ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಿಯನ್ನು ಕೊಂದ ಸಾರ್ವಜನಿಕರು

Last Updated 13 ಏಪ್ರಿಲ್ 2013, 19:35 IST
ಅಕ್ಷರ ಗಾತ್ರ

ಬೆಂಗಳೂರು: 4 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಕಗ್ಗಲಿಪುರ ಬಳಿ ಗುಳಕಮಲೈ ಗ್ರಾಮದಲ್ಲಿ ಶನಿವಾರ ನಡೆದಿದೆ.

ಕೋಲಾರ ಜಿಲ್ಲೆ ಗೌಡ್ಲಹಳ್ಳಿಯ ನಾರಾಯಣಪ್ಪ (45) ಕೊಲೆಯಾದ ವ್ಯಕ್ತಿ. ಕೂಲಿ ಕಾರ್ಮಿಕನಾದ ಆತ ಆಂಧ್ರಮೂಲದ ವೆಂಕಟೇಶ್ ಮತ್ತು ರಾಧಾ (ಹೆಸರುಗಳನ್ನು ಬದಲಿಸಿದೆ) ದಂಪತಿಯ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ತಲಘಟ್ಟಪುರ ಪೊಲೀಸರು ಹೇಳಿದ್ದಾರೆ.

ಕಟ್ಟಡ ನಿರ್ಮಾಣ ಕೆಲಸದ ಮೇಸ್ತ್ರಿಯಾದ ವೆಂಕಟೇಶ್, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಗುಳಕಮಲೈ ಗ್ರಾಮದ ನಿವಾಸಿ ಶಿವಣ್ಣ ಎಂಬುವರ ತೋಟದಲ್ಲಿನ ಶೆಡ್‌ನಲ್ಲಿ ವಾಸವಿದ್ದಾರೆ. ರಾಧಾ ದಂಪತಿಗೆ ಶ್ರೀನಿವಾಸ್ ಎಂಬ ಮತ್ತೊಬ್ಬ ಮೇಸ್ತ್ರಿಯು ನಾರಾಯಣಪ್ಪನನ್ನು ಪರಿಚಯ ಮಾಡಿಕೊಟ್ಟಿದ್ದ. ದಂಪತಿ, ತಮ್ಮ ಶೆಡ್‌ನ ಪಕ್ಕದ ಶೆಡ್‌ನಲ್ಲೇ ನಾರಾಯಣಪ್ಪನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು.

ವೆಂಕಟೇಶ್, ಶುಕ್ರವಾರ ರಾತ್ರಿ ಕಗ್ಗಲಿಪುರಕ್ಕೆ ಹೋಗಿದ್ದಾಗ ರಾಧಾ ಅವರು ಮಕ್ಕಳೊಂದಿಗೆ ಶೆಡ್‌ನ ಹೊರ ಭಾಗದಲ್ಲಿ ಮಲಗಿದ್ದರು. ಆಗ ತನ್ನ ಶೆಡ್‌ನಲ್ಲಿದ್ದ ನಾರಾಯಣಪ್ಪ, ದಂಪತಿಯ ಮೊದಲ ಮಗುವನ್ನು ತೋಟಕ್ಕೆ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಹತ್ತು ಗಂಟೆ ಸುಮಾರಿಗೆ ಶೆಡ್‌ಗೆ ಬಂದ ವೆಂಕಟೇಶ್, ಮಗು ಶೆಡ್‌ನಲ್ಲಿ ಇಲ್ಲದಿರುವುದನ್ನು ಕಂಡು ಸುತ್ತಮುತ್ತ ಹುಡುಕಾಡಿದ್ದಾರೆ. ಆಗ ಕೂಗಳತೆ ದೂರದಲ್ಲೇ ತೋಟದ ಒಳಗಡೆ ಮಗು ಅಳುತ್ತಿರುವ ಶಬ್ದ ಕೇಳಿದ ಅವರು, ಆ ಸ್ಥಳಕ್ಕೆ ಹೋಗಿ ನೋಡಿದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೋಷಕರು ಸ್ಥಳೀಯರ ನೆರವಿನಿಂದ ನಾರಾಯಣಪ್ಪನನ್ನು ರಾತ್ರಿಯೇ ಹಿಡಿದು ಕಟ್ಟಿ ಹಾಕಿದ್ದರು. ಶನಿವಾರ ಬೆಳಿಗ್ಗೆ ಅತ್ಯಾಚಾರದ ಸುದ್ದಿ ತಿಳಿದ ಗ್ರಾಮಸ್ಥರು ಆರೋಪಿಗೆ ಮನಬಂದಂತೆ ಥಳಿಸಿದ್ದಾರೆ. ಅಲ್ಲದೇ, ಆತನನ್ನು ರಸ್ತೆಗೆ ಎಳೆದುಕೊಂಡು ಹೋಗಿ ಕಲ್ಲಿನಿಂದ ಹೊಡೆದಿದ್ದಾರೆ.

ಈ ವಿಷಯ ತಿಳಿದು ಸ್ಥಳಕ್ಕೆ ಹೋಗುವಷ್ಟರಲ್ಲಿ ನಾರಾಯಣಪ್ಪ ಅಸ್ವಸ್ಥನಾಗಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಆತ ಮಧ್ಯಾಹ್ನ ಮೃತಪಟ್ಟ. ಘಟನೆ ಸಂಬಂಧ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಗುವಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿರುತ್ತಿದ್ದ...
`ನಾರಾಯಣಪ್ಪ ಕೆಲಸ ಕೇಳಿಕೊಂಡು ನನ್ನ ಬಳಿ ಬಂದಿದ್ದ. ಗುರುವಾರವಷ್ಟೇ ಪರಿಚಯವಾಗಿದ್ದ ಆತನಿಗೆ ಎರಡು ಸಾವಿರ ರೂಪಾಯಿ ಮುಂಗಡ ಹಣ ಕೊಟ್ಟಿದ್ದೆ. ಯುಗಾದಿ ಹಬ್ಬದ ದಿನ ಮತ್ತು ಶುಕ್ರವಾರ ನಮ್ಮ ಮನೆಯಲ್ಲೇ ಊಟ ಮಾಡಿದ್ದ ಆತ, ಈ ರೀತಿ ಮಾಡುತ್ತಾನೆ ಎಂದು ಭಾವಿಸಿರಲಿಲ್ಲ' ಎಂದು ವೆಂಕಟೇಶ್ `ಪ್ರಜಾವಾಣಿ'ಗೆ ತಿಳಿಸಿದರು.

`ನಾನು ಶೆಡ್‌ಗೆ ಬರುವುದು ಸ್ವಲ್ಪ ತಡವಾಗಿದ್ದರೂ ನಾರಾಯಣಪ್ಪ ಮಗುವನ್ನು ಕೊಲೆ ಮಾಡಿರುತ್ತಿದ್ದ. ಮಗು ಅಳುವ ಶಬ್ದ ಕೇಳಿ ತೋಟದೊಳಗೆ ಹೋಗುವಷ್ಟರಲ್ಲಿ ಆತ ಗಿಡಗಳ ನಡುವೆ ನುಸುಳಿಕೊಂಡು ಬಂದು ತನಗೆ ಏನೂ ಗೊತ್ತಿಲ್ಲ ಎಂಬಂತೆ ಶೆಡ್‌ನಲ್ಲಿ ಕುಳಿತಿದ್ದ. ಮಗುವನ್ನು ಶೆಡ್‌ಗೆ ಕರೆದುಕೊಂಡು ವಿಚಾರಿಸಿದಾಗ ಆತನೇ ಈ ಕೃತ್ಯ ಎಸಗಿದ್ದಾಗಿ ಹೇಳಿತು' ಎಂದು ವೆಂಕಟೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT