ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶ ಓದುವಾಗ ಗ್ರಾಮರ್ ಗಮನಿಸಿ: ಆಂಧ್ರ ವಕೀಲರಿಗೆ ಬುದ್ಧಿವಾದ

Last Updated 16 ಫೆಬ್ರುವರಿ 2012, 20:30 IST
ಅಕ್ಷರ ಗಾತ್ರ

ಬೆಂಗಳೂರು: `ಆಂಧ್ರಪ್ರದೇಶಕ್ಕೆ ತುಂಗಭದ್ರಾ ನದಿಯಿಂದ ನೀರು ಪೂರೈಕೆ ಸ್ಥಗಿತಗೊಳಿಸಿ ಎಂದು ನಾವು ಆದೇಶ ಹೊರಡಿಸಿಯೇ ಇಲ್ಲ. ಆದೇಶ ಓದುವಾಗ ಗ್ರಾಮರ್ ಗಮನಿಸಿ~ ಎಂದು ಆಂಧ್ರಪ್ರದೇಶದ ವಕೀಲರಿಗೆ ಹೈಕೋರ್ಟ್ ಗುರುವಾರ ಬುದ್ಧಿಮಾತು ಹೇಳಿತು.

ಪಾವಗಡ ತಾಲ್ಲೂಕಿಗೆ ತುಂಗಭದ್ರಾ ನದಿಯಿಂದ ಕುಡಿವ ನೀರನ್ನು ಸರಬ ರಾಜು ಮಾಡಲು ಆಂಧ್ರ ಸರ್ಕಾರಕ್ಕೆ ಸೂಚಿಸಲು ಕರ್ನಾಟಕ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ `ಕರ್ನಾಟಕರಾಷ್ಟ್ರೀಯ ಕಿಸಾನ್ ಸಂಘ~ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಈ ಮಾತನ್ನು ಕೋರ್ಟ್ ಹೇಳಿದೆ.

ಆಂಧ್ರ ಸರ್ಕಾರವನ್ನು ಪ್ರತಿನಿಧಿಸಬೇಕಿದ್ದ ವಕೀಲರು ಕಳೆದ ಬಾರಿ ವಿಚಾರಣೆ ವೇಳೆ ಗೈರುಹಾಜರಾಗಿದ್ದರು. ಅದರಿಂದ ಅಸಮಾಧಾನಗೊಂಡಿದ್ದ ಕೋರ್ಟ್, `ಹೀಗೆಯೇ ಮುಂದುವರಿದರೆ ನೀರು ಪೂರೈಕೆ ಸ್ಥಗಿತಕ್ಕೆ ಆದೇಶಿಸುವುದು ಅನಿವಾರ್ಯ ಆಗಬಹುದು~ ಎಂದು ಎಚ್ಚರಿಕೆ ನೀಡಿತ್ತು.

ಇದನ್ನೇ ಆದೇಶದಲ್ಲಿಯೂ ತಿಳಿಸಲಾಗಿದೆ.

ಈ ಆದೇಶವನ್ನು ಕೆಲವು ಪತ್ರಿಕೆಗಳು ತಪ್ಪಾಗಿ ಪ್ರಕಟಿಸಿದ್ದವು. ನೀರು ಸ್ಥಗಿತಗೊಳಿಸಲು ಹೈಕೋರ್ಟ್ ಆದೇಶಿದೆ ಎಂದು ಪ್ರಕಟವಾಗಿತ್ತು. ಇದೇ ರೀತಿ ಕೋರ್ಟ್ ಆದೇಶ ಹೊರಡಿಸಿದೆ ಎಂದುಕೊಂಡ ವಕೀಲರು (ಈ ಅರ್ಜಿಯು ಗುರುವಾರ ವಿಚಾರಣೆಗೆ ಇಲ್ಲದಿದ್ದರೂ) ಕೋರ್ಟ್‌ಗೆ ದೌಡಾಯಿಸಿದ್ದರು. ನೀರು ಸ್ಥಗಿತ ಮಾಡದಂತೆ ನ್ಯಾಯಾಲಯವನ್ನು ಕೋರಿದರು.

ಸ್ಪಷ್ಟವಾಗಿ ಓದಿ...: ಅದಕ್ಕೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ, `ನೀರು ಪೂರೈಕೆ ಸ್ಥಗಿತಗೊಳಿಸಿ ಎಂದು ನಾವ್ಲ್ಲೆಲಿ ಹೇಳಿದ್ದೇವೆ. ಆದೇಶವನ್ನು ಸರಿಯಾಗಿ ಓದಿ. ನಮ್ಮ ಆದೇಶದಲ್ಲಿ ಇಂಗ್ಲಿಷ್‌ನ `ಮೇ~ (ಬಹುದು) ಎಂಬ ಉಲ್ಲೇಖವಿದೆ.
 

ಮುಂದೆಯೂ ಗೈರು ಹಾಜರಿ ಆದರೆ ನೀರು ಸ್ಥಗಿತಕ್ಕೆ ಆದೇಶ ಹೊರಡಿಸಬಹುದು ಎನ್ನುವ ಎಚ್ಚರಿಕೆ ಅಷ್ಟೇ ಅದು. ಆದೇಶವನ್ನು ಸ್ಪಷ್ಟವಾಗಿ ಓದಿ ಅರ್ಥೈಸಿಕೊಳ್ಳಿ~ ಎಂದರು. ಅದನ್ನು ಕೇಳಿ ಸ್ವಲ್ಪ ಸಮಾಧಾನಗೊಂಡಂತೆ ಕಂಡುಬಂದ ವಕೀಲರು, ಕೆಲವು ಕಾರಣಗಳಿಂದ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಕ್ಷಮೆ ಕೋರುವುದಾಗಿ ಹೇಳಿದರು.

ಗೈರು ಹಾಜರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, `ಇದು ನೀವು ನ್ಯಾಯಾಲಯಕ್ಕೆ ತೋರಿರುವ ಅಗೌರವ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ~ ಎಂದು ಎಚ್ಚರಿಕೆ ನೀಡಿತು. ವಕೀಲರು ಪುನಃ ಕ್ಷಮೆ ಕೋರಿದ್ದರಿಂದ ವಿಚಾರಣೆ ಮುಂದೂಡಲಾಯಿತು.

ಧರ್ಮಸಿಂಗ್ ಪ್ರಕರಣ: ಆಕ್ಷೇಪಣೆ

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿರುವ ವರದಿ ಅನ್ವಯ ಸಂಸದ ಧರ್ಮಸಿಂಗ್ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸಲು ಕೋರಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಯಾಗಿರುವ ರಾಜ್ಯಪಾಲರಿಗೆ ಹೈಕೋರ್ಟ್ ಗುರುವಾರ ಆದೇಶಿಸಿದೆ.

ವಕೀಲ ಡಿ. ನಟೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ. `ಧರ್ಮಸಿಂಗ್ 2004ನೇ ಸಾಲಿನಲ್ಲಿ  ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಅಕ್ರಮ ಎಸಗಿದ್ದಾರೆ. ಕೇಂದ್ರ ಸರ್ಕಾರದ ಆದೇಶ ಉಲ್ಲಂಘಿಸಿ ಪಟ್ಟಾ ಜಮೀನಿನಲ್ಲಿ ಪರವಾನಗಿ ಇಲ್ಲದವರಿಗೂ ಬಳ್ಳಾರಿ ಹಾಗೂ ಇತರೆಡೆ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದಾರೆ~ ಎನ್ನುವುದು ಅವರ ಆರೋಪ.

ಈ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ರಹಿತರಿಗೆ ಅನುಮತಿ ನೀಡಬಾರದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಆದೇಶ ಹೊರಡಿಸಿತ್ತು. ಇದನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಆದರೂ, ಧರ್ಮಸಿಂಗ್ ಅಕ್ರಮ ಎಸಗಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT