ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ರಾಹ್ಮಣನಾಗಿರುವುದೂ ದಾಳಿಗೆ ಕಾರಣ

Last Updated 25 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನನ್ನ ಮೇಲಿನ ದಾಳಿಗೆ ನಾನೊಬ್ಬ ಅಬ್ರಾಹ್ಮಣ ಸ್ವಾಮಿ ಎಂಬುದೂ ಕಾರಣ~ ಎಂದು ಆರೋಪಿಸುವ ಮೂಲಕ ಸ್ವಾಮಿ ನಿತ್ಯಾನಂದ ತನ್ನನ್ನು ಸುತ್ತಿಕೊಂಡಿರುವ ವಿವಾದಕ್ಕೆ ಹೊಸ ತಿರುವೊಂದನ್ನು ನೀಡಿದರು.

 ಕೆಲವು ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡು ಮಾತನಾಡಿದರೂ ಕಾನೂನಿನ ತೊಡಕಿನ ನೆಪಹೇಳಿ ಅವರ ಹೆಸರನ್ನು ಬಹಿರಂಗಗೊಳಿಸಲಿಲ್ಲ. ಇದರ ಜತೆಗೆ ವಿದೇಶಿ ಶಿಷ್ಯೆಯರ ಆಕರ್ಷಣೆಯಿಂದ ಹಿಡಿದು ಸ್ವದೇಶಿ ಸ್ವಾಮಿಗಳ ಜತೆಗಿನ ಪೈಪೋಟಿವರೆಗೆ ಹಲವಾರು ರೋಚಕ ಸಂಗತಿಗಳನ್ನು ಅವರು ಬಿಚ್ಚಿಡುತ್ತಾ ಹೋದರು.

ನೀವು ಬ್ರಾಹ್ಮಣೇತರ ಸ್ವಾಮಿ ಆಗಿರುವುದರಿಂದಲೇ ನಿಮ್ಮ ವಿರುದ್ಧ ಪಿತೂರಿ ನಡೆದಿದೆ ಎಂದು ಹೇಳಲಾಗುತ್ತಿದೆಯಲ್ಲ?

ನಾನು ಹಲವಾರು ಕಾರಣಗಳಿಗಾಗಿ ವಿರೋಧ ಎದುರಿಸಿದ್ದೇನೆ. ನಾನು ಬ್ರಾಹ್ಮಣ ಅಲ್ಲ ಎಂಬ ಕಾರಣಕ್ಕೂ ಕೆಲವರು ವಿರೋಧಿಸಿದರು. ಅವರೆಲ್ಲಾ ಪ್ರಬಲ ವ್ಯಕ್ತಿಗಳು. ಒಮ್ಮೆ ಅವರ ಹೆಸರು ಬಹಿರಂಗಪಡಿಸಿದ ಕಾರಣ ನಾನು ಎದುರಿಸಿದ ಸಮಸ್ಯೆಗಳು ಏನು ಎಂಬುದು ನಿಮಗೇ ಗೊತ್ತಿದೆ. ಈ ಸಂದರ್ಶನದಲ್ಲಿ ಅವರ ಹೆಸರು ಬಹಿರಂಗಪಡಿಸಲಾರೆ.

ಅವರ ಹೆಸರು ಬಹಿರಂಗ ಮಾಡದೆ ಇದ್ದರೆ, ನಷ್ಟವಾಗುವುದು ನಿಮಗೇ ಅಲ್ಲವೇ?

ಅವರ ಹೆಸರನ್ನು ಬಹಿರಂಗ ಮಾಡಿದರೆ ನಾನು ಮಾನ ನಷ್ಟ ಮೊಕದ್ದಮೆ ಎದುರಿಸಬೇಕಾಗುತ್ತದೆ.

ಅತ್ಯಾಚಾರ, ವಂಚನೆ ಪ್ರಕರಣಗಳನ್ನು ಎದುರಿಸುವುದಕ್ಕಿಂತ ಮಾನನಷ್ಟ ಮೊಕದ್ದಮೆ ಎದುರಿಸುವುದು ಲೇಸಲ್ಲವೇ?

ಅವರ ಹೆಸರನ್ನು ಬಹಿರಂಗಪಡಿಸುವುದರಿಂದ ನಾನು ಈಗ ಎದುರಿಸುತ್ತಿರುವ ಪ್ರಕರಣಗಳು ಇಲ್ಲವಾಗುತ್ತವೆಯೇ? ಈಗಾಗಲೇ ಇರುವ ಸಮಸ್ಯೆಗೆ ಮತ್ತೊಂದು ಸಮಸ್ಯೆ ತಗುಲಿಸಿಕೊಂಡಂತಾಗುತ್ತದೆ.

ನೀವು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ?

ನಾನು ವಿಚಾರಣೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿಲ್ಲ. ಕಾನೂನು ಪ್ರಕ್ರಿಯೆ ಮುಂದುವರಿಯಲಿ.

ಕಟಕಟೆ ಏರುವುದು ನಿಮಗೆ ಇಷ್ಟವಿಲ್ಲ, ಹೇಗಾದರೂ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತೀರಿ ಎನ್ನುತ್ತಾರಲ್ಲ?

ಯಾರು ಏನು ಬೇಕಿದ್ದರೂ ಮಾತನಾಡಬಹುದು. ನನ್ನ ವಿರುದ್ಧ ಇರುವ ಪ್ರಕರಣವೇ ಸುಳ್ಳು. ನ್ಯಾಯಾಲಯ ಈ ಪ್ರಕರಣವನ್ನು ವಜಾ ಮಾಡುತ್ತದೆ, ನಾನು ಕಟಕಟೆ ಏರುವ ಪ್ರಮೇಯವೇ ಬರುವುದೇ ಇಲ್ಲ.

 

`ಶ್ರೀ ಶ್ರೀ ಬಗ್ಗೆ ನೋ ಕಾಮೆಂಟ್ಸ್~

ವಿದೇಶಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮತ್ತ ಬರುತ್ತಿದ್ದಾರೆ ಎಂಬ ಕಾರಣದಿಂದ ಇತರ ಅಧ್ಯಾತ್ಮ ಗುರುಗಳಿಗೆ ಆತಂಕ ಮೂಡಿದೆಯಾ? ಅಂಥ ಮಾಹಿತಿ ನಿಮ್ಮ ಬಳಿ ಇದೆಯಾ?

ಕೆಲವರು ನನ್ನ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ, ಇನ್ನು ಕೆಲವರು ಮತ್ಸರ ಬೆಳೆಸಿಕೊಂಡಿದ್ದಾರೆ ಎಂದು ಹಲವು ಜನ ನನಗೆ ಬಂದು ಹೇಳಿದ್ದಾರೆ. ಆದರೆ ಅದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ.

ಶ್ರೀ ಶ್ರೀ ರವಿಶಂಕರ್ ಗುರೂಜಿ ಬಗ್ಗೆ ಏನು ಹೇಳುವಿರಿ?

(ನಗು) ನೋ ಕಾಮೆಂಟ್ಸ್. (ಪ್ರತಿಕ್ರಿಯಿಸುವುದಿಲ್ಲ)

ಬ್ರಾಹ್ಮಣೇತರ ಆಗಿರುವುದರಿಂದ ನಿಮ್ಮ ಆಧ್ಯಾತ್ಮಿಕ ಕಾರ್ಯಗಳಿಗೆ ಅಡೆತಡೆ ಉಂಟಾಗಿತ್ತೇ?

ಸಹಜವಾಗಿಯೇ ಕೆಲವು ಕಡೆಗಳಲ್ಲಿ ಅಡೆತಡೆ ಉಂಟಾಗಿದೆ. ಬ್ರಾಹ್ಮಣ ಗುರುವಿನ ಬಳಿ ಹೋಗಿ, ಅವರ ಪ್ರವಚನ ಕೇಳಲು ಬ್ರಾಹ್ಮಣರಲ್ಲದವರಿಗೆ ಯಾವುದೇ ಸಮಸ್ಯೆ ಎದುರಿಸುವುದಿಲ್ಲ. ಆದರೆ, ಬ್ರಾಹ್ಮಣೇತರ ಗುರುವಿನ ಉಪದೇಶ ಕೇಳಲು ಬ್ರಾಹ್ಮಣ ಸಮುದಾಯದಲ್ಲಿ ಪ್ರಬಲ ವ್ಯಕ್ತಿಗಳಾದವರಿಗೆ ಯಾವಾಗಲೂ ಸಮಸ್ಯೆ ಇದೆ.

ವೇದದ ಮೌಲ್ಯಗಳನ್ನು ಬೋಧಿಸುವ ಗುರು ಎಂದು ನಿಮ್ಮನ್ನು ಬಿಂಬಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೀರಿ. ತಮಿಳರಾದರೂ ನೀವು ಅಲ್ಲಿನ ಸಂತರು ಪ್ರತಿಪಾದಿಸಿದ ಮೌಲ್ಯಗಳ ಕುರಿತು ಬೋಧಿಸುವುದಿಲ್ಲ. ಹಿಂದೂ ವೈದಿಕರಾಗಿ ಗುರುತಿಸಿಕೊಳ್ಳುವುದರಲ್ಲೇ ನಿಮಗೆ ಹೆಚ್ಚಿನ ಆಸಕ್ತಿ ಇದೆ. ಅದರಿಂದ ಬೇಗ ಜನಪ್ರಿಯತೆಯೂ ಸಿಗುತ್ತೆ ಎಂದುಕೊಂಡಿದ್ದೀರಂತೆ?

ತಮಿಳು ಆಧ್ಯಾತ್ಮಿಕ ಸಾಹಿತ್ಯದ ಬಗ್ಗೆ ತಮಿಳಿನಲ್ಲೇ ಮಾತನಾಡಿದ್ದೇನೆ. ದಯವಿಟ್ಟು ಇದನ್ನು ಅರ್ಥ ಮಾಡಿಕೊಳ್ಳಿ. ಹಿಂದುತ್ವ ಹಾಗೂ ಹಿಂದೂ ಪರಂಪರೆಯ ಎಲ್ಲ ಧಾರೆಗಳನ್ನು ಪ್ರತಿನಿಧಿಸುವ ಗುರು ಎಂದು ಗುರುತಿಸಕೊಳ್ಳುವ ಇಚ್ಛೆ ನನ್ನದು.

ನೀವು ಎದುರಿಸುತ್ತಿರುವ ಸಮಸ್ಯೆಗಳಿಗೆ ಕ್ರಿಶ್ಚಿಯನ್ ಪಿತೂರಿಯೇ ಕಾರಣ ಎಂದು ನಿಮ್ಮ ಕೆಲ ಭಕ್ತರು ಹೇಳುತ್ತಿದ್ದಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ?

ಈ ಸಮಸ್ಯೆಗಳ ಹಿಂದೆ ಕ್ರಿಶ್ಚಿಯನ್ ಪಿತೂರಿಯೂ ಇದೆ. ನಾನು ಹಿಂದೂ ಧರ್ಮವನ್ನು ವ್ಯಾಪಕವಾಗಿ ಮತ್ತು ಅತ್ಯಂತ ವೇಗವಾಗಿ ಬೆಳೆಸುತ್ತಿರುವುದು, ನಾನು ಪ್ರಭಾವಿ ಗುರು ಆಗಿರುವುದು ಹಾಗೂ ಅಂತರರಾಷ್ಟ್ರೀಯ  ಧಾರ್ಮಿಕ ಪತ್ರಿಕೆಯೊಂದು ನನ್ನನ್ನು ವಿಶ್ವದ 100 ಪ್ರಭಾವಿ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬನನ್ನಾಗಿ ಗುರುತಿಸಿರುವುದು ಕಾರಣ.

ಅಧ್ಯಾತ್ಮದ ವ್ಯವಹಾರದಲ್ಲಿ ನೀವಿದ್ದೀರಿ ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ನಿಮಗೆ ಈ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳು ಇದ್ದಾರೆ ಎಂದು ಅನಿಸುವುದಿಲ್ಲವೇ?

ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ನಾನು ಅಂಥ ಆಧ್ಯಾತ್ಮಿಕ ವ್ಯವಹಾರದಲ್ಲಿ ಇಲ್ಲ. ನನ್ನ ಚಟುವಟಿಕೆಗಳಿಂದ ಯಾರಿಗಾದರೂ ಆತಂಕ ಮೂಡಿದ್ದರೆ ಅವರಿಗೂ ಒಂದು ಮಾತು ಹೇಳುವೆ; ನಮ್ಮೆಲ್ಲರ ಎದುರು ವಿಸ್ತಾರವಾದ ನೀಲಿ ಸಾಗರವಿದೆ. ನಮಗೆಲ್ಲರಿಗೂ ಬೇಕಾದಷ್ಟು ಅಲ್ಲಿದೆ.

ವಿದೇಶಿ ವ್ಯಕ್ತಿಗಳಿಗೆ ಬೋಧನೆ ಮಾಡುವುದರಲ್ಲೇ ನಿಮಗೆ ಹೆಚ್ಚಿನ ಆಸಕ್ತಿ ಇದೆ. ಎಳೆಯ ವಯಸ್ಸಿನಿಂದಲೂ ನೀವು ವಿದೇಶಿ ವ್ಯಕ್ತಿಗಳೆಡೆ ಆಕರ್ಷಿತರಾಗಿದ್ದೀರಿ ಎಂಬ ಮಾತಿನ ಬಗ್ಗೆ ಏನು ಹೇಳುತ್ತೀರಿ?

ಹಾಗೇನೂ ಇಲ್ಲ. ನನ್ನ ತರಗತಿಗಳು ಎಲ್ಲರಿಗೂ ಮುಕ್ತವಾಗಿವೆ. ಯಾರು ಬೇಕಿದ್ದರೂ ಭಾಗವಹಿಸಬಹುದು.

ವಿದೇಶಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಭಕ್ತರಾಗಿದ್ದಾರೆ ಎಂದು ಹೇಳುತ್ತಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ?

ಈ ಮಾತಿನಲ್ಲಿ ಸತ್ಯವಿಲ್ಲ. ನನ್ನ ಭಕ್ತರ ಪೈಕಿ ಶೇಕಡ 60ರಷ್ಟು ಪುರುಷರು, ಶೇ 40ರಷ್ಟು ಮಹಿಳೆಯರು. ಆಶ್ರಮದಲ್ಲಿ ಮಹಿಳೆಯರೇ ಹೆಚ್ಚು ಎಂದು ಕೆಲವರು ಹೇಳುತ್ತಾರೆ. ಆದರೆ ಅದು ಸತ್ಯವಲ್ಲ. ಪುರುಷ ಭಕ್ತರು ಯಾವಾಗಲು ಬೇರೆ ಬೇರೆ ಕಾರ್ಯಗಳಿಗಾಗಿ ಹೊರಗೆ ಹೋಗಿರುತ್ತಾರೆ. ಹೀಗಾಗಿ ಆಶ್ರಮದಲ್ಲಿ ಪುರುಷ ಭಕ್ತರು ಹೆಚ್ಚಾಗಿ ಕಾಣುವುದಿಲ್ಲ.

2010ರಲ್ಲಿ ಕರ್ನಾಟಕದ ಅನೇಕ ಸ್ವಾಮೀಜಿಗಳು ಪರೋಕ್ಷವಾಗಿಯಾದರೂ ನಿಮ್ಮ ಬೆಂಬಲಕ್ಕೆ ನಿಂತರು. ಸತ್ಯ ಹೊರಬರುವವರೆಗೂ ಜನ ಕಾಯಬೇಕು ಎಂದು ಅವರು ಆಗ ಹೇಳಿದರು. ಆದರೆ ಇತ್ತೀಚೆಗೆ ನಿಮ್ಮ ವಿರುದ್ಧ ಬಹಿರಂಗವಾಗಿ ಕೇಳಿಬಂದ ಆರೋಪದ ನಂತರ, ನಿಮ್ಮಿಂದಾಗಿ ತಮ್ಮ ಘನತೆಗೂ ಚ್ಯುತಿ ಬಂದೀತು ಎಂಬ ಭಾವನೆ ಆ ಸ್ವಾಮೀಜಿಗಳಲ್ಲಿ ಮೂಡಿರಬಹುದೇ?

ಅವರೆಲ್ಲರಿಗೂ ತಪ್ಪು ಮಾಹಿತಿ ನೀಡಲಾಗಿದೆ. ಅವರೆಲ್ಲರನ್ನೂ ಸಂಪರ್ಕಿಸಿ ಸ್ಪಷ್ಟನೆ ನೀಡಲು ಪ್ರಯತ್ನ ಮಾಡುತ್ತಿದ್ದೇನೆ. ವಿಷಯ ಏನು ಎಂಬುದನ್ನು ಅರ್ಥ ಮಾಡಿಸುತ್ತೇನೆ, ಅವರ ವಿಶ್ವಾಸ ಗಳಿಸುತ್ತೇನೆ.

ಬೇರೆ ಸ್ವಾಮೀಜಿಗಳು ತಮ್ಮ ಬೆಡ್‌ರೂಂನಲ್ಲಿ ಕಡ್ಡಾಯವಾಗಿ ಸಿಸಿಟಿವಿಗಳನ್ನು ಹಾಕಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದೀರಿ. ಈ ಹೇಳಿಕೆ ನೀಡುವ ಅವಶ್ಯಕತೆ ಇತ್ತಾ?

ನನ್ನ ಮೇಲೆ ಅವರೆಲ್ಲ ಸುಳ್ಳಿನ ಆಧಾರದಲ್ಲಿ ವೃಥಾ ಆರೋಪ ಮಾಡುವ ಸಂದರ್ಭದಲ್ಲಿ ಈ ರೀತಿಯಾಗಿ ಪ್ರತಿಕ್ರಿಯಿಸಿದೆ. ನಾನು ಎಲ್ಲ ಸ್ವಾಮೀಜಿಗಳ ಕುರಿತು ಹಾಗೆ ಹೇಳಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ ಸ್ವಾಮೀಜಿಗಳಿಗೆ ಮಾತ್ರ ಈ ಹೇಳಿಕೆ ಅನ್ವಯಿಸುತ್ತದೆ. ನನಗೆ ನೋವು ಆಗುವಂತೆ ಹೇಳಿಕೆ ನೀಡಿದವರಿಗೆ ಸತ್ಯವನ್ನು ತಿಳಿದುಕೊಳ್ಳಲು ಆಸಕ್ತಿಯೂ ಇಲ್ಲ.

ಈ ಆರೋಪಗಳು ನಿಮ್ಮ ವಿರುದ್ಧ ಕೇಳಿಬಾರದಿದ್ದರೆ, ನಿಮ್ಮನ್ನು ಎರಡನೆಯ ಸ್ವಾಮಿ ವಿವೇಕಾನಂದ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದೀರಿ ಎಂದು ಹೇಳಲಾಗುತ್ತದಲ್ಲ?

ನಾನು ಸ್ವಾಮಿ ವಿವೇಕಾನಂದರಂತೆ ಎಂದು ಯಾವತ್ತೂ ಹೇಳಿಕೊಂಡಿಲ್ಲ. ವಿವೇಕಾನಂದರ ವ್ಯಕ್ತಿತ್ವದಿಂದ ಪ್ರಭಾವಿತನಾಗಿ ಸ್ಫೂರ್ತಿ ಪಡೆದಿದ್ದೇನೆ. ಅವರಂತೆಯೇ ನಾನು ಜಗತ್ತಿನ ಸೇವೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಬಗೆಗಿನ ಈ ಗಾಳಿಸುದ್ದಿಗಳು, ಆರೋಪಗಳು ನನ್ನ ಸಾಧನೆಯ ಮಾರ್ಗದಿಂದ ನನ್ನನ್ನು ವಿಮುಖನನ್ನಾಗಿಸಲು ಸಾಧ್ಯವಿಲ್ಲ.

ನೀವು ಯಾವ ರೀತಿ ಗುರುತಿಸಿಕೊಳ್ಳಲು ಇಷ್ಟ ಪಡುತ್ತೀರಿ, ದೇವರೆಂದೇ?

ನಾನು ದೇವರಾಗಿ ಕಾಣಿಸಿಕೊಳ್ಳುವುದು ನನಗೆ ಬೇಡ. ದೈವತ್ವದ ಅನುಭವ ನೀಡುವ ಸಾಮಾನ್ಯ ವ್ಯಕ್ತಿಯಾಗಿ ಕಂಡು ಬರಲು ಇಚ್ಛಿಸುತ್ತೇನೆ. ಈ ಎಲ್ಲ ತೊಂದರೆಗಳು ಮಾಯವಾಗಿ ನನ್ನ ಮುಗ್ಧತೆ ಸಾಬೀತಾಗಿ ಪ್ರಕಾಶಮಾನವಾಗಿ ಪ್ರಖರತೆಯೊಂದಿಗೆ ಸಂಭ್ರಮಿಸುತ್ತಾ ಹೊರ ಬರುತ್ತೇನೆ.

ನೀವು ಕಾವಿ ಅಥವಾ ಕೇಸರಿ ಬಟ್ಟೆ ತೊಟ್ಟಿರುವುದು ಏಕೆ?

ಅದನ್ನು ಕೊಟ್ಟಿದ್ದು ನನಗೆ ದೀಕ್ಷೆ ನೀಡಿದ ನನ್ನ ಗುರು.

ಅವರು ಕೊಟ್ಟ ಕಾರಣ ಇದನ್ನು ತೊಟ್ಟಿದ್ದೋ ಅಥವಾ ಇಷ್ಟಪಟ್ಟು ಧರಿಸಿದ್ದೋ?

ನಾನು ಮನಪೂರ್ವಕವಾಗಿ ಕಾವಿ ಮತ್ತು ಕೇಸರಿ ಬಟ್ಟೆ ಧರಿಸುತ್ತೇನೆ.

ಕೇವಲ ಬ್ರಹ್ಮಚಾರಿ ಆಗಿರುವುದಕ್ಕೂ, ಸನ್ಯಾಸಿ ಆಗಿರುವುದಕ್ಕೂ ವ್ಯತ್ಯಾಸವಿದೆ. ಗೃಹಸ್ಥಾಶ್ರಮ ಸ್ವೀಕರಿಸಿದ ವ್ಯಕ್ತಿ ಕೂಡ ಸನ್ಯಾಸಿ ಆಗಬಹುದು. ಬ್ರಹ್ಮಚಾರಿಯು ಸನ್ಯಾಸಿ ಆಗಿರಲೇಬೇಕು ಎಂದಿಲ್ಲ. ಅಥವಾ ವ್ಯಕ್ತಿಯೊಬ್ಬ ಸನ್ಯಾಸತ್ವ ಪಡೆಯುವ ಮೊದಲು ಬ್ರಹ್ಮಚಾರಿಯಾಗಿರಬೇಕು ಅಂತಲೂ ಇಲ್ಲ. ನಿಮಗೆ ಈ ವಿಚಾರಗಳ ಗೊಂದಲವಾಗಿದೆಯೇ?

(ನಗುತ್ತಾ...) ನನ್ನಲ್ಲಿ ಇಂಥ ಗೊಂದಲಗಳು ಯಾವತ್ತೂ ಇರಲಿಲ್ಲ.

ನಿಮ್ಮನ್ನು ನೀವು ಸನ್ಯಾಸಿ ಎಂದು ಕರೆದುಕೊಳ್ಳಲು ಬಯಸುತ್ತೀರ?

ಹಾಗೆಂದು ನೀವು ಕರೆಯಬಹುದು.

ನಿಮ್ಮನ್ನು ಸನ್ಯಾಸಿ ಎಂದು ನೀವು ಕರೆದುಕೊಳ್ಳುತ್ತೀರ?

ಹೌದು. ನನ್ನನ್ನು ನಾನು ಸನ್ಯಾಸಿ ಎಂದೇ ಕರೆದುಕೊಳ್ಳುತ್ತೇನೆ.

ಸನ್ಯಾಸತ್ವ ಅಂದರೆ ಏನು, ಕಾವಿ ಬಟ್ಟೆ ಧರಿಸುವುದು ಏಕೆ ಎಂಬುದು ನಿಮಗೆ ಗೊತ್ತು. ಆದರೆ, ಕೆಲವೊಮ್ಮೆ ನೀವು ಕಪ್ಪು, ಕೆಂಪು ಅಥವಾ ಇತರೆ ಬಣ್ಣದ ವಸ್ತ್ರ ಧರಿಸುವುದು ಏಕೆ? ನೀವು ಸನ್ಯಾಸತ್ವವನ್ನು ಕಟ್ಟುನಿಟ್ಟಾಗಿ  ಪಾಲಿಸುವುದಿಲ್ಲ ಎಂಬ ಸಂದೇಶ ನೀಡುವ ಉದ್ದೇಶದಿಂದಲೇ?

ಅಂಥ ವಸ್ತ್ರಗಳನ್ನು ಧರಿಸುವುದರಲ್ಲಿ ಯಾವುದೇ ತಪ್ಪಿಲ್ಲ.

ನಿಮ್ಮ ಕೆಲ ಶಿಷ್ಯರು ಸತ್ಯ ತಿಳಿಯಲು ಬಯಸಿದ್ದಾರೆ. ಪ್ರಶ್ನಿಸದೇ ನಿಮ್ಮನ್ನು ಒಪ್ಪಿಕೊಳ್ಳಲಾಗದ ತೊಳಲಾಟದಲ್ಲಿ ಅವರು ಸಿಲುಕಿದ್ದಾರೆ. ಆ ಶಿಷ್ಯರ ಸಂಕಟದ ಪರಿಸ್ಥಿತಿಗೆ ನೀವೇ ಕಾರಣರಲ್ಲವೇ?

ನನ್ನ ಶಿಷ್ಯರ ಸಂಕಟದ ಪರಿಸ್ಥಿತಿಗೆ ಕಾರಣ ನಾನಲ್ಲ; ಎಲ್ಲ ಕಾಲಘಟ್ಟಗಳಲ್ಲೂ ಆಧ್ಯಾತ್ಮಿಕ ಆಂದೋಲನಗಳು ಕಠಿಣ ಪರೀಕ್ಷೆಗಳಿಗೆ ಒಳಗಾಗಿವೆ. ಎಲ್ಲ ಆಧ್ಯಾತ್ಮಿಕ ನಾಯಕರೂ ಕೆಲ ಸಮಯದವರೆಗೆ ಅಂತಹ ಸಮಸ್ಯೆಗಳನ್ನು ಎದುರಿಸಿದವರೇ ಆಗಿದ್ದಾರೆ. ವಾಸ್ತವವಲ್ಲದ ಮತ್ತು ಕೂಲಂಕಷವಾಗಿ ಪರಿಶೀಲಿಸಲಾಗದ ಅಸ್ಪಷ್ಟ ಮೂಲಗಳಿಂದ ಬರುವ ಅಭಿಪ್ರಾಯಗಳ ಬಗ್ಗೆ ತಲೆಕೆಡಿಸಿಕೊಳ್ಳದಂತೆ ನನ್ನ ಶಿಷ್ಯರಿಗೆ ಕಿವಿ ಮಾತು ಹೇಳಿದ್ದೇನೆ. ಆಧಾರ ರಹಿತ ಆರೋಪಗಳ ಬಗ್ಗೆ ಚಿಂತಿತರಾಗುವ ಬದಲು ಪರಿಪೂರ್ಣವಾದ ವೈಯಕ್ತಿಕ ಆಧ್ಯಾತ್ಮಿಕ ಅನುಭವದಲ್ಲಿ ಜೀವಿಸುವಂತೆ ಅವರಿಗೆ ಸೂಚಿಸಿದ್ದೇನೆ.

ಎಲ್ಲ ಆಧ್ಯಾತ್ಮಿಕ ಆಂದೋಲನಗಳು ಕಠಿಣ ಪರಿಸ್ಥಿತಿಗಳಿಗೆ ಒಳಗಾಗಿವೆ ಎಂದು ನೀವು ಹೇಳಿದಿರಿ. ಬಹಳಷ್ಟು ಪ್ರಕರಣಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ಸಂಬಂಧಿಸಿದಂತೆ ವಿವಾದಗಳು ಉಂಟಾಗಿದ್ದವು. ಆದರೆ ಹಿಂದೆಂದೂ ಯಾವುದೇ ಆಧ್ಯಾತ್ಮಿಕ ನಾಯಕನ ವೈಯಕ್ತಿಕ ನಡೆವಳಿಕೆ, ಚಾರಿತ್ರ್ಯದ ಕಾರಣಕ್ಕೆ ವಿಚಾರಣೆಗೆ ಒಳಗಾಗಿರಲಿಲ್ಲ ಅಲ್ಲವೇ?

ಹಾಗಲ್ಲ. ವ್ಯಕ್ತಿತ್ವದ ಮೇಲೆ ನಡೆದ ದಾಳಿಗಳಿಗೆ ಸಂಬಂಧಿಸಿದಂತೆ ನಾನು ಸಾವಿರಾರು ಉದಾಹರಣೆಗಳನ್ನು ನೀಡಬಲ್ಲೆ. ತತ್ವದ ಮೇಲಿನ ದಾಳಿ ಆರಂಭ ಮಾತ್ರ. ತತ್ವವು ವ್ಯಕ್ತಿತ್ವದ ವಿಸ್ತರಣೆ ಅಥವಾ ವಿಸ್ತೃತ ಭಾಗ. ಬುದ್ಧ ಒಬ್ಬ ಗುರು, ಆತನ ಸಂದೇಶ ದಮ್ಮ, ಆತನ ಸಂಘಟನೆ ಸಂಘ- ಅವೆಲ್ಲವೂ ಅಂತಿಮವಾಗಿ ಬುದ್ಧನ ವ್ಯಕ್ತಿತ್ವದ ವಿಸ್ತೃತ ಭಾಗವೇ ಆಗಿವೆ. ಗುರುವಿನ ಮೇಲಿನ ವ್ಯಕ್ತಿಗತ ದಾಳಿಯು, ಆ ಗುರುವಿನ ಸಂದೇಶ ಮತ್ತು ಸಂಘಟನೆಯ ಮೇಲಿನ ದಾಳಿಯೇ ಆಗಿದೆ. ಒಬ್ಬ ಯುವ ಆಧ್ಯಾತ್ಮಿಕ ನಾಯಕನ ಮೇಲೆ ಜನರ ಗಮನ ಸೆಳೆಯುವಂತೆ ಮಾಡಬಹುದಾದಂತಹ ಆರೋಪ ಲೈಂಗಿಕ ದುರ್ನಡತೆಯ ಆರೋಪ. ಅಂತಹ ಆರೋಪವನ್ನೇ ನನ್ನ ಮೇಲೆ ಹೊರಿಸಲಾಗಿದೆಯಷ್ಟೆ.

`ಟಿಆರ್‌ಪಿ, ಲಾಭಕ್ಕಾಗಿ ದೂಷಣೆ~

ಮಾಧ್ಯಮಗಳು ನಿಮ್ಮ ವಿರುದ್ಧ ಇವೆಯೇ?

ಎಲ್ಲರೂ ಅಲ್ಲ. ಕೆಲವು ಮಾಧ್ಯಮಗಳು ಇದನ್ನು ಲಾಭ ಗಳಿಸಲು ಮಾಡುತ್ತಿವೆ. ಯಾರನ್ನಾದರೂ ದೂಷಿಸಿದರೆ ಮಾಧ್ಯಮಗಳ ಟಿಆರ್‌ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಅರ್ಥಾತ್ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ. ಕೆಲವು ಮಾಧ್ಯಮ ಸಂಸ್ಥೆಗಳು ಇನ್ನೊಬ್ಬರನ್ನು ದೂಷಿಸುವ ಮೂಲಕವೇ ಬೆಳೆಯುವ ಪ್ರಯತ್ನ ಮಾಡುತ್ತವೆ. ಅಂಥ ಮಾಧ್ಯಮ ಸಂಸ್ಥೆಗಳು ಮಾತ್ರ ನನ್ನ ವಿರುದ್ಧ ಇವೆ.

ನಿಮ್ಮನ್ನು ಕೆಲವರು ನಿಂದಿಸುವುದು ಏಕೆ? ಅದಕ್ಕೆ ಪ್ರಚೋದನೆ ಏನು?

ನನ್ನನ್ನು ನಿಂದಿಸಲು ಕೆಲವರಿಗೆ ಪ್ರಚೋದನೆಯ ಅಗತ್ಯವೇ ಇಲ್ಲ. ಹಲವರು ಕೇವಲ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ನಿಂದಿಸುತ್ತಾರೆ. `ನಿಂದನೆ~ಯ ಮಾರಾಟ ಬಹಳ ಸುಲಭ.

ನಿಮ್ಮ ಬಂಧನವನ್ನು ಮಾಧ್ಯಮದ ಜಯ ಎಂದು ಬಣ್ಣಿಸಲಾಗುತ್ತಿದೆಯಲ್ಲ?

ಇರಲೂಬಹುದು. ಇದು ತಮ್ಮ ಜಯ ಎಂಬುದಾಗಿ ಅವರು ಯೋಚಿಸುತ್ತಿರಲೂಬಹುದು. ಎಲ್ಲ ಮಾಧ್ಯಮಗಳ ಬಗ್ಗೆ ನಾನು ಕೆಟ್ಟ ಅಭಿಪ್ರಾಯ ಹೊಂದಿಲ್ಲ. ಆದರೆ, ಕೆಲವರು ನನ್ನ ವಿರುದ್ಧ ಸುಳ್ಳು ಪ್ರಚಾರ ಆಂದೋಲನ ನಡೆಸಿ ನನ್ನನ್ನು ಬಂಧನಕ್ಕೆ ಒಳಪಡಿಸುವಲ್ಲಿ ಯಶಸ್ವಿಯಾದರು. ಅವರಿಂದ ಸ್ವಲ್ಪ ಮಟ್ಟಿಗೆ ಹಾನಿ ಉಂಟಾಗಿದೆ. ಇದೆಲ್ಲ ತಾತ್ಕಾಲಿಕ. ನನಗೆ ತೊಂದರೆ ನೀಡಲು ಮುಂದಾದವರೇ ಮುಂದೊಮ್ಮೆ ಅವರೇ ಸುಸ್ತಾಗಿ  ಸಂಕಟಕ್ಕೀಡಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT