ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್ ಟೆನಿಸ್: ಬೋಪಣ್ಣ-ಖುರೇಷಿ ಜೋಡಿಗೆ ಸೋಲು

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಉತ್ತಮ ಪ್ರದರ್ಶನ ನೀಡುತ್ತಿರುವ ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಆ್ಯಂಡಿ ಮರ‌್ರೆ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ನಡಾಲ್ 6-2, 6-1, 6-3ರಲ್ಲಿ ಆತಿಥೇಯ ದೇಶದ ಆಯಂಡಿ ರಾಡಿಕ್ ಅವರನ್ನು ಸೋಲಿಸಿದರು. ಮೂರು ಸೆಟ್‌ಗಳಲ್ಲಿ ಸ್ಪೇನ್‌ನ ಆಟಗಾರನಿಗೆ ಹೆಚ್ಚು ಪ್ರತಿರೋಧ ಎದುರಾಗಲಿಲ್ಲ.

ನಾಲ್ಕನೇ ಶ್ರೇಯಾಂಕದ ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ ಸಹ ಎಂಟರಘಟ್ಟದ ಪಂದ್ಯದಲ್ಲಿ 7-5, 6-4, 3-6, 7-6ರಲ್ಲಿ ಅಮೆರಿಕದ ಜಾನ್ ಇಸ್ನೇರ್‌ಗೆ ಸೋಲಿನ ರುಚಿ ತೋರಿಸಿದರು. ಮೊದಲೆರೆಡು ಸೆಟ್‌ಗಳಲ್ಲಿ ಪ್ರಯಾಸದ ಗೆಲುವು ಪಡೆದ ಮರ‌್ರೆ, ಮೂರನೇ ಸೆಟ್‌ನಲ್ಲಿ ಸೋಲು ಅನುಭವಿಸಿದರು. ಆದರೆ ನಾಲ್ಕನೇ ಸೆಟ್‌ನಲ್ಲಿ ಮತ್ತೆ ಲಯ ಕಂಡುಕೊಂಡು ಗೆಲುವಿನ ಹಾದಿಗೆ ಮರಳಿದರು. 
 
ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಚ್ ಹಾಗೂ ರೋಜರ್ ಫೆಡರರ್ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ನಾಲ್ವರು ಆಟಗಾರರು ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವುದು ಈ ವರ್ಷದಲ್ಲಿ ಎರಡನೇ ಸಲ. ಈ ಮೊದಲು ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ್ದರು.

ಬೋಪಣ್ಣ-ಖುರೇಷಿಗೆ ಸೋಲು: ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಈ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡರು. ಈ ಮೂಲಕ ಭಾರತದ ಸವಾಲು ಅಂತ್ಯ ಕಂಡಿತು.

ನಾಲ್ಕರ ಘಟ್ಟದ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಈ ಜೋಡಿ 2-6, 6-7ರಲ್ಲಿ ಪೋಲೆಂಡ್‌ನ ಮಾರಿಯಸ್ ಫ್ರೈಸ್ಟೆನಬರ್ಗ್ ಹಾಗೂ ಮಾರ್ಸಿನ್ ಮಟೋವ್‌ಸ್ಕಿ ಎದುರು ಸೋಲು ಕಂಡಿತು. ಒಟ್ಟು 82 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಆರನೇ ಶ್ರೇಯಾಂಕದ ಪೋಲೆಂಡ್‌ನ ಆಟಗಾರರು ಮೊದಲ ಸೆಟ್‌ನಲ್ಲಿ ಪ್ರಭುತ್ವ ಮರೆದರು. ಎರಡನೇ ಸೆಟ್‌ನಲ್ಲಿ ಅವರಿಗೆ ಭಾರಿ ಪ್ರತಿರೋಧ ಎದುರಾಯಿತು. ಈ ಮಧ್ಯೆ ಮಳೆಯೂ ಕೊಂಚ ಅಡ್ಡಿಯಾಯಿತು.

ಈಗಾಗಲೇ ಭಾರತದ ಎಲ್ಲಾ ಸ್ಪರ್ಧಿಗಳು ಈ ಟೂರ್ನಿಯಿಂದ  ಹೊರ ಬಿದ್ದಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಬೋಪಣ್ಣ ಹಾಗೂ ಖುರೇಷಿ ಅವರು ಇಂಗ್ಲೆಂಡ್‌ನ ಕಾಲಿನ್ ಫ್ಲೆಮಿಂಗ್-ರಾಸ್ ಹಚಿನ್ಸ್ ಎದುರು ಗೆಲುವು ಪಡೆದಿದ್ದರು.

`ಪೋಲೆಂಡ್‌ನ ಆಟಗಾರರ ಎದುರು ಸೋಲು ಅನುಭವಿಸುವ ಮೂಲಕ ಈ ಸಲದ ಹೋರಾಟಕ್ಕೆ ತೆರೆ ಬಿತ್ತು. ಸೆಪ್ಟೆಂಬರ್ 18ರಿಂದ ಆರಂಭವಾಗಲಿರುವ ಡೇವಿಸ್ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತೇನೆ~ ಎಂದು ಬೋಪಣ್ಣ `ಟ್ವಿಟರ್~ನಲ್ಲಿ ಬರೆದುಕೊಂಡಿದ್ದಾರೆ.

ಫೈನಲ್‌ಗೆ ವನಿಯಾ ಕಿಂಗ್-ಶೆಡೊವಾ: ಇದೇ ಟೂರ್ನಿಯ  ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ ಅಮೆರಿಕದ ವನಿಯಾ ಕಿಂಗ್ ಹಾಗೂ ಕಜಕಸ್ತಾನದ ಯರಸ್ಲವಾ ಶೆಡೊವಾ ಜೋಡಿ ಸೆಮಿಫೈನಲ್ ಪಂದ್ಯದಲ್ಲಿ 7-6, 3-6, 6-3ರಲ್ಲಿ ರಷ್ಯಾದ ಮರಿಯಾ ಕಿರ್ಲಿಲೆಂಕೊ-ನಾಡಿಯಾ ಪೆಟ್ರೊವಾ ಮೇಲೂ, ಲಿಜಿಯಲ್ ಹಬರ್-ಲೀಸಾ ರೈಮೆಂಡ್ 6-2, 6-4ರಲ್ಲಿ ಡೇನಿಯಲಾ ಹಂಟುಚೋವಾ-ಅಗ್ನಿಸ್ಜಿಕಾ ರಾದ್ವಾಸ್ಕ ವಿರುದ್ಧವೂ ಗೆಲುವು ಪಡೆದು ಫೈನಲ್ ಪ್ರವೇಶಿಸಿತು.

ಉಡನ್ ಜೋಡಿ ಚಾಂಪಿಯನ್: ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಮೆರಿಕದ ಮೆಲಾನಿ ಆಡಿನ್-ಜಾಕ್ ಸಾಕ್ ಜೋಡಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ 7-6, 4-6, 10-0ರಲ್ಲಿ ಗಿಸೆಲೊ ಡುಲ್ಕೊ-ಎಡೋರ್ಡಾ ಚೇವಾಂಕ್ ಜೋಡಿಯನ್ನು ಮಣಿಸಿ ಚಾಂಪಿಯನ್ ಆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT