ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ನೆರವಿಲ್ಲ; ನೋವೇ ಎಲ್ಲ

Last Updated 3 ಡಿಸೆಂಬರ್ 2013, 7:17 IST
ಅಕ್ಷರ ಗಾತ್ರ

ಹಾಸನ: ಸರ್ಕಾರದ ಎಷ್ಟೇ ಯೋಜನೆಗಳು ಬಂದರೂ ಅದೆಷ್ಟೋ ಅಂಗವಿಕಲರು ಜಿಲ್ಲೆಯಲ್ಲಿ ನೆರವು ಲಭ್ಯವಾಗದೆ ದಿನನಿತ್ಯ ನೋವು ಅನುಭವಿಸುತ್ತಿದ್ದಾರೆ. ಅನೇಕ ಅಂಗವಿಕಲರು ಮನೆಯವರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಆರ್ಥಿಕ ಸ್ಥಿತಿಗಿಂತ ಹೆಚ್ಚಾಗಿ ಇಂಥವರ ಸ್ವಾಭಿಮಾನಕ್ಕೆ ದೊಡ್ಡ ಧಕ್ಕೆಯಾಗುತ್ತಿದೆ. ದುಡಿಯಲು ಸಿದ್ಧವಿದ್ದರೂ ಕೆಲಸ ಕೊಡುವವರಿಲ್ಲದೆ ಸಮಸ್ಯೆಯಾಗುತ್ತಿದೆ.

ನೌಕರಿಗಾಗಿ ಹಂಬಲಿಸುತ್ತಿರುವ ಸುನೀತಾ 
ಬೇಲೂರು ತಾಲ್ಲೂಕು ಅರೇಹಳ್ಳಿಯ ಸುನೀತಾ ಡಯಾಸ್‌ ಕತೆ ಕೇಳಿದರೆ ಕಣ್ಣು ಮಂಜಾಗುತ್ತವೆ. ಸುನೀತಾಗೆ ಬೆನ್ನು ಸ್ವಲ್ಪ ಗೂನು. ಶೇ 40ರಷ್ಟು ವಿಕಲತೆ ಇದೆ ಎಂದು ವೈದ್ಯರು ಪ್ರಮಾಣಪತ್ರ ನೀಡಿದ್ದರಿಂದ ತಿಂಗಳಿಗೆ 400 ರೂಪಾಯಿ ಮಾಸಾಶನ ಬರುತ್ತಿದೆ. ಇದು ಬಿಟ್ಟರೆ ಬೇರೆ ನೆರವಿಲ್ಲ.

ಸಣ್ಣ ವಯಸ್ಸಿನಲ್ಲೇ ಸುನೀತಾ ಅವರ ತಾಯಿ ತೀರಿಕೊಂಡರು. ಅಪ್ಪ ಇನ್ನೊಂದು ಮದುವೆಯಾಗಿ ಬೇರೆ ಕಡೆ ನೆಲೆಸಿದರು. ಅಣ್ಣನೂ ಅವರ ಜತೆಯಲ್ಲಿದ್ದಾನೆ. ಅಂಗವಿಕಲ ಮಗುವಾಗಿದ್ದರಿಂದ ಅಪ್ಪ ಸುನೀತಾ ಅವರನ್ನು ತಿರಸ್ಕರಿಸಿದರು. ಕೆಲವು ವರ್ಷಗಳ ಕಾಲ ಅಜ್ಜಿ ಆಶ್ರಯ ನೀಡಿದರು. ಅಜ್ಜಿ ತೀರಿಕೊಂಡ ಬಳಿಕ ಚಿಕ್ಕಮ್ಮ (ತಾಯಿಯ ತಂಗಿ)ನ ಜತೆಗೆ ಜೀವನ ಸಾಗಿಸುತ್ತಿದ್ದಾರೆ.

ಬಿ.ಎ. ಓದಿದ್ದಾರೆ, ಕಂಪ್ಯೂಟರ್‌ ಡಿಪ್ಲೊಮಾ ಮಾಡಿಕೊಂಡಿದ್ದಾರೆ. ಕನಿಷ್ಟ ಒಂದು ಗುಮಾಸ್ತ ಹುದ್ದೆಯಾದರೂ ಸಿಕ್ಕರೆ ಸ್ವಂತ ಕಾಲಮೇಲೆ ನಿಲ್ಲಬಹುದೆಂಬ ಇಚ್ಛೆಯಿಂದ ನಾಲ್ಕು ವರ್ಷಗಳಿಂದ ಪರೀಕ್ಷೆ ಬರೆಯುತ್ತಿದ್ದಾರೆ. ಉದ್ಯೋಗ ಸಿಕ್ಕಿಲ್ಲ. ನಗರದ ಹೊಸ ಬಸ್‌ ನಿಲ್ದಾಣದ ಪಾರ್ಕಿಂಗ್‌ ಚೀಟಿ ನೀಡುವಲ್ಲಿ ಸುಮಾರು ಒಂದು ವರ್ಷ ಕೆಲಸ ಮಾಡಿದರು. ಮುಂಜಾನೆ 7 ಗಂಟೆಗೇ ಬರಬೇಕಾಗಿದ್ದರಿಂದ ಆ ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಜತೆಗೆ ದಿನನಿತ್ಯ ಅರೇಹಳ್ಳಿಯಿಂದ ಹಾಸನಕ್ಕೆ ಬಂದು ಹೋಗುವುದು ಕಷ್ಟವಾಗುತ್ತಿತ್ತು. ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ಕೆಲಸ ಬಿಟ್ಟುಬಿಡು ಎಂದು ಮನೆಯವರು ಹೇಳಿದರು. ಈಗ ಮನೆಯಲ್ಲೇ ಇದ್ದಾರೆ.
‘ನನಗೆ ಉಚಿತವಾಗಿ ನೆರವು ಬೇಕಾಗಿಲ್ಲ, ಕೆಲಸ ಮಾಡಲು ಸಿದ್ಧಳಿದ್ದೇನೆ, ಒಂದು ನೌಕರಿ ಕೊಡಿಸಿದರೆ ನನ್ನ ಕಾಲಮೇಲೆ ನಿಲ್ಲುತ್ತೇನೆ’ ಎಂದು ಸುನೀತಾ ನುಡಿಯುತ್ತಾರೆ.

ಅರ್ಹತೆ ಇದ್ದರೂ ಉದ್ಯೋಗ ಸಿಕ್ಕಿಲ್ಲ
ಅರಕಲಗೂಡು ತಾಲ್ಲೂಕು ಮಲ್ಲಿಪಟ್ಟಣದ ಪುಟ್ಟಸ್ವಾಮಿ, ಎಂ.ಎ. ಮುಗಿಸಿ, ಬೆಂಗಳೂರಿನಲ್ಲಿ ಎಂಬಿಎ ಕೋರ್ಸನ್ನೂ ಮುಗಿಸಿ ಈಗ ಉದ್ಯೋಗ, ನೆರವು ಇಲ್ಲದೆ ಅಲೆದಾಡುತ್ತಿದ್ದಾರೆ.

ಊರುಗೋಲಿಲ್ಲದೆ ನಡೆಯಲು ಸಾಧ್ಯವಿಲ್ಲದ ಪುಟ್ಟಸ್ವಾಮಿ ನೆರವು ನೀಡಿ ಎಂದು ಯಾರನ್ನೂ ಕೇಳಿಲ್ಲ, ಬದಲಿಗೆ ಅರ್ಹತೆ ಇದೆ ಉದ್ಯೋಗ ಕೊಡಿ ಎಂದು ಕೇಳಿದ್ದಾರೆ. ಈಚೆಗೆ ಮುಖ್ಯಮಂತ್ರಿ ಜಿಲ್ಲೆಯಲ್ಲಿ ಜನತಾ ದರ್ಶನ ಮಾಡಿದಾಗಲೂ ಇದೇ ಬೇಡಿಕೆ ಇಟ್ಟಿದ್ದಾರೆ. ಯಾವ ನೆರವೂ ಅವರಿಗೆ ಲಭಿಸಿಲ್ಲ.

ಹಾಸನದಲ್ಲೇ ಎಂಬಿಎ ಕಾಲೇಜುಗಳಿದ್ದರೂ ಅವರಿಗೆ ಬೇರೆಬೇರೆ ಕಾರಣ ನೀಡಿ ಪ್ರವೇಶ ನಿರಾಕರಿಸಿದ್ದರು. ಕೊನೆಗೆ ಬೆಂಗಳೂರಿನ ಸಂಸ್ಥೆಯೊಂದು ಪ್ರವೇಶದ ಜತೆಗೆ ಶಿಕ್ಷಣಕ್ಕೆ ಆರ್ಥಿಕ ನೆರವನ್ನೂ ನೀಡಿತು. ಶಿಕ್ಷಣದ ಕೊನೆಯ ಸೆಮಿಸ್ಟರ್‌ ಅನ್ನು ರಷ್ಯಾದ ಮಾಸ್ಕೋದಲ್ಲಿ ಮುಗಿಸಿದ್ದಾರೆ. ಅಲ್ಲಿಯೇ ಪ್ರಾಜೆಕ್ಟ್‌ ಕೆಲಸ ಮುಗಿಸಿ ಹುಟ್ಟೂರಿಗೆ ಬಂದರೆ ಇಲ್ಲಿ ಉದ್ಯೋಗವೂ ಇಲ್ಲ. ಸರ್ಕಾರದ ಇಲಾಖೆಗಳಿಗೆ ಅಲೆದು ಸುಸ್ತಾಗಿದ್ದಾರೆ. ಸುಮಾರು ಒಂಬತ್ತು ಖಾಸಗಿ ಕಂಪೆನಿಗಳಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದಾರೆ. ಉದ್ಯೋಗ ಸಿಕ್ಕಿಲ್ಲ.
‘ಪತ್ರಿಕೆಗಳ ಪ್ರಯತ್ನದಿಂದ ಏನಾದರೂ ನೆರವು ಸಿಕ್ಕರೂ ಸಿಗಬಹುದು. ಆದರೆ ನಮ್ಮ ಇಲಾಖೆಗಳು, ಅಥವಾ ರಾಜಕಾರಣಿಗಳು ನಮಗೆ ನೆರವಾಗುತ್ತಾರೆ ಎಂಬ ವಿಶ್ವಾಸ ಇಲ್ಲ. ಇಲಾಖೆಗಳವರು ನಮ್ಮನ್ನು ಸರಿಯಾಗಿ ಮಾತನಾಡಿಸುವುದೂ ಇಲ್ಲ’ ಎಂದು ಪುಟ್ಟಸ್ವಾಮಿ ಬೇಸರ ವ್ಯಕ್ತಪಡಿಸುತ್ತಾರೆ.

ಅಂಗವಿಕಲರಿಗೆ ಸ್ಫೂರ್ತಿ ತುಂಬುವ ವಿಜಯಕುಮಾರಿ
ಈ ಮಹಿಳೆಯನ್ನು ಹಾಸನದ ಜನರು ಒಂದಿಲ್ಲೊಂದು ಕಡೆ ನೋಡಿದ್ದಾರೆ.ಪ್ಯಾರಾ ಒಲಿಂಪಿಕ್ಸ್‌ ಪದಕ ಗೆದ್ದ ಗಿರೀಶ್‌ ಒಂದು ರೀತಿಯ ಸ್ಫೂರ್ತಿಯಾದರೆ ವಿಜಯಕುಮಾರಿ ಅಂಗವಿಕಲರಿಗೆ ಇನ್ನೊಂದು ರೀತಿಯಲ್ಲಿ ಸ್ಫೂರ್ತಿಯಾಗಿದ್ದಾರೆ.

ಎರಡೂ ಕಾಲಿಲ್ಲದಿದ್ದರೂ ತಮ್ಮ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ಮೇಲೆ ನಗರದ ಎಲ್ಲ ಭಾಗಗಳಲ್ಲೂ ಯಾರ ಸಹಾಯವೂ ಇಲ್ಲದೆ ಓಡಾಡುತ್ತಾರೆ. ಅಂಗವಿಕಲರ ಪರ ಎಲ್ಲ ಹೋರಾಟದಲ್ಲೂ ಇವರು ಮುಂಚೂಣಿಯಲ್ಲಿರುತ್ತಾರೆ. ಇದಕ್ಕಿಂತ ದೊಡ್ಡ ವಿಚಾರವೆಂದರೆ ತನ್ನಂಥ ಅಂಗವಿಕರಿಗೆ ಇವರು ನೆರವಾಗುತ್ತಿದ್ದಾರೆ.

ಬೆಂಗಳೂರಿನ ಅದೆಷ್ಟೋ ಸರ್ಕಾರೇತರ ಸಂಘ ಸಂಸ್ಥೆಗಳ ಸದಸ್ಯೆ, ಪದಾಧಿಕಾರಿಯಾಗಿರುವ ಇವರು ಅಲ್ಲಿಂದ ಗಾಲಿ ಕುರ್ಚಿಗಳು, ಊರುಗೋಲುಗಳು ಹೀಗೆ ವಿವಿಧ ಸೌಲಭ್ಯಗಳನ್ನು ತಂದು ಇಲ್ಲಿನ ಅಂಗವಿಕಲರಿಗೆ ನೀಡುತ್ತಿದ್ದಾರೆ. ಇವರ ಸಾಧನೆ ಸರ್ಕಾರದ ಇಲಾಖೆಯನ್ನು ನಾಚಿಸುವಂತಿದೆ. ಈಚಿನ ಕೆಲವು ದಿನಗಳಿಂದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ ಹಾಸನದ ನಂಟನ್ನು ಬಿಟ್ಟಿಲ್ಲ.

‘ಜಿಲ್ಲೆಯಲ್ಲಿರುವ ಅಂಗವಿಕಲರ ಸಂಖ್ಯೆ ಬರಿ 29ಸಾವಿರ ಅಲ್ಲ, ಇಲಾಖೆ ಈಗಲೂ 2004ರ ಅಂಕಿ ಅಂಶಗಳನ್ನೇ ನೀಡುತ್ತಿದೆ. ಮನೆಮನೆಗೆ ಹೋಗಿ ಅಂಗವಿಕಲರ ಅಂಕಿ ಅಂಶ ಸಂಗ್ರಹಿಸುವ ಕೆಲಸ ಆಗಬೇಕು. ಎಷ್ಟು ಮಂದಿ ಸುಶಿಕ್ಷಿತರಿದ್ದಾರೆ, ಎಷ್ಟು ಜನರಿಗೆ ಸೌಲಭ್ಯ, ನೆರವು ಬೇಕಾಗಿದೆ ಎಂಬ ವಿಸ್ತೃತ ಅಧ್ಯಯನ ಮಾಡಬೇಕು’ ಎಂದು ವಿಜಯಕುಮಾರಿ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT