ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಧ್ಯಯನದಿಂದ ಉತ್ತಮ ಸಾಹಿತ್ಯ'

Last Updated 1 ಜುಲೈ 2013, 19:47 IST
ಅಕ್ಷರ ಗಾತ್ರ

ಬೆಂಗಳೂರು: `ಉತ್ಸಾಹದ ಜೊತೆಗೆ ಅಧ್ಯಯನ ಶೀಲತೆಯನ್ನು ಅಳವಡಿಸಿ ಕೊಂಡರೆ ಉತ್ತಮ ಸಾಹಿತ್ಯ ರಚನೆ ಸಾಧ್ಯ' ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಗೀತಚೇತನ ಪ್ರಕಾಶನವು ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಿತಾ ಗೋಪಿ ಕುಂಟೆ ಅವರ `ಮೂಕರಾಗ' ಕವನ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಾಹಿತ್ಯ ರಚನೆಯ ಆರಂಭದ ಹಂತದಲ್ಲಿ ಯುವ ಸಾಹಿತಿಗಳು ಹೆಚ್ಚು ಉತ್ಸಾಹಭರಿತರಾಗಿರುತ್ತಾರೆ. ಅಧ್ಯಯನಶೀಲತೆಯ ಕೊರತೆ ಯಿಂದಾಗಿ ನಂತರದ ದಿನಗಳಲ್ಲಿ ಈ ಉತ್ಸಾಹ ಮರೆಯಾಗುತ್ತದೆ. ಆದ್ದರಿಂದ ಯುವ ಸಾಹಿತಿಗಳು ಹೆಚ್ಚು ಸಾಹಿತ್ಯ ಕೃತಿಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಆರ್ಥಿಕತೆ, ಲಾಭದ ದೃಷ್ಟಿಯಿಂದ ಯೋಚಿಸುವ ಕಾರ್ಪೊರೇಟ್ ವಲಯ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕವಿತಾ ಅವರು ಸಾಹಿತ್ಯ ಲೋಕಕ್ಕೆ ತೆರೆದುಕೊಂಡು ಕವನ ಸಂಕಲನ ಹೊರತಂದಿರುವುದು ಆಶ್ಚರ್ಯದ ಸಂಗತಿ. ಕಾರ್ಪೊರೇಟ್ ವಲಯ ದಲ್ಲಿರುವವರು ತಮ್ಮ ಬಾಲ್ಯದ ನೆನಪು ಗಳನ್ನು ಮೆಲುಕು ಹಾಕಲು ಹಾಗೂ ಕೆಲಸದ ಒತ್ತಡದಿಂದ ಹೊರಬರಲು ಸಾಹಿತ್ಯ ರಚನೆಯಲ್ಲಿ ತೊಡಗಿರು ವಂತಿದೆ. ಬದಲಾಗಿ ನಿಜವಾದ ಕಾರ್ಪೊರೇಟ್ ವಲಯ ಅನಾವರಣ ಗೊಳ್ಳುತ್ತಿಲ್ಲ. ಆ ನಿಟ್ಟಿನಲ್ಲಿ ಸಾಹಿತ್ಯ ರಚನೆಯಾಗಬೇಕು ಎಂದರು.

ಬರಗಾಲ, ಹೆಣ್ಣಿನ ಅಸಹಾಯಕತೆ, ಪ್ರೀತಿ-ಪ್ರೇಮ, ಭ್ರೂಣ ಹತ್ಯೆ, ಒಂಟಿತನ, ಅಸಹಾಯಕತೆ ಇವೆಲ್ಲವೂ ಅವರ ಕವನಗಳಲ್ಲಿ ಮೇಳೈಸಿವೆ. ಇನ್ನೂ ಉತ್ತಮ ಕವಿತೆಗಳು ಅವರಿಂದ ಹೊಮ್ಮಬೇಕು. ಆ ಸಾಮರ್ಥ್ಯ ಅವರಿಗಿದೆ ಎಂದು ಹಾರೈಸಿದರು.

ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ, `ಸಂಕಲ ನದಲ್ಲಿರುವ ಕವಿತೆಗಳು ಜೀವಂತ ಭಾವನೆಯನ್ನು ಕಟ್ಟಿಕೊಡು ತ್ತವೆ. ಇಲ್ಲಿನ ಎಲ್ಲ ಕವಿತೆಗಳು ಹೆಣ್ಣಿನಲ್ಲಿರುವ ಸುಪ್ತ ಭಾವನೆ, ನೋವು, ಸಂಕಟಗಳನ್ನು ಪ್ರತಿನಿಧಿಸುತ್ತವೆ. ಇನ್ನಷ್ಟು ಪ್ರಬುದ್ಧ ಕಾವ್ಯ ರಚನೆಗೆ ಅವರು ಮುಂದಾಗಬೇಕು' ಎಂದರು.

ಲೇಖಕಿ ಕವಿತಾ ಗೋಪಿಕುಂಟೆ, ಲೇಖಕ ಡಾ.ಮನು ಬಳಿಗಾರ್, ಚಲನಚಿತ್ರ ನಿರ್ಮಾಪಕ ಮುರಳೀಧರ ಹಾಲಪ್ಪ, ಅನಿಕೇತನ ಕನ್ನಡ ಬಳಗದ ಅಧ್ಯಕ್ಷ ಮಾಯಣ್ಣ ಉಪಸ್ಥಿತರಿದ್ದರು.

ಜಾಗತಿಕ ಹಳ್ಳಿಯ ಕಲ್ಪನೆ ಸುಳ್ಳು
`ಕಾರ್ಪೊರೇಟ್ ವಲಯವು ಇಡೀ ವಿಶ್ವವೇ ಒಂದು ಜಾಗತಿಕ ಹಳ್ಳಿ ಎಂಬ ಹುಸಿ ಕಲ್ಪನೆಯನ್ನು ಸೃಷ್ಟಿಸುತ್ತಿದೆ. ರಾಜ್ಯದ ವಿವಿಧ ಭಾಗದಲ್ಲಿ ಒಂದೊಂದು ರೀತಿಯ ಭಾಷಾ ವೈವಿಧ್ಯತೆ ಇದೆ. ಇಡೀ ದೇಶವು ಹಲವು ಸ್ಥಳೀಯ ಸಂಸ್ಕೃತಿಯನ್ನು ಹೊಂದಿರುವ ಗ್ರಾಮಗಳಿಂದ ಕೂಡಿದೆ. ಸಂಪರ್ಕ ಕ್ರಾಂತಿಯು ವಿಶ್ವದ ವಿವಿಧ ದೇಶಗಳನ್ನು ಹತ್ತಿರಕ್ಕೆ ತಂದಿದೆ. ಆದರೆ, ಇದನ್ನು ಜಾಗತಿಕ ಹಳ್ಳಿ ಎಂದು ಹೇಳಲು ಸಾಧ್ಯವಿಲ್ಲ. ಈ ಮೂಲಕ ಸ್ಥಳೀಯ ಸಂಸ್ಕೃತಿಯನ್ನು ನಿರ್ಲಕ್ಷಿಸಲಾಗುತ್ತಿದೆ' ಎಂದು ಬರಗೂರು ರಾಮಚಂದ್ರಪ್ಪ ವಿಷಾದಿಸಿದರು.

ಬರಗೂರರ ಮೊದಲ ಕವನ
`ಶಾಲಾ ದಿನಗಳಲ್ಲಿ ಗೆಳೆಯನೊಬ್ಬ ಶಾಲೆ ಬಿಟ್ಟಿದ್ದ. ಅದೇ ವೇಳೆಯಲ್ಲಿ `ಓಹಿಲೇಶ್ವರ' ಚಿತ್ರ ಬಿಡುಗಡೆಯಾಗಿತ್ತು. ಅದರಲ್ಲಿನ `ಈ ದೇಹದಿಂದ ದೂರವಾದೆ ಏಕೆ ಆತ್ಮವೇ..' ಎಂಬ ಗೀತೆ ಜನಪ್ರಿಯವಾಗಿತ್ತು. ಅದನ್ನು ಅನುಕರಿಸಿ `ಈ ಶಾಲೆಯಿಂದ ದೂರವಾದೆ ಏಕೆ ಗೆಳೆಯನೆ' ಎಂದು ಬರೆದೆ. ಇದು ನನ್ನ ಕಾವ್ಯ ರಚನೆಯ ಆರಂಭದ ಉತ್ಸಾಹ. ಗುರುಗಳಾದ ಪಿ.ವೈ.ನಾಗಭೂಷಣರಾವ್ ಅವರು ನಮ್ಮ ಎಲ್ಲ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು' ಎಂದು ಬರಗೂರು ತಮ್ಮ ಶಾಲಾ ದಿನಗಳನ್ನು ನೆನೆಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT