ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಕಾರ್ಡ್ ವಿತರಣೆ ಶೀಘ್ರ ಆರಂಭ

Last Updated 23 ಸೆಪ್ಟೆಂಬರ್ 2011, 9:05 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಇನ್ನು ಒಂದೆರಡು ವಾರಗಳಲ್ಲಿ ವಿಶಿಷ್ಟ ಗುರುತಿನ ಚೀಟಿ ~ಆಧಾರ್~ ಕಾರ್ಡ್ ನೀಡುವ ಕಾರ್ಯವನ್ನು ಆರಂಭಿಸಲಾಗುವುದು ಎಂದು ಕರ್ನಾಟಕ ಇ-ಆಡಳಿತ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಿ.ಎಸ್. ರವೀಂದ್ರನ್ ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

ಸರ್ಕಾರ ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಿತ್ತು. ಅಲ್ಲಿ ಈಗಾಗಲೇ ಶೇ 97ರಷ್ಟು ಜನರು ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದು, ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅ–ಕ್ಟೋಬರ್ 15ರ ವೇಳೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಕಾರ್ಯ ಆರಂಭವಾಗಲಿದೆ ಎಂದರು.

`ಆಧಾರ್ ಗುರುತಿನ ಚೀಟಿ ಕಡ್ಡಾಯವಲ್ಲ. ಆದರೆ ನವಜಾತ ಶಿಶುವಿನಿಂದ ಆರಂಭಿಸಿ ವಯೋವೃದ್ಧರವರೆಗೆ ಪ್ರತಿಯೊಬ್ಬರೂ ಕಾರ್ಡ್ ಹೊಂದಬೇಕು ಎಂಬುದು ಸರ್ಕಾರದ ಉದ್ದೇಶ. ಈಗಾಗಲೇ ಕೆಲವು ಸರ್ಕಾರಗಳು ಮತ್ತು ಸರ್ಕಾರಿ ಇಲಾಖೆಗಳು ತಮ್ಮ ಸೌಲಭ್ಯಗಳನ್ನು ನೀಡಲು ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸುವ ಚಿಂತನೆ ನಡೆಸಿವೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಬೆರಳಚ್ಚು, ಕಣ್ಣಿನ ಪೊರೆ ಮುಂತಾದವುಗಳನ್ನು ಸ್ಕ್ಯಾನ್ ಮಾಡಿ ಕಾರ್ಡ್ ನೀಡುವುದರಿಂದ ನಕಲಿ ಆಧಾರ್ ಕಾರ್ಡ್ ನಿರ್ಮಿಸುವುದು ಸಾಧ್ಯವಿಲ್ಲ. ಇದು ಮುಂದೆ ಎಲ್ಲ ವ್ಯವಸ್ಥೆಗಳಿಗೂ ಮೂಲ ದಾಖಲೆ ಎನಿಸಲಿದೆ ಎಂದರು.

ದೇಶದ ನಾಗರಿಕರಿಗೆ ಉಚಿತವಾಗಿ ಈ ಕಾರ್ಡ್‌ಗಳನ್ನು ವಿತರಿ–ಸಲಾಗುತ್ತದೆ. ಹೆಸರು, ವಿಳಾಸ ಮುಂತಾದ ವಿವರಗಳನ್ನು ನೀಡುವ ಕೆಲವು ಮೂಲ ದಾಖಲೆ (ನಕಲು ಪ್ರತಿ ಅಲ್ಲ)ಗಳೊಂದಿಗೆ ಆಧಾರ್ ಕೇಂದ್ರಗಳಿಗೆ ಬಂದು ನಾಗರಿಕರು ಕಾರ್ಡ್ ಮಾಡಿಸಿಕೊಳ್ಳಬಹುದು. ಕಾರ್ಡ್‌ನ್ನು ಉಚಿತವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಆಧಾರ್ ಕಾರ್ಡ್‌ಗೆ ಯಾವುದೇ ಭೇದಭಾವಗಳಿಲ್ಲ. ಎಲ್ಲ ನಾಗರಿಕರಿಗೆ 12ಅಂಕಿಗಳ ವಿಶಿಷ್ಟ ಸಂಖ್ಯೆ ನೀಡಲಾಗುತ್ತದೆ. ವಿಳಾಸ ಅಥವಾ ಇನ್ನಿತರ ದಾಖಲೆಗಳಿಗೆ ಅಫಿಡವಿಟ್ಟುಗಳನ್ನು ಸ್ವೀಕರಿಸುವುದಿಲ್ಲ. ಮುಂದಿನ ಜುಲೈ ವೇಳೆಗೆ ರಾಜ್ಯದ ಶೇ 80ರಷ್ಟು ಜನರಿಗೆ ಕಾರ್ಡ್ ವಿತರಣೆ ಮಾಡಬೇಕು ಎಂಬ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ರವೀಂದ್ರನ್ ತಿಳಿಸಿದರು.

ಹಾಸನ ಜಿಲ್ಲೆಯ ಗ್ರಾಮ ಮಟ್ಟದಲ್ಲೂ ವಿತರಣಾ ಕೇಂದ್ರಗಳನ್ನು ಆರಂಭಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟಾರೆ ಸುಮಾರು 200 ಕೇಂದ್ರಗಳನ್ನು ಆರಂಭಿಸುವ ಉದ್ದೇಶವಿದೆ. ಇದಲ್ಲದೆ ಹೋಬಳಿ ಮಟ್ಟದಲ್ಲಿ ಶಾಶ್ವತ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಜಿಲ್ಲಾಡಳಿತ ಗಮನಹರಿಸುತ್ತಿದೆ. ಮುಂದಿನ ವಾರದಲ್ಲೇ ಹಾಸನ ನಗರದಲ್ಲಿ ಸುಮಾರು 20 ಕೇಂದ್ರಗಳು ಆರಂಭವಾಗಲಿವೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಮಾತನಾಡಿ, `ಜನರು ಇರುವ ಜಾಗಗಳಿಗೇ ಹೋಗಿ ಕಾರ್ಡ್‌ಗಳನ್ನು ತಯಾರಿಸಿಕೊಡಬೇಕು ಎಂಬ ಯೋಜನೆಯನ್ನು ಜಿಲ್ಲಾಡಳಿತ ಸಿದ್ಧಪಡಿಸುತ್ತಿದೆ. ಒಂದೆರಡು ವಾರಗಳಲ್ಲಿ ಈ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿ ತಯಾರಿಸಿ, ಚುರುಕಿನಿಂದ ಕಾರ್ಯ ಆರಂಭಿಸಲಾಗುವುದು~ ಎಂದು ಹೇಳಿದರು.

ದಿಲ್ಲಿಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರದ ಕೆ.ಕೆ. ಶರ್ಮಾ, ಯೋಜನಾ ನಿರ್ದೇಶಕ ಪ್ರಭಾಕರ, ಶರೀಶ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT