ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಗೊಂದಲ ನಿವಾರಣೆಗೆ ಗಡುವು

ಸಂಘರ್ಷದ ಹಾದಿ: ಖಾಸಗಿ ಶಾಲೆಗಳ ಎಚ್ಚರಿಕೆ
Last Updated 26 ಡಿಸೆಂಬರ್ 2012, 20:08 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುಷ್ಠಾನದಲ್ಲಿನ ಎಲ್ಲ ಗೊಂದಲಗಳನ್ನು ರಾಜ್ಯ ಸರ್ಕಾರ ಜನವರಿ 15ರೊಳಗೆ ನಿವಾರಿಸಬೇಕು. ಇಲ್ಲದಿದ್ದರೆ ಸಂಘರ್ಷದ ಹಾದಿ ತುಳಿಯಬೇಕಾಗುತ್ತದೆ' ಎಂದು ಕರ್ನಾಟಕ ಖಾಸಗಿ ಶಾಲೆಗಳ ಜಂಟಿ ಕ್ರಿಯಾಸಮಿತಿ ಎಚ್ಚರಿಸಿದೆ.

`ರಾಜ್ಯ ಸರ್ಕಾರ ತೆರೆದ ಮನಸ್ಸಿನಿಂದ ಖಾಸಗಿ ಶಾಲೆಗಳ ಬೇಡಿಕೆಗಳನ್ನು ಪರಿಶೀಲಿಸಬೇಕು. ಕಾಯ್ದೆಯ ಸಮಗ್ರ ಅನುಷ್ಠಾನಕ್ಕೆ ಪರಸ್ಪರ ಕೊಡುಕೊಳ್ಳುವಿಕೆ ಅಗತ್ಯ. ಆದರೆ, ರಾಜ್ಯ ಸರ್ಕಾರಕ್ಕೆ ಗೊಂದಲಗಳನ್ನು ಪರಿಹರಿಸಲು ಮನಸ್ಸಿಲ್ಲ. ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ತಡೆಗೋಡೆಗಳಾಗಿದ್ದಾರೆ' ಎಂದು ಸಮಿತಿಯ ಅಧ್ಯಕ್ಷ ಎಲ್.ಆರ್.ಶಿವರಾಮೇಗೌಡ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

`ಎರಡು ತಿಂಗಳ ಹಿಂದೆ ಸಮಿತಿಯ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರನ್ನು ಭೇಟಿ ಮಾಡಿ ಗೊಂದಲಗಳನ್ನು ದೂರ ಮಾಡುವಂತೆ ವಿನಂತಿ ಮಾಡಲಾಗಿತ್ತು. ಕಾಯ್ದೆ ಸಮಗ್ರ ಅನುಷ್ಠಾನಕ್ಕೆ ಖಾಸಗಿ ಶಾಲೆಗಳ ಪ್ರಮುಖರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಅನುಷ್ಠಾನ ಸಮಿತಿಯನ್ನು 10 ದಿನಗಳಲ್ಲಿ ರಚಿಸುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೆ, ಈವರೆಗೂ ಕ್ರಮ ಕೈಗೊಂಡಿಲ್ಲ' ಎಂದು ಅವರು ದೂರಿದರು.

`ಆರ್‌ಟಿಇ ಅಡಿ ಸೇರ್ಪಡೆಯಾಗಿರುವ ಮಕ್ಕಳ ಪೋಷಕರ ವಾರ್ಷಿಕ ಆದಾಯ 3.5 ಲಕ್ಷ ರೂಪಾಯಿಗಿಂತ ಕಡಿವೆು ಇರಬೇಕು ಎಂದು ನಿಗದಿಪಡಿಸಿರುವುದು ಅವೈಜ್ಞಾನಿಕ. ಇದರಿಂದಾಗಿ ಬಡಮಕ್ಕಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಡತನರೇಖೆಗಿಂತ ಕೆಳಗಿನ ಮಕ್ಕಳಿಗೆ ಮಾತ್ರ ಆರ್‌ಟಿಇ ಅಡಿಯಲ್ಲಿ ಸೀಟು ನೀಡಬೇಕು' ಎಂದು ಅವರು ಆಗ್ರಹಿಸಿದರು.

`ನಗರ ಪ್ರದೇಶದಲ್ಲಿ ನೆರೆಹೊರೆ ಶಾಲೆ ಸೇರ್ಪಡೆಗೆ ವಾರ್ಡ್ ವ್ಯಾಪ್ತಿ ನಿಗದಿಪಡಿಸಿರುವುದು ಅವೈಜ್ಞಾನಿಕ. ನಗರದಲ್ಲಿ ಕೆಲವು ವಾರ್ಡ್‌ಗಳು ಎರಡು-ಮೂರು ಕಿ.ಮೀ. ವ್ಯಾಪ್ತಿ ಇದ್ದರೆ, ಮತ್ತೆ ಕೆಲವು ವಾರ್ಡ್‌ಗಳು 10 ಕಿ.ಮೀ. ವಿಸ್ತಾರ ಹೊಂದಿವೆ. ಇದರಿಂದ ತೊಂದರೆಗೊಳಗಾಗುವುದು ಬಡ ವಿದ್ಯಾರ್ಥಿಗಳು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೆರೆಹೊರೆಯ ಶಾಲೆಯ ನಿಯಮವನ್ನು ಬದಲಿಸಬೇಕು' ಎಂದು ಅವರು ಒತ್ತಾಯಿಸಿದರು.

`ಆರ್‌ಟಿಇ ಅನುಷ್ಠಾನದಿಂದ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಳಕ್ಕೆ ಅವಕಾಶ ಕಲ್ಪಿಸಿದಂತೆ ಆಗಿದೆ. ದಿನಕ್ಕೊಬ್ಬ ಅಧಿಕಾರಿ ಆರ್‌ಟಿಇ ನೆಪದಲ್ಲಿ ಖಾಸಗಿ ಶಾಲೆಗಳಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ತಮಗೆ ಬೇಕಾದವರಿಗೆ ಸೀಟು ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಲಂಚ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇದನ್ನು ತಡೆಯಲು ರಾಜ್ಯ ಸರ್ಕಾರ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಅಲ್ಲದೆ ದಿನಕ್ಕೊಂದು ಆದೇಶ ಹೊರಡಿಸುವುದು ಸರಿಯಲ್ಲ' ಎಂದರು.

`ಬಡಮಕ್ಕಳ ವಾರ್ಷಿಕ ಶುಲ್ಕ ರೂಪದಲ್ಲಿ ಖಾಸಗಿ ಶಾಲೆಗಳಿಗೆ 11,800 ರೂಪಾಯಿ ಮರುಪಾವತಿ ಮಾಡುತ್ತಿರುವುದು ತುಂಬಾ ಕಡಿಮೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಯ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ಪ್ರತಿವರ್ಷ 22 ಸಾವಿರ ರೂಪಾಯಿ ವೆಚ್ಚ ಮಾಡುತ್ತಿದೆ. ಇದೇ ಮೊತ್ತವನ್ನು ಖಾಸಗಿ ಶಾಲೆಗಳಿಗೂ ಪಾವತಿಸಬೇಕು' ಎಂದರು.

`ಈ ಎಲ್ಲ ಗೊಂದಲಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನವರಿ 15ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ವತಿಯಿಂದ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಆಗಲೂ ಸ್ಪಂದಿಸದಿದ್ದರೆ ಮುಂದಿನ ಹಂತದಲ್ಲಿ ಶಾಲಾ ಬಂದ್ ಮಾಡಿ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ' ಎಂದು ಅವರು ಎಚ್ಚರಿಸಿದರು.

`ಕುಸ್ಮಾ' ಅಧ್ಯಕ್ಷ ಜಿ.ಎಸ್.ಶರ್ಮ, ಕಾರ್ಯದರ್ಶಿ ಮರಿಯಪ್ಪ, ಸಿಬಿಎಸ್‌ಇ ಶಾಲೆಗಳ ಸಂಘಟನೆಯ ಅಧ್ಯಕ್ಷ ಎಂ.ಶ್ರೀನಿವಾಸನ್, ಶಾಲೆಗಳ ಆಡಳಿತ ಮಂಡಳಿಯ ಸಂಘಟನೆಯ ಅಧ್ಯಕ್ಷ ಮೋಹನ್ ಮಾಂಗ್ನನಿ, ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಕಾರ್ಯದರ್ಶಿ ಸೂಡಿ ಸುರೇಶ್, ಸಂಘಟನಾ ಕಾರ್ಯದರ್ಶಿ ಟಿ.ಕೆ.ನರಸೇಗೌಡ ಮೊದಲಾದವರು ಉಪಸ್ಥಿತರಿದ್ದರು.

`ಮರುಪಾವತಿಯ ಕಂತು ಬಂದಿಲ್ಲ'
`2012-13ನೇ ಸಾಲಿನಲ್ಲಿ ಆರ್‌ಟಿಇ ಅಡಿಯಲ್ಲಿ ಸೇರ್ಪಡೆಯಾದ ಹಿಂದುಳಿದ ಮಕ್ಕಳ ಶಾಲಾ ಶುಲ್ಕವನ್ನು ರಾಜ್ಯ ಸರ್ಕಾರ ಈವರೆಗೂ ಖಾಸಗಿ ಶಾಲೆಗಳಿಗೆ ಮರುಪಾವತಿ ಮಾಡಿಲ್ಲ' ಎಂದು ಎಲ್.ಆರ್.ಶಿವರಾಮೇಗೌಡ ಆರೋಪಿಸಿದರು.

`ವಾರ್ಷಿಕ 60 ಕೋಟಿ ರೂಪಾಯಿಗೂ ಅಧಿಕ ಮರುಪಾವತಿ ಮಾಡಬೇಕಿದೆ. ಆರಂಭಿಕ ಕಂತಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ 29 ಕೋಟಿ ರೂಪಾಯಿ ಪಾವತಿಸಬೇಕಿತ್ತು. ಎರಡನೇ ಕಂತು ಫೆಬ್ರುವರಿಯಲ್ಲಿ ಪಾವತಿಸಬೇಕಿದೆ. ಆದರೆ, ಶಾಲೆಗಳಿಗೆ ಹಣ ಮರುಪಾವತಿ ಆಗಿಲ್ಲ. ಶಿಕ್ಷಣ ಇಲಾಖೆಯ ನಿಧಾನಗತಿಯ ಧೋರಣೆಯಿಂದ ಖಾಸಗಿ ಶಾಲೆಗಳು ಸಂಕಷ್ಟ ಎದುರಿಸುವಂತಾಗಿದೆ' ಎಂದು ಅವರು ದೂರಿದರು.

`2013-14ನೇ ಸಾಲಿನಲ್ಲಿ ಶುಲ್ಕವನ್ನು ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಖಾತೆಗೆ ಶುಲ್ಕ ಮರುಪಾವತಿ ಮಾಡುವುದು ಬೇಡ. ವಿದ್ಯಾರ್ಥಿಗಳ ಪೋಷಕರ ಖಾತೆಗೆ ಶುಲ್ಕ ಮರುಪಾವತಿ ಮಾಡಬೇಕು' ಎಂದು ಒತ್ತಾಯಿಸಿದರು.

`ರಾಜ್ಯದಲ್ಲಿ ಆರ್‌ಟಿಇ ಅನುಷ್ಠಾನಗೊಳಿಸಿದ ಬಳಿಕ 6,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದನ್ನು ತಡೆಯಲು ರಾಜ್ಯ ಸರ್ಕಾರ ಆರಂಭಿಕ ಹಂತದಲ್ಲಿ ಬಡ ಮಕ್ಕಳನ್ನು ಸರ್ಕಾರಿ ಶಾಲೆಗೆ, ಬಳಿಕ ಅನುದಾನಿತ ಹಾಗೂ ಅನುದಾನರಹಿತ ಶಾಲೆಗೆ ದಾಖಲಿಸಬೇಕು. ಆಗ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ತಪ್ಪುತ್ತದೆ' ಎಂದು ಅವರು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT