ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶದ ನಿರೀಕ್ಷೆಯಲ್ಲಿ ಅಂಧ ಕೋಗಿಲೆಗಳು

Last Updated 15 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

`ಅರಳುವ ಹೂವುಗಳೇ ಆಲಿಸಿರಿಬಾಳೊಂದು ಹೋರಾಟ ಮರೆಯದಿರಿಬೆಳಕಿನ ಕಿರಣಗಳೇ ಬಣ್ಣಿಸಿರಿ ಇರುಳ ಹಿಂದೆ ಬೆಳುಕುಂಟು ತೋರಿಸಿರಿ...-ಹೀಗೆ ಇರುಳು ಕವಿದ ಕಣ್ಣು ಮುಚ್ಚಿ, ಮನದಾಳದಿಂದ ಆ ಅಂಧ ಕಲಾವಿದರು ಹಾಡುತ್ತಿದ್ದರೆ ಕೇಳಿ ಮನಸೋಲದೇ ಇರಲು ಸಾಧ್ಯವೇ ಇಲ್ಲ.

ಆದರೆ ಅಂಧ ಬಾಳು ಗೋಳು ಎನಿಸಬಾರದೆಂದು ಸ್ವಾವಲಂಬಿ ಬದುಕಿಗಾಗಿ ಹಾಡುವುದನ್ನೇ ವೃತ್ತಿಯಾಗಿಸಿಕೊಂಡು ಬದುಕು ಗೆಲ್ಲಲು ಹೊರಟಿರುವ ಅವರು ಮಾತ್ರ ಸಹೃದಯರು ನೀಡುವ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.  ಹೌದು, ನಗರದ ನಂದಿನಿ ಬಡಾವಣೆಯ ತ್ಯಾಗಿನಗರದ `ಮಾರ್ಗ ಜ್ಯೋತಿ ಕ್ಷೇಮಾಭಿವೃದ್ಧಿ ಟ್ರಸ್ಟ್~ನ 15 ಅಂಧ ಕಲಾವಿದರು ಆರ್ಕೆಸ್ಟ್ರಾ (ವಾದ್ಯ ಗೋಷ್ಠಿ) ರಚಿಸಿಕೊಂಡಿದ್ದಾರೆ. ಸಂಗೀತದ ಮೂಲಕ ಮನರಂಜನೆ ನೀಡುವ, ತನ್ಮೂಲಕ ಸ್ವಾಭಿಮಾನದ ಜೀವನ ಸಾಗಿಸುವ ಈ ಪ್ರತಿಭೆಗಳು ಅವಕಾಶಗಳಿಗಾಗಿ ಎದುರು ನೊಡುತ್ತಿದೆ.  

ಅಂಧ ಕಲಾವಿದರಾದ ಪಿ.ಬಾಲಮುರುಗನ್ ಅಂಧತ್ವವನ್ನು ಮೆಟ್ಟಿ ನಿಂತು ತನ್ನಂತೆ  ಕತ್ತಲು ಕವಿದವರ ಬಾಳಿಗೊಂದು ಅರ್ಥ ಕಲ್ಪಿಸುವ ನಿಟ್ಟಿನಲ್ಲಿ  2006ರಲ್ಲಿ 15 ಅಂಧರೊಂದಿಗೆ ಹುಟ್ಟುಹಾಕಿದ ಈ ಆರ್ಕೆಸ್ಟ್ರಾ `ಹೆಜ್ಜೆಗೊಂದು ದಾರಿ~ ಎನ್ನುವಂತೆ ಈವರೆಗೆ ನೂರಾರು ಕಾರ್ಯಕ್ರಮಗಳನ್ನು ನೀಡಿ ಸಂಗೀತ ಪ್ರಿಯರಿಗೆ ರಸದೌತಣ ನೀಡಿದೆ.   ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗೌರಿ ಗಣೇಶ ಹಬ್ಬ, ಮದುವೆ ಸಮಾರಂಭಗಳು ಸೇರಿದಂತೆ ಸಾರ್ವಜನಿಕ ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡುವ ಈ ತಂಡ ಕನ್ನಡದ ಭಕ್ತಿಗೀತೆ, ಭಾವಗೀತೆ, ಜಾನಪದಗೀತೆ, ಚಲನಚಿತ್ರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಮನರಂಜಿಸುತ್ತದೆ.

ಅಷ್ಟೇ ಅಲ್ಲದೇ ಈ ತಂಡದ ಕೆಲ ಸದಸ್ಯರು ರ‌್ಯಾಜದಾದ್ಯಂತ ಸಂಚರಿಸಿ ಪುರಾಣ, ಹರಿಕಥೆ ವಾಚನ ಸಹ ಮಾಡುತ್ತಾರೆ. `ಅಂಧರಾದ ಅನೇಕರು ಬದುಕಲು ದಾರಿಕಾಣದೇ ಅನಿವಾರ್ಯವಾಗಿ ರೈಲು, ಬಸ್ಸು ನಿಲ್ದಾಣಗಳಲ್ಲಿ ಹಾಡು ಹೇಳುತ್ತ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಾರೆ.
 
ಆದರೆ ಅದ್ಯಾಕೋ ನನ್ನ ಮನಸ್ಸಿಗೆ ಸರಿಕಾಣಲಿಲ್ಲ. ಸ್ವಾವಲಂಬಿಯಾಗಿ ಬದುಕಬೇಕೆಂದು ನಾವು (ಪತಿ, ಪತ್ನಿ) ಲಾಟರಿ ಟಿಕೆಟ್ ಮಾರುವುದು, ವೈರ್ ಕುರ್ಚಿ ಹೆಣೆಯುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತ ಕಷ್ಟಪಟ್ಟೆವು. ಕೊನೆಗೆ ಒಂದು ಆರ್ಕೆಸ್ಟ್ರಾ ತಂಡ ಕಟ್ಟಿದರೆ ನಮ್ಮಂತೆ ಇನ್ನೂ ಅನೇಕ ಅಂಧರ ಜೀವನಕ್ಕೆ  ಅದು ಆಧಾರವಾಗಬಹುದೆಂದು ಈ ತಂಡ ಕಟ್ಟಿದೆ~ ಎನ್ನುತ್ತಾರೆ ಬಾಲಮುರುಗನ್.  ನಾವು ವಿವಿಧ ಕಡೆಗಳಲ್ಲಿ ನೀಡಿದ ಕಾರ್ಯಕ್ರಮಗಳಲ್ಲಿ ನಮ್ಮ ಸಂಗೀತ ಮೆಚ್ಚಿದ ಅನೇಕ ರಾಜಕಾರಣಿಗಳು ಸಹಾಯ ನೀಡುವುದಾಗಿ ಆಶ್ವಾಸನೆಗಳನ್ನು ಕೊಟ್ಟಿದ್ದಾರೆ.

ಇರುವುದೊಂದು ಚಿಕ್ಕಮನೆಯಲ್ಲಿ ತಂಡಕ್ಕೆ ತರಬೇತಿ ನೀಡಲು ಹಾಗೂ ಸಂಗೀತದ ಉಪಕರಣಗಳನ್ನಿಡಲು ತೊಂದರೆ ಇದೆ. ಕೊನೆಗೆ ಒಂದು ಸೂರನ್ನಾದರೂ ನೀಡಿ ಎಂದು ಅನೇಕ ಬಾರಿ ಮನವಿ ಸಲ್ಲಿಸಿದ್ದೇನೆ ಆದರೆ ಇವರೆಗೆ ಭರವಸೆ ಬದಲು ಮತ್ತೇನು ಸಿಕ್ಕಿಲ್ಲ ಎಂದು ನೊಂದು ನುಡಿಯುತ್ತಾರೆ ಬಾಲು.  

ಅಂಧ ಪತ್ನಿ ಸಿದ್ಧಗಂಗಮ್ಮಾ ಸೇರಿದಂತೆ ಹದಿನೈದು ಜನರ ನಮ್ಮ ತಂಡ, ಸಂಗೀತ ಕಾರ್ಯಕ್ರಮದಿಂದ ಬಂದ ಹಣದಲ್ಲಿ ಟ್ರಸ್ಟ್‌ಗೆ ಒಂದಿಷ್ಟು ಮಿಸಲಿಟ್ಟು, ಉಳಿದಿದ್ದನ್ನು ಎಲ್ಲ ಕಲಾವಿದರು ಹಂಚಿಕೊಳ್ಳುತ್ತೇವೆ. ಜತೆಗೆ ಇಬ್ಬರು ಅಂಧರಿಗೆ  ಕುರ್ಚಿ ಹೆಣೆಯುವ ತರಬೇತಿ ಸಹ ನೀಡುತ್ತಿದ್ದೇನೆ.

ಸಹೃದಯರು ಅನುಕಂಪ, ಮೆಚ್ಚುಗೆ ವ್ಯಕ್ತಪಡಿಸುವ  ಬದಲು ಕಾರ್ಯಕ್ರಮಗಳನ್ನು ನೀಡುವ ಅವಕಾಶ ನೀಡಬೇಕೆಂದು ಬಾಲು ಮನವಿ ಮಾಡಿಕೊಳ್ಳುತ್ತಾರೆ.  ಸಂಗೀತ ಕಾರ್ಯಕ್ರಮಗಳಿಗಾಗಿ ಸಂಪರ್ಕಿಸಬಹುದಾದ ವಿಳಾಸ: ಮಾರ್ಗ ಜ್ಯೋತಿ ಕ್ಷೇಮಾಭಿವೃದ್ಧಿ ಟ್ರಸ್ಟ್, ನಂ. 755 ತ್ಯಾಗಿನಗರ, ಕೆ.ಎಸ್.ಸಿ.ಬಿ. ಕ್ವಾಟ್ರರ್ಸ್. ಲಕ್ಷ್ಮೀದೇವಿನಗರ, ನಂದಿನಿ ಬಡಾವಣೆ. ಸಂಪರ್ಕ ಸಂಖ್ಯೆ: ಬಾಲಮುರುಗನ್- 93423 21212 / 94814 54825.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT