ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಬಿಡುಗಡೆಗೆ ಶಿಕ್ಷಕರ ಪಾದಯಾತ್ರೆ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: 1991ರಿಂದ 1994-95ರ ಅವಧಿಯಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣವಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಇದೇ 22ರಿಂದ ಧಾರವಾಡದಿಂದ ಬೆಂಗಳೂರುವರೆಗೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಶಿಕ್ಷಕರು ಪಾದಯಾತ್ರೆ ನಡೆಯಲಿದೆ.

~ಅನುದಾನ ಬಿಡುಗಡೆಗೆ ಆಗ್ರಹಿಸಿ ಶಿಕ್ಷಕರು ಉಪವಾಸ ಸತ್ಯಾಗ್ರ ನಡೆಸುತ್ತಿರುವ ಸ್ಥಳದಿಂದಲೇ 22ರಂದು ಬೆಳಿಗ್ಗೆ 10.30 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ.
 
ಹುಬ್ಬಳ್ಳಿ, ತಡಸ, ಶಿಗ್ಗಾವಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಭರಮಸಾಗರ, ಚಿತ್ರದುರ್ಗ, ಗುಯಿಲಾಳು, ಆದಿವಾಲ, ಶಿರಾ, ಸೀಬೆ, ತುಮಕೂರು, ಡಾಬಸ್‌ಪೇಟೆ, ನೆಲಮಂಗಲ, ದಾಸನಕುಂಟೆ ಮೂಲಕ ಮಾರ್ಚ್ 11ರಂದು ಬೆಂಗಳೂರು ತಲುಪಲಿದೆ~ ಎಂದು ಬಸವರಾಜ ಹೊರಟ್ಟಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಪಾದಯಾತ್ರೆಯು ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ~ ಎಂದು ಸ್ಪಷ್ಟಪಡಿಸಿದ ಅವರು, ~1991ರಿಂದ 1994-95ರ ವರೆಗೆ ಆರಂಭಿಸಿದ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣವಾಗಿ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದಲ್ಲಿ ಅಂದೇ ಪಾದಯಾತ್ರೆಯನ್ನು ಮೊಟಕುಗೊಳಿಸಲಾಗುತ್ತದೆ. ಇಲ್ಲದಿದ್ದರೆ ಬೆಂಗಳೂರು ತಲುಪಿದ ನಂತರ ಅಲ್ಲಿ ಹೋರಾಟವನ್ನು ಮುಂದುವರಿಸಲಾಗುತ್ತದೆ~ ಎಂದು ಎಚ್ಚರಿಸಿದರು.

~ಪಾದಯಾತ್ರೆ ಹೊರಟರೂ ಧಾರವಾಡದಲ್ಲಿ ಕೈಗೊಂಡ ಉಪವಾಸ ಸತ್ಯಾಗ್ರಹ ಮುಂದುವರಿಯುತ್ತದೆ. ಪ್ರತಿ ಜಿಲ್ಲೆಗಳಿಂದ 10 ಶಿಕ್ಷಕರು ಸತ್ಯಾಗ್ರಹದಲ್ಲಿ ಭಾಗವಹಿಸುತ್ತಾರೆ. ಆರೋಗ್ಯ ಸ್ಥಿರವಾಗಿರುವ ಸುಮಾರು 50 ಶಿಕ್ಷಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
 
ಜೊತೆಗೆ ಆಯಾ ಜಿಲ್ಲೆಗಳ ಅನುದಾನರಹಿತ ಶಿಕ್ಷಕರು ಪಾದಯಾತ್ರೆಗೆ ಸೇರಿಕೊಳ್ಳುತ್ತಾರೆ. ಅಲ್ಲದೇ ಸಮಾನ ಮನಸ್ಕ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸುತ್ತಾರೆ. ಪಾದಯಾತ್ರೆ ಮೂಲಕ ನಿತ್ಯ 25 ಕಿ.ಮೀ. ಕ್ರಮಿಸಲಾಗುವುದು. ಕುಡಿಯಲು ನೀರು, ಹಾಸಿಗೆ, ಮೈಕು ಅಲ್ಲದೇ ಅಂಬುಲೆನ್ಸ್ ಜೊತೆಗಿರುತ್ತದೆ. ಉಳಿದುಕೊಂಡ ಊರಲ್ಲಿ ಸಭೆಗಳನ್ನು ಏರ್ಪಡಿಸಲಾಗುತ್ತದೆ~ ಎಂದು ಅವರು ಹೇಳಿದರು.

~ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ರೂ 65 ಕೋಟಿ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ ಎನ್ನುತ್ತಾರೆ. ಈ ದ್ವಂದ ಹೇಳಿಕೆಗಳು ನಿಲ್ಲಬೇಕು.

ಬಜೆಟ್‌ನಲ್ಲಿ ತೆಗೆದಿರಿಸಿದ್ದರೂ ಸಚಿವ ಸಂಪುಟದ ಒಪ್ಪಿಗೆ ಪಡೆದರೂ ಅನುದಾನ ಬಿಡುಗಡೆಗೊಂಡ ಕುರಿತು ಆದೇಶಪತ್ರ ತಲುಪುತ್ತಿಲ್ಲ. ಈ ಬಾರಿ ಆದೇಶಪತ್ರ ಕೈಗೆ ಸಿಗುವವರೆಗೆ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ.
 
ಶಿಕ್ಷಕರು ನಡೆಸುತ್ತಿರುವ ಸತ್ಯಾಗ್ರಹ ಮಂಗಳವಾರಕ್ಕೆ 70ನೇ ದಿನಕ್ಕೆ ಕಾಲಿಟ್ಟರೂ ಇದುವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಚರ್ಚೆಗೆ ಆಹ್ವಾನಿಸಿಲ್ಲ. 2 ಬಾರಿ ಶಿಕ್ಷಕರು ಶೆಟ್ಟರ ಅವರ ಕಾಲಿಗೆ ಬಿದ್ದಿದ್ದಾರೆ.
 
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೂ ಶಿಕ್ಷಕರು ಬಿದ್ದಿದ್ದಾರೆ. ಹೀಗಾದರೂ ಸರ್ಕಾರಕ್ಕೆ ಕರುಣೆ ಬಂದಿಲ್ಲ. ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ ಕೈಗೊಳ್ಳಲಾಗಿದೆ~ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT