ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರದ ಪ್ರಚಾರ ಗೆಲುವಾಗಿ ಪರಿಣಮಿಸದು

ಮೂಡಿಗೆರೆ: ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಯಲ್ಲಿ ಎಸ್‌.ಎಂ.ಕೃಷ್ಣ
Last Updated 10 ಏಪ್ರಿಲ್ 2014, 4:59 IST
ಅಕ್ಷರ ಗಾತ್ರ

ಮೂಡಿಗೆರೆ: ಚುನಾವಣೆಯಲ್ಲಿ ಅಬ್ಬರದ ಪ್ರಚಾರ ಮತವಾಗಿ ಪರಿಣಮಿಸುವುದಿಲ್ಲ ಎಂದು ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತ­ನಾಡಿದರು.

ಬಿಜೆಪಿಯ ಅಬ್ಬರದ ಪ್ರಚಾರ ಕೇವಲ ಕಾರ್ಯಕರ್ತರಿಗೆ ಮಾತ್ರ ಸೀಮಿತವಾಗಿದ್ದು, ಕಾಂಗ್ರೆಸ್‌ನಲ್ಲಿರುವ ಮೌನ ಮತದಾರರನೀ ಬಾರಿಯೂ ಕೇಂದ್ರದಲ್ಲಿ ಕಾಂಗ್ರೆಸ್ ಕ್ಷಕ್ಕೆ ಅಧಿಕಾರ ನೀಡುತ್ತಾರೆ ಎಂದು ಭವಿಷ್ಯ ನುಡಿದರು.

ದೇಶದ ಜನತೆ ವಿಚಾರವಂತರಾಗಿದ್ದು, ಅಬ್ಬರದ ಅಲೆಗೆ ಮನ ಸೋಲುವುದಿಲ್ಲ. ವಿಚಾರ­ವಂತರು ಗುಟ್ಟುಬಿಟ್ಟುಕೊಡದೇ ಚುನಾವಣೆ­ಯಲ್ಲಿ ಮತ ಚಲಾಯಿಸುತ್ತಾರೆ. ಬಿಜೆಪಿಯು ಏಕ ವ್ಯಕ್ತಿಯ ಅಡಿಯಲ್ಲಿ ಚುನಾವಣೆ ಎದುರಿಸು­ತ್ತಿದ್ದು, ಆದ್ದರಿಂದಲೇ ಅಡ್ವಾಣಿ, ಯಶ್ವಂತ್‌ಸಿನ್ಹಾ, ಜಸ್ವಂತ್‌ಸಿಂಗ್ ನಂತಹ ಪ್ರಮುಖ ವ್ಯಕ್ತಿಗಳು ಮೂಲೆಗುಂಪಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದು, ಸಂವಿಧಾನದ ಪ್ರಕಾರವಾಗಿಯೇ ಪಕ್ಷವು ಅಧಿಕ ಬಹುಮತ ಪಡೆದ ನಂತರ ಸಂಸತ್ತಿನಲ್ಲಿ ಸಭೆ ನಡೆಸಿ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ಕಾಂಗ್ರೆಸ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲವೆಂದು ಬಿಜೆಪಿಯು ನಡೆಸುತ್ತಿರುವ ವಾಗ್ದಾಳಿಗೆ ತಿರುಗೇಟು ನೀಡಿದರು.

ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ, ಭ್ರಷ್ಟಾಚಾರದ ಬಗ್ಗೆ ಮಾತ­ನಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ನಡೆಸಿದೆ ಎಂದು ಸುಳ್ಳು ಪ್ರಚಾರ ನಡೆಸುತ್ತಿರುವ ಮೋದಿ, ಗುಜರಾತಿನಲ್ಲಿ ಲೋಕಯುಕ್ತರ ನೇಮಕದ ಬಗ್ಗೆ ವಿಳಂಭ ನೀತಿ ಅನುಸರಿಸಿದ್ದಾದರೂ ಏಕೆ. ರಾಜ್ಯದಲ್ಲಿ ಕಬ್ಬಿಣ ಮಾರಿದವರು ಕಂಬಿ ಎಣಿಸುತ್ತಿದ್ದಾರೆ, ಮುಖ್ಯ­ಮಂತ್ರಿಯಾದಿಯಾಗಿ ಜೈಲುವಾಸ ಮಾಡಿದ್ದಾರೆ. ಇವರೆಲ್ಲಾ ತಮಾಷೆಗಾಗಿ ಜೈಲಿಗೆ ಹೋಗಿ ಬಂದವರೆ ಎಂದು ಪ್ರಶ್ನಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಜನಪ್ರಿಯವಾಗಿದ್ದು, ಬಡತನ ನಿವಾ­ರಣೆಗೆ, ಮಹಿಳಾ ಅಭಿವೃದ್ಧಿಗೆ, ರೈತರ ಏಳಿಗೆಗೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಈ ಬಾರಿಯ ಚುನಾವಣೆಯಲ್ಲಿ ಫಲಶ್ರುತಿ ನೀಡಲಿವೆ ಎಂದರು.

ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತ­ನಾಡಿ, ಬಿಜೆಪಿಯು ಚುನಾವಣೆಯಲ್ಲಿ ಗೆಲುವಿಗಾಗಿ ಸುಳ್ಳು ವದಂತಿಗಳನ್ನು ಪ್ರಚಾರವಾಗಿ ಬಳಸುತ್ತಿದೆ. ದೇಶದಲ್ಲಿ ಗಾಂಜಾ ಮತ್ತು ಅಫೀಂಗಳನ್ನು ಮಾತ್ರ ನಿಷೇಧಿಸಲಾಗಿದ್ದು, ಅಡಿಕೆಗೆ ಯಾವುದೇ ನಿಷೇಧ ನೀಡಿಲ್ಲವಾದರೂ, ಬಿಜೆಪಿ ಸುಳ್ಳು ಪ್ರಚಾರ ನಡೆಸುತ್ತಿದೆ. ಒತ್ತುವರಿ ಸಮಸ್ಯೆಗೆ ಪರಿಹಾರ ರೂಪಿಸಲಾಗಿದ್ದು, ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿ ಒತ್ತುವರಿ ಭೂಮಿಯನ್ನು ತೆರವುಗೊಳಿಸದಂತೆ ಕ್ರಮ ಕೈಗೊಳ್ಳಲಾಗಿದ್ದರೂ, ಬಿಜೆಪಿ ಸುಳ್ಳು ಪ್ರಚಾರವನ್ನು ಮಾಡಿ ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ ಎಂದರು.

ಮಾಜಿ ಸಂಸದ ಡಿ.ಎಂ.­ಪುಟ್ಟೇಗೌಡ, ಪಕ್ಷದ ಜಿಲ್ಲಾಧ್ಯಕ್ಷ ಡಿ.ಎಲ್.­ವಿಜಯಕುಮಾರ್, ಬ್ಲಾಕ್ ಅಧ್ಯಕ್ಷ ಎಂ.ಪಿ.­ಮನು, ಪದಾಧಿಕಾರಿಗಳಾದ ಕೆ.ವೆಂಕಟೇಶ್, ಬಿ.ಎಸ್.ಜಯರಾಮಗೌಡ, ಸಚ್ಚಿನ್‌ ಮೀಗಾ, ಎಂ.ಎಸ್.ಅನಂತ್, ಜ್ಯೋತಿ ಹೇಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT