ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಚೀಟಿಯಲ್ಲಿ ನಗರಿಗರು

Last Updated 11 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಪಾರಿವಾಳಗಳ ನೆರವಿನೊಂದಿಗೆ ಪತ್ರ ವಿನಿಮಯ ಪದ್ಧತಿ ಬಹಳ ಪುರಾತನವಾದುದು. ಕ್ರಮೇಣ ರಾಜಮಹಾರಾಜರೂ ತಮ್ಮದೇ ಆದ ಅಂಚೆ ವ್ಯವಸ್ಥೆಯನ್ನು ರೂಪಿಸಿಕೊಂಡರು. ನಮ್ಮ ಮೈಸೂರು ಅರಸರೂ ‘ಮೈಸೂರು ಅಂಚೆ’ಯನ್ನು ವ್ಯವಸ್ಥಿತವಾಗಿ ಚಾಲ್ತಿಗೆ ತಂದಿದ್ದರು.

ಅಂಚೆಯನ್ನು ಕೊಂಡೊಯ್ಯಲು ಕಾಸು ಪಡೆಯುವ ಪದ್ಧತಿ ರೂಢಿಗೆ ಬಂದು, ಲಕೋಟೆಗಳ ಮೇಲೆ ಅಂಚೆ ಚೀಟಿ ಹಚ್ಚುವ ಕ್ರಮಕ್ಕೆ ನಾಂದಿ ಹಾಡಿದ್ದು ಬ್ರಿಟನ್‌ ದೇಶ. ಭಾರತವನ್ನು ಆಗ ಆಳುತ್ತಿದ್ದ ಬ್ರಿಟಿಷರು ಇಲ್ಲೂ ಅದೇ ವ್ಯವಸ್ಥೆಯನ್ನು 1852ರಲ್ಲಿ ಜಾರಿಗೆ ತಂದರು. ಸ್ವಾತಂತ್ರ್ಯಾ ನಂತರ ಭಾರತದ್ದೇ ಪ್ರತ್ಯೇಕ ಅಂಚೆ ವ್ಯವಸ್ಥೆ ಅಸ್ತಿತ್ವಕ್ಕೆ ಬಂತು.

ಅಂಚೆ ಚೀಟಿಗಳು ಜನಜೀವನದ ಅವಿಭಾಜ್ಯ ಅಂಗವಾಗಿದ್ದ ಕಾಲವೊಂದಿತ್ತು. ಈಗ ಅದು ಬದಲಾಗಿದೆ. ಎಸ್‌.ಎಂ.ಎಸ್‌, ಇ- ಮೇಲ್‌, ಕೊರಿಯರ್‌ಗಳ ಕಾಲ ಇದು. ಹಿಂದೆ ಅರ್ಥ ವ್ಯವಸ್ಥೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದ ಅಂಚೆ ಸೇವೆಗಳು ಪ್ರಸ್ತುತ ಕೊಂಚ ಕಳೆಗುಂದಿವೆಯಾದರೂ ಅಂಚೆ ವ್ಯವಸ್ಥೆಯೊಡನೆ ಆರಂಭಗೊಂಡಿದ್ದ ಅಂಚೆ ಚೀಟಿ ಸಂಗ್ರಹ ಹವ್ಯಾಸ ಜನಪ್ರಿಯತೆ ಏರುಗತಿಯಲ್ಲೇ ಇದೆ.

ಅಂಚೆ ಚೀಟಿಗಳೆಂದರೆ ಕೇವಲ ಶುಲ್ಕ ಶುಷ್ಕ ಚೀಟಿಗಳಲ್ಲ. ಅವು ಆಯಾ ದೇಶದ ಪ್ರತಿಬಿಂಬಗಳು. ಆಚಾರ ವಿಚಾರ, ವ್ಯಕ್ತಿಗಳು, ಜನಪದ ಕಲೆಗಳು, ಪುಷ್ಪಲೋಕ, ಪ್ರಮುಖ ಸ್ಥಳಗಳು, ಗಣ್ಯ ವ್ಯಕ್ತಿಗಳು, ಗಮನಾರ್ಹ ಘಟನೆಗಳು ಅನಾವರಣಗೊಳ್ಳುವ ಅಂಚೆ ಚೀಟಿಗಳು ಆಸಕ್ತರ ಪಾಲಿಗೆ ಸಂಗ್ರಹಿಸಬಹುದಾದ ಅಮೂಲ್ಯ ವಸ್ತುಗಳು.

ಸ್ವಾತಂತ್ರ್ಯ ಪಡೆದ ವರ್ಷದಲ್ಲೇ (21 ನವೆಂಬರ್‌ 1947) ತ್ರಿವರ್ಣ ರಾಷ್ಟ್ರಧ್ವಜವುಳ್ಳ ಮೊದಲ ಅಂಚೆ ಚೀಟಿಯೊಡನೆ ಆರಂಭಗೊಂಡ ಭಾರತೀಯ ಚೀಟಿಗಳ ಪಯಣ ನಿರಂತರವಾಗಿ ಸಾಗಿಬಂದಿದೆ. ಅಂಚೆ ಚೀಟಿಗಳಲ್ಲಿ ಎರಡು ವಿಧ. ನಿಯತ ಸರಣಿ (ಡೆಫಿನಿಟಿವ್‌ ಸೀರಿಸ್‌)-: ಇವು ಪದೇ ಪದೇ ಮುದ್ರಣಗೊಳ್ಳುವಂತಹವು. ಇವು ಅಂಚೆ ಸೇವೆಗಳಿಗೆ ಹೆಚ್ಚಾಗಿ ಬಳಕೆಯಾಗುವಂತಹವು. ಇನ್ನೊಂದು ಸ್ಮರಣಾರ್ಥ ಅಂಚೆ ಚೀಟಿಗಳು (ಕಮಾಮೊರೇಟೀವ್‌ ಸೀರಿಸ್‌).

ಸ್ಮರಣೆಯ ಚೀಟಿಗಳು ವಿಶೇಷ ಸಂದರ್ಭಗಳಲ್ಲಿ ಸ್ಮರಣಾರ್ಥ ವಿಷಯಗಳ ಪ್ರಚಾರಕ್ಕಾಗಿ ಪ್ರಕಟಗೊಳ್ಳುವಂಥವು. ಇಂತಹ ಅಂಚೆ ಚೀಟಿಗಳೇ ಸಂಗ್ರಹಕಾರರ ಪಾಲಿಗೆ ಮುಖ್ಯ. ಅಂಚೆ ಚೀಟಿ ಸಂಗ್ರಹ (ಫಿಲಾಟಲಿ) ವಿಶ್ವವ್ಯಾಪಿ. ಇದು ಕೋಟಿ ಕೋಟಿ ರೂಪಾಯಿಗಳ ವ್ಯವಹಾರ. ಅಮೂಲ್ಯ, ಅಪೂರ್ವ ಅಂಚೆ ಚೀಟಿಗಳ ವಿಮೆಯ ಹಣವೇ ಕೋಟಿಗಳನ್ನು ಮೀರುವುದಿದೆ!

ಸುಮಾರು ಐನೂರು ವರ್ಷಗಳ ಹಿಂದೆ ಕೆಂಪೇಗೌಡರಿಂದ ಸ್ಥಾಪನೆಗೊಂಡು ಇದೀಗ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದೆಂದು ಖ್ಯಾತಿ ಪಡೆದುಕೊಂಡ ಬೆಂಗಳೂರು ಹಾಗೂ ಬೆಂಗಳೂರಿಗರು ಇಂತಹ ಸ್ಮರಣಾರ್ಥ ಅಂಚೆ ಚೀಟಿಗಳಲ್ಲಿ ಕಾಣಿಸಿಕೊಂಡು ಸಂಗ್ರಹಕಾರರ ಗಮನ ಸೆಳೆದಿರುವುದುಂಟು.

ಭಾರತೀಯ ಅಂಚೆ ಚೀಟಿಗಳಲ್ಲಿ ಬೆಂಗಳೂರು ಪ್ರಥಮವಾಗಿ ಪರಿಚಯವಾಗಿದ್ದು ಸುಮಾರು ಆರು ದಶಕಗಳ ಹಿಂದೆ. 1955ರ ಗಣರಾಜ್ಯೋತ್ಸವ ದಿನ ಹೊರಬಂದ ನಿಯತ ಅಂಚೆ ಚೀಟಿಗಳಲ್ಲಿ ಬೆಂಗಳೂರಿನ ವಿಮಾನ ಕಾರ್ಖಾನೆ ಮತ್ತು ದೂರವಾಣಿ ಕಾರ್ಖಾನೆಗಳು ಕಾಣಿಸಿಕೊಂಡವು. ಆ ನಂತರ ನಿಯತ ಅಂಚೆ ಚೀಟಿಗಳಲ್ಲಿ ಬೆಂಗಳೂರು ಕಾಣಲಿಲ್ಲ. ಆದರೆ ಸ್ಮರಣಾರ್ಥ ಚೀಟಿಗಳಲ್ಲಿ ಬೆಂಗಳೂರು–ಬೆಂಗಳೂರಿನ ಪ್ರಮುಖರು ಕಂಡುಬರುತ್ತಲೇ ಇದ್ದಾರೆ.

ದೇಶ ಕಂಡ ವಿಖ್ಯಾತ ಎಂಜಿನಿಯರ್‌ ಸರ್‌ ಎಂ. ವಿಶ್ವೇಶ್ವರಯ್ಯ ಅಂಚೆ ಚೀಟಿಗಳಲ್ಲಿ ಕಂಡುಬಂದ ಮೊದಲ ಕನ್ನಡಿಗ. ಸರ್‌ ಎಂ.ವಿ. ಅವರಿಗೆ ನೂರು ತುಂಬಿದಾಗ (15–09–1960) ಮೈಸೂರು ಪೇಟಧಾರಿ ಎಂ.ವಿ. ಅಂಚೆ ಚೀಟಿ ಬಿಡುಗಡೆಯಾಯಿತು. ಬದುಕಿದ್ದಾಗಲೇ ಅಂಚೆ ಚೀಟಿಯಲ್ಲಿ ಕಂಡುಬರುವುದು ಅಪರೂಪ. ಇಂತಹ ಅನನ್ಯ ವ್ಯಕ್ತಿಯ ಅಂಚೆ ಚೀಟಿಗಳನ್ನು ವಿಶೇಷ ಸಮಾರಂಭದಲ್ಲಿ ಬಿಡುಗಡೆಗೊಳಿಸಿದವರು ಆಗಿನ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ.

ಸರ್‌ ಸಿ.ವಿ. ರಾಮನ್‌ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಶ್ರೇಷ್ಠ ವಿಜ್ಞಾನಿ. ವೃತ್ತಿ ಜೀವನದ ಬಹಳ ವರ್ಷಗಳನ್ನು ಬೆಂಗಳೂರಿನಲ್ಲಿಯೇ ಕಳೆದು ಬೆಂಗಳೂರಿನಲ್ಲಿಯೇ ಸಂಶೋಧನಾ ಕೇಂದ್ರವನ್ನೂ ಸ್ಥಾಪಿಸಿದ ರಾಮನ್‌ ಅವರ ಸ್ಮರಣಾರ್ಥ ಅಂಚೆ ಚೀಟಿ ಹೊರಬಂದಿದ್ದು 1971ರ ನವೆಂಬರ್‌ 21ರಂದು. ರಾಮನ್‌ ಬಳಿಕ ಭಾರತೀಯ ನೆನಪಿನ ಅಂಚೆ ಚೀಟಿಗಳಲ್ಲಿ ಕಂಡದ್ದು ಬೆಂಗಳೂರಿನ ಹೆಸರಾಂತ ಸಾಹಿತಿ, ಪತ್ರಕರ್ತ ಡಿ.ವಿ.ಜಿ. ಸಾರ್ವಜನಿಕ ಸೇವೆಗಾಗಿ ತಾವು ಹುಟ್ಟುಹಾಕಿದ ಗೋಖಲೆ ಸಾರ್ವಜನಿಕ ಸಂಸ್ಥೆಯೊಂದಿಗೆ ಡಿ.ವಿ.ಜಿ. 1988ರ ಮಾರ್ಚ್ 17ರಂದು ಪ್ರಕಟವಾದ ಅಂಚೆ ಚೀಟಿಯಲ್ಲಿ ಕಾಣಿಸಿಕೊಂಡರು.

ಅಂತರರಾಷ್ಟ್ರೀಯ ಚಿತ್ರಕಲಾವಿದರಾಗಿ ಖ್ಯಾತಿ ಪಡೆದ ಡಾ. ಸ್ಲೇತೆತಾಲ್‌ ರೋರಿಚ್‌ ರಷ್ಯಾದವರು. ತಂದೆಯೊಡನೆ ಭಾರತಕ್ಕೆ ಬಂದು ಅವರು ವಾಸ ಮಾಡಲು ಆಯ್ಕೆ ಮಾಡಿಕೊಂಡದ್ದು ಬೆಂಗಳೂರು ಸಮೀಪದ ತಲಘಟ್ಟಪುರ. ತಾತಗುಣಿ ಎಸ್ಟೇಟ್‌ ಎಂದೇ ಹೆಸರಾದ ಸ್ಥಳದಲ್ಲಿದ್ದ ಕಲಾವಿದ ರೋರಿಚ್‌ ಪ್ರಸಿದ್ಧ ನಟಿ ದೇವಿಕಾರಾಣಿ ಅವರನ್ನು ವಿವಾಹವಾದರು. ರೋರಿಚ್‌ ಅವರು ಚಿತ್ರಿಸಿದ ಪ್ರಸಿದ್ಧ ಕಲಾಕೃತಿಗಳು ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿವೆ. ರೋರಿಚ್‌ ಅವರ ಸ್ಮರಣೆಯಲ್ಲಿ 2004ರ ಅಕ್ಟೋಬರ್‌ 27ರಂದು ಅಂಚೆ ಚೀಟಿಯನ್ನು ಕೇಂದ್ರ ಸರ್ಕಾರ ಹೊರತಂದಿತು.

ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್‌ಕುಮಾರ್‌ ಹಾಗೂ ಇನ್ನೊಬ್ಬ ಕನ್ನಡ ಚಲನಚಿತ್ರ ಮೇರು ನಟ ಡಾ. ವಿಷ್ಣುವರ್ಧನ್‌ ಅವರೂ (2009 ಹಾಗೂ 2013) ಸ್ಮರಣಾರ್ಥ ಅಂಚೆ ಚೀಟಿಗಳಲ್ಲಿ ಸ್ಥಾನ ಪಡೆದರು.

ಬೆಂಗಳೂರಿನ ಹಲವು ಪ್ರತಿಷ್ಠಿತ ಸಂಸ್ಥೆಗಳು ಭಾರತೀಯ ಚೀಟಿಗಳನ್ನು ಅಲಂಕರಿಸಿವೆ. ಅವುಗಳಲ್ಲಿ ಪ್ರಮುಖವಾದದು ಭಾರತೀಯ ವಿಜ್ಞಾನ ಸಂಸ್ಥೆ. ಟಾಟಾ ಇನ್‌ಸ್ಟಿಟ್ಯೂಟ್‌ನ ಶತಮಾನೋತ್ಸವ ಸಂದರ್ಭದಲ್ಲಿ ಜೋಡಿ ಅಂಚೆ ಚೀಟಿಗಳನ್ನು (ಬೆಲೆ 25 ರೂ.) 2008ರಲ್ಲಿ ಪ್ರಕಟಿಸಲಾಯಿತು.

ವೈಮಾನಿಕ ಇತಿಹಾಸದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನವಿದೆ. ವಿಮಾನ ತಯಾರಿಕಾ ಕಾರ್ಖಾನೆಯೂ ಸೇರಿದಂತೆ ವೈಮಾನಿಕ ಸಂಶೋಧನಾ ಸಂಸ್ಥೆಗಳಿರುವ ಬೆಂಗಳೂರಿನಲ್ಲಿ ತಯಾರಾದ ನಾಲ್ಕು ವಿಮಾನ–ಹೆಲಿಕಾಪ್ಟರ್‌ ಚಿತ್ರಗಳಿದ್ದ ನಾಲ್ಕು ಅಂಚೆ ಚೀಟಿಗಳನ್ನು ವಿಮಾನಯಾನ ಶತಮಾನೋತ್ಸವದ ನೆನಪಿನಲ್ಲಿ ಹೊರತರಲಾಯಿತು. (ಏರೋ ಇಂಡಿಯಾ 2003).

ಸೇಂಟ್ ಮಾರ್ಥಾಸ್‌ ಆಸ್ಪತ್ರೆಗೆ ನೂರು ವರ್ಷ ತುಂಬಿದಾಗ ಸಂತ ಜೋಸೆಫ್‌, ಹೈಸ್ಕೂಲ್‌ ಮತ್ತು ಕಾಲೇಜು ಸ್ಮರಣಾರ್ಥ ಬೆಂಗಳೂರು ಪ್ರಧಾನ ಅಂಚೆ ಕಚೇರಿ ನೆನಪಿನಲ್ಲಿ ಅಂಚೆ ಚೀಟಿಗಳು ಹೊರಬಿದ್ದಿವೆ. ಅಸ್ಟೋಫಿಸಿಕ್‌್ಸ ಇನ್ಸ್‌ಟಿಟ್ಯೂಟ್‌, ಯುನೈಟೆಡ್‌ ಥಿಯಾಲಾಜಿಕಲ್‌ ಕಾಲೇಜುಗಳೂ ಅಂಚೆ ಚೀಟಿಗಳಲ್ಲಿ ಸ್ಥಾನ ಪಡೆದುಕೊಂಡಿವೆ.

ಬೆಂಗಳೂರು ಮತ್ತು ಬೆಂಗಳೂರಿಗರ ಬಗ್ಗೆ ಹೆಚ್ಚೆಂದರೆ 15 ಅಂಚೆ ಚೀಟಿಗಳು ಕಳೆದ ಆರು ದಶಕಗಳಲ್ಲಿ ಪ್ರಕಟಗೊಂಡಿವೆ. ಇದು ಬೇರೆ ನಗರಗಳಿಗೆ ಹೋಲಿಸಿದರೆ ಬಹಳ ಕಡಿಮೆ.

ಶ್ರೇಷ್ಠ ಸಸ್ಯೋದ್ಯಾನಗಳ ಪಾಲಿಗೆ ಸೇರುವ ಲಾಲ್‌ಬಾಗ್‌, ಶಿಲಾಕಾವ್ಯ ವಿಧಾನಸೌಧ, ನೂರು ತುಂಬಿರುವ ಗಾಜಿನ ಮನೆ, ಕಲಾವಿದ ವೆಂಕಟಪ್ಪ ಪ್ರಸಿದ್ಧ ಪುಷ್ಪ ಪ್ರದರ್ಶನ, ಐತಿಹಾಸಿಕ ಅಠಾರ ಕಚೇರಿ (ಕರ್ನಾಟಕ ಹೈಕೋರ್ಟ್‌) ಹೀಗೆ ಹಲವಾರು ಕಟ್ಟಡಗಳು, ವ್ಯಕ್ತಿಗಳು ಈಗಾಗಲೇ ಅಂಚೆ ಚೀಟಿಗಳಲ್ಲಿ ಪ್ರಕಟವಾಗಬೇಕಿದ್ದವು.

ಬೆಂಗಳೂರಿಗೆ ಮಾತ್ರವಲ್ಲ ಇಡೀ ಕರ್ನಾಟಕದ ಇಂತಹ ಹಲವಾರು ಸ್ಮಾರಕಗಳು, ವ್ಯಕ್ತಿಗಳು ಅಂಚೆ ಚೀಟಿಗಳಲ್ಲಿ ಕಾಣಿಸಿಕೊಳ್ಳುವುದರಿಂದ ವಂಚಿತವಾಗಿವೆ/ಆಗಿದ್ದಾರೆ. ಕೇಂದ್ರ ಸರ್ಕಾರದ ಅಂಚೆ ಇಲಾಖೆಗೆ ಸೂಕ್ತ ಪ್ರಸ್ತಾವನೆಗಳನ್ನು ಕಳುಹಿಸುವಲ್ಲಿ ಸಂಘ ಸಂಸ್ಥೆಗಳು ನಿರಾಸಕ್ತಿ ತೋರಿದರೆ ರಾಜ್ಯದ ಪ್ರಮುಖ ವಿಷಯ ವಿಶೇಷಗಳ ಅಂಚೆ ಚೀಟಿಗಳನ್ನು ಹೊರತರುವಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೂ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT