ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ಪ್ರಮಾಣದ ರಸಗೊಬ್ಬರ ಸಂಗ್ರಹ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಮುಂಬರುವ ಮುಂಗಾರಿನ ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಉಂಟಾಗಬಾರದೆಂಬ ಉದ್ದೇಶದಿಂದ ಈಗಾಗಲೇ 5 ಲಕ್ಷ ಟನ್‌ಗಳಿಗೂ ಅಧಿಕ ಪ್ರಮಾಣದ ವಿವಿಧ ರಸಗೊಬ್ಬರಗಳನ್ನು ಎಲ್ಲ ಜಿಲ್ಲೆಗಳಲ್ಲೂ ಸಂಗ್ರಹಿಸಿಡಲಾಗಿದೆ~ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಶಾಸಕ ಹಾಲಪ್ಪ ಬಸಪ್ಪ ಆಚಾರ ತಿಳಿಸಿದರು.

`ಹಾವೇರಿ ಗಲಭೆ ನಂತರದಲ್ಲಿ 2008- 09ರ ಸಾಲಿನಿಂದ ಸರ್ಕಾರ, ರಸಗೊಬ್ಬರ ಕಾಪು ದಾಸ್ತಾನು ಯೋಜನೆಯನ್ನು ಮಹಾಮಂಡಳಕ್ಕೆ ವಹಿಸಿತು. ರಾಜ್ಯದ ಒಟ್ಟು ರಸಗೊಬ್ಬರ ಮಾರಾಟದಲ್ಲಿ 2007ರಲ್ಲಿ ಮಹಾಮಂಡಳದ ಪಾಲು ಶೇಕಡಾ 16.48ರಷ್ಟಿತ್ತು, ಈಗ ಶೇ 36ರಷ್ಟು ಆಗಿದೆ. ಇದನ್ನು 2012- 13ರ ಸಾಲಿನಲ್ಲಿ ಶೇ 50ರಷ್ಟು ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ~ ಎಂದು ಅವರು  ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಮಹಾಮಂಡಳವು ವ್ಯವಸಾಯ ಸಹಕಾರ ಸಂಘಗಳ ಮೂಲಕ ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿದೆ. ರಾಜ್ಯದಲ್ಲಿ 4,764 ಸಹಕಾರ ಸಂಘಗಳು ಸಕ್ರಿಯವಾಗಿವೆ. 2008ಕ್ಕೂ ಮೊದಲು ರಸಗೊಬ್ಬರ ಮಾರಾಟದಲ್ಲಿ ತೊಡಗಿದ್ದ ಸಹಕಾರ ಸಂಘಗಳ ಸಂಖ್ಯೆ 1,000ಕ್ಕೂ ಕಡಿಮೆ ಇತ್ತು. ಈಗ ಈ ಸಂಖ್ಯೆ 3,500ಕ್ಕೆ ಏರಿದೆ. ಮುಂದಿನ ಒಂದು ವರ್ಷದೊಳಗೆ ಕನಿಷ್ಠ 500 ಸಂಘಗಳನ್ನು ರಸಗೊಬ್ಬರ ಮಾರಾಟದಲ್ಲಿ ತೊಡಗಿಸಲಾಗುವುದು~ ಎಂದು ವಿವರಿಸಿದ ಅವರು, `ರಾಜ್ಯದಲ್ಲಿ ಸುಮಾರು 9,000 ಮಂದಿ ಖಾಸಗಿ ರಸಗೊಬ್ಬರ ಮಾರಾಟಗಾರರಿದ್ದಾರೆ~ ಎಂದರು.
 
`ವರ್ಷದಿಂದ ವರ್ಷಕ್ಕೆ ಮಹಾಮಂಡಲವು ವಿತರಿಸುತ್ತಿರುವ ರಸಗೊಬ್ಬರದ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ತಮಗೆ ಲಾಭ ಕಡಿಮೆಯಾಗುತ್ತಿದೆ ಎಂದು ಆರೋಪಿಸಿ ಖಾಸಗಿ ರಸಗೊಬ್ಬರ ಮಾರಾಟಗಾರರು ಗಂಗಾವತಿಯಲ್ಲಿ ನನ್ನ ವಿರುದ್ಧ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು~ ಎಂದರು.

`ಕಳೆದ ಏಪ್ರಿಲ್‌ನಿಂದ ನವೆಂಬರ್‌ವರೆಗೆ ರಾಜ್ಯದಲ್ಲಿ ಮಾರಾಟವಾಗಿರುವ ರಸಗೊಬ್ಬರಗಳ ಒಟ್ಟು ಪ್ರಮಾಣ 26 ಲಕ್ಷ ಟನ್‌ಗಳು. ಈ ಪೈಕಿ 11 ಲಕ್ಷ ಟನ್ ರಸಗೊಬ್ಬರಗಳನ್ನು ಮಹಾಮಂಡಳ ವಿತರಣೆ ಮಾಡಿದೆ. 2001- 02ರ ಸಾಲಿನಲ್ಲಿ ಮಹಾಮಂಡಳವು 28 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. 2011- 12ರ ಸಾಲಿನಲ್ಲಿ ಡಿಸೆಂಬರ್‌ವರೆಗೆ 25 ಕೋಟಿ ರೂಪಾಯಿ ಲಾಭ ಗಳಿಸಿದೆ~ ಎಂದು ಅವರು ವಿವರಿಸಿದರು.

`ಒಂದು ವರ್ಷದ ಅವಧಿಯಲ್ಲಿ ಯೂರಿಯಾ ಹೊರತು ಪಡಿಸಿ ಉಳಿದ ರಸಗೊಬ್ಬರಗಳ ಬೆಲೆ ಯದ್ವಾತದ್ವಾ ಹೆಚ್ಚಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರದ ಕಚ್ಚಾ ಪದಾರ್ಥಗಳ ಬೆಲೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಕೇಂದ್ರ ಸರ್ಕಾರವು ಸಹಾಯಧನದಲ್ಲಿ ಕಡಿತಗೊಳಿಸಿರುವುದು ಮತ್ತೊಂದು ಕಾರಣ~ ಎಂದು ಅವರು ತಿಳಿಸಿದರು.

`ರಸಗೊಬ್ಬರ ಮತ್ತು ಕೃಷಿ ಉತ್ಪನ್ನಗಳ ಶೇಖರಣೆಗೆ ಗೋದಾಮುಗಳ ಕೊರತೆ ಇದೆ. ಮಹಾಮಂಡಳವು ಸದ್ಯ 62 ಗೋದಾಮುಗಳನ್ನು ಹೊಂದಿದೆ. ಅವುಗಳ ಒಟ್ಟು ಸಾಮರ್ಥ್ಯ 1.17 ಲಕ್ಷ ಟನ್‌ಗಳು. ಮುಂದಿನ ಎರಡು ವರ್ಷಗಳಲ್ಲಿ 25 ಗೋದಾಮುಗಳನ್ನು ನಿರ್ಮಿಸಲಾಗುವುದು. ಅವುಗಳ ಒಟ್ಟು ಸಾಮರ್ಥ್ಯ 32 ಸಾವಿರ ಟನ್‌ಗಳು. ಇದಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನೊಂದಿಗೆ 50 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 1.19 ಲಕ್ಷ ಟನ್ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಿಸುವ ಯೋಜನೆ ಇದೆ~ ಎಂದು ಅವರು ನುಡಿದರು.

`ಬೆಂಬಲ ಬೆಲೆ ಯೋಜನೆ ಅಡಿ ಮಹಾಮಂಡಳವು ಖರೀದಿ ಸಂಸ್ಥೆಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ 5 ಜಿಲ್ಲೆಗಳಲ್ಲಿ ಒಟ್ಟು 25.35 ಕೋಟಿ ರೂಪಾಯಿ ಮೌಲ್ಯದ 4.07 ಲಕ್ಷ ಕ್ವಿಂಟಾಲ್‌ಗಳಷ್ಟು ಈರುಳ್ಳಿಯನ್ನು ಖರೀದಿಸಿದೆ. ಸಣ್ಣ ಪ್ರಮಾಣದಲ್ಲಿ ಆಮದು- ರಫ್ತು ವ್ಯವಹಾರವನ್ನೂ ಕೈಗೊಂಡಿದೆ. ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದೆ~ ಎಂದು ಅವರು ಹೇಳಿದರು.

ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಚ್.ಜಿ.ಶಿವಾನಂದಮೂರ್ತಿ, ಉಪಾಧ್ಯಕ್ಷ ಮಹಂತೇಶ್ ಬಸವಂತರಾಯ ದೊಡ್ಡಗೌಡ್ರು, ನಿರ್ದೇಶಕ ಸಂಜಯ್ ಪಾಟೀಲ್, ಪ್ರಧಾನ ವ್ಯವಸ್ಥಾಪಕ ಪ್ರಭಾಕರ್ ಸಿ.ತಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT