ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಆಸ್ತಿ: ಪ್ರಧಾನಿ ಮೌನಕ್ಕೆ ಅಯ್ಯರ್ ಆಕ್ಷೇಪ

Last Updated 23 ಜನವರಿ 2011, 19:30 IST
ಅಕ್ಷರ ಗಾತ್ರ

ಕೊಚ್ಚಿ (ಐಎಎನ್‌ಎಸ್): ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಅವರ ಸಂಬಂಧಿಕರು ಅಕ್ರಮವಾಗಿ ಭಾರಿ ಆಸ್ತಿ ಮಾಡಿಕೊಂಡಿರುವ ಪ್ರಕರಣದ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ದಿವ್ಯಮೌನ ವಹಿಸಿರುವುದಕ್ಕೆ ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿ ವಿ. ಆರ್. ಕೃಷ್ಣ ಅಯ್ಯರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ತಮ್ಮ ಮನೆಯಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರ ಮೌನದಿಂದ ತಮಗೆ ದಿಗ್ಭ್ರಮೆಯಾಗಿದೆ ಎಂದು ಹೇಳಿದರು.

‘ಕಳೆದ ವರ್ಷ ಕೇರಳ ಹೈಕೋರ್ಟ್‌ಗೆ ರಾಜೀನಾಮೆ ನೀಡಿದ ನ್ಯಾಯಮೂರ್ತಿ ವಿ. ಗಿರಿ ಅವರು ನನ್ನ ಬಳಿ ಬಂದು ಬಾಲಕೃಷ್ಣನ್ ವಿಚಾರವನ್ನು ಪ್ರಧಾನಿ ಅವರಿಗೆ ಬರೆಯಬಾರದು ಎಂದು ವಿನಂತಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಬರೆದಿರುವುದರಿಂದ ನಾನು ಮತ್ತೆ ಪ್ರಧಾನಿ ಅವರಿಗೆ ಪತ್ರ ಬರೆದು ತಿಳಿಸುವುದರಲ್ಲಿ ಅರ್ಥವಿಲ್ಲ ಎಂದು ನಾನು ಅವರಿಗೆ ಹೇಳಿದ್ದೆ’ ಎಂದು ಕೃಷ್ಣ ಅಯ್ಯರ್ ಅವರು ತಿಳಿಸಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಹಾಲಿ ಅಧ್ಯಕ್ಷರಾಗಿರುವ ಬಾಲಕೃಷ್ಣನ್ ವಿರುದ್ಧ ಕಳೆದ ಡಿಸೆಂಬರ್‌ನಲ್ಲಿ 95ರ ಹರೆಯದ ಕೃಷ್ಣ ಅಯ್ಯರ್ ಅವರು ಸಮರ ಸಾರಿದ್ದರು. ಈ ಹುದ್ದೆಗೆ ರಾಜೀನಾಮೆ ಸಲ್ಲಿಸಿ ವಿಚಾರಣೆ ಎದುರಿಸಲು ಅವರು ಬಳಿಕ ಹಲವು ಬಾರಿ ಬಾಲಕೃಷ್ಣನ್ ಅವರಿಗೆ ಸವಾಲು ಹಾಕುತ್ತಲೇ ಬಂದಿದ್ದಾರೆ.

ಈ ಹಗರಣದ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ವಿ. ಎಸ್. ಅಚ್ಯುತಾನಂದನ್ ಅವರು ಬಾಲಕೃಷ್ಣನ್ ಅವರ ಅಳಿಯ ಪಿ. ವಿ. ಶ್ರೀನಿಜಿನ್ ಅವರ ಅಕ್ರಮ ಆಸ್ತಿಯ ಬಗ್ಗೆ ವಿಚಕ್ಷಣಾ ದಳದಿಂದ ತನಿಖೆಗೆ ಆದೇಶಿಸಿದ್ದರು. ಯುವ ಕಾಂಗ್ರೆಸ್‌ನ ಮಾಜಿ ನಾಯಕರಾಗಿದ್ದ ಅವರು ಆರೋಪದ ಹಿನ್ನೆಲೆಯಲ್ಲಿ ಪಕ್ಷವನ್ನು ತ್ಯಜಿಸಿದ್ದರು.

ಇಂತಹದೇ ಆರೋಪ ಎದುರಾದ ಹಿನ್ನೆಲೆಯಲ್ಲಿ ಬಾಲಕೃಷ್ಣನ್ ಅವರ ಸಹೋದರ ಕೆ. ಜಿ. ಭಾಸ್ಕರನ್ ಅವರು ವಿಶೇಷ ಸರ್ಕಾರಿ ವಕೀಲರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ನ್ಯಾಯಾಂಗದಲ್ಲಿ ಭ್ರಷ್ಟಾಚಾರವನ್ನು ಕೃಷ್ಣ ಅಯ್ಯರ್ ಅವರು ಹಲವು ವರ್ಷಗಳಿಂದ ವಿರೋಧಿಸುತ್ತಲೇ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT