ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟವೇನು... ನೋಟವೇನು...

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನಂಬಿಕೆ ಉಳಿಸಿಕೊಂಡ ಮಗನ ಬಗ್ಗೆ ಅಪ್ಪ ಎದೆ ತಟ್ಟಿಕೊಂಡು ಹೇಳುತ್ತಿದ್ದರೆ ಮಗನ ಮುಖದಲ್ಲಿ ಮಡುಗಟ್ಟಿದ ಸಂಕೋಚ. ತಮ್ಮ ನಿರೀಕ್ಷೆಗೂ ಮೀರಿ ನೃತ್ಯ ಮತ್ತು ಫೈಟ್ ಮಾಡಿರುವ ಮಗ ಸುಮಂತ್‌ನನ್ನು ಕಂಡು ಶೈಲೇಂದ್ರ ಬಾಬು ದಂಗಾಗಿ ಹೋದಂತಿತ್ತು.

ಮಗನ ಪ್ರತಿಭೆಯ ಕುರಿತ ಹೆಮ್ಮೆ ಹಾಗೂ ನಿರ್ಮಾಪಕನೊಬ್ಬನ ಮುಖದಲ್ಲಿನ ನೆಮ್ಮದಿಯ ಭಾವ ಎರಡೂ ಅವರಲ್ಲಿತ್ತು. ಅವರಿಗೀಗ, ದೊಡ್ಡ ಖರ್ಚು ಮಾಡಿ `ಆಟ~ವಾಡಿಸಿದ್ದು ಸಾರ್ಥಕ ಎನಿಸಿದೆ.

ಸುಮಂತ್ ಅಭಿನಯದ `ಆಟ~ ಚಿತ್ರದ ಹಾಡುಗಳನ್ನು ಪ್ರದರ್ಶಿಸಿದ ಪತ್ರಿಕಾಗೋಷ್ಠಿಯಲ್ಲಿ ಶೈಲೇಂದ್ರಬಾಬು ತಮ್ಮ ಸಂತಸವನ್ನು ಮುಕ್ತವಾಗಿ ಹಂಚಿಕೊಂಡರು.

ಕನ್ನಡ ಸಿನಿಮಾದಲ್ಲಿ ಇದುವರೆಗೆ ಯಾರೂ ತೋರಿಸದ ಟರ್ಕಿ ದೇಶದ ಇಸ್ತಾಂಬುಲ್, ಅಂಥೋಲಿಯಾ, ಕಬೋಲಿಯಾ ಮುಂತಾದ ಊರುಗಳಲ್ಲಿ ಹಾಡುಗಳನ್ನು ಸೊಗಸಾಗಿ
ಸೆರೆಹಿಡಿದಿರುವುದಾಗಿ ವಿವರಿಸಿದರು.

`ಸಂಗೀತಕ್ಕೆ ತಕ್ಕ ನೃತ್ಯ, ಅದಕ್ಕೆ ತಕ್ಕ ತಾಣ ಇರಬೇಕು ಎಂಬುದು ನನ್ನ ಆಸೆಯಾಗಿತ್ತು. ಅಂದುಕೊಂಡಂತೆ ಎಲ್ಲಾ ಬಂದಿದೆ. ಇನ್ನು 25 ದಿನಗಳಲ್ಲಿ ಡಿಎ, ಸಿಜಿ ಕೆಲಸ ಮುಗಿದು ಪ್ರಥಮ ಪ್ರತಿ ಸಿದ್ಧವಾಗಲಿದೆ. ನನ್ನ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಇದು ಎಲ್ಲಕ್ಕಿಂತ ಮೇಲಿದೆ.

ಹೊಸ ನಾಯಕ-ನಾಯಕಿಯಿಂದ ನಿರ್ದೇಶಕರು ಕಷ್ಟಪಟ್ಟು ಕೆಲಸ ತೆಗೆಸಿದ್ದಾರೆ. ತೆಲುಗಿನ ನೃತ್ಯ ನಿರ್ದೇಶಕ ಗಣೇಶ್ ಅವರನ್ನು ಒಂದು ಹಾಡಿಗೆ ಮಾತ್ರ ನೃತ್ಯ ನಿರ್ದೇಶಿಸಲು ಕೇಳಿಕೊಂಡೆವು.
 
ಅವರು ಸುಮಂತ್ ಸಾಮರ್ಥ್ಯ ಕಂಡು ನಾಲ್ಕು ಹಾಡುಗಳಿಗೂ ತಾವೇ ನಿರ್ದೇಶನ ಮಾಡುವುದಾಗಿ ಹೇಳಿದರು.ಸುಮಂತ್ ನೃತ್ಯದೊಂದಿಗೆ ತುಂಬಾ ಅಪಾಯಕಾರಿ ಫೈಟ್ ಕೂಡ ಮಾಡಿದ್ದಾನೆ~ ಎಂದು ಹೊಗಳಿಕೆಯ ಮಾತುಗಳನ್ನಾಡಿದರು.

ನಿರ್ದೇಶಕ ವಿಜಯ್‌ಕುಮಾರ್ ಅವರಿಗೆ ಇದು ಆರನೇ ಸಿನಿಮಾ. ಶೈಲೇಂದ್ರ ಬಾಬು ಅವರು ನೀಡಿದ ಅವಕಾಶಕ್ಕೆ ವಂದಿಸಿದ ಅವರು, ಸುಮಂತ್‌ಗೆ ಧೈರ್ಯ ತುಂಬಿದ ಸಂಗತಿಗಳನ್ನು ಹೇಳಿಕೊಂಡರು.

`ಜಯಂತ್ ಎರಡು ಹಾಡು, ನಾಗೇಂದ್ರ ಪ್ರಸಾದ್, ಕವಿರಾಜ್, ರೇವಣ್ಣ, ತುಷಾರ ರಂಗನಾಥ್ ತಲಾ ಒಂದೊಂದು ಹಾಡು ಬರೆದಿದ್ದಾರೆ.

ಟರ್ಕಿಯಲ್ಲಿ ರಾತ್ರಿ 12 ಗಂಟೆ ಪ್ರಯಾಣ ಮಾಡಿ ಬೆಳಿಗ್ಗೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೆವು. ಇಷ್ಟೆಲ್ಲಾ ಕಷ್ಟಪಟ್ಟು ಸಿನಿಮಾ ಮಾಡಿರುವೆವು~ ಎಂದು ಮಾತು ಮುಗಿಸಿದರು.

ಎರಡು ವರ್ಷಗಳ ನಂತರ ಸಂಗೀತ ನಿರ್ದೇಶಕನ ಪಟ್ಟವನ್ನು ಮತ್ತೆ ಆಯ್ದುಕೊಂಡು `ಆಟ~ಕ್ಕೆ ರಾಗ ಸಂಯೋಜಿಸಿರುವುದಾಗಿ ಹೇಳಿದ ಸಾಧು ಕೋಕಿಲ ಇದೀಗ ಹಿನ್ನೆಲೆ ಸಂಗೀತ ಕೆಲಸವನ್ನು ಮುಗಿಸಿದ್ದಾರೆ.

`ಇಷ್ಟಪಟ್ಟು, ನಿರ್ಮಾಪಕರಿಗೆ ಕಷ್ಟಕೊಟ್ಟು, ನಿರ್ದೇಶಕರ ತಲೆತಿಂದು ವಿಭಿನ್ನ ಪ್ರಯೋಗ ಮಾಡಿ ಸಂಗೀತ ನೀಡಿರುವೆ. ಅರ್ಧ ಗಂಟೆಯಲ್ಲಿ ಹಾಡು ಹೇಳಿ ಹೋಗುತ್ತಿದ್ದ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್, ಪ್ರಶ್ನೆ ಉತ್ತರದ ಮಾದರಿಯ ಒಂದು ಹಾಡನ್ನು ಮೂರು ಗಂಟೆ ಸಮಯ ತೆಗೆದುಕೊಂಡು ಹಾಡಿದರು.

ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಹಾಡುಗಳನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ~ ಎಂದು ಹೇಳಿದ ಸಾಧು, ತಮ್ಮ ಸಂಗೀತದ ಮಾಧುರ್ಯ ಸವಿಯಲು ಮನವಿ ಮಾಡಿದರು.

ತಮ್ಮ ಮೊದಲ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುವರೋ ಎಂಬ ಕುತೂಹಲ ಇದೆ ಎಂದಷ್ಟೇ ಹೇಳಿ ನಾಯಕ ಸುಮಂತ್ ಸುಮ್ಮನಾದರು. ಕಾರ್ಯಕಾರಿ ನಿರ್ಮಾಪಕ ಮಧುಸೂದನ ರೆಡ್ಡಿ ಅವರಿಗೆ ಸುಮಂತ್ ಅಪಾಯಕಾರಿ ಸ್ಟಂಟ್ ಮಾಡಿರುವುದು ಅಚ್ಚರಿ ಎನಿಸಿದೆ.

ಅಂದಹಾಗೆ, ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಿರುವ ಶೈಲೇಂದ್ರ ಬಾಬು `ಆಟ~ ಸಿನಿಮಾದ ಭಾವಚಿತ್ರ ಇರುವ ಹತ್ತು ಲಕ್ಷ ಚಹಾ ಕಪ್‌ಗಳನ್ನು ತಯಾರಿಸಿ ಉಚಿತವಾಗಿ ಹಂಚುತ್ತಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT