ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆ ಆಗರವಾದ ತೋರಣಾ ಆಸ್ಪತ್ರೆ

Last Updated 3 ಜನವರಿ 2012, 8:45 IST
ಅಕ್ಷರ ಗಾತ್ರ

ಕಮಲನಗರ: ಇಲ್ಲಿಗೆ ಸಮೀಪದ ತೋರಣಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಬಗ್ಗೆ ಗೊತ್ತಿದ್ದರೂ, ಜನಪ್ರತಿನಿಧಿಗಳಾಗಲಿ, ಇಲಾಖಾ ಅಧಿಕಾರಿಗಳಾಗಲಿ ಸ್ಪಂದಿಸದೇ ಇರುವುದರಿಂದ ಭಾನುವಾರ ರಾತ್ರಿ ಹೆರಿಗೆಗೆ ಬಂದ ಬಡ ಬಾಣಂತಿಯೊಬ್ಬಳು ಸ್ವಲ್ಪದರಲ್ಲೆ ಸಾವಿನಿಂದ ಪಾರಾಗಿದ್ದಾಳೆ.

ಆಸ್ಪತ್ರೆಯಲ್ಲಿ ಒಟ್ಟು 9 ಸಿಬ್ಬಂದಿ ಇದ್ದಾರೆ. ಇಬ್ಬರು ವೈದ್ಯರು. ಉಳಿದವರು ದಾದಿಯರು, ಡಿ ಗ್ರೂಪ್ ನೌಕರರು. ಆದರೆ ಭಾನುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಬಾಣಂತಿಗೆ ಚಿಕಿತ್ಸೆ ಕೊಡಲು ಮಾತ್ರ ಯಾವ ವೈದ್ಯರು ಇರಲಿಲ್ಲ.

ತಕ್ಷಣ ವಿಷಯ ತಿಳಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ರೀರಂಗ್ ಪರಿಹಾರ್, ಕಮಲನಗರ ಆಸ್ಪತ್ರೆಯಿಂದ ಅಗತ್ಯ ಸಿಬ್ಬಂದಿಯನ್ನು ತೋರಣಾ ಆಸ್ಪತ್ರೆಗೆ ಕಳುಹಿಸಿ, ಬಾಣಂತಿಯ ಸುರಕ್ಷಿತ ಹೆರಿಗೆಗೆ ನೆರವು ನೀಡಿ, ಮಾನವೀಯತೆ ಮೆರೆದಿದ್ದಾರೆ.

ಕರ್ತವ್ಯಕ್ಕೆ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿದ್ದ ಇಬ್ಬರು ವೈದ್ಯರಲ್ಲಿ ಡಾ.ಅನೀಲಕುಮಾರ ಎಕಲೂರೆ ಎಂಬುವರು ಮೈಸೂರಿಗೆ ತರಬೇತಿಗೆಂದು ಹೋಗಿದ್ದು, ಮತ್ತೊಬ್ಬ ವೈದ್ಯ ಡಾ.ಶಿವಶಂಕರ್ ವಾಲಿ ಎಂಬುವರು ಕರ್ತವ್ಯಕ್ಕೆ ಹಾಜರಿರಲಿಲ್ಲ.

ಈ ಕುರಿತು ತಾಲ್ಲೂಕು ವೈದ್ಯಾಧಿಕಾರಿ ಡಾ.ಶರಣಪ್ಪ ಅವರಿಗೆ ಕೇಳಿದರೆ, ಅಲ್ಲೆ ಇರಬೇಕು, ಸರಿಯಾಗಿ ಹುಡುಕಿ ಎಂದು ನುಣುಚಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇಲ್ಲಿನ ವೈದ್ಯರು ವಾರಕ್ಕೆ ಮೂರು ದಿನ ಮಾತ್ರ ಕರ್ತವ್ಯಕ್ಕೆ ಹಾಜರಿರುತ್ತಾರೆ. ರೋಗಿಗಳನ್ನು ಸರಿಯಾಗಿ ನೋಡುವುದಿಲ್ಲ ಎಂಬ ಆರೋಪಗಳು ಗ್ರಾಮಸ್ಥರದ್ದಾಗಿದೆ.

ಆಸ್ಪತ್ರೆಯಲ್ಲಿ ಕೆಲಸದ ವೇಳೆ ವೈದ್ಯರು ಸರಿಯಾದ ಸಮಯಕ್ಕೆ ಬಾರದೇ ಇರುವುದರಿಂದ ರೋಗಿಗಳು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿದೆ. ಆಸ್ಪತ್ರೆ ಆವರಣದಲ್ಲಿ 2 ಸುಸಜ್ಜಿತ ವಸತಿ ಗೃಹಗಳಿವೆ. ಆದರೆ ಇಲ್ಲಿ ಯಾವ ವೈದ್ಯರು ವಾಸಿಸದೇ ಇರುವುದರಿಂದ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಮುಖಂಡ ಅರಹಂತ ಸಾವಳೆ ತಿಳಿಸಿದ್ದಾರೆ.

ಚಾಂದೋರಿ, ತಪಶ್ಯಾಳ, ಕೋರ‌್ಯಾಳ್, ಮುಧೋಳ (ಕೆ), ಬಸನಾಳ್, ಭವಾನಿ ಬಿಜಲ್ಗಾಂವ್, ತೋರಣಾವಾಡಿ, ರಾಂಪೂರ್, ಕೊಟಗ್ಯಾಳ ಗ್ರಾಮಗಳಿಗೆ ಒಳಪಡುವ ತೋರಣಾ ಆಸ್ಪತ್ರೆಗೆ ಸರ್ಕಾರಿ ಸೌಲಭ್ಯಗಳಿವೆ. ಆದರೆ ಅದನ್ನು ಸಮರ್ಪಕವಾಗಿ ಬಳಕೆ ಮಾಡದಿರುವುದರಿಂದ ಆಸ್ಪತ್ರೆ ಜನರಿಂದ ಬಹುದೂರವಾಗಿದೆ.

ಆಸ್ಪತ್ರೆ ಸ್ಥಿತಿ ಹೀಗೆ ಮುಂದುವರಿದರೆ, ಈ ಆಸ್ಪತ್ರೆ ರೋಗಿಗಳ ಪಾಲಿಗೆ ಯಮಲೋಕವಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂಶಯವಿಲ್ಲ ಎಂಬ ಅಸಮಾಧಾನದ ಮಾತುಗಳು ಗ್ರಾಮದ ಪ್ರಜ್ಞಾವಂತರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT