ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯ ಅನುಬಂಧ

Last Updated 8 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಪರಿತ್ಯಕ್ತ ಪುಟಾಣಿಗಳಿಗೆ ಬೆಂಗಳೂರಿನ ‘ಆಶ್ರಯ’ ಸಂಸ್ಥೆ, ವಾತ್ಸಲ್ಯದ ತಂಪು ತಾಣ. ಏನೇನೋ ಕಾರಣಗಳಿಗಾಗಿ ಅನಾಥರಾಗುವ ಅಥವಾ ತಂದೆತಾಯಿಯರಿಂದ ತೊರೆಯಲ್ಪಟ್ಟ ಮಕ್ಕಳಿಗೆ ದತ್ತು ಮೂಲಕ ಕೌಟುಂಬಿಕ ಭದ್ರತೆಯ ನೆಲೆಯನ್ನು ಒದಗಿಸಿಕೊಡುವ ಕಾರ್ಯವನ್ನು ‘ಆಶ್ರಯ’ ಸಂಸ್ಥೆ ಮಾಡುತ್ತಿದೆ.

ಅಂಗವೈಕಲ್ಯವಿರುವ ವಿಶೇಷ ಮಕ್ಕಳಿಗಾಗಿ ತಂದೆತಾಯಿಯರನ್ನು ಹುಡುಕುವಂತಹ ವಿಶೇಷ ಹೊಣೆಯನ್ನೂ ಇದು ನಿರ್ವಹಿಸುತ್ತಿದೆ.
 ಮಕ್ಕಳ ಕ್ಷೇಮಾಭಿವೃದ್ಧಿಯ ಈ ಕಾರ್ಯಗಳು ಸುಮಾರು ಮೂರು ದಶಕಗಳಿಂದ ಇಲ್ಲಿ ನಡೆಯುತ್ತಿವೆ. ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿದ ಕಾರ್ಮಿಕರ ಮಕ್ಕಳಿಗೆ ‘ಸಂಚಾರಿ ಬಾಲವಾಡಿ’, ಅನಾಥ ಮಹಿಳೆಯರು ಅಥವಾ ದೌರ್ಜನ್ಯಗಳಿಗೆ ಒಳಗಾದ ಮಹಿಳೆಯರ ಪುನರ್ವಸತಿ - ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು, ಯೋಜನೆಗಳ ಮೂಲಕ ನೊಂದ ಮಹಿಳೆಯರು ಮತ್ತು ಮಕ್ಕಳ ಬದುಕಿಗೆ ‘ಆಶ್ರಯ’ ಬೆಳಕಾಗಿದೆ.

ಈ ಸಾಮಾಜಿಕ ಕಾರ್ಯಗಳಿಗಾಗಿ ‘ಆಶ್ರಯ’ದ ನಿರ್ದೇಶಕಿ ನೊಮಿತಾ ಚಾಂಡಿ ಅವರಿಗೆ ಈ ವರ್ಷ ಪದ್ಮಶ್ರೀ ಪ್ರಶಸ್ತಿ ಸಂದಿದೆ.
 ನೊಮಿತಾ ಚಾಂಡಿ ಅವರ ಪತಿ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದವರು. ಹೀಗಾಗಿ ಪತಿ ಜೊತೆ ಊರೂರುಗಳ ಸುತ್ತಾಟ.

ವಿಶಾಖಪಟ್ಟಣ, ಪುಣೆ, ದೆಹಲಿ ಇತ್ಯಾದಿ ಊರುಗಳಲ್ಲಿ ಅವರ ವಾಸ. ಈ ಎಲ್ಲಾ ಊರುಗಳಲ್ಲೂ ದತ್ತು ಕ್ಷೇತ್ರದ ಹಲವು ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಅವರು. ಇದರಿಂದ ದತ್ತು ಎಂಬುದು ಎಷ್ಟೊಂದು ಒಳ್ಳೆಯ ಕೆಲಸ ಎಂಬುದು ಅವರ ಮನದಲ್ಲಿ ನೆಲೆ ನಿಂತಿತ್ತು. 1981ರಲ್ಲಿ ಪತಿ ನೌಕಾಪಡೆಯಿಂದ ನಿವೃತ್ತಿ ಪಡೆದರು. ಆಗ ಬಂದು ನೆಲೆಸಿದ್ದು ಪತಿಯ ತವರೂರಾದ ಬೆಂಗಳೂರಿನಲ್ಲಿ. ನೊಮಿತಾ ಚಾಂಡಿ ಅವರ ಮಾವ ಬೆಂಗಳೂರಿನ ಮೊದಲ ಪೊಲೀಸ್ ಕಮೀಷನರ್ ಆಗಿದ್ದವರು. ಹೀಗಾಗಿ ಬೆಂಗಳೂರು ಅವರ ಹೊಸ ನೆಲೆಯಾಯಿತು. ಆಗ ಅವರು ಹಾಗೂ ಸಮಾನಮನಸ್ಕ ಮಹಿಳೆಯರ ಗುಂಪು ಸೇರಿಕೊಂಡು 1982ರಲ್ಲಿ  ‘ಆಶ್ರಯ’ವನ್ನು ಹುಟ್ಟುಹಾಕಿದರು.


 ‘ಈ ಮೂರು ದಶಕಗಳಲ್ಲಿ ಹೊರದೇಶಗಳು ಹಾಗೂ ಭಾರತದೊಳಗೆ ಸುಮಾರು 1000 ಮಕ್ಕಳನ್ನು ದತ್ತು ನೀಡಿ ಮಕ್ಕಳಿಗೆ ನೆಲೆ ಕಲ್ಪಿಸಲಾಗಿದೆ’ಎನ್ನುತ್ತಾರೆ ನೊಮಿತಾ ಚಾಂಡಿ. ದತ್ತು ಕಾರ್ಯಕ್ರಮದ ಜೊತೆಗೇ, ‘ಆಶ್ರಯ’ದ ಮಕ್ಕಳ ಕ್ಷೇಮಾಭಿವೃದ್ದಿಯ ಯೋಜನೆಗಳು ಹಲವು ದಿಕ್ಕುಗಳಲ್ಲಿ ಕವಲೊಡೆದವು.1983ರಲ್ಲಿ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸಗಾರರ ಮಕ್ಕಳಿಗೆ ಸಂಚಾರಿ ಬಾಲವಾಡಿ (ಮೊಬೈಲ್ ಕ್ರಷ್) ಕಾರ್ಯಕ್ರಮ ಆರಂಭಿಸಲಾಯಿತು.
 
‘ದೆಹಲಿ, ಮುಂಬೈ ಬಿಟ್ಟರೆ ಇಂತಹದೊಂದು ಕಾರ್ಯಕ್ರಮ ಬೆಂಗಳೂರಿನಲ್ಲಿ ಆರಂಭವಾದದ್ದು ಆಗ ದಕ್ಷಿಣ ಭಾರತದಲ್ಲೇ ಮೊದಲು’ ಎಂಬುದು ಅವರ ಪ್ರತಿಪಾದನೆ. ವಿವಿಧ ನಗರಗಳಿಗೆ ಕೆಲಸಕ್ಕಾಗಿ ವಲಸೆ ಹೋಗುವ ಈ ಕಾರ್ಮಿಕರ ಮಕ್ಕಳ ಶಿಕ್ಷಣದ ಸಮಸ್ಯೆಗಳ ಅರಿವು ಆಗ ಉಂಟಾಯಿತು. ಇಂತಹ ಮಕ್ಕಳ ಶಿಕ್ಷಣದ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಕುಡಿಯೊಡೆಯಿತು ‘ನೀಲ್‌ಬಾಗ್’.

ಬೆಂಗಳೂರಿನಿಂದ ಸುಮಾರು 100 ಕಿ ಮೀ ದೂರದಲ್ಲಿ ಕೋಲಾರ ಜಿಲ್ಲೆಯ ರಾಯಲಪಾಡದಲ್ಲಿರುವ ‘ನೀಲ್‌ಬಾ’ನ ಸುಂದರ ಕ್ಯಾಂಪಸ್‌ನಲ್ಲಿ 330 ಮಕ್ಕಳು ಕಲಿಯುತ್ತಿದ್ದಾರೆ. ವಲಸೆ ಕಾರ್ಮಿಕರ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯವೂ ಇದೆ. ಸುಮಾರು 100 ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದಾರೆ. ‘ಎಲ್ ಕೆ ಜಿ ಯಿಂದ ಆರಂಭಿಸಿ ಪ್ರತಿ ವರ್ಷ ಒಂದೊಂದು ತರಗತಿಗಳನ್ನು ಸೇರಿಸುತ್ತಾ ಹೋದೆವು.
 
ಈಗ ಇದು 10ನೇ ತರಗತಿವರೆಗಿರುವ ಪೂರ್ಣ ಪ್ರಮಾಣದ ಕನ್ನಡ ಮಾಧ್ಯಮ ಶಾಲೆ. 10ನೇ ತರಗತಿಯಲ್ಲಿ 100% ಫಲಿತಾಂಶವೂ ಬರುತ್ತಿದೆ. ಪ್ಲಂಬಿಂಗ್, ಬಡಗಿ, ವೈರಿಂಗ್, ಟೇಲರಿಂಗ್, ಪಾಟರಿ, ಕಂಪ್ಯೂಟರ್ಸ್‌ ಇತ್ಯಾದಿಗಳನ್ನೂ ಇಲ್ಲಿ ಕಲಿಸಲಾಗುತ್ತದೆ. ಸುತ್ತಮುತ್ತಲ ಹಳ್ಳಿಗಳಿಂದಲೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಶಾಲೆಗೆ ಬರುತ್ತಾರೆ. ಕನ್ನಡ ಮಾಧ್ಯಮ ಶಾಲೆಯಾದರೂ, ನಾವು ಇಂಗ್ಲಿಷ್‌ಅನ್ನು ಬಹಳ ಚೆನ್ನಾಗಿ ಕಲಿಸುತ್ತೇವೆ. ಹೀಗಾಗಿ ಈ ಮಕ್ಕಳಿಗೆ ಸುಲಭವಾಗಿ ಸಮಾಜದಲ್ಲಿ ಬೆರೆತುಹೋಗಲು ಸಹಾಯವಾಗುತ್ತದೆ’ ಎನ್ನುತ್ತಾರೆ ನೊಮಿತಾ ಚಾಂಡಿ. ವಲಸೆ ಕಾರ್ಮಿಕರ ಮಕ್ಕಳಿಗೆ ಈ ಬಗೆಯ ಶಿಕ್ಷಣ ರಾಷ್ಟ್ರದಲ್ಲೇ ಮೊದಲು ಎಂಬುದು ಅವರ ಹೇಳಿಕೆ.

ಸಾಮಾನ್ಯವಾಗಿ ಕಟ್ಟಡ ನಿರ್ಮಾಣ ಕೆಲಸಗಾರರು ಗುಲ್ಬರ್ಗ, ಬೀದರ್ ಇತ್ಯಾದಿ ಉತ್ತರ ಕರ್ನಾಟಕದ ಊರುಗಳಿಂದ ಬರುವವರು. ಬಾಲ್ಯ ವಿವಾಹ ಪದ್ಧತಿ ಇವರಲ್ಲಿ ಮಾಮೂಲು. ಆದರೆ ಹೆಣ್ಣುಮಕ್ಕಳಿಗೆ  ಇಲ್ಲಿ ಶಿಕ್ಷಣ ಸಿಗುತ್ತಿರುವುದರಿಂದ, ಹೆಣ್ಣುಮಕ್ಕಳ ಓದು ಬರಹ, ಉದ್ಯೋಗಗಳ ಮಹತ್ವವನ್ನು ಅವರೀಗ ಅರಿತುಕೊಳ್ಳುತ್ತಿದ್ದಾರೆ.

1996ರಲ್ಲಿ ದಮನಿತ ಹಾಗೂ ಪರಿತ್ಯಕ್ತ ಮಹಿಳೆಯರಿಗಾಗಿ ವಸತಿ ಕೇಂದ್ರವೊಂದನ್ನು ತೆರೆಯಲಾಯಿತು. ಇದು ಬೆಂಗಳೂರಿನಿಂದ 22 ಕಿ ಮೀ ದೂರದಲ್ಲಿದೆ. ದತ್ತು ಕಾರ್ಯಕ್ರಮದಿಂದಲೇ ಹೊರಹೊಮ್ಮಿದ ಯೋಜನೆ ಇದು. ಕುಟುಂಬದೊಳಗಿನ ಕಷ್ಟಗಳಿಂದಾಗಿ ಮಕ್ಕಳನ್ನು ತೊರೆದು ಹೋಗಲು ಬರುತ್ತಿದ್ದ ತಾಯಂದಿರಿಗೆ ತಮ್ಮ ಮಕ್ಕಳನ್ನು ತಾವೇ ಸಲಹುವಂತೆ ಪ್ರೋತ್ಸಾಹಿಸಿ ಜೀವನದಲ್ಲಿ ಅವರು ನೆಲೆ ನಿಲ್ಲಲು ಸಹಕರಿಸುವಂತಹ ತರಬೇತಿ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲು ಆರಂಭಿಸಲಾಯಿತು.

ಬಡ ವರ್ಗದಿಂದ ಬರುವಂತಹ ಮಹಿಳೆಯರು ಇವರು. ಆಸ್ತಿಯಂತಹ ವಿವಾದ ಈ ಕುಟುಂಬಗಳಲ್ಲಿ ಇರುವುದಿಲ್ಲ. ಹೀಗಾಗಿ ಬರೀ 100 ರೂಪಾಯಿ ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ಹೋರಾಡುತ್ತಾ ಕುಳಿತುಕೊಳ್ಳಬೇಕೇಕೆ? ಬದಲಿಗೆ, ತಮ್ಮ ಕಾಲ ಮೇಲೆ ತಾವು ನಿಲ್ಲಲು ಈ ಮಹಿಳೆಯರಿಗೆ ಸಹಕಾರಿಯಾಗುವಂತಹ ತರಬೇತಿ ಯೋಜನೆಗಳು ಹಾಗೂ ಸೂಕ್ತ ಉದ್ಯೋಗಗಳಿಗೆ ಈ ಕೇಂದ್ರದಲ್ಲಿ ಆದ್ಯತೆ.
 
ಏಕಕಾಲಕ್ಕೆ 23 ಮಹಿಳೆಯರಿಗೆ ಆಶ್ರಯ ಒದಗಿಸುವ ಸೌಕರ್ಯಗಳು ಇಲ್ಲಿದೆ. ಕಾನೂನಿನ ಜೊತೆ ಸಂಘರ್ಷದಲ್ಲಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಕರ್ನಾಟಕ ಸರ್ಕಾರದ ಅಬ್ಸರ್ವೇಷನ್ ಹೋಮ್ ಜೊತೆಗೂ ‘ಆಶ್ರಯ’ ಕಾರ್ಯ ನಿರ್ವಹಿಸುತ್ತಿದೆ.  ‘ದತ್ತು ತೆಗೆದುಕೊಳ್ಳಲು ಕಾಯುತ್ತಿರುವಂತಹ ಕುಟುಂಬಗಳ ದೊಡ್ಡ ಪಟ್ಟಿಯೇ ಇದೆ. ಈಗ ಏನಾಗಿದೆ ಎಂದರೆ. ದತ್ತು ಬಯಸುವ ಕುಟುಂಬಗಳು ಹೆಚ್ಚು; ಮಕ್ಕಳು ಕಡಿಮೆ ಎಂಬಂತಾಗಿದೆ. ಹೆಚ್ಚಿನ ಮಕ್ಕಳು ಶಾಸನಬದ್ಧವಾದ ದತ್ತು ಪರಿಧಿಗೆ ಬರುತ್ತಿಲ’ ಎಂದು ನೊಮಿತಾ ಚಾಂಡಿ ವಿಷಾದಿಸುತ್ತಾರೆ. ‘ನಮ್ಮ ಸಂಸತ್ತಿಗೆ ನಿಯಮಿತವಾದ ದತ್ತು ಮಸೂದೆ ಮಂಡಿಸಲು ಸಾಧ್ಯವಾಗಲಿಲ್ಲ.

ಬಾಲ ನ್ಯಾಯ (ಮಕ್ಕಳ ಆರೈಕೆ ಹಾಗೂ ರಕ್ಷಣೆ ) ಕಾಯಿದೆ  2000 (ಜುವೆನೈಲ್ ಜಸ್ಟೀಸ್ - ಕೇರ್ ಅಂಡ್ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಆ್ಯಕ್ಟ್)ದ ವ್ಯಾಪ್ತಿಯಲ್ಲಿ ದತ್ತು ಕೂಡ ಈಗ ಸೇರಿದೆ. ಪರಿತ್ಯಕ್ತ, ಅನಾಥ  ಮಕ್ಕಳು ಹಾಗೂ ಕುಟುಂಬಗಳು ಅಥವಾ ಸಂಸ್ಥೆಗಳಿಂದ ದೌರ್ಜನ್ಯಕ್ಕೊಳಗಾದ ಮಕ್ಕಳ ಪುನರ್ವಸತಿಯಲ್ಲಿ ದತ್ತು ಮುಖ್ಯವಾದ ಪ್ರಕ್ರಿಯೆ ಎಂಬುದನ್ನು ಬಾಲ ನ್ಯಾಯ ಕಾಯಿದೆ 2000 ಗುರುತಿಸುತ್ತದೆ. ಹೀಗಿದ್ದೂ ಇದರಲ್ಲಿ ಬಹಳಷ್ಟು ದೋಷಗಳಿವೆ. ದತ್ತು ತೆಗೆದುಕೊಳ್ಳಲು ’ಹಾಮಾ’ (ಹಿಂದೂ ಅಡಾಪ್ಷನ್ ಅಂಡ್ ಮೇಂಟೆನೆನ್ಸ್ ಆ್ಯಕ್ಟ್) ಸಹ ಇದೆ.  ಹಲವು ಕಾನೂನುಗಳು ತಮ್ಮತಮ್ಮದೇ ನಿಯಮಾವಳಿಗಳ ಮೂಲಕ ಮಕ್ಕಳ ದತ್ತು ವಲಯದಲ್ಲಿ ಅನೇಕ ಗೊಂದಲಗಳ ಸೃಷ್ಟಿಗೆ ಕಾರಣವಾಗುತ್ತಿವೆ. ಆಧುನಿಕ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಕಾನೂನನ್ನೂ ಆಧುನಿಕಗೊಳಿಸುವುದು ಅಗತ್ಯ’ ಎನ್ನುತ್ತಾರೆ ಅವರು. ಕೈಕಾಲುಗಳಿಲ್ಲದೇ ಹುಟ್ಟಿದ ದಕ್ಷಿಣ ಕನ್ನಡದ ಹುಡುಗಿ ಮಿಂದಾ ‘ಆಶ್ರಯ’ದ ಮೂಲಕ ಅಮೆರಿಕನ್ ಅಮ್ಮನ ಮಡಿಲು ಸೇರಿದಳು. ಅಂಗವೈಕಲ್ಯದ ಮಿತಿಗಳನ್ನು ಮೀರಿರುವ ಆಕೆ ಈಗ 20 ವರ್ಷದ ಯುವ ಕಲಾವಿದೆ. ತನ್ನ ಸ್ವದೇಶದ ಬೇರುಗಳನ್ನರಸಿ ಇತ್ತೀಚೆಗೆ ಆಕೆ ಭಾರತಕ್ಕೆ ಭೇಟಿಯೂ ನೀಡಿದ್ದಳು ಎಂದು ಆಕೆ ಬಿಡಿಸಿರುವ ಚಿತ್ರಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾರೆ.

ಸಾವಿರಾರು ಅನಾಥ ಮಕ್ಕಳು ನಮ್ಮ ರಾಷ್ಟ್ರದಲ್ಲಿ ಸಾಂಸ್ಥಿಕ ಪಾಲನೆಯಲ್ಲಿ ಬೆಳೆಯುತ್ತಿವೆ. ಸಾಂಸ್ಥಿಕ ಪಾಲನೆಗಿಂತ ಕುಟುಂಬದ ಪಾಲನೆ ಮಕ್ಕಳ ಬೆಳವಣಿಗೆಗೆ ಹೆಚ್ಚು ಆರೋಗ್ಯಕರ. ಈ ನಿಟ್ಟಿನಲ್ಲಿ ದತ್ತು ವ್ಯವಸ್ಥೆ ಕುರಿತಂತೆ ಕಾನೂನು ಹಾಗೂ ನೀತಿ ಮಟ್ಟದಲ್ಲಿ ಸಾಕಷ್ಟು ಕೆಲಸಗಳಾಗಬೇಕಿವೆ ಎಂಬುದರಲ್ಲಿ ಬಹುಶಃ ಎರಡು ಮಾತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT