ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಚಾಲನೆ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ವರದಿಯಲ್ಲಿ ಆರೋಪಿಗಳ ಪಟ್ಟಿಯಲ್ಲಿ ಹೆಸರಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. ಗಣಿ, ಪೊಲೀಸ್, ಅರಣ್ಯ ಇಲಾಖೆ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದು, ಅಕ್ರಮ ಗಣಿಗಾರಿಕೆ ಜೊತೆ ನೇರವಾಗಿ ಷಾಮೀಲಾದ ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ವರದಿಯನ್ನು ಅಧ್ಯಯನ ಮಾಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ನೇತೃತ್ವದಲ್ಲಿ ಸರ್ಕಾರ ಸಮಿತಿಯನ್ನು ನೇಮಕ ಮಾಡಿತ್ತು. ಶಿಸ್ತುಕ್ರಮ ಜರುಗಿಸುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ನೀಡುವಂತೆ ಈ ಸಮಿತಿ ಆಯಾ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿತ್ತು. ಸಮಿತಿಯ ಸೂಚನೆಯಂತೆ ಆರೋಪಿಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ.

ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ವರದಿ ಮತ್ತು ಅದರೊಂದಿಗೆ ಅಡಕವಾಗಿರುವ ಯು.ವಿ.ಸಿಂಗ್ ವರದಿ, ಅನುಬಂಧ ವರದಿಗಳನ್ನು ಜೈರಾಜ್ ನೇತೃತ್ವದ ಸಮಿತಿ ಅಧ್ಯಯನ ಮಾಡುತ್ತಿದೆ.

ಈ ಸಮಿತಿ ವಿವಿಧ ಹಂತಗಳಲ್ಲಿ ಸರ್ಕಾರಕ್ಕೆ ವರದಿ ನೀಡಲು ನಿರ್ಧರಿಸಿದೆ. ಸಮಿತಿಯ ವರದಿ ಸಲ್ಲಿಕೆಯಾದ ಬಳಿಕ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆ ಮತ್ತಷ್ಟು ಚುರುಕಾಗಲಿದೆ.

ಕಾರಣ ಕೇಳಿ ನೋಟಿಸ್: ಲೋಕಾಯುಕ್ತ ವರದಿಯಲ್ಲಿ ಸರ್ಕಾರದ ಅಧಿಕಾರಿಗಳ ವಿರುದ್ಧ ಪ್ರಮುಖವಾಗಿ ಎರಡು ರೀತಿಯ ಆರೋಪಗಳಿವೆ. ಅಕ್ರಮ ಗಣಿಗಾರಿಕೆಯ ಜೊತೆ ನೇರವಾಗಿ ಕೈಜೋಡಿಸಿರುವುದು ಮೊದಲನೇ ಆರೋಪ. ಅಕ್ರಮ ಗಣಿಗಾರಿಕೆಯಲ್ಲಿ ನಿರತರಾಗಿದ್ದವರಿಗೆ ಪೂರಕವಾಗಿ ದಾಖಲೆಗಳನ್ನು ತಿರುಚಿರುವುದು, ಕಾನೂನುಬಾಹಿರ ಶಿಫಾರಸು, ನಿಯಮ ಉಲ್ಲಂಘಿಸಿ ಪರವಾನಗಿ ವಿತರಣೆ ಮಾಡಿರುವುದು ಮತ್ತಿತರ ಚಟುವಟಿಕೆಗಳು ಈ ಆರೋಪದ ವ್ಯಾಪ್ತಿಯಲ್ಲಿವೆ. ಅಕ್ರಮ ಗಣಿಗಾರಿಕೆಗೆ ಸಹಕರಿಸಲು `ಗಣಿ ಮಾಫಿಯಾ~ದಿಂದ ಲಂಚ ಪಡೆದಿರುವುದು ಎರಡನೇ ಆರೋಪ.

ಎರಡೂ ಆರೋಪಗಳ ಬಗ್ಗೆಯೂ ಲೋಕಾಯುಕ್ತ ವರದಿಯಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಲಭ್ಯವಿರುವ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿತ ಅಧಿಕಾರಿಗಳ ವಿರುದ್ಧ ಯಾವ ಬಗೆಯ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಸಮಿತಿ ಸಲಹೆ ನೀಡಲಿದೆ.

ಲೋಕಾಯುಕ್ತ ತನಿಖೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳಿಗೆ ನೋಟಿಸ್ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಒಂದು ಷೋಕಾಸ್ ನೋಟಿಸ್ ನೀಡಿ, ಉತ್ತರ ಪಡೆಯಲಿದೆ. ಪೊಲೀಸ್ ಇಲಾಖೆಯ 191, ಗಣಿ ಇಲಾಖೆಯ 44 ಅಧಿಕಾರಿಗಳ ಹೆಸರು ಲೋಕಾಯುಕ್ತ ವರದಿಯಲ್ಲಿದ್ದು, ಅವರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಅರಣ್ಯ, ಕಂದಾಯ, ಸಾರಿಗೆ ಇಲಾಖೆಗಳ ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಗಣಿ ಇಲಾಖೆಯ ಹಿಂದಿನ ನಿರ್ದೇಶಕ ಎಂ.ಈ.ಶಿವಲಿಂಗಮೂರ್ತಿ ಸೇರಿದಂತೆ ಹಲವು ಅಧಿಕಾರಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದು, ಅಕ್ರಮ ಗಣಿಗಾರಿಕೆಯ ಜೊತೆ ಕೈಜೋಡಿಸಿದ ಆರೋಪ ಹೊಂದಿರುವ ಹಲವು ಅಧಿಕಾರಿಗಳಿಗೂ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

`ಲೋಕಾಯುಕ್ತರ ವರದಿಯಲ್ಲಿ ಇರುವ ಆರೋಪದ ಬಗ್ಗೆ ಉತ್ತರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ನೀಡಲಾಗುವುದು. ಅವರಿಂದ ಉತ್ತರ ಬಂದ ನಂತರ ಅದನ್ನು ಪರಿಶೀಲಿಸಿ, ಮುಂದಿನ ಕ್ರಮ ಜರುಗಿಸಲಾಗುವುದು~ ಎಂದು ಸರ್ಕಾರದ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ವರ್ಗಾವಣೆಗೆ ಚಿಂತನೆ:
ಜೈರಾಜ್ ನೇತೃತ್ವದ ಸಮಿತಿ ನಿತ್ಯವೂ ಸಭೆ ಸೇರುತ್ತಿದ್ದು, ಲೋಕಾಯುಕ್ತ ವರದಿಯಲ್ಲಿನ ಪ್ರಮುಖ ಅಂಶಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಒಂದು ವಾರದೊಳಗೆ ಈ ಸಮಿತಿ ಮಹತ್ವದ ಪ್ರಕರಣಗಳ ಬಗ್ಗೆ ವರದಿಯೊಂದನ್ನು ಸರ್ಕಾರಕ್ಕೆ ನೀಡಲಿದೆ. ಆ ನಂತರ ಆರೋಪಿ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲು ಮಾಡುವುದು, ಅಮಾನತು ಮಾಡುವುದು, ನಷ್ಟ ವಸೂಲಿಯಂತಹ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ವರದಿಯಲ್ಲಿ ಗಂಭೀರ ಸ್ವರೂಪದ ಆರೋಪಗಳಿರುವ ಕೆಲ ಅಧಿಕಾರಿಗಳು ಇನ್ನೂ ಅದೇ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ. ಅವರನ್ನು ತಕ್ಷಣವೇ ವರ್ಗಾವಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆಯೂ ವಾರದಲ್ಲಿ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

ಸಿಬಿಐ ತಲೆನೋವು!
ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಭಾಗಿಯಾಗಿರುವ ಕೆಲ ಪ್ರಕರಣಗಳೂ ಸೇರಿದಂತೆ ನಾಲ್ಕೈದು ವಿಷಯಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಲೋಕಾಯುಕ್ತರು ಮಾಡಿರುವ ಶಿಫಾರಸು ರಾಜ್ಯ ಸರ್ಕಾರದ ಪಾಲಿಗೆ ಈಗ ನುಂಗಲಾರದ ತುತ್ತಾಗಿದೆ.

ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದು, ಭವಿಷ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯದಂತೆ ನಿಯಂತ್ರಿಸುವುದೂ ಸೇರಿದಂತೆ ಕೆಲ ಕ್ರಮಗಳನ್ನು ರಾಜ್ಯ ಸರ್ಕಾರವೇ ಕೈಗೊಳ್ಳಬಹುದು. ಹಣದ ಅಕ್ರಮ ಚಲಾವಣೆ ಮತ್ತಿತರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುವಂತೆ  ಭಾರತೀಯ ರಿಸರ್ವ್ ಬ್ಯಾಂಕ್, ಜಾರಿ ನಿರ್ದೇಶನಾಲಯ, ಸುಂಕ ಇಲಾಖೆಯನ್ನು ಕೋರಲು ಸರ್ಕಾರದಲ್ಲಿ ಸಹಮತವಿದೆ.

ಆದರೆ, ಓಬಳಾಪುರಂ ಗಣಿ ಕಂಪೆನಿ ರಾಜ್ಯದಲ್ಲಿ ನಡೆಸಿರುವ ಅವ್ಯವಹಾರಗಳ ತನಿಖೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವ ವಿಷಯದಲ್ಲಿ ಸರ್ಕಾರ ಪೇಚಿಗೆ ಸಿಲುಕಿದೆ. ಈ ಕಾರಣದಿಂದಾಗಿ ಸಿಬಿಐ ತನಿಖೆ ಬಗ್ಗೆ ಉಲ್ಲೇಖವಿರುವ ಅಂಶಗಳ ಬಗ್ಗೆ ಸರ್ಕಾರ ಸದ್ಯ ಮೌನಕ್ಕೆ ಶರಣಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT