ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

108 ಮುಷ್ಕರ: ಇಂದೂ ಮುಂದುವರಿಕೆ?

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರದ ಹಾದಿ ಹಿಡಿದಿರುವ ಆರೋಗ್ಯ ಕವಚ (108) ಅಂಬುಲೆನ್ಸ್ ನೌಕರರು ಸೋಮವಾರವೂ ಕರ್ತವ್ಯಕ್ಕೆ ಹಾಜರಾಗುವುದು ಖಚಿತವಾಗಿಲ್ಲ. ಇದೇ ವೇಳೆ, ಈವರೆಗೆ ನಡೆದಿರುವ ಮಾತುಕತೆಗಳ ಕುರಿತು ಮುಷ್ಕರ ನಿರತ ನೌಕರರಲ್ಲೇ ಎರಡು ಅಭಿಪ್ರಾಯ ಮೂಡಿದೆ.

`ನಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವವರೆಗೂ ಮುಷ್ಕರ ಕೈಬಿಡುವುದು ಬೇಡ~ ಎಂದು ಮುಷ್ಕರ ನಿರತರ ಪೈಕಿ ಒಂದು ಗುಂಪು ಹೇಳಿದರೆ, `ಸರ್ಕಾರಿ ನೌಕರರು ಎಂದು ಪರಿಗಣಿಸುವುದು ತಕ್ಷಣಕ್ಕೆ ಆಗುವ ವಿಚಾರ ಅಲ್ಲ. ಇದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ, ಈಗ ಮುಷ್ಕರ ಕೈಬಿಡೋಣ~ ಎಂಬ ನಿಲುವನ್ನು ಇನ್ನೊಂದು ಗುಂಪು ತೆಗೆದುಕೊಂಡಿದೆ.

ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ರಾಜ್ಯ ಆರೋಗ್ಯ ಕವಚ (108) ನೌಕರರ ಸಂಘದ ಅಧ್ಯಕ್ಷ ಕೆ. ಸೋಮಶೇಖರ್ ಅವರು, `ಮುಷ್ಕರದ ಕುರಿತು ನೌಕರರಲ್ಲಿ ಮೂಡಿರುವ ಅಭಿಪ್ರಾಯ ಭೇದವನ್ನು ಬಗೆಹರಿಸಿಕೊಳ್ಳುವಂತೆ ಹೇಳಿದ್ದೇವೆ. ಮುಷ್ಕರ ಮುಂದುವರಿಸುವ ಅಥವಾ ಹಿಂತೆಗೆದುಕೊಳ್ಳುವ ಕುರಿತು ಮಾತುಕತೆಗಳು ಮುಂದುವರೆದಿವೆ~ ಎಂದರು.

ನೌಕರರ ಪೈಕಿ ಒಂದು ವರ್ಗ ಸೋಮವಾರ ಮುಷ್ಕರ ಹಿಂತೆಗೆದುಕೊಂಡು, ಇನ್ನೊಂದು ವರ್ಗ ಮುಷ್ಕರ ಮುಂದುವರಿಸುವ ಸಾಧ್ಯತೆಗಳೂ ಇವೆ ಎಂದು ಅವರು ಮಾಹಿತಿ ನೀಡಿದರು.

`ವೇತನದಲ್ಲಿ ಶೇಕಡ 10ರಷ್ಟು ಹೆಚ್ಚಳ ಮಾಡಲು ಆರೋಗ್ಯ ಕವಚ ಯೋಜನೆ ಉಸ್ತುವಾರಿ ವಹಿಸಿಕೊಂಡಿರುವ ಜಿವಿಕೆಇಎಂಆರ್‌ಐ ಸಂಸ್ಥೆಯವರು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಮಹಿಳಾ ಸಿಬ್ಬಂದಿಗೆ ರಾತ್ರಿ ಪಾಳಿಯಿಂದ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಸಿಬ್ಬಂದಿಗೆ ಅವರ ಜಿಲ್ಲೆಗಳಲ್ಲಿಯೇ ಕೆಲಸ ನೀಡುವ ಸಂಬಂಧ ಇನ್ನು 15 ದಿನಗಳಲ್ಲಿ ವರ್ಗಾವಣೆ ನೀತಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT