ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಗೆಲುವಿಗೆ ಅಧಿಕಾರ ಸಹಕಾರಿಯಾಗಿತ್ತೇ?

1977ರಿಂದ 2009ರವರೆಗಿನ ಸೋಲು–ಗೆಲುವುಗಳ ಹಿನ್ನೋಟ
Last Updated 26 ಮಾರ್ಚ್ 2014, 9:22 IST
ಅಕ್ಷರ ಗಾತ್ರ

ದಾವಣಗೆರೆ: ಅದು 1977ರ ಚುನಾವಣೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ತುರ್ತು ಪರಿಸ್ಥಿತಿ ನಂತರದ ಸಮಯ. ಆಗ ರಾಜ್ಯದಲ್ಲೂ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಎರಡೂ ಕಡೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಅದೇ ಮೊದಲ ಬಾರಿಗೆ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ವಿರುದ್ಧವಾಗಿ ಕೆಲಸ ಮಾಡಿದ ಕಾರಣ ಹಾಗೂ ತುರ್ತು ಪರಿಸ್ಥಿತಿಯ ಅತಿರೇಕ ಕಾಂಗ್ರೆಸ್‌ ವಿರೋಧಿಗಳನ್ನು ಒಟ್ಟುಗೂಡಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವು ಕಷ್ಟ ಎಂದು ಭಾವಿಸಲಾಗಿತ್ತು. ಜನತಾ ಪರಿವಾರದ ಅಭ್ಯರ್ಥಿಗೆ ಅನುಕೂಲ ಎಂದೇ ಭಾವಿಸಲಾಗಿತ್ತು.

ಇಂತಹ ಎಲ್ಲ ಅನನುಕೂಲದ ನಡುವೆಯೂ ಕಾಂಗ್ರೆಸ್‌ ಅಭ್ಯರ್ಥಿ ಕೊಂಡಜ್ಜಿ ಬಸಪ್ಪ ಪ್ರತಿಸ್ಪರ್ಧಿ ಜನತಾ ಪರಿವಾರದ ಕೆ.ಜಿ.ಮಹೇಶ್ವರಪ್ಪ ಅವರನ್ನು 92,122 ಮತಗಳ ಅಂತರದಿಂದ ಸೋಲಿಸಿ ಸಂಸತ್‌ ಪ್ರವೇಶಿಸಿದ್ದರು (ಗೆದ್ದ ನಂತರ ಜನತಾ ಪರಿವಾರ ಸೇರಿ ಕೇಂದ್ರ ಸಚಿವರೂ ಆಗಿದ್ದರು!).

1980ರಲ್ಲಿ ಚುನಾವಣೆ ನಡೆದಾಗ ಕೇಂದ್ರದಲ್ಲಿ ಜನತಾ ಪರಿವಾರದ ಉಸ್ತುವಾರಿ ಸರ್ಕಾರವಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತವಿತ್ತು. ಬಹು ನಿರೀಕ್ಷೆ ಇದ್ದ ಜನತಾ ಪರಿವಾರದ ಸರ್ಕಾರ ಆಂತರಿಕ ಕಿತ್ತಾಟದಿಂದ ಕೇಂದ್ರದಲ್ಲಿ ಸುಭದ್ರ ಸರ್ಕಾರ ನೀಡಲು ಕಾಂಗ್ರೆಸ್‌ನಿಂದ ಸಾಧ್ಯ ಎನ್ನುವ ಭಾವನೆ ಮೂಡಿತ್ತು. ಹಾಗಾಗಿ, ಕಾಂಗ್ರೆಸ್‌ನ ಟಿ.ವಿ.ಚಂದ್ರಶೇಖರಪ್ಪ ಅಂದು ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದ್ದ ಜನತಾ ಪರಿವಾರದ ಕೊಂಡಜ್ಜಿ ಬಸಪ್ಪ ಅವರನ್ನು 1,40,996 ಮತಗಳ ಭಾರಿ ಅಂತರದಿಂದ ಸೋಲಿಸಿದ್ದರು.

 1984 ನಡೆದ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಹಾಗೂ ರಾಜ್ಯದಲ್ಲಿ ಜನತಾ ಪರಿವಾರ ಅಧಿಕಾರದಲ್ಲಿತ್ತು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನಪ್ರಿಯತೆಯಲ್ಲಿ ಜನತಾ ಪರಿವಾರದ ಅಭ್ಯರ್ಥಿ  ಜನತಾ ಪಕ್ಷದ ಕೆ.ಜಿ.ಮಹೇಶ್ವರಪ್ಪ ಗೆಲುವು ಸಾಧಿಸಬಹುದು ಎಂದು ನಿರೀಕ್ಷೆ ಇತ್ತು. ಆದರೆ, ಅವರನ್ನು ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್‌ 65,741 ಮತಗಳ ಅಂತರದಲ್ಲಿ ಮಣಿಸಿದ್ದರು.

1989ರಲ್ಲಿ ಕೇಂದ್ರದಲ್ಲಿ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜನಪ್ರಿಯತೆ ಕಳೆದುಕೊಂಡಿತ್ತು. ರಾಜ್ಯದಲ್ಲಿ ಜನತಾ ಪರಿವಾರದ ಜನಪ್ರಿಯತೆ ಇಳಿಮುಖವಾಗಿತ್ತು. ಅಂತಹ ಸಂದರ್ಭದಲ್ಲೂ ಜನತಾದಳದ ಕೆ.ಜಿ.ಮಹೇಶ್ವರಪ್ಪ ಅವರನ್ನು ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್‌ 76,120 ಮತಗಳ ಅಂತರದಿಂದ ಸೋಲಿಸಿದ್ದರು.

1991ರಲ್ಲಿ ಕೇಂದ್ರದಲ್ಲಿ ಜನತಾ ಪರಿವಾರದ ಕಿತ್ತಾಟ ಮತ್ತೆ ಬೀದಿಗೆ ಬಂದಿತ್ತು. ದೇಶದಲ್ಲಿ ಬಿಜೆಪಿ ಅಲೆ ಬೀಸಲಾರಂಭಿಸಿತ್ತು. ರಾಜ್ಯದಲ್ಲಿ ಬಂಗಾರಪ್ಪ ಅವರ ಕಾಂಗ್ರೆಸ್‌ ಸರ್ಕಾರವಿತ್ತು. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್‌ ಬಿಜೆಪಿಯ ಎಸ್‌.ಎ.ರವೀಂದ್ರನಾಥ್ ವಿರುದ್ಧ 455 ಮತಗಳ ಅಂತರದ ಗೆಲುವು ಪಡೆದಿದ್ದರು.

1996ರಲ್ಲಿ ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್ ನೇತೃತ್ವದ ಸರ್ಕಾರ ಜನಪ್ರಿಯತೆ ಕಳೆದುಕೊಂಡಿತ್ತು. ರಾಜ್ಯದಲ್ಲಿ ಜನತಾದಳದ ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. ಬಿಜೆಪಿ ಅಲೆಯೂ ಜೋರಿತ್ತು. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ ಬಿಜೆಪಿಯ ಮಲ್ಲಿಕಾರ್ಜುನಪ್ಪ ಜನತಾದಳದ ಎಸ್‌.ಎಚ್‌. ಪಟೇಲರ ವಿರುದ್ಧ 97,087 ಅಂತರದ ಗೆಲುವು ದಾಖಲಿಸಿದ್ದರು. ಕಾಂಗ್ರೆಸ್‌ ಮೂರನೇ ಸ್ಥಾನ ಪಡೆದಿತ್ತು.

1998ರಲ್ಲಿ ಕೇಂದ್ರದಲ್ಲಿ ಮತ್ತೆ ಅಸ್ಥಿರತೆ ತಲೆದೋರಿತ್ತು. ಜನತಾ ಪರಿವಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್‌ ಹಿಂದಕ್ಕೆ ಪಡೆದಿತ್ತು. ಬಿಜೆಪಿಗೆ ಬೆಂಬಲ ದೊರೆಯಲಿಲ್ಲ. ರಾಜ್ಯದಲ್ಲಿ ಜನತಾದಳದ ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿಯಾಗಿದ್ದರು. ಆದರೆ, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ ಕಾಂಗ್ರೆಸ್‌ನ ಶಿವಶಂಕರಪ್ಪ  ಬಿಜೆಪಿಯ ಮಲ್ಲಿಕಾರ್ಜುನಪ್ಪ ಅವರನ್ನು 11,332 ಮತಗಳ ಅಂತರದಿಂದ ಮಣಿಸಿದ್ದರು.

1999ರಲ್ಲಿ ಕೇಂದ್ರದಲ್ಲಿ ಬಿಜೆಪಿ 13 ತಿಂಗಳು ಆಳ್ವಿಕೆ ನಡೆಸಿತ್ತು. ಅಲ್ಪ ಅವಧಿಗೆ ಅಧಿಕಾರ ಕಳೆದಕೊಂಡ ಅನುಕಂಪ ವಾಜಪೇಯಿ ಹೆಗಲಿಗಿತ್ತು. ರಾಜ್ಯದಲ್ಲಿ ಜನತಾದಳದ ಅವಧಿ ಮುಗಿಯುತ್ತಾ ಬಂದಿತ್ತು. ಅಂದು ಬಿಜೆಪಿಯ ಮಲ್ಲಿಕಾರ್ಜುನಪ್ಪ ಕಾಂಗ್ರೆಸ್‌ನ ಶಾಮನೂರು ವಿರುದ್ಧ 16,269 ಮತಗಳ ಅಂತರದ ಗೆಲುವು ಪಡೆದರು.

2004ರ ಹೊತ್ತಿಗೆ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರ ಮುಗಿದ್ದಿದ್ದು, ಬಿಜೆಪಿಯ ವಾಜಪೇಯಿ ಆಡಳಿತದ ಬಗ್ಗೆ ಮೆಚ್ಚುಗೆ ಇತ್ತು. ರಾಜ್ಯದಲ್ಲಿ ಎಸ್‌.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಲೋಕಸಭೆಯ ಜತೆಗೆ ವಿಧಾನಸಭೆಗೂ ಆರು ತಿಂಗಳ ಮೊದಲೇ ಚುನಾವಣೆ ನಡೆಯಿತು. ಅಂದು ಬಿಜೆಪಿಯ ಸಿದ್ದೇಶ್ವರ ಕಾಂಗ್ರೆಸ್‌ನ ಮಲ್ಲಿಕಾರ್ಜುನ್‌ ಅವರನ್ನು 32,676 ಮತಗಳ ಅಂತರದಿಂದ ಮಣಿಸಿದ್ದರು.

2009ರಲ್ಲಿ ಕೇಂದ್ರದಲ್ಲಿ ಯುಪಿಎ ಮೊದಲ ಅವಧಿ ಯಶಸ್ವಿಯಾಗಿ ಪೂರೈಸಿತ್ತು. ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಜಿಲ್ಲೆಯಲ್ಲೂ ಬಿಜೆಪಿಯ 7 ಶಾಸಕರಿದ್ದರು. ಆದರೂ, ಸಿದ್ದೇಶ್ವರ ಕಾಂಗ್ರೆಸ್‌ನ ಮಲ್ಲಿಕಾರ್ಜುನ್‌ ವಿರುದ್ಧ 2024 ಮತಗಳ ಪ್ರಯಾಸದ ಗೆಲುವು ಪಡೆದಿದ್ದರು.

ಈ ಬಾರಿ ಚಿತ್ರಣ ಬದಲಾಗಿದೆ. ಕಾಂಗ್ರೆಸ್‌ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಜಿಲ್ಲೆಯಲ್ಲೂ ಕಾಂಗ್ರೆಸ್‌ನ 7 ಶಾಸಕರಿದ್ದಾರೆ. ಜೆಡಿಎಸ್‌ನ ಒಬ್ಬರು ಶಾಸಕರಿದ್ದರೆ, ಬಿಜೆಪಿಯ ಒಬ್ಬರೂ ಶಾಸಕರಿಲ್ಲ. ಮೂರೂ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದು, ತ್ರಿಕೋನ ಸ್ಪರ್ಧೆಗೆ ಕ್ಷೇತ್ರ ಸಜ್ಜಾಗಿದೆ.

ಪರ, ವಿರೋಧಿ ಅಲೆ ನಡುವೆ ಹಾವು–ಏಣಿ ಆಟ
ಹಿಂದೆ ನಡೆದ ಚುನಾವಣೆಗಳು ಕೇಂದ್ರ ಅಥವಾ ರಾಜ್ಯದಲ್ಲಿ ಅಧಿಕಾರದಲ್ಲಿರೋ ಪಕ್ಷಕ್ಕೆ ಅನುಕೂಲವಾಗಿತ್ತೇ? ಆಡಳಿತ ವಿರೋಧಿ ಅಲೆಯಿಂದ ಅನನುಕೂಲವಾಗಿತ್ತೇ?

ಅದು ನಿಜವೂ ಇರಬಹುದು ಅಥವಾ ಅಂತಹ ನಿರೀಕ್ಷೆಗೆ ವ್ಯತಿರಿಕ್ತವಾಗಿಯೂ ಫಲಿತಾಂಶ ದೊರೆತಿರಬಹುದು. ಒಮ್ಮೊಮ್ಮೆ ಕೇಂದ್ರ ಸರ್ಕಾರದ ಸಾಧನೆ, ಮತದಾನದ ಮೇಲೆ ಪ್ರಭಾವ ಬೀರುವಂತಹ ಅಲೆಗಳು ಕೆಲಸ ಮಾಡಿರಲೂ ಬಹುದು. 1977ರಿಂದ ಇಲ್ಲಿಯವರೆಗೂ ನಡೆದ ದಾವಣಗೆರೆ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಅಂತಹ ಪ್ರಭಾವ ಹೇಗಿತ್ತು ಅನ್ನುವತ್ತ ಒಂದು ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT