ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ರಂದು ಬಂದ್ ಮಾಡಿ ಕೇಂದ್ರಕ್ಕೆ ಬಿಸಿ ಮುಟ್ಟಿಸಿ

Last Updated 18 ಜನವರಿ 2012, 5:55 IST
ಅಕ್ಷರ ಗಾತ್ರ

ರಾಯಚೂರು: ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡಲು ಖರ್ಚಿಲ್ಲ. ಯಾರಿದಂಲೂ ವಿರೋಧವೂ ಇಲ್ಲ. ಕೇಂದ್ರ ಸರ್ಕಾರವು  ಭರವಸೆ ನೀಡುತ್ತ ಅನಗತ್ಯವಾಗಿ ವಿಳಂಬ ಮಾಡುತ್ತಿರುವ ಕೇಂದ್ರದ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಇದೇ 24ರಂದು ಹೈದರಾಬಾದ್ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಈ ಭಾಗದ ಜನತೆ ಬಂದ್‌ಗೆ ಬೆಂಬಲಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವೈಜನಾಥ್ ಪಾಟೀಲ್ ಹೇಳಿದರು.

ಇಲ್ಲಿನ ಐ.ಎಂ.ಎ ಸಭಾಭವನದಲ್ಲಿ ಹೈ.ಕ ಹೋರಾಟ ಸಮಿತಿಯು ಇದೇ 24ರಂದು ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಕರೆದಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕೇಂದ್ರ ಗೃಹ ಸಚಿವರು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಮನವಿ, ಹೋರಾಟ, ಧರಣಿಯನ್ನು ಲೆಕ್ಕವಿಲ್ಲದಷ್ಟು ಮಾಡಲಾಗಿದೆ. 50 ವರ್ಷಗಳಿಂದ ಹೋರಾಟ ನಡೆದುಕೊಂಡು ಬಂದಿದೆ. ಸ್ಪಂದಿಸಿಲ್ಲ. ಎಚ್ಚರಿಕೆ ಮೂಡಿಸಲು ಈ ಬಂದ್ ಕರೆ ನೀಡಲಾಗಿದೆ ಎಂದು ಹೇಳಿದರು.

ನೀರಾವರಿ, ಶಿಕ್ಷಣ, ಉದ್ಯೋಗ, ಮೀಸಲಾತಿ ಹೀಗೆ ಹಲವು ವಿಭಾಗಗಳಲ್ಲಿ ಅನ್ಯಾಯ ಆಗಿದೆ. ಈಗಲೂ ಮುಂದುವರದಿದೆ. ಬಚಾವತ್ ತೀರ್ಪಿನ ಪ್ರಕಾರ ಹೈ.ಕ ಭಾಗಕ್ಕೆ ನೀರು ದೊರಕಲಿಲ್ಲ. ಬಿ ಸ್ಕೀಮ್‌ನಡಿ ನೀರು ಹಂಚಿಕೆಯಲ್ಲೂ ಅನ್ಯಾಯ ಆಗಿದೆ. ನಿರಂತರ ಅನ್ಯಾಯದಿಂದ ಈ ಭಾಗದ ಜನತೆ ರೋಸಿ ಹೋಗಿದ್ದಾರೆ. ಬಿಸಿ ಮುಟ್ಟಿಸಲು ಬಂದ್ ಅನಿವಾರ್ಯ ಎಂದು ಹೇಳಿದರು.

ಆದ ಅನ್ಯಾಯಗಳ ಬಗ್ಗೆ ಕೇಂದ್ರ ಸರ್ಕಾರದ, ಜನಪ್ರತಿನಿಧಿಗಳ ಗಮನ ಸೆಳೆದು ಸಾಕಾಗಿದೆ. ಈಗ ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ. ಬಂದ್ ಮಾಡುವ ಮೂಲಕ ಗಂಭೀರ ಎಚ್ಚರಿಕೆ ನೀಡಲು ಈ ಭಾಗದ ಜನತೆ ಸಜ್ಜಾಗಬೇಕಿದೆ ಎಂದು ತಿಳಿಸಿದರು.

ಅಂಬಣ್ಣ ಅರೋಲಿಕರ್ ಮಾತನಾಡಿ, ಇದೇ 24ರಂದು ಬಂದ್ ಮಾಡುವ ಬದಲು 26ರಂದು ಗಣರಾಜ್ಯೋತ್ಸವ ದಿನ ಬಂದ್‌ಗೆ ಕರೆ ನೀಡಬೇಕು. ಆ ದಿನ ಬಂದ್ ಮಾಡಿದರೆ  ಹೋರಾಟದ ಉದ್ದೇಶ ಸಾಕಾರಕ್ಕೆ ಸಹಕಾರಿ ಆಗಲಿದೆ. ಹೋರಾಟ ಸಮಿತಿ ಈ ವಿಷಯ ಗಂಭೀರ ಚರ್ಚಿಸಿ ನಿರ್ಧರಿಸಬೇಕು ಎಂದು ಮನವಿ ಮಾಡಿದರು.

ಜೆ.ಬಿ ರಾಜು, ಅಶೋಕ ಜೈನ್, ಶಿವಕುಮಾರ ಯಾದವ್, ರಜಾಕ ಉಸ್ತಾದ್, ವಾಣಿಜ್ಯೋದ್ಯಮ ಸಂಘದ ಕಾರ್ಯದರ್ಶಿ ತ್ರಿವಿಕ್ರಮ ಜೋಶಿ ಸೇರಿದಂತೆ ವಿವಿಧ ಸಂಘಟನೆ ಪದಾಧಿಕಾರಿಗಳು ಮಾತನಾಡಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬಂದ್ ನಿರ್ಮಾಣ ಸಮಿತಿ ರಚನೆಗೆ ನಿರ್ಧರಿಸಲಾಯಿತು. ಈ ಸಮಿತಿ ಎಲ್ಲ ಸಂಘ-ಸಂಸ್ಥೆಗಳನ್ನೊಳಗೊಂಡಿರುತ್ತದೆ ಎಂದು ಸಂಚಾಲಕ ರಾಘವೇಂದ್ರ ಕುಷ್ಟಗಿ ಅವರು ಘೋಷಣೆ ಮಾಡಿದರು.

ಮಾಜಿ ಸಂಸದ ವೆಂಕಟೇಶ ನಾಯಕ, ಐಎಂಎ ಅಧ್ಯಕ್ಷ ಡಾ.ವಿ.ಎ ಮಾಲಿಪಾಟೀಲ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಅಮರೇಶ ಹೊಸಮನಿ, ಯಾದಗಿರಿ ಜಿಲ್ಲೆಯ ಹೈ.ಕ ಹೋರಾಟ ಸಮಿತಿಯ ಅಧ್ಯಕ್ಷ ಸಜ್ಜನ್ ವೇದಿಕೆಯಲ್ಲಿದ್ದರು. ಜಿ ಬಸವರಾಜಪ್ಪ,  ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಪ್ಪ ತುಕ್ಕಾಯಿ, ಮಾಜಿ ಅಧ್ಯಕ್ಷ ಪಂಪಯ್ಯಶೆಟ್ಟಿ, ರಾಯಚೂರು ವಿಕಾಸ ಪರಿಷದ್‌ನ ಅಧ್ಯಕ್ಷ ರವೀಂದ್ರ ಜಾಲ್ದಾರ, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT