸಮುದಾಯಕ್ಕೆ ಅಷ್ಟು ಪ್ರಾತಿನಿಧ್ಯ ಸಿಕ್ಕಿರುವುದು ಕೂಡ ಅಷ್ಟಕ್ಕಷ್ಟೆ. ಇದೇ ಮಾನದಂಡದ ಆಧಾರದಲ್ಲಿ ತಮಗೆ ಅವಕಾಶ ನೀಡುವಂತೆ ಎರಡು ಬಾರಿ ಗೆದ್ದಿರುವ ಬಸವರಾಜು ಪಕ್ಷದ ಮುಖಂಡರಲ್ಲಿ ಬೇಡಿಕೆ ಮುಂದಿಟ್ಟಿದ್ದಾರೆ. ಉಪ ಚುನಾವಣೆಯಲ್ಲಿ ಬಸವರಾಜು ಗೆಲ್ಲಲ್ಲು ಸಚಿವ ಅಶೋಕ್ ಪ್ರಮುಖ ಪಾತ್ರ ವಹಿಸಿದ್ದರು. ಮೇಯರ್ ಆಯ್ಕೆ ಸಂದರ್ಭದಲ್ಲಿಯೂ ಅವರು ತಮ್ಮ ಕೈಬಿಡುವುದಿಲ್ಲ ಎಂಬುದು ಬಸವರಾಜು ವಿಶ್ವಾಸ.ಇನ್ನು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಈಶ್ವರಪ್ಪನವರ ಬೆಂಬಲದಿಂದ ವೆಂಕಟೇಶಮೂರ್ತಿ ಮೇಯರ್ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹಿರಿತನದ ಆಧಾರದಲ್ಲಿ ಮೂರು ಬಾರಿ ಗೆದ್ದಿರುವ ತಮಗೇ ಮೇಯರ್ ಪಟ್ಟ ನೀಡಬೇಕು ಎಂಬುದು ಅವರ ಮನವಿ.ಕುರುಬ ಸಮುದಾಯಕ್ಕೇ ಸೇರಿದ ಸದಸ್ಯರಾದ ಸೋಮಶೇಖರ್, ಎನ್. ಶಾಂತಕುಮಾರಿ, ಎಂ. ನಾಗರಾಜ್ ಕೂಡ ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಶಾಂತಕುಮಾರಿ ಅವರು ಸಚಿವ ವಿ. ಸೋಮಣ್ಣ ಹಾಗೂ ಸೋಮಶೇಖರ್ ಜಯನಗರ ಶಾಸಕ ಬಿ.ಎನ್. ವಿಜಯಕುಮಾರ್ ಬೆಂಬಲದೊಂದಿಗೆ ಲಾಬಿ ನಡೆಸುತ್ತಿದ್ದಾರೆ. ಶಾಂತಕುಮಾರಿ ಕೂಡ ಮೂರು ಗೆದ್ದವರು.ಆದರೆ, ಇತ್ತೀಚೆಗೆ ಅವರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದ ಹಿನ್ನೆಲೆಯಲ್ಲಿ ಇದೀಗ ಅವರ ಹೆಸರು ಅಷ್ಟು ಚಾಲ್ತಿಯಲ್ಲಿಲ್ಲ ಎನ್ನುತ್ತಿವೆ ಪಕ್ಷದ ಮೂಲಗಳು. ಆದರೂ, ಸಚಿವ ಸೋಮಣ್ಣನವರ ಬೆಂಬಲದಿಂದ ಶಾಂತಕುಮಾರಿ ಮೇಯರ್ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಎಂ. ನಾಗರಾಜ್ ಅವರಿಗೆ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು ಬೆಂಬಲವಿದ್ದರೂ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅವರು ಪಕ್ಷದ ಮೇಲೆ ಒತ್ತಡ ಹೇರುವಂತಹ ಸಾಧ್ಯತೆಗಳು ತೀರಾ ಕಡಿಮೆ.ಉಪ ಮೇಯರ್ ಸ್ಥಾನಕ್ಕೆ ಮೂವರ ಸ್ಪರ್ಧೆ: ಉಪ ಮೇಯರ್ ಸ್ಥಾನಕ್ಕೆ ಆರ್. ಚಂದ್ರಶೇಖರ ಯ್ಯ (ಹಂಪಿನಗರ) ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮೂಲತಃ ಆರ್‌ಎಸ್‌ಎಸ್ ಸಕ್ರಿಯರಾದ ಇವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಬಲ ಇದೆ ಎನ್ನಲಾಗುತ್ತಿದೆ.ಕಾಮಾಕ್ಷಿಪಾಳ್ಯ ವಾರ್ಡ್‌ನ ಕೆ. ರಂಗಣ್ಣ ಹಾಗೂ ವಿಜಯನಗರ ವಾರ್ಡ್‌ನ ಎಚ್. ರವೀಂದ್ರ ಕೂಡ ಆಕಾಂಕ್ಷಿಗಳಾಗಿದ್ದಾರೆ. ರಂಗಣ್ಣ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ಹಾಗೂ ರವೀಂದ್ರ ಅವರು ಸಚಿವ ವಿ. ಸೋಮಣ್ಣನವರ `ಕೃಪಾ ಕಟಾಕ್ಷ~ದಿಂದ ಉಪ ಮೇಯರ್ ಹುದ್ದೆಗೇರಲು ಪ್ರಯತ್ನ ನಡೆಸಿದ್ದಾರೆ. ಲಿಂಗಾಯತರಾಗಿರುವ ಚಂದ್ರಶೇಖರಯ್ಯ ಅವರಿಗೆ ಬಿ.ಎಸ್. ಯಡಿಯೂರಪ್ಪ ಹಾಗೂ ಹಲವು ಮಠಾಧೀಶರ ಬೆಂಬಲ ಇರುವುದು ಸಹಕಾರಿಯಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.