ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚೀಬೆ ಪರಂಪರೆಯಲ್ಲಿ ಲೇಖಕಿ ಬೂಚಿ ಎಮಿಚೀತಾ

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಚಿನುವಾ ಅಚೀಬೆ ಅತ್ಯಂತ ಪ್ರಭಾವಿ ಲೇಖಕರಲ್ಲೊಬ್ಬರು. ಹಾಗಾಗಿ ಇವರ ಪರಂಪರೆ ಆಫ್ರಿಕಾದಲ್ಲಿ, ವಿಶೇಷವಾಗಿ ನೈಜೀರಿಯಾದಲ್ಲಿ ಮುಂದುವರಿಯುವುದೇ ಎಂದು ಕೇಳುತ್ತಿದ್ದವರಿಗೆ ಉತ್ತರವಾಗಿ ನೈಜೀರಿಯಾದ ಲೇಖಕಿ ಬೂಚಿ ಎಮಿಚೀತಾ ಹೊರ ಹೊಮ್ಮಿದ್ದಾರೆ.

ಹೆಚ್ಚಾಗಿ ಸ್ತ್ರೀವಾದಿ ಲೇಖಕಿಯೆಂದು ಗುರುತಿಸಿಕೊಂಡಿರುವ ಎಮಿಚೀತಾ ಸಾಮಾಜಿಕ ಬದ್ಧತೆಯುಳ್ಳ ಲೇಖಕಿ. ಇಗ್ಬೊ ಸಮಾಜದಲ್ಲಿ ಮಹಿಳೆಯ ಸ್ಥಾನಮಾನಗಳನ್ನು ಎಮಿಚೀತಾ ಗುರುತಿಸುವುದಕ್ಕೂ ಚಿನುವಾ ಅಚೀಬೆ ಹಾಗೂ ಎಲಿಚಿ ಅಮದಿ ಗುರುತಿಸುವುದಕ್ಕೂ ಸ್ವಲ್ಪ ವ್ಯತ್ಯಾಸವಿದೆ.

ಪುರುಷ ಬರಹಗಾರರಲ್ಲಿ ಹೆಚ್ಚಿನವರು ರಾಜಕೀಯ ಸಂಗತಿಗಳಿಗೆ ಒತ್ತುಕೊಟ್ಟು ಬರೆಯುವುದರಿಂದ ಅವರು ಚಿತ್ರಿಸುವ ಹೆಣ್ಣಿನ ಸ್ಥಾನಮಾನಗಳು ಗಮನಾರ್ಹವಾಗಿರುವುದಿಲ್ಲವೆಂಬ ನಂಬಿಕೆಯೂ ಇದೆ. ಸ್ತ್ರೀವಾದಿ ನೆಲೆಯಿಂದ ಅಚೀಬೆಯವರ ಸ್ತ್ರೀಪಾತ್ರಗಳ ಅಧ್ಯಯನವೂ ನಡೆದಿದೆ ಎಂಬುದನ್ನು ನಾವು ನೆನೆಯಬೇಕು.

ಎಮಿಚೀತಾ ಪಾರಂಪರಿಕವಾದ ಪುರುಷಪ್ರಧಾನ ಇಗ್ಬೊ ಸಂಸ್ಕೃತಿ ಮತ್ತು ವಸಾಹತು ಬಲಗಳ ನಡುವಿನ ಒಳತೋಟಿಯನ್ನು ಕುರಿತು ಬರೆಯುತ್ತಾರೆ. ಪುರುಷ ಪ್ರಧಾನ ಸಮಾಜ ಮೊದಲೇ ಉಸಿರುಕಟ್ಟಿಸುವ ಸನ್ನಿವೇಶ; ಅದರ ಜೊತೆಗೆ ವಸಾಹತುಶಾಹಿ ಬೇರೆ ಅಮರಿಕೊಂಡರೆ ಇಬ್ಬಗೆಯ ಹೊಡೆತಕ್ಕೆ ಸಿಲುಕಿದಂತೆಯೇ ಸರಿ. ಆಫ್ರಿಕದ ಮಹಿಳೆ ಈ ಎರಡು ಹೊಡೆತಗಳಲ್ಲಿ ನಲುಗುವಂಥವಳು.
ಪ್ರಸ್ತುತ ನೈಜೀರಿಯಾದಲ್ಲಿ ಬರೆಯುತ್ತಿರುವ ಬರಹಗಾರ್ತಿಯರ ಪೈಕಿ ಬೂಚಿ ಎಮಿಚೀತಾ ತುಂಬಾ ಪ್ರತಿಭಾವಂತರೆಂದು ಖ್ಯಾತರಾಗಿದ್ದಾರೆ. ಅವರ ಕಾದಂಬರಿಗಳು ಹೆಚ್ಚು ಸ್ತ್ರೀವಾದಿ ಪರಿಪ್ರೇಕ್ಷ್ಯದಲ್ಲೇ ರಚಿತವಾಗಿವೆ.

ಆಧುನಿಕಗೊಂಡಿರುವ ಸಮಾಜವೊಂದರಲ್ಲಿ ಮಹಿಳೆಯ ಸ್ಥಿತಿಗತಿ ಹೇಗಿದೆ ಎಂದು ಎಮಿಚೀತಾ ಶೋಧನೆ ನಡೆಸಿದ್ದಾರೆ. ಆಧುನಿಕ ಮಹಿಳೆಯರು ತಮ್ಮ ಶಿಕ್ಷಣದಿಂದಾಗಿ ಸ್ವತಃ ನಿರ್ಧಾರಗಳನ್ನು ಕೈಗೊಳ್ಳುವ ಧೈರ್ಯ ಮಾಡುತ್ತಾರೆ; ಆದರೆ ಅವರ ಸಂಸ್ಕೃತಿ ಪುರುಷ ಪ್ರಾಧಾನ್ಯವನ್ನು ಉಪದೇಶಿಸುತ್ತದೆ. ಆಫ್ರಿಕನ್ ಮಹಿಳೆ ಶಿಕ್ಷಣವನ್ನು ತನ್ನದಾಗಿಸಿಕೊಂಡ ಬಳಿಕ ತನ್ನ ಸಹೋದರರಂತೆಯೇ ಅವಳು ತನ್ನ ಸಾಮರ್ಥ್ಯವನ್ನು ಮೆರೆಯಬಲ್ಲಳು ಎಂಬುದನ್ನು ತೋರಿಸುವುದು ಎಮಿಚೀತಾರ ಉದ್ದೆೀಶ.

ಲಿಂಗತ್ವವೆನ್ನುವುದು ಒಂದು ಸಾಮಾಜಿಕ ಸಂರಚನೆಯಾಗಿರುವುದಲ್ಲದೆ ಅದು ಕೇವಲ ಜೈವಿಕವಾದ ಸಂಗತಿಯಲ್ಲವೆಂಬುದನ್ನು ಎಮಿಚೀತಾರ ಕಾದಂಬರಿಗಳು ಪ್ರತಿಪಾದಿಸುತ್ತವೆ.

ಸಮಕಾಲೀನ ನೈಜೀರಿಯನ್ ಸಾಹಿತ್ಯ ಸಂದರ್ಭದಲ್ಲಿ ಎಮಿಚೀತಾ ತುಂಬಾ ಪ್ರಭಾವಶಾಲಿಯಾದ ಲೇಖಕಿಯಾಗಿರುವುದರ ಜೊತೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೃತಿಗಳನ್ನು ಬರೆಯುತ್ತಿರುವ ಲೇಖಕಿ ಕೂಡ. ಇದುವರೆಗೆ ಅವರ ಪ್ರಕಟಿತ ಕೃತಿಗಳ ಸಂಖ್ಯೆ 19; ಇದರ ಜೊತೆಗೆ ಅನೇಕ ಪ್ರಬಂಧಗಳು, ನಾಟಕಗಳು ಹಾಗೂ ಮಕ್ಕಳ ಪುಸ್ತಕಗಳನ್ನೂ ರಚಿಸಿದ್ದಾರೆ. ಬಹುತೇಕ ಅವರ ಕೃತಿಗಳು ನೈಜೀರಿಯನ್ ಮಹಿಳೆ ತನ್ನ ಸಮಾಜದ ಆಗುಹೋಗುಗಳಲ್ಲಿ ಸಂಪೂರ್ಣವಾಗಿ ಭಾಗಿಯಾಗಲಾರದ ಸನ್ನಿವೇಶವನ್ನು ಚಿತ್ರಿಸುತ್ತವೆ.

ಗ್ರೇಟ್ ಬ್ರಿಟನ್‌ನಿಂದ ನೈಜೀರಿಯಾ ಸ್ವತಂತ್ರಗಳಿಸುವುದಕ್ಕೆ ಮೊದಲು ಮತ್ತು ತರುವಾಯ ವಸಾಹತು ಸಂಸ್ಕೃತಿ ಹಾಗೂ ದೇಶೀಯ ಸಂಸ್ಕೃತಿಯ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಮಹಿಳೆಯ ಪಾತ್ರ ರಚನೆಯಾಗುತ್ತದೆ. ಅಚೀಬೆಯಂಥ ಹಿರಿಯ ಲೇಖಕರು ತುಳಿದ ಹಾದಿಯಲ್ಲೇ ಸಾಗುವಂತೆ ತೋರುವುದಾದರೂ ಎಮಿಚೀತಾರ ಕಥಾಲೋಕ ಮಹಿಳೆಯನ್ನು ಬೇರೊಂದು ಪಾತಳಿಯಲ್ಲಿಡುವುದರಿಂದ ಭಿನ್ನವಾಗಿ ಗೋಚರವಾಗುತ್ತದೆ.

ಬೂಚಿ ಎಮಿಚೀತಾ ಲಾಗೋಸ್‌ನಲ್ಲಿ ಹುಟ್ಟಿ ಹದಿನಾಲ್ಕನೇ ವರ್ಷಕ್ಕೆ ನಿಶ್ಚಿತಾರ್ಥವಾಗಿ ಹದಿನೇಳನೇ ವಯಸ್ಸಿಗೆ ಮದುವೆಯಾಗಿದ್ದಾರೆ. ಲಂಡನ್‌ನಲ್ಲಿ ವಿದ್ಯಾರ್ಥಿಯಾಗಿದ್ದ  ತನ್ನ ಗಂಡನ ಜೊತೆಯಿರಲು ಆಕೆ 1962ರಲ್ಲಿ ಬ್ರಿಟನ್‌ಗೆ ವಲಸೆ ಹೋಗುತ್ತಾರೆ. ತರುವಾಯ ವಿಚ್ಛೇದನ ಪಡೆದು ಲಂಡನ್ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಪದವಿ ಪಡೆದು ತನ್ನ ಐದು ಮಕ್ಕಳ ಪಾಲನೆಯಲ್ಲೂ ತೊಡಗುತ್ತಾರೆ.

ಸಮಾಜಶಾಸ್ತ್ರ ಅಧ್ಯಯನದಿಂದ ಪ್ರಾಪ್ತವಾದಂಥ ಸಾಮಾಜಿಕ ಅನ್ಯಾಯದ ವಿನ್ಯಾಸಗಳಲ್ಲಿ ಎರಡು ಬಗೆ: ಒಂದು, ಆಕೆ ತನ್ನ ಬಾಲ್ಯದಲ್ಲಿ ಅನುಭವಿಸಿದಂಥದ್ದು; ಇನ್ನೊಂದು, ಯುರೋಪಿನಲ್ಲಿ ಅನುಭವಿಸಿದ್ದು. ಈ ಎರಡು ಬಗೆಯ ಅನ್ಯಾಯಗಳು ಎಮಿಚೀತಾರ ಕಾದಂಬರಿಯ ತಿರುಳಾಗಿದೆ. ಆಕೆ ಹೇಳುತ್ತಾರೆ:

`ನೀವು ನಿಮ್ಮ ದೇಶದಿಂದ ದೂರವಿರುವಾಗ ಮಾತ್ರ ಅದರ ಹುಳುಕು ನಿಮಗೆ ಗೊತ್ತಾಗುವುದು. ನಾನು ಯೂರೋಪಿನಲ್ಲಿರುವುದರಿಂದಲೇ, ನೈಜೀರಿಯಾದ ಕೆಲವು ಮಹಿಳೆಯರು ಅನುಭವಿಸುವ ಅನಾನುಕೂಲತೆಗಳ ಬಗ್ಗೆ ತಿಳಿದಿದ್ದು'.
`ಕೆಲವು ನೈಜೀರಿಯನ್ ಮಹಿಳೆಯರು ದಮನಕ್ಕೊಳಗಾಗಿದ್ದಾರೆ; ಆದರೆ ಅದು ಅವರ ಅರಿವಿಗೆ ಬರುತ್ತಿಲ್ಲ. ನಾನು ನೈಜೀರಿಯಾದಲ್ಲಿ ಬೆಳೆಯುವ ಕಾಲಕ್ಕೆ ನನ್ನ ಹದಿನಾಲ್ಕನೆಯ ವಯಸ್ಸಿಗೇ ನನಗೆ ನಿಶ್ಚಿತಾರ್ಥವಾದ ಸಂದರ್ಭದಲ್ಲಿ ಅದರಲ್ಲೇನೂ ತಪ್ಪಿಲ್ಲ ಎನ್ನಿಸಿತ್ತು; ಆದರೆ ಯುರೋಪಿಗೆ ಹೋದಾಗ? ಅದಕ್ಕೆ ಹೇಳಿದ್ದು ನಮ್ಮ ದೇಶದಿಂದ ನಾವು ದೂರವಾದಾಗಲೇ ನಮ್ಮ ಜನಗಳ ಸಂಕಟ ಗೊತ್ತಾಗುವುದು.'

ಎಮಿಚೀತಾ ಹನ್ನೊಂದು ಕಾದಂಬರಿಗಳನ್ನು ಬರೆದಿದ್ದಾರೆ; ಅವುಗಳಲ್ಲಿ ಮೊದಲೆರಡು ಕೃತಿಗಳು, `ಸೆಕೆಂಡ್ ಕ್ಲಾಸ್ ಸಿಟಿಜನ್' (1974) ಮತ್ತು `ಇನ್‌ದ ಡಿಚ್' (1973) ಆತ್ಮಚರಿತ್ರೆಯ ವಿಧಾನದಲ್ಲಿ ಬರೆದವಾಗಿವೆ. ಇಲ್ಲಿ ಅದಾ ಓಬಿ ತ್ರಿವಳಿ ಅನಾನುಕೂಲತೆಗಳಲ್ಲಿ ಸಿಲುಕಿದ್ದಾಳೆ: ಬಡವಿ, ಕಪ್ಪು ಮಹಿಳೆ, ಏಕಪೋಷಕಳಾಗಿ (ಸಿಂಗಲ್ ಪೇರೆಂಟ್) ಸಾರ್ವಜನಿಕ ಸೌಲಭ್ಯಗಳ ಆಧಾರದ ಮೇಲೆ ತನ್ನ ಐದು ಮಕ್ಕಳನ್ನು ಸಾಕುತ್ತಾಳೆ. `ಸೆಕೆಂಡ್ ಕ್ಲಾಸ್ ಸಿಟಿಜನ್' ಅದಾ ಆಫ್ರಿಕಾದಲ್ಲಿದ್ದಾಗಿನ ಬದುಕನ್ನು ಚಿತ್ರಿಸುತ್ತದೆ- ಅವಳ ತಂದೆಯ ಸಾವು, ತಾನು ಶಿಕ್ಷಣ ಪಡೆಯುವ ಹಾದಿಯಲ್ಲಿ ತನ್ನ ಜನ ಒಡ್ಡಿದ ವಿವಿಧ ಬಗೆಯ ಅಡ್ಡಿಯಾತಂಕಗಳು- ಇವೆಲ್ಲ ಅಲ್ಲಿ ಬರುತ್ತವೆ.

ಇಬೊ ಸಂಪ್ರದಾಯಕ್ಕೆ ಅವಳು ಒಳಗಾದುದು; ಇಲ್ಲಿ ಮದುವೆ ಮತ್ತು ಮಕ್ಕಳು ಹೆರುವುದನ್ನು ಬಿಟ್ಟರೆ ಬೇರೇನಿಲ್ಲ. ತನ್ನ ಗಂಡನ ಜೊತೆಯಿರಲು ಲಂಡನ್‌ಗೆ ಹೋಗುತ್ತಾಳೆ; ಅಲ್ಲಿ ಆತನ ಯುರೋಪಿಯನ್ ಅನುಭವ ಮಹಿಳೆಯರ ಬಗೆಗೆ ತನ್ನ ವರ್ತನೆಯನ್ನು ಬದಲಿಸಿಕೊಳ್ಳಬೇಕೆಂಬುದನ್ನು ಆತನಿಗೆ ಕಲಿಸಿಯೇ ಇಲ್ಲ. ಅಲ್ಲಿ ಅವಳಿಗೆ ನಿತ್ಯ ಅಲೆ ಕೊಲೆ; ಒಂದಾದ ಮೇಲೊಂದರಂತೆ ಮಕ್ಕಳನ್ನು ಹಡೆಯುತ್ತಾಳೆ ಕಡೆಗೆ ಇದ್ದುದನ್ನೆಲ್ಲ ಕಳೆದುಕೊಂಡು, ಬಳಲಿ ಬೆಂಡಾಗಿ ಅವನನ್ನು ಬಿಡುತ್ತಾಳೆ; ಆದರೆ ಅವಳ ಒಳಗಿನ ಚೈತನ್ಯ ಇನ್ನಷ್ಟು ದೃಢವಾಗುತ್ತದೆ.

ಎಮಿಚೀತಾರ ಮುಂದಿನ ಕಾದಂಬರಿಗಳು ಆಫ್ರಿಕಾದ ಸನ್ನಿವೇಶವನ್ನು ಹೊಂದಿದ್ದು ಅದೇ ಬಗೆಯ ಸಾಮಾಜಿಕ ಕಗ್ಗಂಟನ್ನು ಬಿಡಿಸಲು ಯತ್ನಿಸುತ್ತವೆ. ಅನ್ಯೀಕರಣ ಮತ್ತು ಗುಲಾಮಗಿರಿ ಅವಳ ಕೃತಿಗಳ ಮುಖ್ಯವಸ್ತುವಾಗಿದ್ದರೂ ವೈಯಕ್ತಿಕ ನಿರ್ಧಾರ ಮತ್ತು ಸಾಂಸ್ಕೃತಿಕ ನಿರಾಕರಣೆಗಳ ನಡುವಿನ ಸಂಘರ್ಷವನ್ನು ಸ್ತ್ರೀವಾದಿ ನಿಲುವಿನ ಮೂಲಕ ವ್ಯಾಖ್ಯಾನಿಸುತ್ತವೆ. `ದ ಬ್ರೈಡ್ ಪ್ರೈಸ್' (1976) ಕಾದಂಬರಿಯಲ್ಲಿ ತನ್ನ ಕುಟುಂಬದವರು ಏರ್ಪಡಿಸುವ ಮದುವೆಗೆ ಒಪ್ಪದ ಕನ್ಯೆಯೊಬ್ಬಳ ಸನ್ನಿವೇಶದಲ್ಲಿ ಬುಡಕಟ್ಟಿನ ಸಂಪ್ರದಾಯ, ಆಚರಣೆಗಳ ಪೈಪೋಟಿ ಕಾಣುತ್ತದೆ. `ದ ಸ್ಲೇವ್ ಗರ್ಲ್' (1977)ನಲ್ಲಿ ಶ್ರೀಮಂತಳೂ ದರ್ಪದವಳೂ ಆದ ಹೆಂಗಸಿನ ಅಧೀನಕ್ಕೆ ಸಿಕ್ಕಿಹಾಕಿಕೊಂಡ ಒಜಿಬೇಬಾ ಎಂಬ ಹುಡುಗಿಯ ಕಥೆಯಿದೆ.

`ದ ಜಾಯ್ಸ ಆಫ್ ಮದರ್‌ಹುಡ್' (1979) ನುನು ಈಗೋಳ ವ್ಯಂಗ್ಯಭರಿತ ಪ್ರಸಂಗದ ಮೂಲಕ ತಾಯ್ತನದ ಸನ್ನಿವೇಶವನ್ನು ಮಟ್ಟಸವಾದ ಪರಿಪ್ರೇಕ್ಷ್ಯದಲ್ಲಿಟ್ಟು ನೋಡುತ್ತದೆ. ಆರನೆಯ ಕಾದಂಬರಿ `ಡೆಸ್ಟಿನೇಷನ್ ಬಯಾಫ್ರಾ' (1982) ಬಯಾಫ್ರಾ ಯುದ್ಧದ ವಾಸ್ತವವನ್ನು ಕಥನಕ್ರಮದಲ್ಲಿ ಮಂಡಿಸುತ್ತದೆ.

`ದ ರೇಪ್ ಆಫ್ ಶಾವಿ' (1983) ಯೂರೋಪು ಆಫ್ರಿಕವನ್ನು ವಸಾಹತೀಕರಣಗೊಳಿಸಿದ್ದನ್ನು ದೃಷ್ಟಾಂತ ರೂಪದಲ್ಲಿ ವಿವರಿಸುತ್ತದೆ. `ಗ್ವೆಂಡೊಲೆನ್' (1989) ಲಂಡನ್‌ನಲ್ಲಿ ವಾಸವಾಗಿರುವ ವೆಸ್ಟ್ ಇಂಡಿಯನ್ ಹುಡುಗಿಯೊಬ್ಬಳನ್ನು ಕುರಿತದ್ದಾಗಿದೆ. `ಕೆಹಿಂಡೆ' (1994) ಮಧ್ಯವಯಸ್ಸಿನ ನೈಜೀರಿಯನ್ ಮಹಿಳೆಯೊಬ್ಬಳು ಅನೇಕ ವರ್ಷಗಳ ಕಾಲ ಲಂಡನ್‌ನಲ್ಲಿದ್ದು ವಾಪಸ್ಸಾಗುವ ವೃತ್ತಾಂತವನ್ನೊಳಗೊಂಡಿದೆ. ಇದುವರೆಗೆ ರಚಿತವಾದ ಕೃತಿಗಳಲ್ಲಿ ಕಡೆಯ ಕಾದಂಬರಿ `ದ ನ್ಯೂ ಟ್ರೈಬ್' 2000ನೆಯ ಇಸವಿಯಲ್ಲಿ ಹೊರಬಂದಿದೆ.

`ನೋವೇರ್ ಟು ಪ್ಲೇ' (1980) ಮತ್ತು `ದ ಮೂನ್‌ಲಿಟ್ ಬ್ರೈಡ್' (1980) ಸೇರಿದಂತೆ ಬೂಜಿ ಎಮಿಚೀತಾ ಅನೇಕ ಮಕ್ಕಳ ಕಾದಂಬರಿಗಳನ್ನು ಬರೆದಿದ್ದಾರೆ. `ಹೆಡ್ ಅಬೌವ್ ವಾಟರ್' 1986ರಲ್ಲಿ ರಚಿತವಾದ ಅವರ ಆತ್ಮಚರಿತ್ರೆ; `ಎ ಕೈಂಡ್ ಆಫ್ ಮ್ಯಾರೇಜ್' ಟೆಲಿವಿಷನ್ ನಾಟಕವಾಗಿದ್ದು 1976ರಲ್ಲಿ ಬಿಬಿಸಿ ಅದನ್ನು ಬಿತ್ತರಿಸಿತು.

ಬುಕ್ ಮಾರ್ಕೆಟಿಂಗ್ ಕೌನ್ಸಿಲ್ ವತಿಯಿಂದ `ಶ್ರೇಷ್ಠ ಯುವ ಬ್ರಿಟಿಷ್ ಲೇಖಕ'ರಲ್ಲೊಬ್ಬರು ಎಂಬುದಾಗಿ 1983ರಲ್ಲಿ ಎಮಿಚೀತಾ ಆಯ್ಕೆಯಾದರು. ಸಂದರ್ಶಕ ಪ್ರಾಧ್ಯಾಪಕಿಯಾಗಿ 1979ರಲ್ಲಿ ವರ್ಷಪೂರ್ತಿ ಅಮೆರಿಕದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಆಕೆ ಉಪನ್ಯಾಸ ನೀಡಿ ಹಿರಿಯ ಸಂಶೋಧಕಿಯಾಗಿ ಮತ್ತು ಕಲಬಾರ್ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕಿಯಾಗಿ (ಇಂಗ್ಲಿಷ್) 1980ರಲ್ಲಿ ನೈಜೀರಿಯಾಕ್ಕೆ ಮರಳಿದರು.

ತಮ್ಮ ಮಗನ ಜೊತೆಗೂಡಿ ಎಮಿಚೀತಾ `ಒಗ್ವುಗ್ವು ಅಫೊರ್' ಪ್ರಕಟನಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಆಕೆ ಲಂಡನ್‌ನಲ್ಲಿ ವಾಸವಾಗಿದ್ದು ಅಲ್ಲೊಂದು ಶಾಖೆಯಿದೆ, ಅಬುಜಾದಲ್ಲಿ ಇನ್ನೊಂದು ಶಾಖೆಯಿದೆ. 1979ರಿಂದ `ಜನಾಂಗ ನೀತಿಗೆ ಸಂಬಂಧಿಸಿದ ಗೃಹಖಾತೆ ಕಾರ್ಯದರ್ಶಿ ಸಲಹಾ ಸಮಿತಿ'ಯ ಸದಸ್ಯರಾಗಿದ್ದಾರೆ. 1982ರಿಂದ 1983ರವರೆಗೆ ಕಲಾ ಮಂಡಳಿಯ ಸದಸ್ಯರೂ ಆಗಿದ್ದರು. ನ್ಯೂ ಸ್ಟೇಟ್ಸ್‌ಮನ್, ದ ಟೈಮ್ಸ ಲಿಟರರಿ ಸಪ್ಲಿಮೆಂಟ್ ಮತ್ತು ದ ಗಾರ್ಡಿಯನ್ ಪತ್ರಿಕೆಗಳಿಗೆ ನಿಯತವಾಗಿ ಬರೆಯುತ್ತಿದ್ದಾರೆ.

ಇದುವರೆಗೆ ಎಮಿಚೀತಾರ ಕೃತಿಗಳಿಗೆ ಅನೇಕ ಪುರಸ್ಕಾರಗಳು ಲಭಿಸಿವೆ. ಅವರ ಎರಡನೆಯ ಕಾದಂಬರಿ ಸೆಕೆಂಡ್-ಕ್ಲಾಸ್ ಸಿಟಿಜನ್ (1975) `ಡಾಟರ್ ಆಫ್ ಮಾರ್ಕ್‌ಟ್ವೇನ್ ಅವಾರ್ಡ್'; `ದ ಸ್ಲೇವ್ ಗರ್ಲ್' (1977) ಕೃತಿಗೆ `ಜಾಕ್ ಕ್ಯಾಂಬೆಲ್ ಅವಾರ್ಡ್' ಮತ್ತು `ಬೆಸ್ಟ್ ಥರ್ಡ್ ವರ್ಲ್ಡ್ ರೈಟರ್' ಬಹುಮಾನ ಸಿಕ್ಕವು. `ಡಬಲ್ ಯೋಕ್' (1982) ಮತ್ತು `ದ ಜಾಯ್ಸ ಆಫ್ ಮದರ್‌ಹುಡ್' ಚಲನಚಿತ್ರಗಳಾಗಿವೆ. ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಂಪನಿಗಾಗಿ ಎಮಿಚೀತಾ ಟೆಲಿವಿಷನ್ ಚಲನಚಿತ್ರ ಬರಹಗಳನ್ನು ರಚಿಸಿದ್ದಾರೆ; `ಟಿಚ್ ದ ಕ್ಯಾಟ್' (1980) ಮತ್ತು `ನೋವೇರ್ ಟು ಪ್ಲೇ' (1981) ಮುಂತಾದ ಮಕ್ಕಳ ಪುಸ್ತಕಗಳನ್ನು ಬರೆದಿದ್ದಾರೆ.

ತಮ್ಮ ಎಲ್ಲ ಕಾದಂಬರಿಗಳಲ್ಲಿ ಬೂಚಿ ಎಮಿಚೀತಾ ಸಮಾಜದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿಯೇ ಇದ್ದಾರೆ. ಚಾರಿತ್ರಿಕವಾಗಿ ಮಹಿಳೆಯರನ್ನು ಕುಗ್ಗಿಸಿರುವಂಥ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಫಲಿಸುವ ಪಾತ್ರಗಳು ಹಾಗೂ ಕಥಾ ಹಂದರ ಅವರಿಂದ ರೂಪುಗೊಂಡಿದೆ. ನೈಜೀರಿಯಾದ ಕುಟುಂಬ, ಜೀವನ, ವಿವಾಹ, ಹುಟ್ಟು, ಮಾತುಕತೆ, ಮೂಢನಂಬಿಕೆಗಳು, ಗಾದೆಗಳು, ಪುರಾಣಗಳು, ಪದ್ಧತಿಗಳು ಮತ್ತು ನಿಷೇಧಗಳು- ಇತ್ಯಾದಿಗಳೆಲ್ಲ ಬೂಚಿ ಎಮಿಚೀತಾರ ಸಾಹಿತ್ಯ ಲೋಕದಲ್ಲಿ ಕಾಣಿಸಿಕೊಂಡು ನೈಜೀರಿಯಾದ ಸಂಕೀರ್ಣತೆಯ ಪ್ರತೀಕವಾಗಿದೆ.

ಹಾಗಾಗಿ ಎಮಿಚೀತಾ ಚಿನುವಾ ಅಚೀಬೆಯವರ ಸಾಹಿತ್ಯಕ ಉತ್ತರಾಧಿಕಾರಿ ಎಂದು ವಿಮರ್ಶಕರು ಗುರುತಿಸತೊಡಗಿರುವುದು ಔಚಿತ್ಯಪೂರ್ಣವಾಗಿದೆ. ಅಚೀಬೆ ಚೈತನ್ಯ ಎಮಿಚೀತಾರ ಮೂಲಕ ಹರಿಯುತ್ತಿರುವುದು ಆಫ್ರಿಕಾದ ಸಾಹಿತ್ಯವನ್ನು ಆಪ್ತವಾಗಿ ಗಮನಿಸುವವರಿಗೆಲ್ಲ ಸಂತಸದ ಸಂಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT