ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶಗಳ ಉದಯ ಕಿರಣ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸರಿಯಾಗಿ ಎರಡು ವರ್ಷಗಳ ಹಿಂದೆ ಆದರ್ಶಾ ರಾವ್ ಮತ್ತು ಉದಯ್ ಕಿರಣ್ ದಂಪತಿ ಅಮೆರಿಕದ ಬದುಕಿಗೆ ವಿದಾಯ ಹೇಳಿ ಹೊರಡುವಾಗ ಒಂದು ಬಹುಮುಖ್ಯ ನಿರ್ಧಾರ ಕೈಗೊಂಡಿದ್ದರು-ನಮ್ಮಿಂದ ಸಮಾಜಕ್ಕೆ ಏನಾದರೂ ಉಪಕಾರವಾಗಬೇಕು!.
 
ಇಂಥದ್ದೊಂದು ನಿರ್ಧಾರ ಕೈಗೊಳ್ಳುವುದು ಸುಲಭ. ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ಹೇಗೆ? ಅದಕ್ಕೆ ಮತ್ತೆರಡು ವರ್ಷ ಬೇಕಾಯಿತು. 2012ರ ಜನವರಿಯಲ್ಲಿ  20,000 ರೂಪಾಯಿ ಬಂಡವಾಳ ಹೂಡಿ ಮನೆಯಲ್ಲೇ ಕಾಗದದ ಕೈಚೀಲಗಳನ್ನು ತಯಾರಿಸಿ ಅವುಗಳ ಮೇಲೆ `ಪರಿಸರವನ್ನು ಪ್ರೇಮಿಸಿ, ಕಾಗದದ ಕೈಚೀನ ಬಳಸಿ~ ಎಂಬ ಮುದ್ರೆಯೊತ್ತಿದರು. ಈಗ ಅದೇ ಉದ್ದಿಮೆ ಈ ದಂಪತಿಯ ಬದುಕಿಗೊಂದು ದಾರಿಯಾಗಿದೆ.

ಅಮೆರಿಕದಲ್ಲಿ ಐ.ಟಿ. ಕಂಪೆನಿಗಳಲ್ಲಿ ದುಡಿಯುತ್ತಿದ್ದ ದಂಪತಿ ಇಲ್ಲಿ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಯಲ್ಲೂ ಅಷ್ಟೇ ಪ್ರಮಾಣದ ಹಣ ಸಂಪಾದಿಸುತ್ತಿರಬಹುದೆಂಬ ನಿರೀಕ್ಷೆಯೊಂದಿಗೆ ನಿಮ್ಮ ಆದಾಯ ಎಷ್ಟು ಎಂದು ಪ್ರಶ್ನಿಸಿದರೆ ಅವರ ಉತ್ತರ `ತಿಂಗಳಿಗೆ 16 ಸಾವಿರ ರೂಪಾಯಿಗಳು!~.

ಆದರ್ಶಾರಾವ್ ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿದ್ದ ದಿನಗಳಲ್ಲೇ ತಿಂಗಳಿಗೆ 800 ಡಾಲರ್ ಅಂದರೆ ಸುಮಾರು 40,000 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. ಈಗ ತಮ್ಮ ಪತಿಯೊಂದಿಗೆ ಸೇರಿ ದುಡಿದರೂ ಅದರ ಅರ್ಧವನ್ನಷ್ಟೇ ಗಳಿಸುತ್ತಿದ್ದಾರೆ. ಅಂದರೆ ಆದರ್ಶಾ ಮತ್ತು ಉದಯ ಕಿರಣ್ ತಮ್ಮ ಬದುಕಿನಲ್ಲಿ ತಂದುಕೊಂಡ ಬದಲಾವಣೆ ಕೇವಲ ಉದ್ಯೋಗಕ್ಕಷ್ಟೇ ಸೀಮಿತವಾಗಿಲ್ಲ.
 
ಅಥವಾ ಪರಿಸರ ಸ್ನೇಹ ಎಂಬುದು ಅವರಿಗೆ ಕೇವಲ `ಔದ್ಯಮಿಕ~ ನಿರ್ಧಾರಗಳಿಗಷ್ಟೇ ಸೀಮಿತವಾಗಿಲ್ಲ. ಅವರು ತಮ್ಮ ನಿತ್ಯದ ಬದುಕನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿಸಿಕೊಂಡಿದ್ದಾರೆ. ಉದ್ಯಾನನಗರಿಯ ಬನಶಂಕರಿಯಲ್ಲಿ ಪುಟ್ಟ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇವರು, ಅನವಶ್ಯಕ ವಸ್ತುಗಳ ಬಳಕೆಗೆ ನಿಷೇಧ ಹೇರಿದ್ದಾರೆ.

ಫ್ರಿಜ್, ವಾಷಿಂಗ್ ಮೆಷಿನ್‌ಗಳ ಹಂಗಿಲ್ಲ. ಟಿವಿ ಇದ್ದರೂ ವಿದ್ಯಮಾನಗಳ ತಿಳಿವಳಿಕೆಗೆ ಮಾತ್ರ ಬಳಕೆ, ಎಷ್ಟು ದೂರದ ವಸ್ತು ಪ್ರದರ್ಶನಕ್ಕೆ ಹೋದರೂ ಬಸ್‌ನಲ್ಲೇ ಪ್ರಯಾಣ. `ಪರಿಸರಕ್ಕೆ ಮಾರಕವಾಗುವ ಯಂತ್ರಗಳ ಅವಲಂಬನೆ ಕಡಿಮೆ ಮಾಡಿದರೆ ಉತ್ತಮ. ಇಂತಹ ಸಣ್ಣ ಪುಟ್ಟ ಕಳಕಳಿ ಹಚ್ಚಿಕೊಂಡು ಬದುಕಿದರೆ ಸಮಾಜದ ವ್ಯವಸ್ಥೆ ತಾನೇತಾನಾಗಿ ಸರಿಹೊಗುತ್ತೆ~ ಎನ್ನುವ ಆಲೋಚನೆ ಅವರದ್ದು.

ಆದರ್ಶಾರಾವ್ ಮತ್ತು ಉದಯಕಿರಣ್ ದಂಪತಿ ಬದುಕನ್ನು ಕಾಣುವ ವಿಧಾನ ಬದಲಾದುದರ ಹಿಂದೆ ಒಂದು ದೊಡ್ಡ ಯಾತ್ರೆಯೇ ಇದೆ. ಮೈಸೂರಿನ ಆದರ್ಶಾರಾವ್ ಪಿಯುಸಿ ಮುಗಿಸಿ ಎಂಜಿನಿಯರಿಂಗ್‌ಗಾಗಿ ಪ್ರಯಾಣ ಬೆಳೆಸಿದ್ದು ಹಾಸನಕ್ಕೆ. ಉದಯ ಅವರ ಪರಿಚಯವಾದದ್ದೂ ಅಲ್ಲಿಯೇ.

ತಮ್ಮ 16ನೇ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡ ಆದರ್ಶಾ ತಾಯಿ ಹಾಗೂ ಅಜ್ಜ- ಅಜ್ಜಿಯ ನೆರಳಲ್ಲಿ ಬೆಳೆದವರು. ಹೆಚ್ಚು ಓದಿ ಕೈತುಂಬಾ ಹಣ ಬರುವ ಕೆಲಸ ಗಿಟ್ಟಿಸಬೇಕೆಂಬ ಅಜ್ಜಿಯ ಅಭಿಲಾಷೆ ಗುಂಯ್‌ಗುಡುತ್ತಿತ್ತು.
 
ಹಾಗಾಗಿ ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಮನಸ್ಸು ಬೆಂಗಳೂರಿನತ್ತ ಸೆಳೆಯಿತು. ಅಜ್ಜಿ ಆಸೆ ಈಡೇರಿಸುವ ಹಂಬಲದಲ್ಲಿ ಭಾರತದ ಮೊದಲ ತಂತ್ರಜ್ಞಾನ ಟಿ.ವಿ. ಚಾನೆಲ್ `ಟಿಎಂಜಿ~ಯಲ್ಲಿ ಕೆಲಸಕ್ಕೆ ಸೇರಿಕೊಂಡರು.

ಆದರೆ ಇನ್ನಷ್ಟು ಕಲಿಯಬೇಕೆಂಬ ಆಸೆ ಹಾಗೆಯೇ ಉಳಿದುಕೊಂಡಿತ್ತು. ಅಜ್ಜಿಯೂ `ಮೊಮ್ಮಗಳು ಇನ್ನಷ್ಟು ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕು~ ಎನ್ನಲು ಆರಂಭಿಸಿದ್ದರಿಂದ ಆದರ್ಶಾರ ಕಣ್ಣು ಅಮೆರಿಕದೆಡೆಗೆ ಹರಿಯಿತು.

2002ರಲ್ಲಿ ಸಾಲ ಮಾಡಿ ಅಮೆರಿಕಕ್ಕೆ ಹಾರಿದ ಆದರ್ಶಗೆ ಜೊತೆಯಾದದ್ದು ಎರಡು ವರ್ಷ ಮುಂಚೆಯೇ ಅಮೆರಿಕದ ಹಾದಿ ಹಿಡಿದಿದ್ದ ಆಂಧ್ರ ಪ್ರದೇಶದ ಉದಯ ಕಿರಣ್. ಮಿನಸೊಟ ರಾಜ್ಯದಲ್ಲಿರುವ ಮೆಟ್ರೊಪಾಲಿಟನ್ ವಿಶ್ವವಿದ್ಯಾನಿಲಯದಲ್ಲಿ `ಟೆಕ್ನಾಲಜಿ ಕಮ್ಯುನಿಕೇಷನ್~ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗೆ ಆದರ್ಶಾ ಪ್ರವೇಶ ಪಡೆದರೆ, ಉದಯ ಅವರು ಮಿನಸೊಟ ವಿಶ್ವವಿದ್ಯಾನಿಲಯದಲ್ಲಿ `ಕಂಪ್ಯೂಟರ್ ಸೈನ್ಸ್~ ಸ್ನಾತಕೋತ್ತರ ಪದವಿಗೆ ಸೇರಿಕೊಂಡರು.
 
ಮೊದಮೊದಲು ಅಲ್ಲಿಯ ಜೀವನ ಶೈಲಿಗೆ ಒಗ್ಗಿಕೊಳ್ಳಲು ಕಷ್ಟವೆನಿಸಿದರೂ ಅಲ್ಪ ಸಮಯದಲ್ಲೇ ಅಮೆರಿಕದವರ `ದುಡಿಯುತ್ತಾ ಓದು~ ಎನ್ನುವ ಪರಿಪಾಠವನ್ನು ಇಬ್ಬರೂ ರೂಢಿಸಿಕೊಂಡರು.

ಕಾಲೇಜಿನ ಪಠ್ಯೇತರ ಚಟುವಟಿಕೆಯ್ಲ್ಲಲಿ ತೊಡಗಿಕೊಂಡು ಆದರ್ಶಾ ತಿಂಗಳಿಗೆ 800 ಡಾಲರ್ ಸಂಪಾದಿಸುತ್ತಿದ್ದರು. ವಿಶ್ವವಿದ್ಯಾಲಯ ಗ್ರಂಥಾಲಯದ ಕೆಲಸ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಮೆಂಟರ್‌ಶಿಪ್ ಪ್ರೊಗ್ರಾಮ್ ಇನ್ನಿತರ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದಕ್ಕೆ 2004ರಲ್ಲಿ `ಔಟ್‌ಸ್ಟ್ಯಾಂಡಿಂಗ್ ಸ್ಟೂಡೆಂಟ್ ವರ್ಕರ್~ ಎನ್ನುವ ಹೆಗ್ಗಳಿಕೆಗೂ ಪಾತ್ರರಾದರು.

ಇನ್ನೇನು ಓದು ಮುಗಿಯುತ್ತಿದ್ದಂತೆ  ಅದಕ್ಕಾಗಿ ಮಾಡಿದ್ದ 12 ಲಕ್ಷ ಸಾಲ ತೀರಿಸುವ ಧಾವಂತ. ಇದಕ್ಕಾಗಿ ಬಾಸ್ಟನ್ ಸೈಂಟಿಫಿಕ್ ಎನ್ನುವ ಪ್ರತಿಷ್ಟಿತ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಆದರ್ಶಾ ಯಾವತ್ತೂ ಅಗತ್ಯಕ್ಕೆ ಮೀರಿದ ಗಳಿಕೆಯತ್ತ ಒಲವು ಹೊಂದಿರಲಿಲ್ಲ. ಈ ಆದರ್ಶಕ್ಕೆ ಜೊತೆಯಾದದ್ದು ಉದಯ.

ಸಪ್ತಸಾಗರದಾಚೆಗಿನ ಊರು ಈ ಸಮಾನ ಮನಸ್ಕ ಹೃದಯಗಳನ್ನು ಬೆಸೆಯಿತು. ಉದಯ ಕೂಡ ಉತ್ತಮ ಕೆಲಸಕ್ಕೆ ಸೇರಿದರು. ಓದಿದ್ದಾಯಿತು, ಕೈತುಂಬಾ ಸಂಪಾದನೆಯೂ ಇತ್ತು. ದಾಂಪತ್ಯ ಬದುಕಿಗೆ ಕಾಲಿಡುವ ಸಮಯ. ಜಾತಿಯ ಅಂತರ ಅವರಿಗೆ ಅಡ್ಡಿಯಾಗಿರಲಿಲ್ಲ.

  2007ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ಆದರ್ಶ್ ಮತ್ತು ಉದಯರ ಅಂದಿನ ಒಟ್ಟು ಸಂಪಾದನೆ ಮೂರು ಲಕ್ಷ ರೂಪಾಯಿಗಳನ್ನು ಮೀರಿತ್ತು. ದುಡಿಮೆಯಿಂದ ಕೈ ತುಂಬಾ ಕಾಸು ಬಂದರೂ ತೃಪ್ತಿ ನೀಡದ ಕೆಲಸ. ಬದುಕೆಂದರೆ ಇಷ್ಟೇ ಅಲ್ಲ ಎನ್ನುವ ಭಾವ. ನಮ್ಮ ನೆಲದಲ್ಲಿ ನಮಗಾಗಿ ಹಂಬಲಿಸುವ ಜೀವಗಳಿವೆ.
 
ಆ ಸಂಬಂಧಕ್ಕೆ ಗೆರೆ ಎಳೆಯಲು ಸಾಧ್ಯವಿಲ್ಲ. ಆಸ್ಥೆಯಿಂದ ಬೆಳೆಸಿದ ಜೀವಗಳ ಮೇಲೆ ಅಪಾರ ಪ್ರೀತಿ. ಪೋಷಕರ ನಂಟು ಬಿಡಲೊಲ್ಲದು ಮನಸ್ಸು. ಆಗ ಅವರ ಎದುರಿಗೆ ಇದ್ದದ್ದು ಎರಡೇ ಆಯ್ಕೆ. ಇಲ್ಲೇ (ಅಮೆರಿಕ) ತಳವೂರಿ ಹಣ ಸಂಪಾದಿಸುವುದು, ಇಲ್ಲವೇ ಭಾರತಕ್ಕೆ ತೆರಳಿ ತಂದೆ ತಾಯಿ ಜೊತೆ ಇದ್ದು, ಅಲ್ಲಿಯೇ ಉದ್ಯೋಗ ಮಾಡುವುದು.

ಸಂಪಾದನೆ ಹಾಗೂ ಅಸ್ಮಿತೆಗೆ ಅಮೆರಿಕದ ಯಾಂತ್ರಿಕ ಬದುಕೊಂದೇ ದಾರಿಯಲ್ಲ ಎಂಬ ನಿರ್ಧಾರಕ್ಕೆ ಬಂದರು. ಕಡೆಗೆ ಮಣ್ಣಿನ ಬಾಂಧವ್ಯದ ಸೆಳೆತವೇ ಗೆದ್ದಿತು.
ಅಂದು ಅಕ್ಟೋಬರ್ 10, 2010. ಹೊಸ ಹಾದಿ ತುಳಿಯುವ ಭಾಗವಾಗಿ ಭಾರತದತ್ತ ಮುಖ ಮಾಡಿದ ದಿನವದು.

ಮತ್ತೆ ಐ.ಟಿ. ಕಂಪೆನಿಗಳ ಮೆಟ್ಟಿಲು ಹತ್ತುವುದಿಲ್ಲ ಎಂಬ ನಿರ್ಧಾರಕ್ಕೆ ಇಬ್ಬರೂ ಬಂದಿದ್ದರು. ಭಾರತಕ್ಕೆ ಹಿಂದಿರುಗಿದ ಹೊಸತರಲ್ಲಿ `ಬೆಳಕು~ ಎಂಬ ಎನ್‌ಜಿಓದಲ್ಲಿ ಸುಮಾರು ಆರೇಳು ತಿಂಗಳು ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಆ ಕೆಲಸವೂ ತೃಪ್ತಿ ಕೊಡಲಿಲ್ಲ.
 
ಕಷ್ಟ ಪಡದೆ ಜೀವನ ಇಲ್ಲ. ಹಾಗಿರುವಾಗ ಕಷ್ಟ ಪಡುವುದರಲ್ಲಿಯೇ ನೆಮ್ಮದಿ ಕಾಣಬೇಕೆಂಬ ಧ್ಯೇಯದೊಂದಿಗೆ ಅವರ ಯೋಜನೆ ಸಾಕಾರಗೊಂಡಿದ್ದು ಜನವರಿ 1, 2012ರಲ್ಲಿ.

ಹದಗೆಡುತ್ತಿರುವ ಬೆಂಗಳೂರಿನ ಪರಿಸರವನ್ನು ಉಳಿಸಲು ತಾವೇನು ಮಾಡಬಹುದು ಎಂಬ ಯೋಚನೆಯ ಫಲಿತಾಂಶವಾಗಿ ಹುಟ್ಟಿಕೊಂಡದ್ದು `ಏಕ್‌ಸ್ಪರ್ಶ್~ ಸಂಸ್ಥೆ. 20 ಸಾವಿರ ಬಂಡವಾಳ ಹಾಕಿ ಮನೆಯಲ್ಲಿಯೇ ಕಾಗದದ ಹಾಳೆಗಳ ಪುನರ್ಬಳಕೆಯ ಕೈಚೀಲಗಳನ್ನು ತಯಾರಿಸಿದರು.
 
`ಪರಿಸರವನ್ನು ಪ್ರೇಮಿಸಿ... ಕಾಗದದ ಕೈಚೀಲ ಬಳಸಿ...~ ಎಂಬ ಮುದ್ರೆಯನ್ನು ಕೈಚೀಲಗಳಿಗೊತ್ತಿದರು, ಡೈರಿ, ಪುಸ್ತಕದ ಬೈಂಡ್, ಕಿವಿಯೋಲೆ, ಟೀಶರ್ಟ್ ಮೇಲೆ ಸಹಜ ಬಣ್ಣದ ಅಚ್ಚು, ಅರಳಿ ಎಲೆ ಹಾಗೂ ನಿಯತಕಾಲಿಕೆಗೆಳ ಹಾಳೆಗಳಲ್ಲಿ ತರಾವರಿ ಗೃಹಬಳಕೆ ವಸ್ತುಗಳನ್ನು  ತಯಾರಿಸಿ ಮಾರಾಟ ಆರಂಭಿಸಿದರು.
 
ಇದನ್ನೊಂದು ಅಭಿಯಾನದಂತೆ ಕೈಗೆತ್ತಿಕೊಂಡ ಅವರು ಮೈಸೂರು ಸಮೀಪದ ನಾಡಪನಹಳ್ಳಿ, ಕನಕಪುರದ ಕಾಡಹಳ್ಳಿ ಹಾಗೂ ಹಲಸೂರು ಹಳ್ಳಿಯ ಜನರು ತಯಾರಿಸುವ ಪರಿಸರ ಸ್ನೇಹಿ ಸಾಮಗ್ರಿಗಳನ್ನೂ  ತಮ್ಮ ಪ್ರದರ್ಶನದಲ್ಲಿ ಸೇರಿಸಿಕೊಂಡರು.

ಜನವರಿಯಲ್ಲಿ (2012) ಹೈದರಾಬಾದ್‌ನಲ್ಲಿ ನಡೆಸಿದ ಮೊದಲ ಪ್ರದರ್ಶನಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ಆನಂತರ ಬೆಂಗಳೂರಿನಲ್ಲಿ ಮಹಿಳಾ ಅಭಿವೃದ್ಧಿ ನಿಗಮ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ, `ಜಾನಪದ ಲೋಕ~, ಮಲ್ಲೇಶ್ವರದ ಅಮ್ಮಣ್ಣಿ ಕಾಲೇಜಿನ `ಜಾನಪದ ಜಾತ್ರೆ~, ಹೀಗೆ ಪ್ರತಿ ತಿಂಗಳೂ ಒಂದಲ್ಲ ಒಂದು ಕಡೆ ನಡೆಯುತ್ತಿದ್ದ ವಸ್ತು ಪ್ರದರ್ಶನದಲ್ಲಿ ಈ ದಂಪತಿಯ ಹಾಜರಾತಿ ಕಾಯಂ.

ಅನಾಥ ಮಕ್ಕಳಿಗೆ ದಾರಿ ದೀಪವಾಗಬೇಕು ಎಂಬ ಕನಸು ಹೆಣೆಯುತ್ತಿರುವ ದಂಪತಿ, ದಿನದ ಸಿಂಹಪಾಲು ಕಳೆಯುವುದು ಬಸವನಗುಡಿಯ ಅಬಲಾಶ್ರಮದಲ್ಲಿ. ಉಳಿದ ಸಮಯದಲ್ಲಿ  ಆದರ್ಶಾ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದರೆ, ಉದಯ ಸಂಜೆಯಾಗುತ್ತಲೇ ಸರ್ಜಾಪುರದಲ್ಲಿರುವ ಇಬ್ಬರು ಮಕ್ಕಳಿಗೆ ಅವರ ಮನೆಗಳಿಗೇ ಹೋಗಿ ಮನೆಪಾಠ ಹೇಳಿಕೊಡುತ್ತಾರೆ. 

ವೃತ್ತಿಯ ಜೊತೆಗೆ ಇಬ್ಬರಿಗೂ ಹವ್ಯಾಸಗಳ ನಂಟೂ ಉಂಟು. ಆದರ್ಶ ಬರವಣಿಗೆಯ್ಲ್ಲಲಿ ನಿಪುಣರು ಅವರ ಬ್ಲಾಗ್ (www.eksparsh.wordpress.com)ನಲ್ಲಿರುವ ಬರಹಗಳೇ ಇದಕ್ಕೆ ಸಾಕ್ಷಿ. ಉದಯ ಕಿರಣ್‌ಗೆ ಚಿತ್ರ ಬಿಡಿಸುವುದು ಇಷ್ಟ. ಅದರಲ್ಲೂ ಜಾನಪದ ಶೈಲಿಯ ಚಿತ್ರಗಳನ್ನು ಕುಂಚದಲ್ಲಿ ಮೂಡಿಸುತ್ತಾರೆ.

`ನಮ್ಮ ಜೀವನ ಇತರರಿಗೆ ಆದರ್ಶವಾಗುಬೇಕು~ ಎಂದು ಬಡಾಯಿ ಕೊಚ್ಚಿಕೊಳ್ಳುವವರೇ ಹೆಚ್ಚು. ಅದು ಕೃತಿಯಲ್ಲಿ ಇರುವುದಿಲ್ಲ. ಆದರೆ ದಂಪತಿ ಈ ಮಾತಿಗೆ ಬದ್ಧವಾಗಿದ್ದಾರೆ. ಸಾವಯವ ಉತ್ಪನ್ನಗಳಿಂದಲೇ ತಯಾರಿಸಲಾದ ತಿನಿಸುಗಳ ಮಳಿಗೆಯನ್ನು ಆರಂಭಿಸುವ ಇಂಗಿತ ಇಟ್ಟುಕೊಂಡಿರುವ ಇವರು, ಎಲ್ಲರೂ ನೈಸರ್ಗಿಕ ಜೀವನ ರೂಢಿಸಿಕೊಳ್ಳಬೇಕು. ಆಗ ಹದಗೆಡುತ್ತಿರುವ ಪರಿಸರವನ್ನು ಒಂದಿಷ್ಟಾದರೂ ಉಳಿಸಬಹುದು ಎನ್ನುತ್ತಾರೆ.

`ಅಮೆರಿಕದಲ್ಲಿರುವಾಗ ದುಡಿದಿದ್ದರಲ್ಲಿ ಸ್ವಲ್ಪ ಪೊಷಕರಿಗೆ ಹಣ ಕಳುಹಿಸಿ ಸುಮ್ಮನಾಗುತ್ತ್ದ್ದಿದೆವು. ಆದರೆ ಹಣ ಕಳುಹಿಸುವುದೊಂದೇ ಮಕ್ಕಳ ಕರ್ತವ್ಯವಲ್ಲ. ಅದರಿಂದ ಹೊರತಾದ ಭಾವ ಅವರೊಂದಿಗೆ ಬೆಳೆಸಿಕೊಳ್ಳಬೇಕು.

ಅಲ್ಲಿದ್ದಾಗ ತಂದೆ- ತಾಯಿ ನಮ್ಮ ಫೋಟೊ ತೋರಿಸಿ “ಇವಳು ನನ್ನ ಒಬ್ಬಳೇ ಮಗಳು/ ಮಗ. ಅಮೆರಿಕದಲ್ಲಿದ್ದಾರೆ” ಎಂದು ಎಲ್ಲರೊಂದಿಗೆ ಹೇಳಿಕೊಳ್ಳುತ್ತಿದ್ದರಂತೆ. ಆದರೆ ಆ ಮಾತಿನ ಭಾವ ಅರ್ಥವಾದದ್ದು ನಮ್ಮೂರಿಗೆ ವಾಪಾಸಾದ ಮೇಲೆಯೇ~ ಎನ್ನುತ್ತಾ ಭಾವುಕರಾಗುತ್ತಾರೆ ದಂಪತಿ. ಅವರ ಸಂಪರ್ಕಕ್ಕೆ: 80886 48226.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT