ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳ ಶುಭ ಹಾರೈಕೆಯ ಬ್ಯಾಟ್ ದೋನಿಗೆ ಹಸ್ತಾಂತರ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಂದಹಾಸ ಬೀರುತ್ತಾ ಆಗಮಿಸಿದ ಮಹೇಂದ್ರ ಸಿಂಗ್ ದೋನಿ ಮುಖದಲ್ಲಿ ವಿಶ್ವಕಪ್ ಗೆಲ್ಲುವ ಉತ್ಸಾಹ ಎದ್ದುಕಾಣುತ್ತಿತ್ತು. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ಭಾರ ‘ಮಹಿ’ ಮೇಲಿರುವುದು ನಿಜ. ಭಾರತಕ್ಕೆ ಟ್ರೋಫಿ ಗೆದ್ದುಕೊಡಬೇಕು ಎಂಬ ಒತ್ತಡದಲ್ಲಿ ಅವರು ಇದ್ದಾರೆ.

ಆದರೆ ಶನಿವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡ ದೋನಿ ಅವರ ಮುಖದಲ್ಲಿ ನಗು ಮರೆಯಾಗಲೇ ಇಲ್ಲ. ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ಕ್ರಿಕೆಟ್ ತಂಡಕ್ಕೆ ಶುಭ ಕೋರಲು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಆಯೋಜಿಸಿದ್ದ ಹಸ್ತಾಕ್ಷರ ಸಂಗ್ರಹ ಕಾರ್ಯಕ್ರಮಕ್ಕೆ ತೆರೆ ಎಳೆಯಲು ಆಯೋಜಿಸಿದ್ದ ಸಮಾರಂಭಕ್ಕೆ ದೋನಿ ‘ಗ್ಲಾಮರ್’ ಟಚ್ ನೀಡಿದರು,

ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ತಿಲಕ್ ಕುಮಾರ್ ಅವರು ‘ಟೀಮ್ ಇಂಡಿಯಾ’ ನಾಯಕ ದೋನಿ ಅವರಿಗೆ ಅಭಿಮಾನಿಗಳ ಸಹಿ ಒಳಗೊಂಡಿರುವ ಬ್ಯಾಟ್ ಹಸ್ತಾಂತರಿಸಿದರು. ‘ನನಗೆ ಈ ಬ್ಯಾಟ್‌ನಲ್ಲಿ ಆಡಲು ಸಾಧ್ಯವಿಲ್ಲ’ ಎಂದು ಬೃಹತ್ ಗಾತ್ರದ ಬ್ಯಾಟ್‌ನ್ನು ಎತ್ತಿಹಿಡಿದ ದೋನಿ ಹಾಸ್ಯದ ಧಾಟಿಯಲ್ಲಿ ಹೇಳಿದರು.

ಕಳೆದ ಹನ್ನೊಂದು ದಿನಗಳ ಅವಧಿಯಲ್ಲಿ ಉದ್ಯಾನನಗರಿಯ ಲಕ್ಷಕ್ಕೂ ಅಧಿಕ ಕ್ರಿಕೆಟ್ ಪ್ರಿಯರು ಬೃಹತ್ ಬ್ಯಾಟ್ ಮೇಲೆ ತಮ್ಮ ಶುಭ ಸಂದೇಶ ಬರೆದು ಮಹೇಂದ್ರ ಸಿಂಗ್ ದೋನಿ ಬಳಗವನ್ನು ಹಾರೈಸಿದ್ದಾರಲ್ಲದೆ, ‘ಭಾರತ ತಂಡ ಯಶಸ್ವಿಯಾಗಲಿ’ ಎಂದು ಶುಭ ಕೋರಿದ್ದಾರೆ.

ಬೃಹತ್ ಬ್ಯಾಟ್‌ನ್ನು ಹೊತ್ತುಕೊಂಡ ಕ್ರಿಕೆಟ್ ರಥ ಫೆಬ್ರುವರಿ 2 ರಂದು ತನ್ನ ಸಂಚಾರ ಆರಂಭಿಸಿತ್ತು. ಆ ಬಳಿಕ ಹತ್ತು ದಿನಗಳ ಕಾಲ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಕ್ರಿಕೆಟ್ ಪ್ರಿಯರಿಗೆ ಭಾರತ ತಂಡಕ್ಕೆ ಶುಭ ಕೋರುವ ಅವಕಾಶ ಕಲ್ಪಿಸಿಕೊಟ್ಟಿತ್ತು.

‘ಬನ್ನಿ ನಮ್ಮೊಂದಿಗೆ ಭಾರತ ಕ್ರಿಕೆಟ್ ತಂಡದ ವಿಜಯಕ್ಕೆ ಹಾರೈಸಿ’ ಎಂಬ ಘೋಷಣೆಯೊಂದಿಗೆ ನಡೆದ ಕ್ರಿಕೆಟ್ ರಥದ ಯಾತ್ರೆಯ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕ್ರಿಕೆಟಿಗ ರಾಹುಲ್ ದ್ರಾವಿಡ್, ಚೆಸ್ ಸ್ಪರ್ಧಿ ವಿಶ್ವನಾಥನ್ ಆನಂದ್ ಒಳಗೊಂಡಂತೆ ಹಲವರು ಬ್ಯಾಟ್ ಮೇಲೆ ಹಸ್ತಾಕ್ಷರ ಹಾಕಿದ್ದರು.

ಈ ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಕಡೆಗಳಲ್ಲಿ ಭಾರತ ತಂಡದ ಅಭಿಮಾನಿಗಳಿಗಾಗಿ ‘ಕ್ರಿಕೆಟ್ ಜೋನ್’ ರಂಜನೆಯ ಆಟವನ್ನೂ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT