ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ವರ್ಷದಲ್ಲಿ 16 ಕ್ಷಮಾದಾನ ಅರ್ಜಿ ವಿಲೇವಾರಿ:ಗಲ್ಲು ಶಿಕ್ಷೆ ರದ್ದು ಇಲ್ಲ: ಕೇಂದ್ರ ಸ್ಪಷ್ಟನೆ

Last Updated 9 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರಪತಿ ಕಾರ್ಯಾಲಯ ಕಳೆದ ಮೂರೂವರೆ ವರ್ಷಗಳಲ್ಲಿ ಒಟ್ಟು 16 ಕ್ಷಮಾದಾನ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿದೆ. ಈ ಹಿಂದೆ ಒಟ್ಟಿಗೆ ಇಷ್ಟೊಂದು ಪ್ರಮಾಣದ ಕ್ಷಮಾದಾನ ಅರ್ಜಿಗಳನ್ನು ವಿಲೇವಾರಿ ಮಾಡಿದ ನಿದರ್ಶನಗಳಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ವ್ಯಾಪಕ ಪರ-ವಿರೋಧ ಚರ್ಚೆಗೆ ಕಾರಣವಾಗಿರುವ ಗಲ್ಲು ಶಿಕ್ಷೆ ಪದ್ಧತಿಯನ್ನು ರದ್ದು ಮಾಡುವ ಯಾವುದೇ ಯೋಚನೆ ಸದ್ಯ ತನ್ನ ಮುಂದಿಲ್ಲ ಎಂದು  ಸರ್ಕಾರ ಸ್ಪಷ್ಟಪಡಿಸಿದೆ.ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬುಧವಾರ ಈ ವಿಷಯ ತಿಳಿಸಿದ ಗೃಹ ಸಚಿವ ಪಿ.ಚಿದಂಬರಂ, `16 ಕ್ಷಮಾದಾನ ಅರ್ಜಿಗಳನ್ನು ವಿಲೇವಾರಿ ಮಾಡಿರುವುದು ಹೊಸ ದಾಖಲೆ. ಕ್ಷಮಾದಾನ ಅರ್ಜಿಗಳನ್ನು ವಿಲೇಮಾರಿ ಮಾಡಿದ ರಾಷ್ಟ್ರಪತಿಗಳ ನಿರ್ಧಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ~ ಎಂದರು.

`ಗಲ್ಲು ಶಿಕ್ಷೆ ಕುರಿತು ವಿಭಿನ್ನ ಅಭಿಪ್ರಾಯಗಳಿದ್ದು, ಬಹುತೇಕ ರಾಷ್ಟ್ರಗಳು ಈ ಶಿಕ್ಷೆಯನ್ನು ರದ್ದು ಮಾಡಿವೆ. ಅಷ್ಟೇ ಸಂಖ್ಯೆಯ ರಾಷ್ಟ್ರಗಳು ಈ ಪರಿಪಾಠವನ್ನು ಮುಂದುವರಿಸಿವೆ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗಲ್ಲು ವಿಧಿಸುವ ಸಂಪ್ರದಾಯ ನಮ್ಮಲ್ಲಿದೆ~ ಎಂದರು.

`ಒಟ್ಟಾರೆ ಗಲ್ಲು ಪದ್ಧತಿಯನ್ನೇ ರದ್ದು ಮಾಡುವ ಬಗ್ಗೆ ಕಾನೂನು ಆಯೋಗ ಒಲವು ತೋರಿಸಿಲ್ಲ. ಸದ್ಯಕ್ಕೆ ಸರ್ಕಾರವೂ ಈ ಶಿಕ್ಷೆಯ ಕುರಿತಂತೆ ಯಾವುದೇ ಪರಾಮರ್ಶೆ ನಡೆಸಲು ಬಯಸುವುದಿಲ್ಲ. ಸೂಕ್ತ ಸಮಯ ಬಂದಾಗ ಆ ಬಗ್ಗೆ  ಪರಾಮರ್ಶೆ ನಡೆಸಲಿದೆ~ ಎಂದು ಚಿದಂಬರಂ ಹೇಳಿದರು.

`ಸಂವಿಧಾನಾತ್ಮಕ ಅಧಿಕಾರದಿಂದ ಮಾತ್ರ ಈ ಶಿಕ್ಷೆಯ ಸ್ವರೂಪವನ್ನು ಬದಲಿಸಬಹುದಾಗಿದೆ~ ಎಂದ ಅವರು, `ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳು ಕಡ್ಡಾಯವಾಗಿ 14 ವರ್ಷಗಳ ಶಿಕ್ಷೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರವಷ್ಟೇ ಕೈದಿಗಳು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯುತ್ತಾರೆ~ ಎಂದರು.

`ಕೈದಿಗಳಿಗೆ ನೀಡಲಾಗುವ ಪೆರೋಲ್ ಸೌಲಭ್ಯ ದುರ್ಬಳಕೆಯಾಗುತ್ತಿದೆ. ಶ್ರೀಮಂತರು ಮತ್ತು ಪ್ರಭಾವಿ ವ್ಯಕ್ತಿಗಳು ಪೆರೋಲ್ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ ನಿದರ್ಶನಗಳಿವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT