ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊದಲ್ಲಿ ವಿದೇಶಿಯರ ಸಾಹಸ

Last Updated 17 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ವಿದೇಶಿಯರಲ್ಲಿ ಆಕ್ರಮಣ, ಸಾಹಸ ಪ್ರವೃತ್ತಿ ಸದಾ ಜಾಗೃತವಾಗಿರುತ್ತದೆ. ಹಾಗಾಗಿ ಅವರಿಗೆ ಅಡ್ವೆಂಚರ್‌ಗಳೆಂದರೆ ಪ್ರಾಣ. ಇದಕ್ಕಾಗಿ ಅವರು ಎಂತಹ ಕಷ್ಟಕರ ಸನ್ನಿವೇಶವನ್ನು ಬೇಕಾದರೂ ಮೈಮೇಲೆ ಎಳೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ.

ಇದಕ್ಕೆ ಹೊಸ ಸೇರ್ಪಡೆ ಆಟೊರಿಕ್ಷಾ ಚಾಲೆಂಜ್. ಹದಗೆಟ್ಟ ರಸ್ತೆ, ದುರ್ಗಮ ಹಾದಿಯನ್ನು ಆಟೊರಿಕ್ಷಾದಲ್ಲಿ ಕ್ರಮಿಸುವುದು ಸವಾಲಿನ ವಿಚಾರ. ಆದರೆ ಸಮಾಜದ ಬಗ್ಗೆ ಕಳಕಳಿ ಹೊಂದಿರುವ ನ್ಯೂಜಿಲೆಂಡ್, ಐರ‌್ಲೆಂಡ್, ಬ್ರಿಟನ್, ಚಿಲಿ ಹಾಗೂ ಆಸ್ಟ್ರೇಲಿಯದ 31 ವಿದೇಶಿ ಚಾಲಕರು ಜನಜಾಗೃತಿ ಮೂಡಿಸುವ ಸಲುವಾಗಿ 14 ಆಟೊಗಳಲ್ಲಿ 2000 ಕಿ.ಮೀ. ಪ್ರವಾಸ ಮಾಡಿ ಅಚ್ಚರಿ ಮೂಡಿಸಿದರು. ನಿಧಿ ಸಂಗ್ರಹಣೆ ಕೂಡ ಇದರ ಒಂದು ಭಾಗ. ಅಂದ ಹಾಗೆ ಇದಕ್ಕೆ ವೇದಿಕೆ ಒದಗಿಸಿದ್ದು `ಮುಂಬೈ ಎಕ್ಸ್‌ಪ್ರೆಸ್ 2011~.

ಈ ಸಾಹಸ ಅಭಿಯಾನ ವಾಣಿಜ್ಯ ನಗರಿ ಮುಂಬೈನಲ್ಲಿ ಜುಲೈ 30ರಂದು ಪ್ರಾರಂಭವಾಗಿತ್ತು. ನಂತರ ಈ ಆಟೊಗಳು ಆಲಿಬಾಗ್, ಪುಣೆ, ಮಹಾಬಲೇಶ್ವರ, ಪಣಜಿ, ಮಂಗಳೂರು ಹಾಗೂ ಮೈಸೂರು ಮುಖಾಂತರ ಬೆಂಗಳೂರಿಗೆ ಬಂದು ಇಲ್ಲಿಂದ ಚೆನ್ನೈ ತಲುಪಿದವು. ಪ್ರತಿಯೊಂದು ಆಟೊ ಮೇಲೆ ಕಿತ್ತಳೆ, ಬೆಳ್ಳಿ ಗಾಢ ಬಣ್ಣ, ಜತೆಗೆ ಆಸಕ್ತಿ ಕೆರಳಿಸುವ ಕಲಾಕೃತಿಗಳು ರಾರಾಜಿಸುತ್ತಿದ್ದವು.

ಸಮಾಜದಲ್ಲಿ ತಾಂಡವಾಡುತ್ತಿರುವ ವಿವಿಧ ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂಬ ಆಶಯದಿಂದ ಇವರು ಆಟೊ ಹತ್ತ್ದ್ದಿದರು. ಕರಾವಳಿ ತೀರವನ್ನು ಆಟೊದಲ್ಲಿ ಕ್ರಮಿಸಿ ಬೆಂಗಳೂರಿಗೆ ಬಂದಿದ್ದಾಗ ಇವರು ತಮ್ಮ ಅನುಭವ ಹಂಚಿಕೊಂಡರು.

`ಇದೊಂದು ವಿಶಿಷ್ಟ ಅನುಭವ. ಅವಿರತವಾಗಿ ಮುನ್ನಡೆಯುತ್ತಿರುವ ಈ ಯಾತ್ರೆ ರೋಚಕವಾದುದು. ಅಷ್ಟೇ ಆಯಾಸ ತರುವಂತಹದ್ದು. ಆದರೆ ನಮ್ಮ ಸಾಮಾಜಿಕ ಆಶಯ ಈಡೇರಿದ ನಂತರ ಇದೊಂದು ಮಧುರ ನೆನಪಾಗಿ ಉಳಿಯಲಿದೆ. ಪ್ರತಿ ಆಟೊದಲ್ಲಿ ಮೂರು ಮಂದಿ ಇದ್ದು, ಸರತಿಯನುಸಾರವಾಗಿ ಆಟೊ ಚಾಲನೆ ಮಾಡುತ್ತ್ದ್ದಿದೆವು. ನಮ್ಮ ಪ್ರಮುಖ ಉದ್ದೇಶ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ನಿಧಿ ಸಂಗ್ರಹ ಮಾಡುವುದು~ ಎಂದರು ಚಾಲಕ ಆ್ಯಂಡ್ರ್ಯೂ.

`ನನ್ನದು ಭಾರತಕ್ಕೆ ಇದೇ ಮೊದಲ ಭೇಟಿ. ನಾನು ಇಂಟರ್ನೆಟ್‌ನಲ್ಲಿ ಆಟೊರಿಕ್ಷಾ ಚಾಲೆಂಜ್ ನೋಡಿ ಆಕರ್ಷಿತನಾಗಿ ಪಾಲ್ಗೊಂಡೆ. ಆಟೊ ಚಾಲನೆಗೆ ನಾವು ಯಾವುದೇ ರೋಡ್ ಮ್ಯಾಪ್ ಬಳಸಲಿಲ್ಲ. ಆಟೊದಲ್ಲಿ ನನ್ನ ಜೊತೆ ರೀಸಿ ಮತ್ತು ಜಾರ್ಜಿಯಾ ಇದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಬರುವಾಗಿನ ದೊರೆತ ಅನುಭವ ವಿಶಿಷ್ಟವಾಗಿತ್ತು. ಭಾರತೀಯ ಚಾಲಕರು ತುಂಬಾ ಕ್ರೇಜಿ. ಇಲ್ಲಿನ ಬಹುತೇಕ ರಸ್ತೆಗಳು ಭಯಾನಕ. ಅವು ನಮ್ಮ ವೇಗಕ್ಕೆ ಸ್ವಲ್ಪ ಕಡಿವಾಣ ಹಾಕಿದವು~ ಎಂದು ನಕ್ಕರು ಆ್ಯಂಡ್ರ್ಯೂ.

ರೀಸಿ ಈ ಮೊದಲು ಭಾರತಕ್ಕೆ ಭೇಟಿ ನೀಡಿದ್ದರಂತೆ. ಆಟೊರಿಕ್ಷಾ ಚಾಲೆಂಜ್‌ನಲ್ಲಿ ಪಾಲ್ಗೊಳ್ಳಲು ಬಹಳ ಖುಷಿಯಾಯಿತು. ನನ್ನ ರಜಾ ದಿನಗಳನ್ನು ಈ ರೀತಿಯ ಸಾಹಸ ಕೆಲಸದಲ್ಲಿ ತೊಡಗಿಸಿಕೊಳ್ಳುವುದೆಂದರೆ ತುಂಬಾ ಇಷ್ಟ. ನಮ್ಮ ಈ ಅಭಿಯಾನದ ಮೂಲಕ ಜನರಲ್ಲಿ ಸಾಮಾಜಿಕ ಅರಿವು ಮೂಡಿಸುವ ಅವಕಾಶ ದೊರೆತದ್ದು ನನಗಂತೂ ಖುಷಿ ನೀಡಿದೆ~ ಎಂದು ಅಭಿಮಾನದಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT