ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಕ್ಕಟ್ಟಿನಲ್ಲಿ ಗ್ರಾಫಿಕ್ ಡಿಸೈನ್ ಉದ್ಯಮ!

Last Updated 12 ಸೆಪ್ಟೆಂಬರ್ 2011, 9:45 IST
ಅಕ್ಷರ ಗಾತ್ರ

ಮೈಸೂರು: ಸ್ಟಾಫ್ಟ್‌ವೇರ್ ಕಂಪೆನಿಗಳ ಪ್ರತಿನಿಧಿಗಳು ಈಚೆಗೆ ನಗರದ ಗ್ರಾಫಿಕ್ಸ್ ಡಿಸೈನ್ ಮಳಿಗೆ, ಫೋಟೋ ಸ್ಟುಡಿಯೋಗಳ ಮೇಲೆ ದಾಳಿ ನಡೆಸಿ ಅಲ್ಲಿ ಉಪಯೋಗಿಸುತ್ತಿರುವ ಫೋಟೋ ಶಾಪ್, ಕೋರಲ್ ಡ್ರಾ ಇತರ ತಂತ್ರಾಂಶಗಳ ಲೈಸೆನ್ಸ್ ಪರಿಶೀಲಿಸಿದ್ದಾರೆ. ಈ ಘಟನೆ ಮುದ್ರಣ ಕ್ಷೇತ್ರದ ಸಣ್ಣ ಉದ್ದಿಮೆದಾರರಲ್ಲಿ ಆತಂಕ, ಗೊಂದಲ ಸೃಷ್ಟಿಸಿದೆ.

ಶಿವರಾಂಪೇಟೆ, ಅರಸು ರಸ್ತೆಯ 2 ಅಂಗಡಿಗಳಿಗೆ ಸೆ.7ರಂದು ಸ್ಟಾಫ್ಟ್‌ವೇರ್ ಕಂಪೆನಿ ಪ್ರತಿನಿಧಿಗಳು ಭೇಟಿ ನೀಡಿ, ಇಲ್ಲಿ ಬಳಸುವ ತಂತ್ರಾಂಶಗಳ ಮೂಲ ಸಿ.ಡಿ ನೀಡಲು ಒತ್ತಾಯಿ ಸಿದ್ದಾರೆ. ಪೊಲೀಸರ ಭದ್ರತೆಯಲ್ಲೇ ನಡೆದ ಈ ಶೋಧದಿಂದ ಸ್ಟುಡಿಯೋ ಮಾಲೀಕರು, ಡಿಸೈನರ್‌ಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಕಾರಣದಿಂದ ಅನೇಕ ಅಂಗಡಿಗಳು ಬಾಗಿಲು ತೆರೆದಿಲ್ಲ. ಕೆಲವರು ಕೆಲಸ ಸ್ಥಗಿತಗೊಳಿಸಿದ್ದಾರೆ. ಈ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮೈಸೂರಿನಲ್ಲಿ 500ಕ್ಕೂ ಹೆಚ್ಚು ಗ್ರಾಫಿಕ್ಸ್ ಮತ್ತು ಆಡ್ ಡಿಸೈನ್ ಅಂಗಡಿಗಳಿವೆ. ಅಂದಾಜು 400 ಫೋಟೋ ಸ್ಟುಡಿಯೊಗಳಿವೆ. ಮೈಸೂರು ಫೋಟೋಗ್ರಾಪರ್ಸ್‌ ಹಾಗೂ ವಿಡಿಯೊಗ್ರಾಫರ್ಸ್‌ ಸಂಘ ಅಸ್ಥಿತ್ವದಲ್ಲಿದೆ. ಆದರೆ ಗ್ರಾಫಿಕ್ಸ್, ಜಾಹಿರಾತು ವಿನ್ಯಾಸಗಾರರ ಯಾವುದೇ ಸಂಘ ಇಲ್ಲ. ಇದರಿಂದ ಅನೇಕರು ಕಂಗಾಲಾಗಿದ್ದಾರೆ.

ಸೈಬರ್ ಸೆಂಟರ್, ಡಿಟಿಪಿ ಸೆಂಟರ್. ಆಡ್ ಡಿಸೈನ್ ಏಜೆನ್ಸಿ, ವಿಡಿಯೊ ಗ್ರಾಫಿಕ್ಸ್ ಕೇಂದ್ರಗಳಲ್ಲಿ ಫೋಟೋಶಾಫ್, ಕೋರಲ್ ಡ್ರಾ ಬಳಕೆ ಹೆಚ್ಚು. ತಾವು ಬಳಸುವ ತಂತ್ರಾಂಶ ಅಸಲಿಯೇ- ನಕಲಿಯೇ ಎಂಬ ಮಾಹಿತಿ ಅನೇಕರಿಗೆ ಇಲ್ಲ. ನಿರಾತಂಕವಾಗಿ ನಡೆದುಕೊಂಡು ಹೋಗುತ್ತಿದ್ದ ಉದ್ಯಮ ಈಗ ಸಮಸ್ಯೆ ಎದುರಿಸುತ್ತಿದ್ದೆ. ಕೆಲಸ ಸ್ಥಗಿತದಿಂದ ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಗ್ರಾಮಾಂತರ ಭಾಗದಿಂದ ಬರುವ ಗ್ರಾಹಕರು ನಿರಾಶರಾಗಿ ಮರಳುತ್ತಿದ್ದಾರೆ.


ಸಮಸ್ಯೆ ಏನು?: ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿದ ತಂತ್ರಾಂಶ ಬಳಕೆ ಕಾನೂನು ಬಾಹಿರ ಎಂಬುದು ಪರಿಶೀಲನೆಗೆ ಬಂದವರ ವಾದ. `ನೀವು ಬಳಸುತ್ತಿರುವ ತಂತ್ರಾಂಶದ ಅಸಲಿ ಸಿ.ಡಿ ತೋರಿಸಿ~ ಎಂದು ಕಂಪೆನಿ ಪ್ರತಿನಿಧಿಗಳು ಸ್ಟುಡಿಯೋ ಮಾಲೀಕರಿಗೆ ಕೇಳಿದ್ದಾರೆ. `ನೀವು ಬಳಸುವ ತಂತ್ರಾಂಶ ಹಣ ಪಾವತಿಸಿ ಪಡೆಯಬೇಕು. ಇಲ್ಲವಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ~ ಎಂದು ಎಚ್ಚರಿಸಿದ್ದಾರೆ.

`ಕಳೆದ ಬುಧವಾರ ಎರಡು ಅಂಗಡಿಗಳ ಮೇಲೆ ದಾಳಿ ನಡೆಸ್ದ್ದಿದೇವೆ. ಈ ವೇಳೆ ವ್ಯಾಪಾರಿಗಳು ಮುಗ್ದರು ಎಂಬುದು ಗಮನಕ್ಕೆ ಬಂದಿದೆ. ಮುಂಬೈ, ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸ್ದ್ದಿದ್ದೇವೆ. ಲೈಸೆನ್ಸ್ ಇಲ್ಲದೇ ಈ ತಂತ್ರಾಂಶ ಬಳಕೆ ಕಾಪಿ ರೈಟ್ ಮತ್ತು ಐಟಿ ರೈಟ್ ಕಾಯ್ದೆಯಡಿ ಅಪರಾಧ~ ಎನ್ನುತ್ತಾರೆ ಯೂನಿವರ್ಸ್‌ಲ್ ಕಾಪಿ ಪ್ರೊಟೆಕ್ಷನ್ ಕಂಪೆನಿ ನಿರ್ದೇಶಕ ಶಂಕರ್ ಸಂಜೀವಗೌಡ.

ಆದರೆ ಉದ್ಯಮದಲ್ಲಿ ತೊಡಗಿದವರ ವಾದ ಬೇರೆ. ದೊಡ್ಡ ಪ್ರಮಾಣದ ಮುದ್ರಣ ಕೆಲಸ ನಿರ್ವಹಿಸುವವರು ದುಬಾರಿ ತಂತ್ರಾಂಶ ಖರೀದಿಸುತ್ತಾರೆ. ಸಣ್ಣ ಉದ್ಯಮಗಳಿಗೆ ಇದು ಕಷ್ಟ. ಈವರೆಗೆ ಸುಮ್ಮನಿದ್ದ ಕಂಪೆನಿಗಳು ದಿಢೀರ್ ದಾಳಿ ನಡೆಸಿ ಹಣ ಸುಲಿಗೆ ಹುನ್ನಾರ ಅಡಗಿದೆ ಎಂದು~ ಅನೇಕರು ಆರೋಪಿಸುತ್ತಾರೆ.

`ಅಧಿಕೃತ ತಂತ್ರಾಂಶ ಬಳಕೆ ಸಣ್ಣ ಉದ್ಯಮಿಗಳಿಗೆ ಕಷ್ಟವಾಗುತ್ತದೆ. ತಂತ್ರಾಂಶ ಖರೀದಿಸಿ ಎನ್ನುತ್ತಿರುವ ಡಾಲರ್ ಲೆಕ್ಕದಲ್ಲಿ ಬೆಲೆ ನಿಗದಿಗೊಳಿಸಿವೆ. ಫೋಟೋಶಾಫ್‌ಗೆ 80 ಸಾವಿರ ಹಾಗೂ ಕೋರಲ್ ಡ್ರಾಗೆ 34 ಸಾವಿರ ಹಣ ನೀಡಿಕೆ ಅಸಾಧ್ಯ. ಅಮೆರಿಕ ಹಾಗೂ ಭಾರತದಲ್ಲಿ ನಡೆಯುವ ವಹಿವಾಟಿನಲ್ಲಿ ವ್ಯತ್ಯಾಸವಿದೆ. ಮೈಸೂರಿನಲ್ಲಿ ಉದ್ಯಮ ಚಿಕ್ಕದು~ ಎಂದು ಹೆಸರು ಹೇಳಲು ಇಚ್ಛಿಸದ ಜಾಹಿರಾತು ಕಂಪೆನಿ ಮಾಲೀಕರು `ಪ್ರಜಾವಾಣಿ~ಗೆ ತಿಳಿಸಿದರು.

ಸಾಫ್ಟವೇರ್ ಕಂಪೆನಿ ಪ್ರತಿನಿಧಿಗಳ ಹಾಗೂ ಈ ಉದ್ಯಮದವರ ಸಭೆ ಸೋಮವಾರ ನಡೆಯಲಿದ್ದು, ಸಭೆಯಲ್ಲಿ ತಂತ್ರಾಂಶಗಳ ಬೆಲೆ ತಗ್ಗಿಸಲು ಮುದ್ರಣಕಾರರು ಮನವಿ ಮಾಡುವ ಸಾಧ್ಯತೆ ಇದೆ.
ಈ ಬೆಳವಣಿಗೆ ಮೈಸೂರಿನ ಉದ್ಯಮದ ಮೇಲೆ ಕರಿ ನೆರಳು ಬೀರಿದೆ. ಮುಂದೆ ಗ್ರಾಹಕರಿಗೆ ಹೊರೆ ಬೀಳುವ ಲಕ್ಷಣಗಳಿವೆ. ಕಾರ್ಮಿಕ ವರ್ಗವೂ ಸಂಕಷ್ಟಕ್ಕೆ ಒಳಗಾದರೂ ಅಚ್ಚರಿ ಪಡಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT