ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧನ ಬಾಳಿಗೆ ಬೆಳಕಾದ ಚಂದನಾ

ಹರಿಹರದಲ್ಲಿ ನಡೆದ ವಿವಾಹ ಮಹೋತ್ಸವ
Last Updated 7 ಡಿಸೆಂಬರ್ 2013, 6:41 IST
ಅಕ್ಷರ ಗಾತ್ರ

ಹರಿಹರ: ಅಂಗವಿಕಲರಿಗೆ ಸೂಕ್ತ ಅವಕಾಶ ನೀಡದ ಸಮಾಜದಲ್ಲಿ, ಅಂಧನನ್ನು ಇಷ್ಟಪಟ್ಟು ವರಿಸುವುದರ ಮೂಲಕ ಯುವತಿಯೊಬ್ಬರು ವಿಶ್ವ ಅಂಗವಿಕರ ದಿನಾಚರಣೆ ನಡೆಯುವ ತಿಂಗಳಲ್ಲಿ ಆದರ್ಶ ಮೆರೆದ ಘಟನೆಗೆ ಶುಕ್ರವಾರ ನಗರದ ಕಾಟ್ವೆ ಭವನ ಸಾಕ್ಷಿಯಾಯಿತು.

ನಗರ ನಿವಾಸಿ ಭೀಮಾಸಾ ನಾಗೋಸಾ ಲದ್ವಾ ಮತ್ತು ಜಯಶ್ರೀ ಬಾಯಿ ದಂಪತಿಯ ಮೂರನೇ ಪುತ್ರಿ ಕಾನೂನು ಪದವೀಧರೆ ಚಂದನಾ (ಸಾವಿತ್ರಿ) ಹಾಗೂ ಬೆಂಗಳೂರಿನ ಭಗವಾನ್ ಭೂತೆ ಮತ್ತು ರೇಣುಕಾ ದಂಪತಿಯ ಏಕೈಕ ಪುತ್ರ ದೀಪಕ್ ಬಿ. ಭೂತೆ ಅವರ ವಿವಾಹ ಕಾಟ್ವೆ ಭವನದಲ್ಲಿ ನಡೆಯಿತು.

ಮಧು ಮಗಳಾದ ಚಂದನಾ (ಸಾವಿತ್ರಿ) ಳೊಂದಿಗೆ ಮಾತನಾಡಿದಾಗ, ‘ನನ್ನ ಚಿಕ್ಕಪ್ಪ ರಂಗನಾಥಸಾ ನಾಗೋಸಾ ಲದ್ವಾ ಅವರು ಕೆಲವು ತಿಂಗಳ ಹಿಂದೆ ಮದುವೆಯ ಪ್ರಸ್ತಾವ ಮುಂದಿಟ್ಟರು. ಅದೇ ಸಮಯದಲ್ಲಿ ಮದುವೆಯಾಗುವ ಹುಡುಗನಿಗೆ ಅಂಧತ್ವ ಇದೆ ಎಂಬುದನ್ನೂ ತಿಳಿಸಿದ್ದರು. ಅಂಧತ್ವದ ಬಗ್ಗೆ ತಿಳಿಯುತ್ತಿದ್ದಂತೆ ಮನಸ್ಸು ಕೊಂಚ ಗಲಿಬಿಲಿಗೊಂಡಿತಾದರೂ, ಸಮಾಧಾನ ಚಿತ್ತದಿಂದ ಕುಳಿತು ಆಲೋಚಿಸಿದೆ. ನಂತರ ಆತನೊಂದಿಗೆ ಜೀವನ ಸಾಗಿಸಲು ತೀರ್ಮಾನಿಸಿದೆ ಎಂದು ಹೇಳಿದರು.

ಮದುಮಗ ದೀಪಕ್ ಅವರನ್ನು ಮಾತನಾಡಿಸಿದಾಗ, ನನಗೆ ಅಂಧತ್ವ ಹುಟ್ಟಿನಿಂದ ಬಂದಿಲ್ಲ. ಆರನೇ ವಯಸ್ಸಿಗೆ ಬಂದ ಜ್ವರಕ್ಕೆ ತೆಗೆದುಕೊಂಡ ಔಷಧಿಯ ಅಡ್ಡ ಪರಿಣಾಮವಾಗಿ ಕಣ್ಣು ಕಳೆದುಕೊಳ್ಳಬೇಕಾಯಿತು ಎಂದು ನುಡಿದರು.

ಆದರೂ, ವಿದ್ಯಾಭ್ಯಾಸ ಮಾಡಲೇ ಬೇಕು ಎಂಬ ಛಲದಿಂದ ಬೆಂಗಳೂರಿನ ರಮಣ ಮಹರ್ಷಿ ಅಂಧ ಮಕ್ಕಳ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಬಿ.ಎ. ಪದವಿಯನ್ನು ಪಡೆದುಕೊಂಡೆ. ಐಎಎಸ್ ಅಧಿಕಾರಿಯಾಗಬೇಕು ಎಂಬ ಹಂಬಲದಿಂದ ಪ್ರವೇಶ ಪರೀಕ್ಷೆಯನ್ನೂ ಬರೆದಿದ್ದೆ. ಆದರೆ, ಅದೃಷ್ಟ ಕೈಕೊಟ್ಟಿತು. ನಂತರ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆ ಬರೆದು, ಯಶಸ್ವಿಯಾಗಿ ಎಸ್‌ಬಿಐನಲ್ಲಿ ಉದ್ಯೋಗ ಪಡೆದುಕೊಂಡೆ ಎಂದರು.

ತಾಯಿಯ ಆಸೆಯಂತೆ ಅವರ ತವರೂರಾದ ಹರಿಹರದಲ್ಲಿ ಮದುವೆ ಮಾಡಿಕೊಳ್ಳಲು ಬಯಸಿದೆವು. ಆಗ, ಚಂದನಾ ಅವರ ಕುಟುಂಬ ಪರಿಚಯವಾಗಿ ನಂತರ, ಚಂದನಾಳೊಂದಿಗೆ ಮಾತನಾಡಿ, ನನ್ನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ. ಅವರ ಅಭಿಪ್ರಾಯ ಪಡೆದು ಸ್ವ ಇಚ್ಛೆಯಿಂದ ಇಬ್ಬರು ಮದುವೆಯಾಗಲು ತೀರ್ಮಾನಿಸಿದೆವು ಎಂದು ತಿಳಿಸಿದರು.

ಸರಳ ಮದುವೆ ಮೂಲಕ ಸಮಾಜಕ್ಕೆ ಮಾದರಿಯಾದ ವಿವಾಹಕ್ಕೆ ಎರಡೂ ಕಡೆಯ ಸಂಬಂಧಿಕರು, ಆತ್ಮೀಯರು ಹಾಗೂ ಸ್ನೇಹಿತರು ಶುಭ ಹಾರೈಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT