ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೋಘ ಸಿದ್ಧೇಶ್ವರ ಜಾತ್ರೆಗೆ ಭಕ್ತರ ಮಹಾಪೂರ

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ವಿಜಾಪುರ: ಛಟ್ಟಿ ಅಮಾವಾಸ್ಯೆಯ ದಿನವಾದ ಗುರುವಾರ ತಾಲ್ಲೂಕಿನ ಅರಕೇರಿ (ಮುಮ್ಮೆಟ್ಟಿ) ಗುಡ್ಡದಲ್ಲಿ ಜರುಗಿದ  ಪ್ರಸಿದ್ಧ ಅಮೋಘ ಸಿದ್ಧೇಶ್ವರ ದೇವರ ಜಾತ್ರೆ ಹಾಗೂ `ದೇವರ ಭೇಟಿ' ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ವಿವಿಧೆಡೆಯ ಸುಮಾರು 150ಕ್ಕೂ ಹೆಚ್ಚು ಗ್ರಾಮಗಳಿಂದ ತಮ್ಮೂರಿನ ದೇವರ ಪಲ್ಲಕ್ಕಿಯೊಂದಿಗೆ ಪಾದಯಾತ್ರೆಯಲ್ಲಿ ಅರಕೇರಿ ಗುಡ್ಡಕ್ಕೆ ಆಗಮಿಸಿದ್ದರು.

ದೇವಸ್ಥಾನದ ಎದುರಿನ ಬಯಲು ಜಾಗದಲ್ಲಿ ಈ ಪಲ್ಲಕ್ಕಿಗಳನ್ನು ಇಡಲಾಗಿತ್ತು. ಮಧ್ಯಾಹ್ನ ನಡೆದ `ದೇವರ ದರ್ಶನ' ಕಾರ್ಯಕ್ರಮ ಭಕ್ತರಲ್ಲಿ ರೋಮಾಂಚನ ಉಂಟು ಮಾಡಿತು. ವಿವಿಧ ಗ್ರಾಮಗಳಿಂದ ತರಲಾಗಿದ್ದ ದೇವರ ಭಾವಚಿತ್ರವಿರುವ ಪಲ್ಲಕ್ಕಿಗಳಿಗೆ ಅಮೋಘ ಸಿದ್ಧೇಶ್ವರ ದೇವಸ್ಥಾನದ ಪಲ್ಲಕ್ಕಿಯ ದರ್ಶನ ಕೊಡಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ಅಪಾರ ಪ್ರಮಾಣದ ಭಂಡಾರ ಎರಚಿದ್ದರಿಂದ ಇಡೀ ಪ್ರದೇಶ ಹಳದಿಮಯವಾಗಿತ್ತು.

ಭಕ್ತರು ತಮ್ಮ ಮನೆಗಳಲ್ಲಿ ತಯಾರು ಮಾಡಿಕೊಂಡು ಬಂದಿದ್ದ ಕರಿಗಡಬು-ಹೋಳಿಗೆಯ ನೈವೇದ್ಯ ಸಮರ್ಪಿಸಿದರು. `ಜವಳ' ಕಾರ್ಯಕ್ರಮ, ದೀರ್ಘದಂಡ ನಮಸ್ಕಾರ, ಪಲ್ಲಕ್ಕಿ ತೆರಳುವ ಮಾರ್ಗದಲ್ಲಿ ಸಾಲಾಗಿ ಮಲಗಿ ಹರಕೆ ತೀರಿಸುವ ಆಚರಣೆಗಳೂ ಜರುಗಿದವು. ಅರಕೇರಿ ಗುಡ್ಡದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು, ಡೊಳ್ಳು ಬಾರಿಸುತ್ತ, ಭಂಡಾರ (ಅರಿಸಿನ ಪುಡಿ) ತೂರುತ್ತ ಭಕ್ತಿ ಮೆರೆದರು.

`ಮೂರು ದಿನಗಳ ಈ ಜಾತ್ರೆಯಲ್ಲಿ  3 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುತ್ತಾರೆ. ಅಮಾವಾಸ್ಯೆಯ ದಿನವಾದ ಗುರುವಾರ ಅಂದಾಜು 1.50 ಲಕ್ಷ ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನ ಪ್ರಸಾದ ಹಾಗೂ ಅರಕೇರಿ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು, ಭದ್ರತೆಯ ವ್ಯವಸ್ಥೆ ಮಾಡಲಾಗಿದೆ' ಎಂದು ದೇವಸ್ಥಾನ ಸಮಿತಿಯ ಆಡಳಿತಾಧಿಕಾರಿಯೂ ಆಗಿರುವ ಉಪ ವಿಭಾಗಾಧಿಕಾರಿ ಡಾ.ಬೂದೆಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT