ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಕನ್ನಡ ಕಂಪಿನ ಆರತಿ

Last Updated 9 ಮಾರ್ಚ್ 2011, 19:35 IST
ಅಕ್ಷರ ಗಾತ್ರ

ಒಂದಿಷ್ಟು ಸಾಧಿಸುವ ಛಲ, ಜತೆಗೆ ಪ್ರೋತ್ಸಾಹಿಸುವ ಜೀವ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಮಾತಿಗಿಳಿದರು ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ 2007ರಿಂದ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿರುವ ಆರತಿ ಕೃಷ್ಣ.

ಗೃಹಿಣಿಯಾಗಿ, ಇಬ್ಬರು ಮಕ್ಕಳ ತಾಯಿಯಾಗಿ ಸಂಸಾರದ ಒತ್ತಡಗಳ ನಡುವೆ ತಮ್ಮ ಹುದ್ದೆಗೆ ನ್ಯಾಯ ಒದಗಿಸುತ್ತ, ಅಮೆರಿಕದಲ್ಲಿನ ಭಾರತೀಯರಿಗೆ ಸದಾ ಸಹಾಯ ಹಸ್ತವನ್ನು ಚಾಚುತ್ತಿದ್ದಾರೆ. ವಿದೇಶದಲ್ಲಿ ಭಾರತವನ್ನು ಪ್ರತಿನಿಧಿಸುವ ಕನ್ನಡತಿಯಾಗಿ ಕರ್ನಾಟಕದ ಕಂಪನ್ನು ಹರಡುತ್ತಿದ್ದಾರೆ. ಅಮೆರಿಕಕ್ಕೆ ಹೋಗಿ ಪಾಸ್‌ಪೋರ್ಟ್ ಕಳೆದುಕೊಂಡು ಪೇಚಿಗೆ ಸಿಲುಕಿರುವವರಿಂದ ಹಿಡಿದು, ದೊಡ್ಡ ಸಮಸ್ಯೆಗಳನ್ನು ಎದುರಿಸುವವರ ವರೆಗೆ ಅವುಗಳಿಗೆ ಪರಿಹಾರ ದೊರಕಿಸುವಲ್ಲಿ ಆರತಿಯವರ ಪ್ರಭಾವ ಇದೆ. ಚಿಕ್ಕಮಗಳೂರಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಉನ್ನತ ಅಧ್ಯಯನ ನಡೆಸಿ, ಎರಡು ಸ್ನಾತಕೋತ್ತರ ಪದವಿ ಪಡೆದಿರುವ ಆರತಿ, ಸ್ಪ್ಯಾನಿಷ್ ಹಾಗೂ ಫ್ರೆಂಚ್ ಭಾಷೆ ಪ್ರವೀಣೆ ಕೂಡ.

ಕಾರ್ಯನಿಮಿತ್ತ ಬೆಂಗಳೂರಿಗೆ ಮೊನ್ನೆ ಆಗಮಿಸಿದಾಗ ’ಮೆಟ್ರೊ’ಗೆ ಮಾತಿಗೆ ಸಿಕ್ಕರು.

ನಿಮ್ಮ ಕೆಲಸದ ಸ್ವರೂಪ?
ಅನಿವಾಸಿ ಭಾರತೀಯ ನಿರ್ದೇಶನಾಲಯದ ವಿವಿಧ ಯೋಜನೆಗಳನ್ನು ಜಾರಿ ಮಾಡುವುದು ನಮಗಿರುವ ಮುಖ್ಯ ಕರ್ತವ್ಯ. ಇದರ ಜೊತೆ ಅಮೆರಿಕದಲ್ಲಿನ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸುವುದು ಕೂಡ ನಮ್ಮ ಪಾಲಿಗಿದೆ. ಅಮೆರಿಕದಲ್ಲಿ ಕೇಳದೇ ಇರುವ ಎಷ್ಟೋ ರಾಜ್ಯಗಳಲ್ಲಿ ಅತ್ಯಲ್ಪ ಪ್ರಮಾಣದ ಭಾರತೀಯ ಸಮುದಾಯಗಳಿವೆ. ಮೂಲೆಮೂಲೆಗಳಿಗೆ ಭೇಟಿ ನೀಡಿ ಭಾರತೀಯರ ಅಹವಾಲುಗಳನ್ನು ಆಲಿಸಿ, ಅವರಿಗೆ  ನನ್ನ ಕಾರ್ಯ ಒತ್ತಡದ ನಡುವೆಯೂ ಪರಿಹಾರ ಒದಗಿಸುವಲ್ಲಿ ಶ್ರಮಿಸುತ್ತಿದ್ದೇನೆ.

ಅಮೆರಿಕ ಮತ್ತು ಭಾರತೀಯ ಮಹಿಳೆಯರಲ್ಲಿ ವ್ಯತ್ಯಾಸ?
ಈಗ ಭಾರತದಲ್ಲಿ ಕೂಡ ಮಹಿಳೆ ಸಾಕಷ್ಟು ಸಾಧನೆ ಮಾಡುತ್ತಿದ್ದಾಳೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಆಕೆಗೆ ದೊರಕಿರುವ ಅವಕಾಶ ಒಂದು ‘ಪಾಸಿಟಿವ್ ಪಾಯಿಂಟ್’ ಆಗಿದೆ. ಆದರೆ ಅಮೆರಿಕದ ಮಟ್ಟಿಗೆ ಹೇಳುವುದಾದರೆ ಅಲ್ಲಿಯ ಮಹಿಳೆ, ಇಲ್ಲಿಗಿಂತ ಒಂದು ಹೆಜ್ಜೆ ಮುಂದಿದ್ದಾಳೆ ಎನ್ನಬಹುದು. ಇದಕ್ಕೆ ಮುಖ್ಯ ಕಾರಣ, ಆಕೆಯ ಪತಿ ಹಾಗೂ ಪತಿಯ ಮನೆಯವರಿಂದ ಸಿಗುವ ಅದ್ಭುತ ಬೆಂಬಲ. ಅಂತಹ ಬೆಂಬಲಯುತ ಕುಟುಂಬ, ಇಲ್ಲಿ ಕಾಣ ಸಿಗುವುದು ಬಹಳ ವಿರಳವೇ ಎನಿಸುತ್ತದೆ.

ಅಷ್ಟೇ ಅಲ್ಲದೇ, ಕೌಟುಂಬಿಕ ಚೌಕಟ್ಟಿನಲ್ಲಿ ಭಾರತೀಯ ಮಹಿಳೆ ತನ್ನ ಇತರ ಕೆಲಸಗಳನ್ನೂ ನಿಭಾಯಿಸಬೇಕು. ಆದರೆ ಅಲ್ಲಿ ಹಾಗಲ್ಲ. ಆಕೆಗೆ ಸ್ವಾತಂತ್ರ್ಯ ಹೆಚ್ಚಿದೆ. ಅವಳು ಏನೇ ಮಾಡಿದರೂ ಅದನ್ನು ಸಮಾಜ ಸ್ವೀಕರಿಸುತ್ತದೆ. ಆದರೆ ಭಾವನಾತ್ಮಕ ಸಂಬಂಧದ ವಿಷಯ ಬಂದಾಗ ಭಾರತವೇ ಮೇಲು.

ಶೈಕ್ಷಣಿಕ ಕ್ಷೇತ್ರದಲ್ಲಿ ಇರುವ ವ್ಯತ್ಯಾಸ?
ಅಜಗಜಾಂತರ. ಖಾಸಗಿ ಶಾಲೆಗಳಲ್ಲೂ ಶಿಕ್ಷಣ ಅಲ್ಲಿ ಉಚಿತ. ಇಲ್ಲಿಯಂತೆ ಡೊನೇಷನ್ ಹಾವಳಿ ಇಲ್ಲ. ಉನ್ನತ ಶಿಕ್ಷಣ ಮಾತ್ರ ಬಹಳ ದುಬಾರಿ. ಆದರೆ ಬಡ್ಡಿರಹಿತವಾದ ಸಾಲ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಶಿಕ್ಷಣ ಪಡೆದ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುವ ಕಾರಣ, ಸಂಬಳದಿಂದ ಸಾಲದ ಮೊತ್ತ ಕಡಿತಗೊಳಿಸಲಾಗುತ್ತದೆ.

ಇದರಿಂದಾಗಿ, ಇಲ್ಲಿ ಮಕ್ಕಳು ಬಹಳ ದೊಡ್ಡವರಾಗುವವರೆಗೂ ಅಪ್ಪ-ಅಮ್ಮಂದಿರನ್ನೇ ಅವಲಂಬಿಸುತ್ತಾರೆ. ಆದರೆ ಅಲ್ಲಿ ಹಾಗಲ್ಲ. ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅವರ ಕಾಲ ಮೇಲೆ ಅವರು ನಿಲ್ಲುತ್ತಾರೆ.

ಅಮೆರಿಕದಲ್ಲಿನ ಜೀವನದ ಬಗ್ಗೆ ಚುಟುಕಾಗಿ ಹೇಳಬೇಕೆಂದರೆ...
ಇಲ್ಲಿ ವೈಭವೋಪೇತ ಜೀವನ ನಡೆಸಲು ಮಾಸಿಕ ಕನಿಷ್ಠ ಒಂದು ಲಕ್ಷ ರೂಪಾಯಿ ಸಂಬಳ ಬೇಕು. ಆದರೆ ಅಮೆರಿಕದಲ್ಲಿ ಸಾಮಾನ್ಯ ನಾಗರಿಕನೂ ಒಳ್ಳೆಯ ಜೀವನ ನಡೆಸುತ್ತಾನೆ. ಮನೆ ಕೆಲಸಕ್ಕೆ ಬರುವಾಕೆಯೂ ತನ್ನ ಕಾರಿನಲ್ಲಿಯೇ ಬರುತ್ತಾಳೆ. ಇಲ್ಲಿ ಹಣ ಮಾಡಿ ಕೂಡಿಡುವುದೇ ಹೆಚ್ಚು. ಅಲ್ಲಿ ಹಾಗಲ್ಲ. ಸಾಕಷ್ಟು ಖರ್ಚು ಮಾಡುತ್ತಾರೆ. ಅಲ್ಲಿಯ ವ್ಯವಸ್ಥೆಯೂ ಅದಕ್ಕೆ ಕಾರಣ.

ಅಮೆರಿಕದಲ್ಲಿ ಕನ್ನಡದ ಬಗ್ಗೆ
ಅಯ್ಯೋ.. ಅದರ ಬಗ್ಗೆ ನನಗೆ ಬಹಳ ವಿಷಾದವಾಗುತ್ತದೆ. ಅಲ್ಲಿ ಎಲ್ಲ ರಾಜ್ಯಗಳ ಸಂಘ- ಸಂಸ್ಥೆಗಳನ್ನು ನಾನು ಗಮನಿಸಿದ್ದೇನೆ. ಆದರೆ ದುರದೃಷ್ಟ ಎಂದರೆ ಕನ್ನಡಿಗರು ಯಾರ ಜೊತೆಯೂ ಬೆರೆಯುವುದು ತೀರಾ ಕಡಿಮೆ. ’ಅಕ್ಕ’ ಹಾಗೂ ’ನಾವಿಕ’ ಸಂಘಟನೆಗಳ ಸಮ್ಮೇಳನ ಹೊರತುಪಡಿಸಿ ಬೇರೆ ಸಮಯದಲ್ಲಿ ಅವರು ಚಟುವಟಿಕೆಯಿಂದ ಓಡಾಡುವುದೇ ಕಷ್ಟ. ಇಲ್ಲಿ ಯಾವ ರೀತಿ ಒಂದು ಸಂಘದಲ್ಲಿಯೇ ಒಡಕು ಇರುವುದು ಸಾಮಾನ್ಯವೋ ಅಲ್ಲೂ ಅದೇ ಮುಂದುವರಿದಿದೆ. ಇದಕ್ಕಾಗಿ ಬಹಳ ಖೇದ ಎನಿಸುತ್ತದೆ.

ನಿಮ್ಮ ಮುಂದಿನ ಗುರಿ?
ನನ್ನ ತಂದೆ ಬೇಗಾನೆ ರಾಮಯ್ಯ ಸಚಿವರಾಗಿದ್ದವರು. ಇದರಿಂದ ನನಗೂ ರಾಜಕೀಯದಲ್ಲಿ ಧುಮುಕುವ ಆಸೆ ಇದೆ. ಆದರೆ ಈ ಬಗ್ಗೆ ಸದ್ಯ ಏನನ್ನೂ ಯೋಚನೆ ಮಾಡಿಲ್ಲ. ಎಲ್ಲವನ್ನೂ ಕಾಲವೇ ನಿರ್ಧರಿಸಬೇಕು. ಸದ್ಯ ಈಗಿನ ಹುದ್ದೆಯಲ್ಲಿಯೇ ಮುಂದುವರಿಯುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT