ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿಯಲ್ಲಿ ಬಸವತತ್ವ ಮಹಾವಿದ್ಯಾಲಯ ಸ್ಥಾಪನೆ

Last Updated 9 ಫೆಬ್ರುವರಿ 2011, 12:20 IST
ಅಕ್ಷರ ಗಾತ್ರ

ಗದಗ: ಬಿಜಾಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಬಸವತತ್ವ ಮಹಾವಿದ್ಯಾಲಯವನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ  ‘ಬಸವತತ್ವ ಮಹಾವಿದ್ಯಾಲಯ ಸ್ಥಾಪನೆ ಕುರಿತು ಚಿಂತನೆ’ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಹರ್ಡೇಕರ್ ಮಂಜಪ್ಪನವರು ಬಸವತತ್ವವನ್ನು ಪ್ರಚುರ ಪಡಿಸಿ, ಅದರ ಬೆಳವಣಿಗೆಗೆ ಬಹಳ ಶ್ರಮವಹಿಸಿದ್ದರು. ಆಲಮಟ್ಟಿಯಲ್ಲಿ ಅವರ ಸ್ಮಾರಕವಿರುವ ಜಾಗದಲ್ಲಿ ಸುಮಾರು 40 ಎಕರೆ ಜಮೀನು ಇದೆ. ಅಲ್ಲೇ ಮಹಾವಿದ್ಯಾಲಯ ನಿರ್ಮಾಣ ಮಾಡುವುದು ಸೂಕ್ತವೆನಿಸುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.ಮಹಾವಿದ್ಯಾಲಯದ ಕಟ್ಟಡ ಕಾಮಗಾರಿ ಮುಗಿಯುವುದಕ್ಕೆ ಸುಮಾರು 2 ವರ್ಷಗಳು ಬೇಕಾಗುತ್ತದೆ. ಅಲ್ಲಿವರೆಗೆ ಗದುಗಿನ ತೋಂಟದಾರ್ಯ ಮಠದ ಆವರಣದಲ್ಲಿಯೇ ವಿದ್ಯಾಲಯ ಪ್ರಾರಂಭವಾಗುತ್ತದೆ ಎಂದರು.

ಚಿಂತನಗೋಷ್ಠಿಯಲ್ಲಿ ಭಾಗವಹಿಸಿದ್ದ ಹಂಪಿ ಕನ್ನಡ ವಿವಿಯ ಅಭಿವೃದ್ದಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಟಿ.ಆರ್. ಚಂದ್ರಶೇಖರ ಮಾತನಾಡಿ, ಜೂನ್ ಕೊನೆಗೆ ಮಹಾವಿದ್ಯಾಲಯ ಸ್ಥಾಪನೆಗೆ ಅಂತಿಮ ರೂಪ ಸಿಗಲಿದೆ. ಇದಕ್ಕೂ ಮೊದಲು ನಾಡಿನ ಎಲ್ಲ ಬಸವತತ್ವ ಅನುಯಾಯಿಗಳು ಹಾಗೂ ಚಿಂತಕರೊಂದಿಗೆ ಇನ್ನೊಂದು ಸುತ್ತಿನ ಕಮ್ಮಟವನ್ನು ನಡೆಸಲಾಗುತ್ತದೆ ಎಂದರು.

ಸ್ಥಾಪನೆಯ ಕುರಿತು ನಡೆದ ಚಿಂತನೆ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ 78 ಕ್ಕೂ ಹೆಚ್ಚು ಸಂಘಟನೆಗಳು ಇದಕ್ಕೆ ಒಮ್ಮತ ಸೂಚಿಸಿವೆ ಎಂದರು.ಡಾ. ಎನ್.ಜಿ. ಮಹಾದೇವಪ್ಪ, ಬಸವ ಪೀಠ ನಿರ್ದೇಶಕ ಡಾ. ವೀರಣ್ಣ ರಾಜೂರ, ಡಾ. ಪಿ.ಎಸ್. ಹಳ್ಯಾಳ ಮಾತನಾಡಿ, ಮಹಾವಿದ್ಯಾಲಯದ ಸ್ಥಾಪನೆ, ಪಠ್ಯಕ್ರಮ, ಶಿಕ್ಷಣ ಸ್ವರೂಪದ ಬಗ್ಗೆ ಚರ್ಚೆ ನಡೆಸಿದರು.ಭಾಲ್ಕಿಯ ಡಾ. ಬಸವಲಿಂಗ ಪಟ್ಟದ ದೇವರು, ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT