ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ಸ್ ಮೇಲೆರಗಿದ ಸೂಪರ್ ಕಿಂಗ್ಸ್

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಚಿನ್ ತೆಂಡೂಲ್ಕರ್ ರೀತಿ 100 ಶತಕ ಗಳಿಸುವುದು ಬೇಡ, ರೋಜರ್ ಫೆಡರರ್ ರೀತಿ 16 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆಲ್ಲುವುದೂ ಬೇಡ, ಅಂಬಾನಿ ರೀತಿ ಸಾವಿರಾರು ಕೋಟಿ ರೂ. ಆಸ್ತಿ ಹೊಂದಿರುವುದೂ ಬೇಡ. ಆದರೆ ಮಹೇಂದ್ರ ಸಿಂಗ್ ದೋನಿ ರೀತಿ ಅದೃಷ್ಟವಿರಲಿ!

ಪೇಸ್‌ಬುಕ್, ಟ್ವಿಟರ್‌ನಲ್ಲಿ ಕ್ರಿಕೆಟ್ ಪ್ರೇಮಿಗಳು ಹರಿದು ಬಿಡುತ್ತಿರುವ ಇಂತಹ ಒಂದು ಸಂದೇಶ ಅಚ್ಚರಿ ಮೂಡಿಸಬಹುದು. ಆದರೆ ಐಪಿಎಲ್ ಟೂರ್ನಿಯಲ್ಲೂ ಅದೃಷ್ಟ ದೋನಿ ಬೆನ್ನು ಹಿಡಿದಿರುವುದು ಮಾತ್ರ ನಿಜ.

ಅದೃಷ್ಟದ ಬಲದಿಂದಲೇ ಪ್ಲೇ ಆಫ್ ಹಂತ ಪ್ರವೇಶಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈಗ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಸನಿಹ ದಾಪುಗಾಲಿಡುತ್ತಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ `ಎಲಿಮಿನೇಟರ್~ ಪಂದ್ಯದಲ್ಲಿ 38 ರನ್‌ಗಳಿಂದ ಗೆದ್ದ ಸೂಪರ್ ಕಿಂಗ್ಸ್ ಈಗ ಎರಡನೇ ಅರ್ಹತಾ ಪಂದ್ಯದಲ್ಲಿ ಆಡಲು ಅವಕಾಶ ಪಡೆದುಕೊಂಡಿದೆ. ಚೆನ್ನೈನಲ್ಲಿ ಶುಕ್ರವಾರ ನಡೆಯಲಿರುವ ಈ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎದುರು ಗೆದ್ದರೆ ಫೈನಲ್ ಪ್ರವೇಶಿಸಲಿದೆ.

`ಎಲಿಮಿನೇಟರ್~ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ನೀಡಿದ 188 ರನ್‌ಗಳ ಗುರಿಯ ಎದುರೇ ಮುಂಬೈ ಇಂಡಿಯನ್ಸ್ ತಂಡದ ಅರ್ಧ ಬಲ ಕುಸಿದು ಹೋಯಿತು. ಪರಿಣಾಮ ಹರಭಜನ್ ಸಿಂಗ್ ಬಳಗ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಗಳಿಸಿದ್ದು ಕೇವಲ 149 ರನ್. ಹಾಗಾಗಿ ಟೂರ್ನಿಯಿಂದ ಹೊರಬಿತ್ತು.

ಮುಂಬೈ ಇಂಡಿಯನ್ಸ್ ಉತ್ತಮ ಆರಂಭವನ್ನೇ ಪಡೆದಿತ್ತು. ಸಚಿನ್ ಹಾಗೂ ಸ್ಮಿತ್ 30 ಎಸೆತಗಳಲ್ಲಿ 47 ರನ್ ಸೇರಿಸಿ ಭರವಸೆ ಹುಟ್ಟಿಸಿದ್ದರು. ಆದರೆ ತೆಂಡೂಲ್ಕರ್ ರನ್‌ಔಟ್ ಆಗಿದ್ದು ಈ ತಂಡದ ಅಭಿಮಾನಿಗಳ ಕನಸನ್ನು ಛಿದ್ರಗೊಳಿಸಿತು.

ಪಂದ್ಯದ ಹಣೆಬರಹ ಬದಲಾಗಿದ್ದು...: ಒಂದು ಜೊತೆಯಾಟ ಪಂದ್ಯದ ಇಡೀ ಹಣೆಬರಹವನ್ನೇ ಬದಲಾಯಿಸಬಲ್ಲದು. ಅದಕ್ಕೆ ದೋನಿ ಹಾಗೂ ಬ್ರಾವೊ ಆಟವೇ ಸಾಕ್ಷಿ. ಇವರಿಬ್ಬರು ಆರನೇ ವಿಕೆಟ್‌ಗೆ 29 ಎಸೆತಗಳಲ್ಲಿ 73 ರನ್ ಗಳಿಸಿದ ರೀತಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರ ಖುಷಿಯನ್ನು ಮತ್ತಷ್ಟು ಹೆಚ್ಚಿಸಿತು.
ಆದರೆ ಅತಿ ಉತ್ಸಾಹದಲ್ಲಿದ್ದ ಇಂಡಿಯನ್ಸ್‌ಗೆ ಆಘಾತ ನೀಡಲು ಮತ್ತಿನ್ನೇನು ಬೇಕು?

ಪರಿಣಾಮ ಯಾರೂ ನಿರೀಕ್ಷಿಸದ ಮೊತ್ತ ಕಲೆಹಾಕಿದ್ದು ಸೂಪರ್ ಕಿಂಗ್ಸ್. ಮೊದಲು ಬ್ಯಾಟ್ ಮಾಡಿದ್ದ ಈ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. ಇದರ ಹೆಚ್ಚಿನ ಶ್ರೇಯ ನಾಯಕ ದೋನಿ (ಅಜೇಯ 51; 20 ಎ, 6 ಬೌ, 2 ಸಿ.) ಸಲ್ಲಬೇಕು. ಹಾಗಂತ ಹಸ್ಸಿ ಹಾಗೂ ಬದರೀನಾಥ್ ಆಟ ಮರೆಯುವಂತಿಲ್ಲ.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಫೀಲ್ಡಿಂಗ್‌ಗೆ ಮುಂದಾಗಿದ್ದು ಪ್ರೇಕ್ಷಕರಲ್ಲಿ ಅಚ್ಚರಿ ಉಂಟು ಮಾಡಿದ್ದು ನಿಜ. ಏಕೆಂದರೆ ಬೆಂಗಳೂರು ಪಿಚ್ ಬ್ಯಾಟ್ಸ್‌ಮನ್‌ಗಳ ಸ್ವರ್ಗ.

ಅದರಲ್ಲೂ ಒತ್ತಡದ ಇಂತಹ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಲು ತಂಡಗಳು ಮುಂದಾಗುತ್ತವೆ.
ಇಂಡಿಯನ್ಸ್ ನಾಯಕ ಭಜ್ಜಿಯ ಯೋಜನೆ ಆರಂಭದಲ್ಲಿಯೇ ಕ್ಲಿಕ್ ಆಯಿತು. ಆದರೆ ಕೊನೆಯಲ್ಲಿ ಎಡವಟ್ಟಿಗೆ ಕಾರಣವಾಯಿತು. ಒಂದು ಹಂತದಲ್ಲಿ ಮೊದಲ 9 ಓವರ್‌ಗಳಲ್ಲಿ ಕೇವಲ 47 ರನ್ ಗಳಿಸಿದ್ದ ಸೂಪರ್ ಕಿಂಗ್ಸ್ ಕೊನೆಯ 11 ಓವರ್‌ಗಳಲ್ಲಿ 140 ರನ್ ಸೇರಿಸಿದ್ದು ಅದ್ಭುತವೇ ಸರಿ. ಅದು ಇಂಡಿಯನ್ಸ್‌ಗೆ ಅಕ್ಷರಶಃ ಶಾಕ್ ನೀಡಿತು.

ಸೂಪರ್ ಕಿಂಗ್ಸ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಎರಡನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ವಿಕೆಟ್ ಪತನಗೊಂಡವು.

ಲಸಿತ್ ಮಾಲಿಂಗ ಅಥವಾ ರುದ್ರ ಪ್ರತಾಪ್ ಸಿಂಗ್ ಬೌಲಿಂಗ್ ಮಾಡಬಹುದು ಎಂಬ ಯೋಚನೆಯಲ್ಲಿದ್ದ ಸೂಪರ್ ಕಿಂಗ್ಸ್ ಬ್ಯಾಟ್ಸ್ ಮನ್‌ಗಳಿಗೆ ಒಮ್ಮೆಲೇ ಆಘಾತ. ಧವಳ್ ಕುಲಕರ್ಣಿಗೆ ನಾಯಕ ಭಜ್ಜಿ ಹೊಸ ಚೆಂಡನ್ನು ನೀಡಿದ್ದು ಕ್ಲಿಕ್ ಆಯಿತು. ಅವರು ಕ್ರಮವಾಗಿ ಮುರಳಿ ವಿಜಯ್ ಹಾಗೂ ಅಪಾಯಕಾರಿ ಸುರೇಶ್ ರೈನಾ ವಿಕೆಟ್ ಕಬಳಿಸಿದರು.

ಪವರ್ ಪ್ಲೇ ಅಂತ್ಯಕ್ಕೆ ಚೆನ್ನೈ ಗಳಿಸಿದ್ದು ಕೇವಲ 30 ರನ್. ಆದರೆ ಮೈಕ್ ಹಸ್ಸಿ (49; 39 ಎ, 8 ಬೌ, 1 ಸಿ) ಹಾಗೂ ಎಸ್.ಬದರೀನಾಥ್ (47; 39 ಎ, 6 ಬೌ, 1 ಸಿ.) ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಮೂರನೇ ವಿಕೆಟ್‌ಗೆ 93 ರನ್‌ಗಳ (72 ಎಸೆತ) ಜೊತೆಯಾಟವೇ ಅದಕ್ಕೆ ಸಾಕ್ಷಿ.

ಆದರೆ ದೋನಿ ಪ್ರವೇಶ ಪಂದ್ಯಕ್ಕೆ ರೋಚಕ ತಿರುವು ನೀಡಿತು. ಅವರು ತಾವೆದುರಿಸಿದ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿದರು. ಕೇವಲ 20 ಎಸೆತಗಳಲ್ಲಿ ಅವರು ಅರ್ಧ ಶತಕ ಪೂರೈಸಿದರು. ಅಷ್ಟು ಮಾತ್ರವಲ್ಲದೇ, ದೋನಿ ಮುರಿಯದ ಆರನೇ ವಿಕೆಟ್‌ಗೆ ಬ್ರಾವೊ (ಅಜೇಯ 33; 14 ಎ, 3 ಬೌ, 2 ಸಿ.) ಜೊತೆಗೂಡಿ ಎದುರಾಳಿಯ ಬೌಲರ್‌ಗಳನ್ನು ಕಾಡಿದ ಪರಿ ಅಷ್ಟಿಷ್ಟಲ್ಲ.

ಸ್ಕೋರ್ ವಿವರ:
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187

ಮುರಳಿ ವಿಜಯ್ ಸಿ ರೋಹಿತ್ ಶರ್ಮ ಬಿ ಧವಳ್ ಕುಲಕರ್ಣಿ  01
ಮೈಕ್ ಹಸ್ಸಿ ಸಿ ಧವಳ್ ಕುಲಕರ್ಣಿ ಬಿ ಜೇಮ್ಸ ಫ್ರಾಂಕ್ಲಿನ್   49
ಸುರೇಶ್ ರೈನಾ ಬಿ ಧವಳ್ ಕುಲಕರ್ಣಿ   00
ಎಸ್.ಬದರೀನಾಥ್ ಸಿ ರೋಹಿತ್ ಶರ್ಮ ಬಿ ಪೊಲಾರ್ಡ್   47
ಮಹೇಂದ್ರ ಸಿಂಗ್ ದೋನಿ ಔಟಾಗದೆ  51
ರವೀಂದ್ರ ಜಡೇಜಾ ಸಿ ರೋಹಿತ್ ಶರ್ಮ ಬಿ ಧವಳ್   01
ಡ್ವೇನ್ ಬ್ರಾವೊ ಔಟಾಗದೆ  33
ಇತರೆ: (ಲೆಗ್‌ಬೈ-2, ವೈಡ್-3)  05
ವಿಕೆಟ್ ಪತನ: 1-1 (ವಿಜಯ್; 1.1); 2-1 (ರೈನಾ; 1.2); 3-95 (ಬದರೀನಾಥ್; 13.2); 4-106 (ಹಸ್ಸಿ; 14.2); 5-114 (ಜಡೇಜಾ; 15.1)
ಬೌಲಿಂಗ್: ಹರಭಜನ್ ಸಿಂಗ್ 3-1-20-0, ಧವಳ್ ಕುಲಕರ್ಣಿ 4-0-46-3 (ವೈಡ್-2), ಆರ್.ಪಿ.ಸಿಂಗ್ 4-0-34-0, ಲಸಿತ್ ಮಾಲಿಂಗ 4-0-41-0 (ವೈಡ್-1), ಕೀರನ್ ಪೊಲಾರ್ಡ್ 3-0-26-1, ಡ್ವೇನ್ ಸ್ಮಿತ್ 1-0-6-0, ಜೇಮ್ಸ ಫ್ರಾಂಕ್ಲಿನ್ 1-0-12-0

ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149

ಸಚಿನ್ ತೆಂಡೂಲ್ಕರ್ ರನ್‌ಔಟ್ (ಜಡೇಜಾ/ಜಕಾತಿ)   11
ಡ್ವೇನ್ ಸ್ಮಿತ್ ಸಿ ರವೀಂದ್ರ ಜಡೇಜಾ ಬಿ ಶಾದಾಬ್ ಜಕಾತಿ  38
ರೋಹಿತ್ ಶರ್ಮ ಸಿ ಎಂ.ಎಸ್.ದೋನಿ ಬಿ ಅಲ್ಬಿ ಮಾರ್ಕೆಲ್  14
ದಿನೇಶ್ ಕಾರ್ತಿಕ್ ಸಿ ಎಂ.ಎಸ್.ದೋನಿ ಬಿ ಅಲ್ಬಿ ಮಾರ್ಕೆಲ್  06
ಜೇಮ್ಸ ಫ್ರಾಂಕ್ಲಿನ್ ಸಿ ಎಂ.ಎಸ್.ದೋನಿ ಬಿ ಡ್ವೇನ್ ಬ್ರಾವೊ  13
ಅಂಬಟಿ ರಾಯುಡು ಸಿ ಮುರಳಿ ವಿಜಯ್ ಬಿ ಆರ್.ಅಶ್ವಿನ್  11
ಕೀರನ್ ಪೊಲಾರ್ಡ್ ಸಿ ಸುರೇಶ್ ರೈನಾ ಬಿ ಡ್ವೇನ್ ಬ್ರಾವೊ  16
ಹರಭಜನ್ ಸಿಂಗ್ ಸಿ ಸುರೇಶ್ ರೈನಾ ಬಿ ಬೆನ್ ಹಿಲ್ಫೆನ್ಹಾಸ್  01
ಲಸಿತ್ ಮಾಲಿಂಗ ಬಿ ರವೀಂದ್ರ ಜಡೇಜಾ  17
ಧವಳ್ ಕುಲಕರ್ಣಿ ಔಟಾಗದೆ  10
ಆರ್.ಪಿ.ಸಿಂಗ್ ಔಟಾಗದೆ  01
ಇತರೆ:  (ಲೆಗ್‌ಬೈ-5, ವೈಡ್-5, ನೋಬಾಲ್-1) 11
ವಿಕೆಟ್ ಪತನ: 1-47 (ಸಚಿನ್; 4.6); 2-55 (ಸ್ಮಿತ್; 6.2); 3-68 (ಕಾರ್ತಿಕ್; 8.1); 4-77 (ರೋಹಿತ್; 10.1); 5-96 (ರಾಯುಡು; 11.5); 6-102 (ಫ್ರಾಂಕ್ಲಿನ್; 13.3); 7-103 (ಹರಭಜನ್; 14.2); 8-129 (ಪೊಲಾರ್ಡ್; 17.6); 9-148 (ಮಾಲಿಂಗ; 19.4)
ಬೌಲಿಂಗ್: ಶಾದಾಬ್ ಜಕಾತಿ 4-0-25-1 (ವೈಡ್-1), ಬೆನ್ ಹಿಲ್ಫೆನ್ಹಾಸ್ 4-0-45-1 (ನೋಬಾಲ್-1, ವೈಡ್-4), ಆರ್.ಅಶ್ವಿನ್ 3-0-18-1, ರವೀಂದ್ರ ಜಡೇಜಾ 2-0-15-1, ಅಲ್ಬಿ ಮಾರ್ಕೆಲ್ 4-0-31-2, ಡ್ವೇನ್ ಬ್ರಾವೊ 3-0-10-2
ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 38 ರನ್‌ಗಳ ಜಯ ಹಾಗೂ ಎರಡನೇ ಅರ್ಹತಾ ಪಂದ್ಯದಲ್ಲಿ ಆಡಲು ಅವಕಾಶ.
ಪಂದ್ಯ ಶ್ರೇಷ್ಠ: ಎಂ.ಎಸ್.ದೋನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT