ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸುಧಾರಣೆಗೆ ಬದ್ಧ - ಪ್ರಣವ್ ಮುಖರ್ಜಿ

Last Updated 28 ಜೂನ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): `ದೇಶದ ಆರ್ಥಿಕ ವೃದ್ಧಿ ದರ ಸದೃಢವಾಗಿದ್ದು, ಆರ್ಥಿಕ ಸುಧಾರಣಾ ಕ್ರಮಗಳನ್ನು ಮತ್ತು ವಿದೇಶಿ ಬಂಡವಾಳ ಹೂಡಿಕೆಯನ್ನು ಇನ್ನಷ್ಟು ತ್ವರಿತಗೊಳಿಸಲು ಭಾರತ ಬದ್ಧವಾಗಿದೆ~ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಅಮೆರಿಕದ ವಾಣಿಜ್ಯೋದ್ಯಮಿಗಳಿಗೆ ಭರವಸೆ ನೀಡಿದ್ದಾರೆ.

ಆರ್ಥಿಕ ಸುಧಾರಣಾ ಕ್ರಮಗಳು ದೇಶದ ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದು, 2010-11ರಲ್ಲಿ ಒಟ್ಟಾರೆ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ  8.5ರಷ್ಟಿದೆ. 2011-12ರಲ್ಲಿಯೂ ಇದೇ ವೃದ್ಧಿ ದರ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಇಲ್ಲಿ ನಡೆದ `ಅಮೆರಿಕ- ಭಾರತ ಆರ್ಥಿಕ ಮತ್ತು ಹಣಕಾಸು ಪಾಲುದಾರಿಕೆ~ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಾವೇಶವನ್ನು ಭಾರತೀಯ ಕೈಗಾರಿಕಾ  ಒಕ್ಕೂಟ (ಸಿಐಐ) ಮತ್ತು ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿ ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಟ್ ಜಂಟಿಯಾಗಿ ಏರ್ಪಡಿಸಿವೆ.

ಚಿಲ್ಲರೆ ಮತ್ತು ರಕ್ಷಣಾ ವಲಯಗಳಲ್ಲಿ  ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು (ಎಫ್‌ಡಿಐ) ಇನ್ನಷ್ಟು ಉದಾರೀಕರಣಗೊಳಿಸುವ ನಿಟ್ಟಿನಲ್ಲಿ ಒಮ್ಮತಕ್ಕೆ ಬರಲು ಸಂಧಾನ ಮಾತುಕತೆಗಳು ಪ್ರಗತಿಯಲ್ಲಿ ಇವೆ ಎಂದು ಪ್ರಣವ್ ನುಡಿದರು.
 
ಬಹು ಬ್ರಾಂಡ್‌ನ ಚಿಲ್ಲರೆ ವಹಿವಾಟು ರಂಗದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಇನ್ನಷ್ಟು ಅವಕಾಶ ನೀಡುವುದನ್ನು ಅಮೆರಿಕದ ಉದ್ಯಮಿಗಳು ಎದುರು ನೋಡುತ್ತಿದ್ದಾರೆ. ಮುಖರ್ಜಿ ಮತ್ತು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ತಿಮೊಥಿ ಗೀಥ್ನರ್ ಅವರ ಮಧ್ಯೆ ನಡೆಯಲಿರುವ ದ್ವಿಪಕ್ಷೀಯ ಮಾತುಕತೆ ವೇಳೆ ಈ ವಿಷಯ ಮುಖ್ಯವಾಗಿ ಚರ್ಚೆಗೆ ಬರಲಿದೆ.

ಭಾರತ ಈಗಾಗಲೇ ತಂತ್ರಜ್ಞಾನ ವರ್ಗಾವಣೆ ಶುಲ್ಕ, ಟ್ರೇಡ್‌ಮಾರ್ಕ್, ಬ್ರಾಂಡ್ ಹೆಸರು ಮತ್ತು ರಾಜಧನ ಪಾವತಿ ವಿಷಯಗಳಲ್ಲಿ ಉದಾರೀಕರಣ ಜಾರಿಗೆ ತಂದಿದೆ. ಆರ್ಥಿಕ ವೃದ್ಧಿ ದರ ಗರಿಷ್ಠ ಮಟ್ಟದಲ್ಲಿ ಇದ್ದರೂ, ಅದನ್ನು ಸುಸ್ಥಿರವಾಗಿ ಇರಿಸಿಕೊಳ್ಳುವುದು ನಮ್ಮೆದುರಿಗಿನ ಮುಖ್ಯ ಸವಾಲಾಗಿದೆ ಎಂದರು.

ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ನಿಧಾನ ಧೋರಣೆ ತಳೆದಿದೆ ಎನ್ನುವ ಮನೋಭಾವ ಸರಿಯಲ್ಲ. ಹೊಸ ಸುತ್ತಿನ ಸುಧಾರಣಾ ಕ್ರಮಗಳಿಗೆ `ಯುಪಿಎ~ ಸರ್ಕಾರ ಬದ್ಧವಾಗಿದೆ ಎಂದರು.

ಹಣದುಬ್ಬರ ಭೀತಿ:
ಅವಶ್ಯಕ ಸರಕುಗಳ ಬೆಲೆ ಏರಿಕೆಯು ದೇಶದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಅಡಚಣೆಯಾಗಿದೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT