ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ ಕೊಳವೆ ಮಾರ್ಗ ಕಾಮಗಾರಿಗೆ ಅಡ್ಡಿ

Last Updated 18 ಅಕ್ಟೋಬರ್ 2011, 5:15 IST
ಅಕ್ಷರ ಗಾತ್ರ

ಹಿರಿಯೂರು: ಪೊಲೀಸರ ಬೆಂಗಾವಲಿನಲ್ಲಿ ಅನಿಲ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ ನಡೆಸಲು ಗೇಲ್ ಕಂಪೆನಿಯ ಪರವಾಗಿ ಬಂದಿದ್ದ ಭೂಸ್ವಾಧೀನ ಅಧಿಕಾರಿ ಹಾಗೂ ಕೆಲಸಗಾರರನ್ನು ಸಂತ್ರಸ್ತ ರೈತರು ಕಾಮಗಾರಿ ನಡೆಸಲು ಬಿಡದೇ ಹಿಂದಕ್ಕೆ ಕಳುಹಿಸಿದ ಘಟನೆ ಸೋಮವಾರ ತಾಲ್ಲೂಕಿನ ಮೇಟಿಕುರ್ಕೆ ಗ್ರಾಮದಲ್ಲಿ ನಡೆದಿದೆ.

ಕೊಳವೆ ಮಾರ್ಗ ಹಾದು ಹೋಗುವ ರೈತರ ಜತೆ ಮೂರ‌್ನಾಲು ಬಾರಿ ಸಭೆ ನಡೆಸಿರುವ ಭೂಸ್ವಾಧೀನ ಅಧಿಕಾರಿ, ಕಂಪೆನಿಯ ಪ್ರಮುಖರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಂತ್ರಸ್ತ ರೈತರು ಒತ್ತಾಯಿಸಿರುವ ಪರಿಹಾರ ನೀಡುವ ವಿಚಾರದಲ್ಲಿ ಒಮ್ಮತಕ್ಕೆ ಬರಲಾಗಿಲ್ಲ.

 20 ದಿನಗಳ ಹಿಂದೆ ನಡೆದ ಸಭೆಯಲ್ಲಿ ರೈತರಿಗೆ ಪರಿಹಾರದ ಚೆಕ್ ವಿತರಣೆ ಮಾಡಿದ ನಂತರವೇ ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದ ಅಧಿಕಾರಿಗಳು, ಸೋಮವಾರ ಇದ್ದಕ್ಕಿದ್ದಂತೆ ಪೊಲೀಸ್ ಬೆಂಗಾವಲಿನಲ್ಲಿ ಕಾಮಗಾರಿ ನಡೆಸಲು ಬಂದ್ದಿದ್ದು ಸರಿಯಲ್ಲ ಎಂದು ಕೃಷಿ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಯಶವಂತರಾಜು ಬೇಸರ ವ್ಯಕ್ತಪಡಿಸಿದರು.

ಕಾಮಗಾರಿಗೆ ಅಡ್ಡಿ ಪಡಿಸದಂತೆ ಅಧಿಕಾರಿಗಳು ರೈತರ ಮನವೊಲಿಸುವ ಪ್ರಯತ್ನ ಮಾಡಿದರಾದರೂ ರೈತರು ಒಪ್ಪಲಿಲ್ಲ. ಈ ಹಿಂದೆ ನಡೆದಿರುವ ಸಭೆಯಲ್ಲಿ ರೈತರು ಬೇಡಿಕೆ ಇಟ್ಟಿರುವ ಪ್ರಕಾರ ಪರಿಹಾರದ ಚೆಕ್ಕುಗಳನ್ನು ವಿತರಣೆ ಮಾಡಿದ ನಂತರವೇ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯ ಮಾಡಿದ ಎಂ.ಪಿ.ವಿ.  ಸೋಮಲಿಂಗಾರೆಡ್ಡಿ, ಚಿತ್ತಪ್ಪ, ಗಿರೀಶ್, ಪ್ರಾಣೇಶ್, ಜಿ.ಟಿ. ಶ್ರೀಧರ್, ಭರತ್‌ರೆಡ್ಡಿ, ವಿಕ್ರಂ, ಜಯಣ್ಣ, ಮಲ್ಲಿಕಾರ್ಜುನಯ್ಯ, ತಾಳವಟ್ಟಿ ಸಿದ್ದಪ್ಪ, ರೇವಣ್ಣ ಮತ್ತಿತರರು ಭೂಸ್ವಾಧೀನ ಅಧಿಕಾರಿ ಸೂರ್ಯನಾರಾಯಣರಾವ್ ನೇತೃತ್ವದಲ್ಲಿ ಬಂದವರು ಕಾಮಗಾರಿ ನಡೆಸದಂತೆ ತಡೆಯುವಲ್ಲಿ ಯಶಸ್ವಿಯಾದರು.
 
ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ನಾಲ್ಕನ್ನು ವಿಸ್ತರಣೆ ಮಾಡುವಾಗ ರೈತರಿಗೆ ನೀಡಿರುವ ಪರಿಹಾರವನ್ನೇ ಈಗಲೂ ನೀಡಬೇಕು ಎನ್ನುವುದು ತಮ್ಮ ಪ್ರಮುಖ ಬೇಡಿಕೆ ಎಂದು ಯಶವಂತರಾಜು ಸುದ್ದಿಗಾರರಿಗೆ ತಿಳಿಸಿದರು.

ಸಭೆ: ಅ. 18ರಂದು ಮಂಗಳವಾರ ಮಧ್ಯಾಹ್ನ 3ಕ್ಕೆ ಹಿರಿಯೂರಿನ ಡಿವೈಎಸ್ಪಿ ಎನ್. ರುದ್ರಮುನಿ ಅವರ ಕಚೇರಿಯಲ್ಲಿ ಸಂತ್ರಸ್ತ ರೈತರು ಹಾಗೂ ಕಂಪೆನಿ ಅಧಿಕಾರಿಗಳ ಸಭೆ ನಡೆಸಲು ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ  ಸೂಚಿಸಿದರು.

ರೈತರ ಸಭೆ: ಡಿವೈಎಸ್ಪಿ ಕಚೇರಿಯಲ್ಲಿ 3 ಗಂಟೆಗೆ ಸಭೆ ಹಮ್ಮಿಕೊಂಡಿದ್ದು, ಅದಕ್ಕೂ ಮೊದಲು ಅನಿಲ ಮಾರ್ಗ ಹಾದು ಹೋಗುವ ತಾಲ್ಲೂಕಿನ ಎಲ್ಲಾ ಗ್ರಾಮಗಳ ರೈತರು ಮಧ್ಯಾಹ್ನ 2 ಗಂಟೆಗೆ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಸಭೆ ಸೇರಿ ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬರಬೇಕಾಗಿರುವ ಕಾರಣ ಎಲ್ಲಾ ರೈತರು ತಪ್ಪದೆ ಸಭೆಗೆ ಬಂದು ತಮ್ಮ ಸಲಹೆ- ಸೂಚನೆ ನೀಡಬೇಕು ಎಂದು ಯಶವಂತರಾಜು ಮನವಿ ಮಾಡಿದ್ದಾರೆ.

ಚಿತ್ತಪ್ಪ, ಗಿರೀಶ್, ಪ್ರಾಣೇಶ್, ಜಿ.ಟಿ. ಶ್ರೀಧರ್, ಭರತ್‌ರೆಡ್ಡಿ, ವಿಕ್ರಂ, ಜಯಣ್ಣ, ಮಲ್ಲಿಕಾರ್ಜುನಯ್ಯ, ತಾಳವಟ್ಟಿ ಸಿದ್ದಪ್ಪ, ರೇವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT