ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ರಿದಿ ಶಿಕ್ಷೆಗೆ ಆಧಾರವಿಲ್ಲ

Last Updated 24 ಮೇ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಂತರ ರಾಷ್ಟ್ರೀಯ ಕುಖ್ಯಾತಿಯ ಭಯೋತ್ಪಾದಕ ಒಸಾಮ ಬಿನ್ ಲಾಡೆನ್‌ನನ್ನು ಸೆರೆಹಿಡಿಯುವಲ್ಲಿ ಸಿಐಎಗೆ ನೆರವು ನೀಡಿದ್ದ ವೈದ್ಯನಿಗೆ ಜೈಲು ಶಿಕ್ಷೆ ವಿಧಿಸಿರುವ ಪಾಕಿಸ್ತಾನದ ಕ್ರಮವನ್ನು ಖಂಡಿಸಿರುವ ಅಮೆರಿಕ, ಈ ಕುರಿತು ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದೆ.

ಆದರೆ, ಅಮೆರಿಕ ನಮ್ಮ ನೆಲದ ಕಾನೂನನ್ನು ಗೌರವಿಸಬೇಕು ಎಂದು ಪಾಕಿಸ್ತಾನ ಈ ಹೇಳಿಕೆಗೆ ತಿರುಗೇಟು ನೀಡಿದೆ.`ವೈದ್ಯ ಶಕೀಲ್ ಅಫ್ರಿದಿ ಅವರಿಗೆ ಜೈಲು ಶಿಕ್ಷೆ ವಿಧಿಸುವುದಕ್ಕೆ ಯಾವುದೇ ಆಧಾರವಿಲ್ಲ~ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರೆ ವಿಕ್ಟೋರಿಯಾ ನುಲುಂಡ್ ವರದಿಗಾರರಿಗೆ ತಿಳಿಸಿದ್ದಾರೆ.
`ಈ ವಿಷಯದ ಬಗ್ಗೆ ನಾವು ಹಿಂದಿನಿಂದಲೂ ಪಾಕಿಸ್ತಾನದ ಜೊತೆ ಮಾತುಕತೆ ನಡೆಸುತ್ತಾ ಬಂದಿದ್ದೇವೆ, ಮುಂದೆಯೂ ನಡೆಸುತ್ತೇವೆ~ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಅಫ್ರಿದಿ ಅವರಿಗೆ ಕ್ಷಮಾಪಣೆ ನೀಡಬೇಕೆಂದು ಅಮೆರಿಕದ ಇಬ್ಬರು ಹಿರಿಯ ಸೆನೆಟರ್‌ಗಳು ಪಾಕಿಸ್ತಾನವನ್ನು ಕೋರಿದ್ದಾರೆ.`ಅಫ್ರಿದಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಪಾಕಿಸ್ತಾನ ಮತ್ತು ಅಮೆರಿಕ ಸೇರಿ ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸಬೇಕಾದ ಪ್ರಸ್ತುತ ಸಂದರ್ಭದಲ್ಲಿ ಅಫ್ರಿದಿ ಅವರಿಗೆ ಶಿಕ್ಷೆ ವಿಧಿಸಿರುವುದು ಉಭಯ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ, ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡಬೇಕೆನ್ನುವ ಕಾಂಗ್ರೆಸ್‌ನ ನಿರ್ಧಾರಕ್ಕೆ ತಡೆಯೊಡ್ಡಿದೆ~ ಎಂದು ಸೆನೆಟರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಸರ್ಕಾರದ ಗಮನಕ್ಕೆ ತಾರದೆ ಅಮೆರಿಕದ ಪರವಾಗಿ ಲಾಡೆನ್ ವಿರುದ್ಧ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ, ಅಫ್ರಿದಿ ಅವರಿಗೆ ಸ್ಥಳೀಯ ನ್ಯಾಯಾಲಯ 33 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ಲಾಡೆನ್ ಹತ್ಯೆಗೆ ಆ್ಯಮ್ನೆಸ್ಟಿ ಖಂಡನೆ
ವಾಷಿಂಗ್ಟನ್ (ಎಎಫ್‌ಪಿ): ಅಮೆರಿಕ ರಹಸ್ಯ ಕಾರ್ಯಾಚರಣೆ ನಡೆಸಿ ಕಾನೂನುಬಾಹಿರವಾಗಿ ಒಸಾಮ ಬಿನ್ ಲಾಡೆನ್‌ನನ್ನು ಕೊಂದಿದೆ ಎಂದು ಅಂತರ ರಾಷ್ಟ್ರೀಯ ಕ್ಷಮಾದಾನ ಸಂಸ್ಥೆ (ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್) ಖಂಡಿಸಿದೆ.

ಅಮೆರಿಕ ಈ ವೇಳೆ ಅಂತರ ರಾಷ್ಟ್ರೀಯ ಮಾನವ ಹಕ್ಕು ಕಾನೂನನ್ನು ಪರಿಗಣಿಸಿಲ್ಲ ಎಂದು ಸಂಸ್ಥೆ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT