ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪವಿತ್ರ ಹಂಚಿಕೆಗೆ ಅವಿಶ್ವಾಸ ಸೂತ್ರ

Last Updated 2 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಪ್ರಕರಣ–1: ಇದು ಬೀದರ್‌ ತಾಲ್ಲೂಕು ಪಂಚಾಯ್ತಿ. ಇಲ್ಲಿ 2011 ರ ಚುನಾವಣೆ ನಂತರ ಮೂರು ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು, ಅಧ್ಯಕ್ಷರು ಅಧಿಕಾರ ಕಳೆದುಕೊಂಡಿದ್ದಾರೆ. ಇಲ್ಲಿ ಒಂದು ಸ್ವಾರಸ್ಯವಿದೆ. ಮೊದಲ ಅವಧಿಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ದೋಸ್ತಿ ಮಾಡಿಕೊಂಡಿದ್ದವು. 13 ತಿಂಗಳ ಬಳಿಕ ಅವಿಶ್ವಾಸ ಮಂಡನೆ ಆಯಿತು. ಇದಕ್ಕೆ ಜಯವೂ ಸಿಕ್ಕಿತು. ನಂತರ ನಡೆದ ಚುನಾವಣೆಯಲ್ಲಿ ದೋಸ್ತಿ ಬದಲಾಯಿತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಧಿಕಾರ ಹಿಡಿದವು. ಜೆಡಿಎಸ್‌ನ ಸುರೇಶ್ ಶಿಂಧೆ ಅಧ್ಯಕ್ಷರಾಗಿ ನಿಗದಿತ ಅವಧಿಯನ್ನು ಪೂರ್ಣಗೊಳಿಸಿದರು.

ಎರಡನೇ ಅವಧಿಯಲ್ಲಿ (ಜುಲೈ 12,2013) ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆಯಿತು. ‘ಅಧ್ಯಕ್ಷರು ಪಕ್ಷದ ಹಿತಾಸಕ್ತಿ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎನ್ನುವ ನೆಪವನ್ನು ಮುಂದಿಟ್ಟುಕೊಂಡು ಸುಭಾಷ್‌ ಕೋರಿ ಅವರನ್ನು ಪದಚ್ಯುತಗೊಳಿಸಲಾಯಿತು. ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಕ್ಬರ್ ಖಾನ್‌ ಅಧ್ಯಕ್ಷರಾದರು. ಇಲ್ಲಿಗೆ ‘ಅವಿಶ್ವಾಸ ಪ್ರಹಸನ’ ಮುಗಿಯಲೇ ಇಲ್ಲ. ಒಮ್ಮೆ ಅವಿಶ್ವಾಸ ಮಂಡಿಸಿದ ಮೇಲೆ ಮತ್ತೆ ಆರು ತಿಂಗಳು ಅವಿಶ್ವಾಸ ಮಂಡನೆಗೆ ನಿಯಮದಲ್ಲಿ ಅವಕಾಶವಿಲ್ಲ.

ಹೀಗಾಗಿ ಖಾನ್‌ ಆರು ತಿಂಗಳು ಪೂರ್ಣಗೊಳಿಸಿದ ಮರು ದಿನವೇ (ಜನವರಿ 28, 2014) ಅವಿಶ್ವಾಸ ಮಂಡಿಸಲು ಕೋರಿ ಮನವಿ ಸಲ್ಲಿಸಲಾಯಿತು. ಅವರೂ ಈಗ ಅಧಿಕಾರ ಕಳೆದುಕೊಂಡಿದ್ದಾರೆ. ಇದಕ್ಕೂ ಸದಸ್ಯರು ನೀಡುತ್ತಿರುವ ಉತ್ತರ ‘ಅಭಿವೃದ್ಧಿ’.

ಹೀಗೆ ಪದೇ ಪದೇ ‘ಅವಿಶ್ವಾಸ ನಿರ್ಣಯ ದಾಳಿ’ಗೆ ಒಳಗಾಗುತ್ತಿರುವ ತಾಲ್ಲೂಕು ಪಂಚಾಯ್ತಿ ಸದಸ್ಯರೊಬ್ಬರು ಅವಿಶ್ವಾಸ ನಿರ್ಣಯವನ್ನು ಅರ್ಥೈಸುವುದು ಹೀಗೆ–‘ಕೆಲವು ಸದಸ್ಯರು ಅಧ್ಯಕ್ಷರಿಂದ ಹಣಕ್ಕಾಗಿ ಬೇಡಿಕೆ ಇಟ್ಟರು. ಅವರು ಅದಕ್ಕೆ ಸೊಪ್ಪು ಹಾಕಲಿಲ್ಲ. ಹೀಗಾಗಿಯೇ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಹೆಸರಿಗಷ್ಟೇ ಕ್ಷೇತ್ರದ ಅಭಿವೃದ್ಧಿ ಎನ್ನುತ್ತಾರೆ. ಸತ್ಯ ಹೇಳಬೇಕು ಎಂದರೆ ಅದು ಸದಸ್ಯರ ಅಭಿವೃದ್ಧಿಯೇ ಆಗಿದೆ’.

ಪ್ರಕರಣ–2: ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲ್ಲೂಕು ಪಂಚಾಯ್ತಿ ಕಥೆ ಇನ್ನೊಂದು ರೀತಿ ಭಿನ್ನವಾಗಿದೆ. ಇಲ್ಲಿ ಒಟ್ಟು 21 ಸ್ಥಾನಗಳಿವೆ. ಇವುಗಳಲ್ಲಿ ಬಿಜೆಪಿ 12, ಕಾಂಗ್ರೆಸ್‌ 9 ಸ್ಥಾನಗಳನ್ನು ಹೊಂದಿವೆ. ವಿಶೇಷವೆಂದರೆ ಬಿಜೆಪಿ ತನ್ನ ಪಕ್ಷದ ಅಧ್ಯಕ್ಷೆ ಮಲ್ಲಮ್ಮ ಪಾಟೀಲ ವಿರುದ್ಧವೇ ಅವಿಶ್ವಾಸ ಮಂಡಿಸಿ ಅಧಿಕಾರದಿಂದ ಕೆಳಗಿಸಿತು. ಇದಕ್ಕೆ ಕಾರಣವಿಷ್ಟೆ: ಕಳೆದ ವಿಧಾನಸಭೆ ಚುನಾವಣೆ ವೇಳೆ ಮಲ್ಲಮ್ಮನವರ ಪತಿ ಚಿತ್ರಶೇಖರ ಪಾಟೀಲ ಕಾಂಗ್ರೆಸ್‌ ಸೇರಿದರು.

ಜತೆಗೆ ಪತ್ನಿ ಮಲ್ಲಮ್ಮ ಸಹ ಕಾಂಗ್ರೆಸ್‌ ಸದಸ್ಯರೊಂದಿಗೆ ಗುರುತಿಸಿಕೊಂಡರು. ಇದರಿಂದ ‘ಅವಮಾನ’ಗೊಂಡ ಬಿಜೆಪಿ ಸೇಡು ತೀರಿಸಿಕೊಳ್ಳುವ ಸಲುವಾಗಿ ಅವಿಶ್ವಾಸಕ್ಕೆ ಮುಂದಾಯಿತು. ಎರಡು ತಿಂಗಳ ಹಿಂದೆ ನಡೆದ ಈ ಪ್ರಕ್ರಿಯೆಯಲ್ಲಿ ಬಿಜೆಪಿಯ ಮಲ್ಲಮ್ಮ ಪಾಟೀಲರಿಗೆ ಕಾಂಗ್ರೆಸ್‌ ಬೆಂಬಲ ಸೂಚಿಸಿದರೆ, ಕಾಂಗ್ರೆಸ್‌ ಸದಸ್ಯೆಯೊಬ್ಬರು ಬಿಜೆಪಿಯೊಂದಿಗೆ ಗುರುತಿಸಿಕೊಂಡು ಕಾಂಗ್ರೆಸ್‌ಗೆ ‘ಟಾಂಗ್’ ಕೊಟ್ಟರು.

‘ಅಧ್ಯಕ್ಷ ಸ್ಥಾನವನ್ನು ಒಳ ಒಪ್ಪಂದದಂತೆ ತಲಾ 10 ತಿಂಗಳಿಗೆ ಹಂಚಿಕೆ ಮಾಡಲಾಗಿತ್ತು. ರಾಜೀನಾಮೆ ನೀಡದಿದ್ದಾಗ ಅವಿಶ್ವಾಸ ಕೈಗೊಂಡಿದ್ದೇವೆ’ ಎನ್ನುತ್ತಾರೆ ಚಿಂಚೋಳಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಾಮಸುಂದರ್‌ ಪವಾರ್‌.

ಪ್ರಕರಣ–3: ಬೀದರ್‌ ಜಿಲ್ಲಾ ಪಂಚಾಯ್ತಿಯಲ್ಲಿ ಈಚೆಗೆ ನಡೆದ ಅವಿಶ್ವಾಸದ ಹಿಂದೆ ‘ಪಕ್ಷ ಪ್ರತಿಷ್ಠೆ’ಯೇ ಮುಖ್ಯವಾಗಿತ್ತು. ಇಲ್ಲಿ ಒಟ್ಟು 31 ಸ್ಥಾನಗಳಿವೆ. ಬಿಜೆಪಿ 18, ಪಕ್ಷೇತರ 6, ಕಾಂಗ್ರೆಸ್‌ 2, ಜೆಡಿಎಸ್‌ 5 ಸ್ಥಾನಗಳನ್ನು ಗೆದ್ದುಕೊಂಡಿವೆ. ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದು, ಈ ಪಕ್ಷದ ಕುಶಾಲಪಾಟೀಲ ಗಾದಗಿ ಅಧ್ಯಕ್ಷರಾಗಿದ್ದರು. 10 ತಿಂಗಳ ಅವಧಿಗೆ ‘ಅಧಿಕಾರ ಹಂಚಿಕೆ’ಯಾಗಿತ್ತು. ಅವಧಿ ಮುಗಿದರೂ ಕುರ್ಚಿ ಬಿಟ್ಟುಕೊಡಲಿಲ್ಲ. ಒಪ್ಪಂದಕ್ಕೆ ವಿರುದ್ಧವಾಗಿ ಮೂರು ತಿಂಗಳು ತಡವಾಗಿ ಸ್ಥಾನ ತ್ಯಜಿಸಿದರು.

ಅದೇ ಪಕ್ಷದ ಬಾಬುರಾವ್‌ ಕಾರಬಾರಿ ಉಳಿದ ಅವಧಿಗೆ ಅಧ್ಯಕ್ಷರಾದರು. ಎರಡನೇ ಅವಧಿಯಲ್ಲಿ ಮೊದಲು ಅಧ್ಯಕ್ಷರಾದವರು ದೀಪಿಕಾ ಸಚಿನ್‌ ರಾಠೋಡ. ಆಗಲೂ ‘ಅಧಿಕಾರ ಹಂಚಿಕೆ’ ಒಪ್ಪಂದವಾಗಿತ್ತು. ಆದರೆ ದೀಪಿಕಾ ಅವಧಿ ಪೂರ್ಣಗೊಳಿಸುವ ಮುನ್ನವೇ ಅವಿಶ್ವಾಸಕ್ಕೆ ಬೆಲೆ ತೆರಬೇಕಾಯಿತು. ಈ ವೇಳೆಗೆ ಬಿಜೆಪಿ ವಿಭಜನೆ ಆಯಿತು. ಹೀಗಾಗಿ ಬಿಜೆಪಿಯ 18 ಸದಸ್ಯರ ಪೈಕಿ 8 ಮಂದಿ ‘ಕೆಜೆಪಿ’ ಎಂದು ಗುರುತಿಸಿಕೊಂಡರು. ಬಿಜೆಪಿಯು ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರ ಬೆಂಬಲದೊಂದಿಗೆ ಜೂನ್‌ 21, 2013 ರಂದು ದೀಪಿಕಾ ವಿರುದ್ಧ ಅವಿಶ್ವಾಸ ತಂದಿತು.

ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸಿಡಿದು ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದ ಸಂತೋಷಮ್ಮಾ ಪುಂಡಲೀಕ ಅಧ್ಯಕ್ಷರಾದರು. ಅವಿಶ್ವಾಸ ಹಾಗೂ ಸಂತೋಷಮ್ಮಾ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ.ಶೈಲೇಂದ್ರ ಬೆಲ್ದಾಳೆ ಏನೇ ನೆಪ ಹೇಳಿದರೂ ಜಿಲ್ಲಾ ಪಂಚಾಯ್ತಿ ‘ಅಧಿಕಾರ ಗದ್ದುಗೆ’ಯನ್ನು ತಮ್ಮ ವಶಕ್ಕೆ ಪಡೆದು ಕೆಜೆಪಿ ಶಕ್ತಿಶಾಲಿ ಎನ್ನುವುದನ್ನು ಜಿಲ್ಲೆಯ ಜನತೆಗೆ ಸಾರಿ ಹೇಳುವುದೇ ಉದ್ದೇಶವಾಗಿತ್ತು.

ಪ್ರಕರಣ–4: ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನಲ್ಲಿ 2011 ರಿಂದ ಇಲ್ಲಿಯವರೆಗೆ ಯಾವ ಗ್ರಾಮ ಪಂಚಾಯ್ತಿಯಲ್ಲಿ ಒಮ್ಮೆಯೂ ಅಧ್ಯಕ್ಷರು, ಉಪಾಧ್ಯಕ್ಷರು ಪದಚ್ಯುತಿಗೊಂಡಿಲ್ಲ!

ಇಲ್ಲಿಯ ಸದಸ್ಯರು ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಇಷ್ಟೊಂದು ಗೌರವ ಕೊಡುತ್ತಿದ್ದಾರೆಯೇ ಎನ್ನುವ ಅನುಮಾನ ಕಾಡಿತು. ಈ ಕುರಿತು ವಿವರ ಪಡೆಯುತ್ತಾ ಹೋದಂತೆ ಮತ್ತೊಂದು ಅಚ್ಚರಿ ಅಂಶ ಗೊತ್ತಾಯಿತು.

ಸಿಂಧನೂರು ತಾಲ್ಲೂಕಿನಲ್ಲಿ 34 ಗ್ರಾಮ ಪಂಚಾಯ್ತಿಗಳಿವೆ. ಆದರೆ ಸಾಲಗುಂದಾ, ಮಾಡಸಿರವಾರ, ರಮತ್ನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ನಡೆಸಿದ ಅವಿಶ್ವಾಸ ಮಂಡನೆ ಯತ್ನ ವಿಫಲವಾಗಿವೆ!

ಇಲ್ಲಿ ‘ಅಧಿಕಾರ ಹಂಚಿಕೆ’ ಎನ್ನುವ ‘ಅಲಿಖಿತ ನಿಯಮ’ ಜಾರಿಯಲ್ಲಿದೆ. ಆದರೆ ಇಲ್ಲಿ ಉಳಿದ ಕಡೆಗಳಂತೆ  ತಮ್ಮ ನಾಯಕರ ಅಧಿಕಾರ ಹಂಚಿಕೆ ಸೂತ್ರಕ್ಕೆ ಧಿಕ್ಕಾರ ಹೇಳಿದವರು, ಸವಾಲು ಹಾಕಿದವರು ಇಲ್ಲ. ಈ ಕಾರಣಕ್ಕಾಗಿಯೇ ಅವಿಶ್ವಾಸ ಮಂಡನೆ ಆಗಿಲ್ಲ!

‘ಗ್ರಾಮ ಪಂಚಾಯ್ತಿಯಲ್ಲಿ ನೇರವಾಗಿ ಪಕ್ಷ ರಾಜಕಾರಣವಿಲ್ಲ. ವಿಪ್‌ ಹಾವಳಿ ಇಲ್ಲ. ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಲು ಯಾವ ಪಕ್ಷಗಳ ಮುಖಂಡರು ಹಸ್ತಕ್ಷೇಪ ಮಾಡುವುದಿಲ್ಲ. ರಾಜಕಾರಣಿಗಳ ಹಸ್ತಕ್ಷೇಪ ವಿಲ್ಲದ ಕಾರಣ ಇಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಆಡಳಿತ ಸುಸೂತ್ರವಾಗಿ ನಡೆದಿದೆ’ ಎನ್ನುವುದು ಜೆಡಿಎಸ್‌ ವಕ್ತಾರ ಬಸವರಾಜ ನಾಡಗೌಡ ಅವರ ಅಭಿಪ್ರಾಯ. ಸಿಂಧನೂರು ತಾಲ್ಲೂಕು ಪಂಚಾಯ್ತಿಯಲ್ಲಿ ಇಲ್ಲಿವರೆಗೂ ಅವಿಶ್ವಾಸ ಮಂಡನೆಯಾಗಿಲ್ಲ!

ಪ್ರಕರಣ–5: ಗುಲ್ಬರ್ಗ ಜಿಲ್ಲೆ ಆಳಂದ ತಾಲ್ಲೂಕು ಪಂಚಾಯ್ತಿಯಲ್ಲಿ ಒಟ್ಟು 27 ಸ್ಥಾನಗಳಿವೆ. ಜೆಡಿಎಸ್‌ 13, ಕಾಂಗ್ರೆಸ್‌ 10, ಬಿಜೆಪಿ 3, ಸಿಪಿಐ 1 ಸ್ಥಾನ ಪಡೆದಿವೆ. ಇಲ್ಲಿ 2011 ಚುನಾವಣೆ ನಂತರ ಒಮ್ಮೆಯೂ ಅವಿಶ್ವಾಸ ಮಂಡನೆಯಾಗಿಲ್ಲ. ಮೊದಲ ಅಧ್ಯಕ್ಷೆ 20 ತಿಂಗಳು ಅಧಿಕಾರ ಪೂರ್ಣಗೊಳಿಸಿದ್ದಾರೆ! ಆಳಂದ ತಾಲ್ಲೂಕು ಪಂಚಾಯ್ತಿ ಇಷ್ಟೊಂದು ವಿಶಿಷ್ಟ ಹೇಗಾಯಿತು? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ಗೊತ್ತಾಗಿದ್ದು ಇದು.

ಮೊದಲ ಅವಧಿಗೆ ಅಧ್ಯಕ್ಷ ಸ್ಥಾನವು ಎಸ್‌ಟಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಆದರೆ ಬಹುಮತ ಪಡೆದ ಜೆಡಿಎಸ್‌ನಲ್ಲಿ ಎಸ್‌ಟಿ ಸದಸ್ಯೆ ಇರಲಿಲ್ಲ. ಅನಿವಾರ್ಯವಾಗಿ ಕಾಂಗ್ರೆಸ್‌ನ ಬಾಯಮ್ಮ ಮೋಹನಗೌಡ ಪಾಟೀಲ ಅಧ್ಯಕ್ಷರಾಗುವ ಅವಕಾಶ ‘ಮೀಸಲಾತಿ’ಯಿಂದಾಗಿ ಒಲಿಯಿತು. ಎರಡನೇ ಅವಧಿಗೆ ಜೆಡಿಎಸ್‌ನ ಪ್ರಭಾವತಿ ಡಗೆ ಅಧ್ಯಕ್ಷರಾಗಿದ್ದಾರೆ. ಇಲ್ಲಿ ಜೆಡಿಎಸ್‌ನ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ ಪ್ರಭಾವ ಹೊಂದಿದ್ದಾರೆ. ಹೀಗಾಗಿ ಇವರು ಹೇಳಿದವರೇ ಕುರ್ಚಿ ಮೇಲೆ ಕುಳಿತುಕೊಳ್ಳಲು ಸಾಧ್ಯ.

ಅವಿಶ್ವಾಸ ನಿರ್ಣಯದ ಪ್ರಹಸನಗಳು ‘ಬಹುರೂಪಿ’. ಏನೇನೂ ಸಮಸ್ಯೆ ಇಲ್ಲದೆ ಅಧ್ಯಕ್ಷರು ಆಡಳಿತ ನಡೆಸುತ್ತಿದ್ದರೂ ಸಣ್ಣ ‘ಅಹಂ’ ಕೂಡ ಅವಿಶ್ವಾಸಕ್ಕೆ ಎಡೆ ಮಾಡಿಕೊಡುತ್ತದೆ. ಅಧ್ಯಕ್ಷರು ನಮ್ಮನ್ನು ಸರಿಯಾಗಿ ಗಮನಿಸಿಕೊಳ್ಳುತ್ತಿಲ್ಲ. ಸರಿಯಾಗಿ ಮಾತನಾಡಿಸುವುದಿಲ್ಲ, ಗೌರವ ಕೊಡುವುದಿಲ್ಲ ಎನ್ನುವ ನೆಪವೂ ‘ಪದಚ್ಯುತಿ’ಗೆ ದೊಡ್ಡ ಕಾರಣವಾಗಿಬಿಡುತ್ತದೆ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ವಿಶ್ವಾಸಕ್ಕಿಂತ ಅವಿಶ್ವಾಸದ ಸದ್ದು ಜೋರಾಗಿದೆ.

ಎಷ್ಟೋ ವೇಳೆ ರಾಜಿ ಸಂಧಾನ, ಸದಸ್ಯ ಆಸೆ, ಆಕಾಂಕ್ಷೆಗಳನ್ನು ಪೂರೈಸುವ ಮೂಲಕ ತಮ್ಮ ಮೇಲೆ ಅವಿಶ್ವಾಸ ಹೊಂದಿರುವ ಸದಸ್ಯರ ವಿಶ್ವಾಸವನ್ನು ಅಧ್ಯಕ್ಷರು ಗಳಿಸಿಕೊಳ್ಳುವ ಕಲೆಯನ್ನೂ ಕಲಿತಿರಬೇಕು. ಇಲ್ಲದೇ ಹೋದರೆ ಅವಿಶ್ವಾಸ ಎನ್ನುವ ‘ಬ್ರಹ್ಮಾಸ್ತ್ರ’ವನ್ನು ಹೂಡಲು ಅವಿಶ್ವಾಸಿಗಳು ಸಿದ್ಧವಾಗಿಯೇ ಬಿಡುತ್ತಾರೆ. ಅಧಿಕಾರ ಹಂಚಿಕೆ ಎನ್ನುವ ರಾಜಕೀಯ ಪಕ್ಷಗಳ ‘ಸಾಂತ್ವನ ಸೂತ್ರ’ವೂ ಅವಿಶ್ವಾಸಕ್ಕೆ ದೊಡ್ಡ ‘ಕಾಣಿಕೆ’ ನೀಡುತ್ತಿದೆ.

ತಮ್ಮನ್ನು ಆರಿಸಿ ಕಳುಹಿಸಿದ ಜನರ ಬಗ್ಗೆ ಕಾಳಜಿ, ಅಭಿವೃದ್ಧಿ ಪರವಾಗಿರುವ ಸಂವೇದನಾಶೀಲ ಸದಸ್ಯರು ಅವಿಶ್ವಾಸ ಅಸ್ತ್ರದ ಬಗ್ಗೆ ಬೇಸರಗೊಂಡಿದ್ದಾರೆ. ಅವಿಶ್ವಾಸ ಅಸ್ತ್ರವನ್ನು ಪದೇ ಪದೇ ಬಳಕೆಗೆ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಅಧ್ಯಕ್ಷರು ಪೂರ್ಣಾವಧಿ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು ಎನ್ನುವ ಆಶಯವನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT