ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಮಹಿ ಬಳಗ

Last Updated 13 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಮೇಲೆ ಆವರಿಸಿದ್ದ ಸೋಲಿನ ಕರಿನೆರಳನ್ನು ಪಿಯೂಷ್ ಚಾವ್ಲಾ ಮತ್ತು ಹರಭಜನ್ ಸಿಂಗ್ ತಮ್ಮ ಕೈಚಳಕದಿಂದ ದೂರ ಮಾಡಿದರು. ಮಾತ್ರವಲ್ಲ ವಿಶ್ವಕಪ್ ಟೂರ್ನಿಗೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿ ಕೊಳ್ಳಲು ತಂಡಕ್ಕೆ ಅಗತ್ಯವಿದ್ದ ಗೆಲುವು ಒಲಿಸಿಕೊಳ್ಳಲು ನೆರವಾದರು.

ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಒಲಿದದ್ದು 38 ರನ್‌ಗಳ ಗೆಲುವು. ಇದರ ಕ್ರೆಡಿಟ್ ಸಲ್ಲಬೇಕಾದದ್ದು ಚಾವ್ಲಾ ಅವರಿಗೆ. 31 ರನ್‌ಗಳಿಗೆ ನಾಲ್ಕು ವಿಕೆಟ್ ಕಿತ್ತ ಈ ಸ್ಪಿನ್ನರ್ ಆಸೀಸ್ ಗೆಲುವಿನ ಕನಸನ್ನು ಪುಡಿಗಟ್ಟಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಹರಭಜನ್ 15 ರನ್ ನೀಡಿ ಮೂರು ವಿಕೆಟ್ ಪಡೆದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 44.3 ಓವರ್‌ಗಳಲ್ಲಿ 214 ರನ್‌ಗಳಿಗೆ ಆಲೌಟಾಯಿತು. ವೀರೇಂದ್ರ ಸೆಹ್ವಾಗ್ (54) ತಂಡದ ಗರಿಷ್ಠ ಸ್ಕೋರರ್ ಎನಿಸಿದರು. ಬಳಿಕ ಆಸ್ಟ್ರೇಲಿಯಾ ತಂಡವನ್ನು 37.5 ಓವರ್‌ಗಳಲ್ಲಿ 176 ರನ್‌ಗಳಿಗೆ ಕಟ್ಟಿಹಾಕಿತಲ್ಲದೆ, ವಿಶ್ವಕಪ್ ಟ್ರೋಫಿಯೆಡೆಗಿನ ಅಭಿಯಾನವನ್ನು ಯಶಸ್ಸಿನೊಂದಿಗೆ ಆರಂಭಿಸಿತು.

ತನ್ನ ಎದುರಿಗಿದ್ದ ಸಾಧಾರಣ ಮೊತ್ತವನ್ನು ಆಸೀಸ್ ಆತ್ಮವಿಶ್ವಾಸದೊಂದಿಗೆಯೇ ಬೆನ್ನಟ್ಟಿತ್ತು. ವ್ಯಾಟ್ಸನ್ (33, 26 ಎಸೆತ, 7 ಬೌಂಡರಿ) ಮತ್ತು ಟಿಮ್ ಪೈನ್ (37) ಮೊದಲ ವಿಕೆಟ್‌ಗೆ 51 ರನ್ ಸೇರಿಸಿದರು. ಬಳಿಕ ಪಾಂಟಿಂಗ್ ಮತ್ತು ಪೈನ್ ಎರಡನೇ ವಿಕೆಟ್‌ಗೆ 67 ರನ್‌ಗಳನ್ನು ಕಲೆಹಾಕಿದರು.

ಆದರೆ ಒಂದು ವಿಕೆಟ್‌ಗೆ 118 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಆಸೀಸ್ ಬಳಿಕ ಹಠಾತ್ ಕುಸಿತ ಕಂಡಿತು. ಇದಕ್ಕೆ ಕಾರಣ ಚಾವ್ಲಾ ಅವರ ಮ್ಯಾಜಿಕ್. ಮೈಕಲ್ ಕ್ಲಾರ್ಕ್, ಕ್ಯಾಮರೂನ್ ವೈಟ್, ಡೇವಿಡ್ ಹಸ್ಸಿ ಮತ್ತು ಕಾಲಮ್ ಫರ್ಗ್ಯುಸನ್ ಅವರು ಚಾವ್ಲಾ ಬೀಸಿದ ಬಲೆಯಲ್ಲಿ ಬಿದ್ದು ಒದ್ದಾಡಿದರು. ಆ ಬಳಿಕ ಕೈಚಳಕ ತೋರಿದ ‘ಭಜ್ಜಿ’ ಆಸೀಸ್ ಇನಿಂಗ್ಸ್‌ಗೆ ಬೇಗನೇ ಅಂತ್ಯಹಾಡಿದರು.

ನಾಯಕ ರಿಕಿ ಪಾಂಟಿಂಗ್ (57, 85 ಎಸೆತ) ಅಲ್ಪ ಹೋರಾಟ ನಡೆಸಿದರಾದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು. ರಜಾದಿನವಾಗಿದ್ದ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣ ಭರ್ತಿಯಾಗಿತ್ತು. ‘ಮಹಿ’ ಬಳಗ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಲಿಲ್ಲ. ಶ್ರೀಶಾಂತ್ ಅವರು ಪಾಂಟಿಂಗ್ ಜೊತೆ ಮಾತಿನ ಚಕಮಕಿ ನಡೆಸಿ ಪಂದ್ಯದ ಕಾವು ಹೆಚ್ಚುವಂತೆ ಮಾಡಿದರು.

ಸಾಧಾರಣ ಮೊತ್ತ: ಭಾರತದ ಇನಿಂಗ್ಸ್ ವೇಳೆ ಅಬ್ಬರ ಇರಲಿಲ್ಲ. ಆರಂಭದಿಂದ ಕೊನೆಯವರೆಗೂ ಒಂದೇ ಲಯ ಕಂಡುಬಂತು. ವೀರೇಂದ್ರ ಸೆಹ್ವಾಗ್ ಮತ್ತು ಯೂಸುಫ್ ಪಠಾಣ್ (32, 38 ಎಸೆತ, 2 ಸಿಕ್ಸರ್) ಮಾತ್ರ ಅಲ್ಪ ರಂಜನೆಯ ಇನಿಂಗ್ಸ್ ಆಡಿದರು. ಗಾಯದಿಂದ ಚೇತರಿಸಿಕೊಂಡು ಆಡಲಿಳಿದ ಗೌತಮ್ ಗಂಭೀರ್ (6) ಅವರನ್ನು ಭಾರತ ಬೇಗನೇ ಕಳೆದುಕೊಂಡಿತು. ಆರಂಭದಲ್ಲೇ ರನೌಟ್ ಅಪಾಯದಿಂದ ಪಾರಾದ ಸೆಹ್ವಾಗ್ ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ (21) ಜೊತೆ 42 ರನ್‌ಗಳ ಜೊತೆಯಾಟ ನೀಡಿದರು.

ಆದರೆ ಕೊಹ್ಲಿ ಮತ್ತು ಬಳಿಕ ಬಂದ ಯುವರಾಜ್ ಸಿಂಗ್ (1) ಅವರನ್ನು ಬೇಗನೇ ಪೆವಿಲಿಯನ್‌ಗಟ್ಟಿದ ಆಸೀಸ್ ಭಾರತಕ್ಕೆ ಅವಳಿ ಆಘಾತ ನೀಡಿತು. ತಂಡವನ್ನು ಕುಸಿತದಿಂದ ಮೇಲೆತ್ತುವ ಜವಾಬ್ದಾರಿ ಮಹೇಂದ್ರ ಸಿಂಗ್ ದೋನಿ ಹೆಗಲ ಮೇಲೆ ಬಿತ್ತು. ಸೆಹ್ವಾಗ್ ಜೊತೆ ಸೇರಿದ ಅವರು 22ನೇ ಓವರ್‌ನಲ್ಲಿ ತಂಡದ ಮೊತ್ತ ವನ್ನು 100ರ ಗಡಿ ದಾಟಿಸಿದರು. ಈ ಜೊತೆಯಾಟಕ್ಕೆ ಕೂಡಾ ಹೆಚ್ಚಿನ ಆಯುಸ್ಸು ಇರಲಿಲ್ಲ. ಸೆಹ್ವಾಗ್ ಆರ್ಧ ಶತಕ ಪೂರೈಸಿ ಪೆವಿಲಿಯನ್ ಹಾದಿ ಹಿಡಿದರೆ, 11 ರನ್ ಗಳಿಸಿದ ದೋನಿ ಅವರು ಹೇಸ್ಟಿಂಗ್ಸ್ ಎಸೆತದಲ್ಲಿ ಬೌಲ್ಡ್ ಆದರು. ‘ವೀರೂ’ 56 ಎಸೆತಗಳನ್ನು ಎದುರಿಸಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿದರು.

ಈ ಹಂತದಲ್ಲಿ ಬೆಂಕಿಯುಗುಳಿದ ಬ್ರೆಟ್ ಲೀ ಅವರು ಸುರೇಶ್ ರೈನಾ, ಹರಭಜನ್ ಸಿಂಗ್ ಮತ್ತು ಪಿಯೂ ಷ್ ಚಾವ್ಲಾ ವಿಕೆಟ್ ಪಡೆದರು. ಮೂರು ವಿಕೆಟ್‌ಗೆ 101 ರನ್ ಗಳಿ ಸಿದ್ದ ತಂಡ 138 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತು. ಕೊನೆಯ ಕ್ರಮಾಂಕದ ಬ್ಯಾಟ್ಸ್ ಮನ್‌ಗಳ ನೆರವಿನಿಂದ ಭಾರತದ ಮೊತ್ತ 200ರ ಗಡಿ ದಾಟಿತು.

ಸ್ಕೋರ್ ವಿವರ
ಭಾರತ:
44.3 ಓವರ್‌ಗಳಲ್ಲಿ 214
ಗೌತಮ್ ಗಂಭೀರ್ ಸಿ ವೈಟ್ ಬಿ ಡಗ್ ಬೋಲಿಂಜರ್  06
ವೀರೇಂದ್ರ ಸೆಹ್ವಾಗ್ ಬಿ ಜಾಸನ್ ಕ್ರೇಜಾ  54
ವಿರಾಟ್ ಕೊಹ್ಲಿ ಸಿ ಹಸ್ಸಿ ಬಿ ಜಾನ್ ಹೇಸ್ಟಿಂಗ್ಸ್  21
ಯುವರಾಜ್ ಸಿಂಗ್ ಸಿ ಪೈನ್ ಬಿ ಮಿಷೆಲ್ ಜಾನ್ಸನ್  01
ಮಹೇಂದ್ರ ಸಿಂಗ್ ದೋನಿ ಬಿ ಜಾನ್ ಹೇಸ್ಟಿಂಗ್ಸ್  11
ಸುರೇಶ್ ರೈನಾ ಸಿ ಪೈನ್ ಬಿ ಬ್ರೆಟ್ ಲೀ  12
ಯೂಸುಫ್ ಪಠಾಣ್ ಸಿ ಕ್ರೇಜಾ ಬಿ ಡೇವಿಡ್ ಹಸ್ಸಿ  32
ಹರಭಜನ್ ಸಿಂಗ್ ಬಿ ಬ್ರೆಟ್ ಲೀ  04
ಪಿಯೂಷ್ ಚಾವ್ಲಾ ಬಿ ಬ್ರೆಟ್ ಲೀ  00
ಆರ್. ಅಶ್ವಿನ್ ಔಟಾಗದೆ  25
ಆಶೀಶ್ ನೆಹ್ರಾ ಸಿ ಕ್ರೇಜಾ ಬಿ ಡೇವಿಡ್ ಹಸ್ಸಿ  19
ಇತರೆ: (ಲೆಗ್‌ಬೈ-3, ವೈಡ್-25, ನೋಬಾಲ್-1)  29
ವಿಕೆಟ್ ಪತನ: 1-12 (ಗಂಭೀರ್; 3.1), 2-54 (ಕೊಹ್ಲಿ; 11.4), 3-63 (ಯುವರಾಜ್; 14.3), 4-101 (ದೋನಿ; 21.4), 5-113 (ಸೆಹ್ವಾಗ್; 22.6), 6-132 (ರೈನಾ; 27.3), 7-136 (ಹರಭಜನ್; 27.5), 8-138 (ಚಾವ್ಲಾ; 29.5), 9-187 (ಪಠಾಣ್; 38.5), 10-214 (ನೆಹ್ರಾ; 44.3).
ಬೌಲಿಂಗ್: ಬ್ರೆಟ್ ಲೀ 10-1-35-3, ಡಗ್ ಬೋಲಿಂಜರ್ 6-0-29-1, ಮಿಷೆಲ್ ಜಾನ್ಸನ್ 9-0-42-1, ಜಾನ್ ಹೇಸ್ಟಿಂಗ್ಸ್ 6-0-24-2, ಜಾಸನ್ ಕ್ರೇಜಾ 10-0-56-1, ಡೇವಿಡ್ ಹಸ್ಸಿ 3.3-0-25-2

ಆಸ್ಟ್ರೇಲಿಯಾ: 37.5 ಓವರ್‌ಗಳಲ್ಲಿ 176
ಶೇನ್ ವ್ಯಾಟ್ಸನ್ ಸಿ ಚಾವ್ಲಾ ಬಿ ಎಸ್. ಶ್ರೀಶಾಂತ್  33
ಟಿಮ್ ಪೈನ್ ಸಿ ಮುನಾಫ್ ಬಿ ಯುವರಾಜ್ ಸಿಂಗ್  37
ರಿಕಿ ಪಾಂಟಿಂಗ್ ಸ್ಟಂಪ್ ದೋನಿ ಬಿ ಹರಭಜನ್ ಸಿಂಗ್  57
ಮೈಕಲ್ ಕ್ಲಾರ್ಕ್ ಬಿ ಪಿಯೂಷ್ ಚಾವ್ಲಾ  00
ಕ್ಯಾಮರೂನ್ ವೈಟ್ ಸಿ ಅಶ್ವಿನ್ ಬಿ ಪಿಯೂಷ್ ಚಾವ್ಲಾ  04
ಡೇವಿಡ್ ಹಸ್ಸಿ ಸ್ಟಂಪ್ ದೋನಿ ಬಿ ಪಿಯೂಷ್ ಚಾವ್ಲಾ  00
ಕಾಲಮ್ ಫರ್ಗ್ಯುಸನ್ ಸಿ ಕೊಹ್ಲಿ ಬಿ ಪಿಯೂಷ್ ಚಾವ್ಲಾ  08
ಮಿಷೆಲ್ ಜಾನ್ಸನ್ ಸ್ಟಂಪ್ ದೋನಿ ಬಿ ಹರಭಜನ್ ಸಿಂಗ್  15
ಜಾನ್ ಹೇಸ್ಟಿಂಗ್ಸ್ ಔಟಾಗದೆ  01
ಜಾಸನ್ ಕ್ರೇಜಾ ಎಲ್‌ಬಿಡಬ್ಲ್ಯು ಬಿ ಹರಭಜನ್ ಸಿಂಗ್  00
ಬ್ರೆಟ್ ಲೀ  ಬಿ ಆರ್. ಅಶ್ವಿನ್  01
ಇತರೆ: (ಬೈ-3, ಲೆಗ್‌ಬೈ-6, ವೈಡ್-11)  20
ವಿಕೆಟ್ ಪತನ: 1-51 (ವ್ಯಾಟ್ಸನ್; 7.5), 2-118 (21.5), 3-120 (ಕ್ಲಾರ್ಕ್; 22.6), 4-138 (ವೈಟ್; 28.1), 5-138 (ಹಸ್ಸಿ; 28.2), 6-148 (ಫರ್ಗ್ಯುಸನ್; 30.4), 7-166 (ಪಾಂಟಿಂಗ್; 34.3), 8-175 (ಜಾನ್ಸನ್; 36.1), 9-175 (ಕ್ರೇಜಾ; 36.4), 10-176 (ಲೀ; 37.5)
ಬೌಲಿಂಗ್: ಆಶೀಶ್ ನೆಹ್ರಾ 2-0-12-0, ಎಸ್. ಶ್ರೀಶಾಂತ್ 5-0-21-1, ಮುನಾಫ್ ಪಟೇಲ್ 2-0-22-0, ಆರ್. ಅಶ್ವಿನ್ 9.5-0-47-1, ಪಿಯೂಷ್ ಚಾವ್ಲಾ 9-0-31-4, ಯುವರಾಜ್ ಸಿಂಗ್ 5-0-19-1, ಹರಭಜನ್ ಸಿಂಗ್ 5-0-15-3
ಫಲಿತಾಂಶ: ಭಾರತಕ್ಕೆ 38 ರನ್ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT