ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅವರೆ' ಮಾರುವವರು ಬಂದವರೆ!

Last Updated 4 ಡಿಸೆಂಬರ್ 2012, 8:20 IST
ಅಕ್ಷರ ಗಾತ್ರ

ಹುಣಸೂರು: ರಾಜ್ಯ ಹೆದ್ದಾರಿ 88ರಲ್ಲಿ ಅವರೆಕಾಯಿ ವಹಿವಾಟು ಆರಂಭಗೊಂಡಿದ್ದು ಗ್ರಾಹಕನ ಮೂಗಿಗೆ ರಾಚುವಷ್ಟು ಅವರೆ ಸೊಗಡಿನ ಸುವಾಸನೆ ರಸ್ತೆಯಲ್ಲಿ ಹಾದು ಹೋಗುವವರನ್ನು ಕೈ ಬೀಸಿ ಕರೆಯುತ್ತಿದೆ. ಅವರೆಕಾಯಿ ಬೆಳೆದ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮೈಸೂರು-ಬಂಟ್ವಾಳ ರಾಜ್ಯ ಹೆದ್ದಾರಿ 88 ಹಾದು ಹೋಗುವ ಬನ್ನಿಕುಪ್ಪೆ ಗ್ರಾಮದ ಅವರೆಕಾಯಿ ರಾಜ್ಯ ಮತ್ತು ನೆರೆಯ ರಾಜ್ಯದಲ್ಲಿಯೂ ಬಹಳ ಹೆಸರು ಮಾಡಿದೆ. ಇಲ್ಲಿಯ ಅವರೆಕಾಯಿ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಉಳಿದಂತೆ ಎಲ್ಲಾ ತರಕಾರಿಗಳ ಬೆಲೆ ನೆಲ ಕಚ್ಚುತ್ತದೆ. ಇಷ್ಟಲ್ಲದೆ ನೆರೆಯ ಚೆನ್ನೈ ಮತ್ತು ಕರಾವಳಿ ತೀರ ಮಂಗಳೂರಿನ ಮಾರುಕಟ್ಟೆಯನ್ನು ಪ್ರವೇಶಿಸುವ ಬನ್ನಿಕುಪ್ಪೆ ಅವರೆಕಾಯಿ ಈ ಬಾರಿ ಆರಂಭದಲ್ಲೇ ಉತ್ತಮ ಬೇಡಿಕೆ ಹೊಂದಿದೆ.

ಬನ್ನಿಕುಪ್ಪೆ ಭಾಗದಲ್ಲಿ ಅತಿ ಹೆಚ್ಚು ಅವರೆಕಾಯಿ ಬೆಳೆಯುವ ರೈತರಿದ್ದು, ಈಗಷ್ಟೆ ಮಾರುಕಟ್ಟೆಗೆ ಬರಲಾರಂಭಿಸಿರುವ ಅವರೆಕಾಯಿ ಬೆಲೆ ರೈತನ ಮುಖದಲ್ಲಿ ಹರುಷ ಮೂಡಿಸಿದೆ. 30-32 ಕೆ.ಜಿ. ತೂಗುವ ಒಂದು ಮೂಟೆ ಅವರೆಕಾಯಿ ಬೆಲೆ 1000-1200 ಬೆಲೆಗೆ ಬಿಕರಿಯಾಗುತ್ತಿದೆ. ಪ್ರತಿ ಕೆ.ಜಿ.ಗೆ ರೂ 35-40ಗಳಿಗೆ ಮಾರಾಟವಾಗುತ್ತಿದೆ. ರೈತ ಸಣ್ಣೇಗೌಡ ಮಾತನಾಡಿ, `ಅವರೆಕಾಯಿ ಬೆಲೆ ಆರಂಭದಲ್ಲಿ ಉತ್ತಮವಾಗಿದೆ. ಆದರೆ ಮುಂದಿನ ಒಂದೆರಡು ವಾರದೊಳಗೆ ಈ ಬೆಲೆ ಇರುವುದಿಲ್ಲ. ಅವರೆಕಾಯಿ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿದ್ದಂತೆ ಒಂದು ಮೂಟೆಗೆ 500-650ಕ್ಕೆ ಕೇಳುತ್ತಾರೆ' ಎನ್ನುತ್ತಾರೆ.

ಮಾರುಕಟ್ಟೆ ಅವ್ಯವಸ್ಥೆ: ಬನ್ನಿಕುಪ್ಪೆ ಗ್ರಾಮದ ಮುಭಾಗದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮಾರುಕಟ್ಟೆ ನಿರ್ಮಿಸಿ 3 ವರ್ಷ ಕಳೆದಿದ್ದರೂ ಅವರೆಕಾಯಿ ವಹಿವಾಟು ಸ್ಥಳಾಂತರಿಸುವಲ್ಲಿ ಎಪಿಎಂಸಿ ವಿಫಲವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಮಾರುಕಟ್ಟೆ ಆವರಣ ಅನಾಥವಾಗಿ ಬಿದ್ದಿದ್ದು, ಈ ಬಗ್ಗೆ ನಿಗಾವಹಿಸಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ತೆಗೆದುಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. ರಾಜ್ಯ ಹೆದ್ದಾರಿಯನ್ನೇ ಮಾರುಕಟ್ಟೆ ಆವರಣ ಮಾಡಿಕೊಳ್ಳುವ ರೈತ ಮತ್ತು ದಲ್ಲಾಳಿಗಳಿಗೆ ಇಲಾಖೆ ಅಥವಾ ಗ್ರಾ.ಪಂ ದಂಡ ವಿಧಿಸಬೇಕು ಎಂದು ಸಾರ್ವಜನಿಕರು ಹೇಳುತ್ತಾರೆ.

ಗಿಜಿಗುಟ್ಟುವ ರಸ್ತೆ:  ರಾಜ್ಯ ಹೆದ್ದಾರಿ 88ರಲ್ಲಿ  ಬೆಳಗ್ಗೆ 6 ರಿಂದ 11 ಗಂಟೆ ವರಗೆ ಮೋಟಾರ್ ಬೈಕ್, ಸೈಕಲ್ ಮತ್ತು ಆಟೋಗಳಲ್ಲಿ ವಿವಿಧ ಕಡೆಯಿಂದ ಹೊತ್ತುತರುವ ಅವರೆಕಾಯಿ ಲೋಡ್ ರಸ್ತೆ ಮಧ್ಯದಲ್ಲೇ ಖರೀದಿಸಲು ನಾ ಮುಂದೆ ತಾ ಮುಂದೆ ಎಂದು ದಲ್ಲಾಳಿಗಳು ಮುಗಿ ಬೀಳುತ್ತಾರೆ. ಇದರಿಂದ ರಸ್ತೆ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗುತ್ತಿದೆ. ಹಲವು ಬಾರಿ ವಾಹನಗಳ ಅಪಘಾತವೂ ಸಂಭವಿಸಿದೆ. ಈ ಬಗ್ಗೆ ಬಿಳಿಕೆರೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅನೇಕ ಬಾರಿ ನಾಗರಿಕರು ಜನಸ್ಪಂದನ ಕಾರ್ಯಕ್ರಮದಲ್ಲಿ ಒತ್ತಾಯಿಸಿದ್ದರೂ ಕ್ರಮ ತೆಗೆದುಕೊಳ್ಳುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಬನ್ನಿಕುಪ್ಪೆಯ ಚೆಲುವರಾಜು ಆಕ್ಷೇಪಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT