ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಮತದಾನ ತಂತ್ರಾಂಶ ಅಭಿವೃದ್ಧಿ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ರಾಮನಗರ: ಈಗಿರುವ ಚುನಾವಣಾ  ಸ್ವರೂಪವನ್ನೇ ಸುಧಾರಿಸುವ ಮೂಲಕ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕುವ ಹಾಗೂ ಮತದಾನದ ಪ್ರಮಾಣ ಹೆಚ್ಚಿಸಲು ನೆರವಾಗುವಂತಹ    `ಆನ್‌ಲೈನ್~ ಮತದಾನ ಪದ್ಧತಿ ಜಾರಿಗೆ ಪೂರಕವಾದ ತಂತ್ರಾಂಶವನ್ನು ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಗೌರವ್ ಕುಮಾರ್ ಸಿಂಗ್ ಸಿದ್ಧಪಡಿಸಿದ್ದಾರೆ.

ಉತ್ತರ ಪ್ರದೇಶದ ವಾರಣಾಸಿ ಮೂಲದವರಾದ ಅವರು ಬಹುತೇಕ ಶಿಕ್ಷಣವನ್ನು ಕರ್ನಾಟಕದ್ಲ್ಲಲೇ ಪೂರೈಸಿದ್ದಾರೆ. ಅವರ ತಂದೆ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಬೇದಾರ್ ಶಿವನಂದನ್ ಸಿಂಗ್. ತಾಯಿ ಅನಿತಾ ಸಿಂಗ್.  ಬೆಳಗಾವಿಯ ಸೈನಿಕ್ ಶಾಲೆಯಲ್ಲಿ 6ರಿಂದ 12ನೇ ತರಗತಿ ವ್ಯಾಸಂಗ ಮಾಡಿರುವ ಗೌರವ್ ಕುಮಾರ್‌ಸಿಂಗ್, ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಈಗ 8ನೇ ಸೆಮಿಸ್ಟರ್‌ನಲ್ಲಿ (ಅಂತಿಮ ವರ್ಷ) ವ್ಯಾಸಂಗ ಮಾಡುತ್ತಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆಯಲ್ಲಿ ಗೌರವ್   ಸಿದ್ಧಪಡಿಸಿದ `ಆನ್‌ಲೈನ್~ ಚುನಾವಣಾ ಮಾದರಿಯ ತಂತ್ರಾಂಶಕ್ಕೆ ಮೊದಲ ಬಹುಮಾನ ಬಂದಿದೆ. ಈ ಸಂದರ್ಭದಲ್ಲಿ `ಪ್ರಜಾವಾಣಿ~ ಜತೆ ಮಾತನಾಡಿದ ಅವರು, ತಮ್ಮ ಯೋಜನೆಯ ಪರಿಕಲ್ಪನೆ ಬಗ್ಗೆ ವಿವರಿಸಿದ್ದಾರೆ.

ಸಂದರ್ಶನದ ಆಯ್ದ ವಿವರ ಇಲ್ಲಿದೆ.

ಪ್ರಜಾವಾಣಿ: ನಿಮ್ಮ ಸಂಶೋಧನೆ ಎಷ್ಟು ಮಹತ್ವದ್ದು?
ಗೌರವ್:
ಭೌಗೋಳಿಕವಾಗಿ ವಿಸ್ತಾರವಾಗಿರುವ ಹಾಗೂ ನೂರಕ್ಕೂ ಹೆಚ್ಚು ಕೋಟಿ ಜನಸಂಖ್ಯೆ ಹೊಂದಿರುವ ಭಾರತದಂತಹ ಬೃಹತ್ ದೇಶಕ್ಕೆ `ಆನ್‌ಲೈನ್~ ಮತದಾನ ವ್ಯವಸ್ಥೆಯ ಅಗತ್ಯವಿದೆ. ಇದು ದೇಶದ ಪ್ರಜಾಪ್ರಭುತ್ವ ಬಲಿಷ್ಠಗೊಳಿಸುತ್ತದೆ.   ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದರೆ, ಆ ಕ್ಷೇತ್ರದ ಮತದಾರರು  ದೇಶದ ಯಾವುದೇ ಮೂಲೆಯಿಂದ `ಆನ್‌ಲೈನ್~ ಮೂಲಕ ಮತ ಚಲಾಯಿಸಬಹುದು.

ಉದ್ಯೋಗ, ವಿದ್ಯಾಭ್ಯಾಸ ಮತ್ತಿತರ ಕಾರಣಗಳಿಂದ ವಿವಿಧೆಡೆ ವಲಸೆ ಹೋಗಿರುವ ನಾಗರಿಕರು ಚುನಾವಣೆ ಸಂದರ್ಭದಲ್ಲಿ ತಮ್ಮ ಕ್ಷೇತ್ರಕ್ಕೆ ಹೋಗಿ ಮತ ಚಲಾಯಿಸಲು ಆಗದಿರಬಹುದು. ಇದಕ್ಕಾಗಿ ತಗಲುವ ಖರ್ಚು ವೆಚ್ಚವನ್ನು ಲೆಕ್ಕ ಮಾಡಿ, ಮತ ಹಾಕಲು ಕ್ಷೇತ್ರದತ್ತ ಸುಳಿಯದಿರಬಹುದು. ಆಗ ಮತದಾನದ ಪ್ರಮಾಣ ಕಡಿಮೆಯಾಗುತ್ತದೆ. `ಆನ್‌ಲೈನ್~ ಮತದಾನ ಜಾರಿಯಾದರೆ ಮತದಾರನು ದೇಶದ ಯಾವುದೇ ಮೂಲೆಯಿಂದ ತನ್ನ ಸಾಂವಿಧಾನಿಕ ಹಕ್ಕು ಚಲಾಯಿಸಬಹುದು. 

- ನೀವು ಸಿದ್ಧಪಡಿಸಿರುವ ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ ?
ದೇಶದ ಎಲ್ಲೆಡೆ ಕಂಪ್ಯೂಟರೀಕೃತ  ಅಂಚೆ ಕಚೇರಿಗಳಿವೆ. ಅಂಚೆ ಕಚೇರಿಯ ಕಂಪ್ಯೂಟರ್‌ನಲ್ಲಿ ಮತದಾನದ ತಂತ್ರಾಂಶ ಅಳವಡಿಸಬೇಕಾಗುತ್ತದೆ. ಇದಕ್ಕಾಗಿ ಪ್ರತಿ ರಾಜ್ಯದಲ್ಲೂ ಒಂದೊಂದು `ಸರ್ವರ್~ ಮತ್ತು ದೇಶದಲ್ಲಿ ಒಂದು ಕೇಂದ್ರ `ಸರ್ವರ್~ ಇರಬೇಕಾಗುತ್ತದೆ. ಮತದಾನದ ಸಂದರ್ಭದಲ್ಲಿ ಮತದಾರ ತನಗೆ ಹತ್ತಿರ ಇರುವ ಅಂಚೆ ಕಚೇರಿಗೆ ತೆರಳಿ ಅಲ್ಲಿಂದ ತನ್ನ ಮತದಾನದ ಹಕ್ಕು ಚಲಾಯಿಸಬಹುದಾಗಿದೆ.

ಮತದಾನ ಮಾಡಿದ ಮತದಾರನ ಕಣ್ಣು, ಚಹರೆ ಮತ್ತು ಬೆರಳಚ್ಚಿನ ಗುರುತನ್ನು `ಆನ್‌ಲೈನ್~ ಮತದಾನದ ಸಂದರ್ಭದಲ್ಲಿ ಸಂಗ್ರಹಿಸಲಾಗುತ್ತದೆ. ಆ ಗುರುತನ್ನು `ಆಧಾರ್~ ಕಾರ್ಡ್‌ನಲ್ಲಿ ಶೇಖರಣೆಯಾಗಿರುವ ಗುರುತಿನ ಜತೆ ಕಂಪ್ಯೂಟರ್ ತಾಳೆ ಮಾಡಿ ನೋಡಿ, ಸರಿಯಾಗಿದ್ದರೆ ಮತದಾನ  ಸ್ವೀಕರಿಸುತ್ತದೆ. ತಪ್ಪಾಗಿದ್ದರೆ ತಿರಸ್ಕರಿಸುತ್ತದೆ. ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸುವುದನ್ನು ಸರ್ವರ್ ತಂತಾನೇ ತಿರಸ್ಕರಿಸುತ್ತದೆ. ಇದರಿಂದ ನಕಲಿ ಮತಗಳ ಹಾವಳಿ ತಪ್ಪುತ್ತದೆ.

-`ಆಧಾರ್~ ಕಾರ್ಡ್ ಮುಖ್ಯಾನಾ?
ಹೌದು. ಪ್ರತಿಯೊಬ್ಬರೂ `ಆಧಾರ್~ ಕಾರ್ಡ್ ಹೊಂದಿದ್ದರೆ `ಆನ್‌ಲೈನ್~ ಮತದಾನ ಸಾಧ್ಯವಾಗುತ್ತದೆ. ಮತದಾರರ ಚಹರೆ ಪತ್ತೆ ಹಚ್ಚಲು `ಆಧಾರ್~ ನೆರವು  ನೀಡುತ್ತದೆ.

-ಮತದಾನ ಜಾರಿಗೆ ಎಷ್ಟು ಖರ್ಚು ವೆಚ್ಚ ಆಗಬಹುದು ?
ಇನ್ನೂ ಅಂದಾಜಿಸಿಲ್ಲ. ಆದರೆ, ಇದನ್ನು ಅಳವಡಿಸಿಕೊಂಡರೆ ಚುನಾವಣಾ ಖರ್ಚು ವೆಚ್ಚದಲ್ಲಿ ಇಳಿಕೆ ಕಂಡು ಬರುತ್ತದೆ. ಒಂದು ಬಾರಿ ಈ ತಂತ್ರಾಂಶವನ್ನು ದೇಶದೆಲ್ಲೆಡೆ ಅಳವಡಿಸಿದರೆ ಸಾಕು. ಆ ನಂತರ ಅತಿ ಕಡಿಮೆ ಖರ್ಚು ವೆಚ್ಚದಲ್ಲಿ ಚನಾವಣೆ ನಡೆಸಬಹುದು.

-`ಆನ್‌ಲೈನ್~ ಮತದಾನದ ಕುರಿತು ಸಂಶೋಧನೆ ಕೈಗೊಳ್ಳಲು ಕಾರಣವೇನು ?
ದೇಶದಲ್ಲಿ ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ಚುನಾವಣೆ ನಡೆಯುತ್ತಲೇ ಇರುತ್ತದೆ. ಇದಕ್ಕೆ ಸಾಕಷ್ಟು ಖರ್ಚು ವೆಚ್ಚ ತಗುಲುತ್ತದೆ. ಇದನ್ನು ಪರೋಕ್ಷವಾಗಿ ಪ್ರಜೆಗಳೇ ಭರಿಸಬೇಕು. ಅಂತೆಯೇ ಮತದಾನ ಪ್ರಕ್ರಿಯೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತವೆ. ಅಕ್ಷರಸ್ಥರ ಸಂಖ್ಯೆ ಹೆಚ್ಚಾದಷ್ಟೂ ಮತದಾನದ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ.  ಅಕ್ರಮ ತಡೆಗಟ್ಟಲು ಮತ್ತು ಮತದಾನ ಪ್ರಮಾಣ ಹೆಚ್ಚಿಸಲು ಈ ಸಂಶೋಧನೆ ಕೈಗೊಂಡಿರುವೆ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಜಿ.ಎ.ಶಬೀನಾ ತಾಜ್ ಮಾರ್ಗದರ್ಶನದಲ್ಲಿ ಈ ಮಾದರಿ ಸಿದ್ಧಪಡಿಸಿರುವೆ.

-ಚುನಾವಣಾ ಅಕ್ರಮ ತಡೆ ಮತ್ತು ಮತದಾನ ಪ್ರಮಾಣ ಹೆಚ್ಚಳ ಹೇಗೆ ಸಾಧ್ಯ?
ಮತದಾರರು ಮತಗಟ್ಟೆಗೆ ಬಾರದೆ ಎಲ್ಲಿಂದಾದರೂ ಮತಚಲಾಯಿಸಬಹುದು. ಬೇರೆ ಊರಿನಲ್ಲಿರುವ ನಿರ್ದಿಷ್ಟ ಕ್ಷೇತ್ರದ ಮತದಾರರಿಗೂ ಮತದಾನದ ಅವಕಾಶ ದೊರೆಯುವುದರಿಂದ ಮತದಾನದ ಪ್ರಮಾಣ ಹೆಚ್ಚಾಗುತ್ತದೆ.

-ನಿಮ್ಮ  ಮುಂದಿನ ಯೋಜನೆ ?
ಈಗ  ಸಂಶೋಧನೆಯ  `ಪೇಟೆಂಟ್~ ಪಡೆಯುವುದು. ನಂತರ ಚುನಾವಣಾ ಆಯೋಗ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅಥವಾ ಖಾಸಗಿ ಕಂಪೆನಿ ಸಂಪರ್ಕಿಸಿ ಯೋಜನೆ ಅನುಷ್ಠಾನಕ್ಕೆ ಮನವಿ ಮಾಡುವುದು.  ನಾನು ಸಿದ್ಧಪಡಿಸಿರುವ ಮಾದರಿ ಕಂಡು ಕೆಲವರು ಆಕರ್ಷಿತರಾಗಿದ್ದಾರೆ. ಇದರ ಮತ್ತಷ್ಟು ಸುಧಾರಣೆಯ ಸಂಶೋಧನೆ ಕೈಗೊಳ್ಳಲು ಸಹಕಾರ ನೀಡುವುದಾಗಿ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT