ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹನೆಯ ಪರಾಕಾಷ್ಠೆ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಶಿವಮೊಗ್ಗದಲ್ಲಿ ದುಷ್ಕರ್ಮಿಗಳ ಗುಂಪೊಂದು `ಪ್ರಜಾವಾಣಿ~ ಕಚೇರಿಯ ಮೇಲೆ ನಡೆಸಿದ ದಾಳಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಆಕ್ರಮಣ. ಪತ್ರಿಕೆಯ ಅಂಕಣವೊಂದರಲ್ಲಿ ಬಂದ ವಿಚಾರಗಳು ಈ ದಾಳಿಗೆ ಪ್ರಚೋದನೆ ಎಂಬುದು ಮೇಲುನೋಟಕ್ಕೆ ನೀಡಲಾಗಿದ್ದ ಕಾರಣ. ವಾಸ್ತವವಾಗಿ ಇದು ತಮಗೆ ಹಿಡಿಸದ ವಿಚಾರಧಾರೆಯನ್ನು ಬಲಪ್ರಯೋಗದಿಂದ ದಮನಗೊಳಿಸುವ ಪಾಶವೀ ಕೃತ್ಯ. ಪತ್ರಿಕೆಯಲ್ಲಿ ಪ್ರಕಟವಾದ ವರದಿ ಇಲ್ಲವೇ ವಿಚಾರಗಳ ಬಗ್ಗೆ ಯಾವುದೇ ಓದುಗರಿಗೆ ಸಹಮತ ಇಲ್ಲದಿದ್ದರೆ ಅದನ್ನು ವ್ಯಕ್ತಪಡಿಸುವುದಕ್ಕೆ ನಾಗರಿಕವಾದ ಮಾರ್ಗಗಳಿವೆ. ಪ್ರಕಟವಾದ ವರದಿಯಲ್ಲಿ ತಪ್ಪುಗಳಿದ್ದರೆ ಅದನ್ನು ತಿಳಿಸುವ ವಿಧಾನವಿದೆ. ತಪ್ಪು ಮಾಹಿತಿ ಪ್ರಕಟಿಸಿದ್ದರೆ ಅದನ್ನು ಒಪ್ಪಿಕೊಳ್ಳುವುದಕ್ಕೆ ಪತ್ರಿಕೆ ಹಿಂಜರಿಯುವುದಿಲ್ಲ. ತಪ್ಪನ್ನು ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸುವ ಒಳ್ಳೆಯ ಸಂಪ್ರದಾಯ ಕನ್ನಡ ಪತ್ರಿಕಾ ರಂಗದಲ್ಲಿ ಬಳಕೆಯಲ್ಲಿದೆ. ವಿಚಾರಗಳಲ್ಲಿ ಸಹಮತ ಇಲ್ಲದಿದ್ದರೆ ಅದನ್ನು ದಾಖಲಿಸುವುದಕ್ಕೂ ಕ್ರಮಗಳಿವೆ. ದುರುದ್ದೆೀಶದ ಬರಹಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲು ಕಾನೂನು ಮಾರ್ಗಗಳಿವೆ. ಇವನ್ನೆಲ್ಲ ಬಿಟ್ಟು ಪತ್ರಿಕಾ ಕಚೇರಿಯ ಮೇಲೆ ದಾಳಿ ನಡೆಸುವುದು ಅಸಹನೆಯ ಪರಾಕಾಷ್ಠೆ. ಬೆಂಕಿ ಹಚ್ಚುವಂಥ ದುಷ್ಟ ಕೃತ್ಯಗಳು ಜೀವ ಬೆದರಿಕೆಯ ದುರುದ್ದೇಶದ ಕ್ರಮಗಳು. ಇವೆಲ್ಲ ಕಾನೂನಿಗೆ ವಿರುದ್ಧವಾದವು. ವಿಚಾರಗಳಲ್ಲಿ ಭಿನ್ನತೆ ಇದ್ದಾಗ ಅದನ್ನು ಬಗೆಹರಿಸಿಕೊಳ್ಳಲು ಚರ್ಚೆ, ಸಂವಾದದಂತಹ ನಾಗರಿಕ ವಿಧಾನಗಳೂ ಇವೆ. ನಾಗರಿಕ ವಿಧಾನಗಳನ್ನು ಕೈಬಿಟ್ಟು ಬಲಪ್ರದರ್ಶನಕ್ಕೆ ಮುಂದಾಗುವುದು ಅನಾಗರಿಕ ನಡವಳಿಕೆ. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆ ಒಪ್ಪಿಕೊಂಡ ಅಭಿಪ್ರಾಯ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ. ತಮ್ಮ ವಿಚಾರ ಒಪ್ಪದವರನ್ನು ಬಲ ಪ್ರಯೋಗದಿಂದಲಾದರೂ ಒಪ್ಪುವಂತೆ ಮಾಡುವುದು ಸರ್ವಾಧಿಕಾರ ಧೋರಣೆ. ಶಿವಮೊಗ್ಗದಲ್ಲಿ ಆದ ಘಟನೆ ಇಂಥ ಪ್ರವೃತ್ತಿಯ  ಪ್ರದರ್ಶನ.

ಕರ್ನಾಟಕ ಉದಾರವಾದಿ ಚಿಂತನೆಯನ್ನು ಮೈಗೂಡಿಸಿಕೊಂಡ ಪ್ರಗತಿಪರ ರಾಜ್ಯಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಗಳಿಸಿತ್ತು. ಆದರೆ, ರಾಜ್ಯದ್ಲ್ಲಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ವೈಜ್ಞಾನಿಕ ಚಿಂತನೆಗಳಿಗೂ ವೈಚಾರಿಕ ನಡವಳಿಕೆಗಳಿಗೂ ಗ್ರಹಣ ಬಡಿದಂತಾಗಿದೆ. ಕುರ್ಚಿಗಳಿಗೆ ಪೂಜೆ ಸಲ್ಲಿಸಿ, ಕಚೇರಿಗಳಲ್ಲಿ ಹೋಮ ಹವನಗಳನ್ನು ನಡೆಸಿ ಅಧಿಕಾರ ಸ್ವೀಕಾರ ನಡೆಸಿದ ಬಿಜೆಪಿ ಸಚಿವರು ಜನಪರ ಆಡಳಿತ ನಡೆಸುವುದಕ್ಕಿಂತ ಧರ್ಮಗುರುಗಳು ಮತ್ತು ಧಾರ್ಮಿಕ ಕ್ಷೇತ್ರಗಳ ಅವಶ್ಯಕತೆಗಳಿಗೆ ಆದ್ಯತೆ ನೀಡಿದರು. ರಾಜಕೀಯ ಸಮಸ್ಯೆಗಳಿಗೆ ಯಜ್ಞಯಾಗಗಳಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾದರು.
ಇದರಿಂದ ಪ್ರೇರಣೆ ಪಡೆದವರಂತೆ ಅವರ ಹಿಂಬಾಲಕರು ಧರ್ಮ, ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಚರ್ಚುಗಳ ಮೇಲೆ ದಾಳಿ ನಡೆಸಿದ್ದಲ್ಲದೆ, ಪಬ್‌ಗಳಿಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ ನಡೆಸುವ ವಿಕೃತಿಯನ್ನು ಪ್ರದರ್ಶಿಸಿದರು. ಇಂಥ ಕೃತ್ಯಗಳಿಗೆ ಕಾರಣರಾದವರನ್ನು ಕಾನೂನುಕ್ರಮಕ್ಕೆ ಒಳಪಡಿಸದೆ ಸರ್ಕಾರ ಅವರಿಗೆ ಕುಮ್ಮಕ್ಕು ನೀಡಿದ ಪರಿಣಾಮ ಮಾಧ್ಯಮಗಳನ್ನು ನಿಯಂತ್ರಿಸುವ ಪುಂಡಾಟಿಕೆ ಈಗ ನಡೆಯುತ್ತಿದೆ. ಜಾಗತಿಕ ಮಟ್ಟಕ್ಕೆ ಅನುಗುಣವಾಗಿ ಶೈಕ್ಷಣಿಕ ಸುಧಾರಣೆ ನಡೆಯಬೇಕೆಂಬ ಚಿಂತನೆ ರಾಷ್ಟ್ರೀಯ ಮಟ್ಟದಲ್ಲಿ ಜಾಗೃತವಾಗಿದ್ದರೆ, ರಾಜ್ಯದ ಸರ್ಕಾರ ಪಠ್ಯಕ್ರಮದಲ್ಲಿ ಭಗವದ್ಗೀತೆಯ ಬೋಧನೆಯನ್ನು ಸೇರಿಸಲು ಮುಂದಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸುವಂಥ ಇಂಥ ದಾಳಿಗೆ ಸರ್ಕಾರದ ಪ್ರತಿಗಾಮಿ ಧೋರಣೆಯೂ ಕಾರಣ. ಸಂವಿಧಾನದತ್ತ ಹಕ್ಕುಗಳನ್ನು ದಮನಗೊಳಿಸುವಂಥ ಕೃತ್ಯಗಳನ್ನು ಕಟ್ಟುನಿಟ್ಟಾಗಿ ನಿಗ್ರಹಿಸದಿದ್ದರೆ ಇದರಲ್ಲಿ ಸರ್ಕಾರವೂ ಶಾಮೀಲಾಗಿರುವ ಆರೋಪಕ್ಕೆ ಗುರಿಯಾಗುತ್ತದೆ. ಪ್ರಗತಿಪರ ಸಂಘಟನೆಗಳು ಇಂಥ ಧೋರಣೆ ವಿರುದ್ಧ ಸಂಘಟಿತವಾಗುತ್ತಿರುವುದು ಆಶಾದಾಯಕ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT