ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ 325 ಆದೇಶ ವಿಲೇವಾರಿಗೆ ಬಾಕಿ

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಜಿ~ ಕೋಟಾದಡಿ ಬಿಡಿ ನಿವೇಶನ ಹಂಚಿಕೆ ಮಾಡುವಂತೆ 2010ರ ಡಿಸೆಂಬರ್ 15ಕ್ಕೂ ಮುನ್ನವೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದ 325ಕ್ಕೂ ಹೆಚ್ಚು ಪ್ರಕರಣಗಳು ಇನ್ನೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಿವೆ.

ಮಾರುಕಟ್ಟೆ ದರದಲ್ಲಿ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನಿವೇಶನಗಳ ಅಗತ್ಯವಿರುವ ಈ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ನಿಲುವು ಬಹಿರಂಗಪಡಿಸದೇ ಮೌನಕ್ಕೆ ಶರಣಾಗಿದೆ.

`1997ರ ಆಗಸ್ಟ್ 6ರ ಸುತ್ತೋಲೆ ಆಧಾರದಲ್ಲಿ `ಜಿ~ ಕೋಟಾದಡಿ ಬಿಡಿ ನಿವೇಶನ ಹಂಚಿಕೆಗೆ ಬಿಡಿಎಗೆ ನಿರ್ದೇಶನ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ~ ಎಂದು ಹೈಕೋರ್ಟ್ 2010ರ ಡಿಸೆಂಬರ್ 15ರಂದು ಆದೇಶ ಹೊರಡಿಸಿತ್ತು.
 
ಆದರೆ, ಹೈಕೋರ್ಟ್ ಆದೇಶದ ಬಳಿಕವೂ ಸರ್ಕಾರ ಕೆಲ ಪ್ರಕರಣಗಳಲ್ಲಿ ಅಂತಹ ನಿರ್ದೇಶನ ನೀಡಿತ್ತು. ಕೆಲವು ದಿನಗಳ ನಂತರ ಮತ್ತೊಂದು ಪ್ರಕರಣದಲ್ಲಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ, ಮತ್ತೆ ಮಂಜೂರಾತಿ ಮಾಡುವುದಿಲ್ಲ ಎಂದು ತಿಳಿಸಿತ್ತು. ಆದರೆ, ನಿವೇಶನ ಹಸ್ತಾಂತರ ಬಾಕಿ ಇರುವ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ನಿಲುವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ.

`ಜಿ~ ಕೋಟಾದಡಿ ನಿವೇಶನ ಹಂಚಿಕೆ ಅಧಿಕಾರ ಮುಖ್ಯಮಂತ್ರಿಯವರ ಕೈಸೇರಿದ ಬಳಿಕ 1,400ಕ್ಕೂ ಹೆಚ್ಚು ನಿವೇಶನಗಳ ಹಂಚಿಕೆಗೆ ಆದೇಶ ಹೊರಡಿಸಲಾಗಿತ್ತು. ಅಗತ್ಯ ಸಂಖ್ಯೆಯ ನಿವೇಶನಗಳು ಲಭ್ಯವಿಲ್ಲದೇ ಇರುವುದು, ಹಂಚಿಕೆ ಮಾಡಿದ ನಿವೇಶನಗಳಿಗೆ ಬದಲಿ ನಿವೇಶನ ಕೋರಿರುವುದು ಮತ್ತಿತರ ಕಾರಣಗಳಿಗಾಗಿ 325ಕ್ಕೂ ಹೆಚ್ಚು ಜನರಿಗೆ ಇನ್ನೂ ನಿವೇಶನ ಹಸ್ತಾಂತರ ಆಗಿಲ್ಲ. ಈ ವಿಷಯದಲ್ಲಿ ಬಿಡಿಎ ಹಂತದಲ್ಲಿ ಇಲ್ಲವೇ ರಾಜ್ಯ ಸರ್ಕಾರದ ಹಂತದಲ್ಲಿ ಯಾವುದೇ ಖಚಿತ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ರದ್ಧತಿಗೆ ಬಿಡಿಎ ಒಲವು: ಸಾಮಾನ್ಯವಾಗಿ `ಜಿ~ ಕೋಟಾದಡಿ ನಿವೇಶನ ಹಂಚಿಕೆ ಮಾಡುವಾಗ ಕೋಟ್ಯಂತರ ರೂಪಾಯಿ ಬೆಲೆಬಾಳುವ ಬಿಡಿ ನಿವೇಶನಗಳನ್ನು ಎಂಟರಿಂದ ಹತ್ತು ಲಕ್ಷ ರೂಪಾಯಿಗಳಿಗೆ ನೀಡಲಾಗುತ್ತದೆ. ಈಗ ಬಾಕಿ ಇರುವ 325 ಪ್ರಕರಣಗಳಲ್ಲಿ ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಿದ್ದರೆ ಬಿಡಿಎ, ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಹೊರೆ ಅನುಭವಿಸುತ್ತಿತ್ತು. ಈಗ ಅದೇ ನಿವೇಶನಗಳನ್ನು ಹರಾಜಿನ ಮೂಲಕ ವಿಲೇವಾರಿ ಮಾಡಿದಲ್ಲಿ ಅಷ್ಟೂ  ವರಮಾನ ಬಿಡಿಎ ಬೊಕ್ಕಸಕ್ಕೆ ಹರಿದುಬರಲಿದೆ.

`2010ರ ಡಿಸೆಂಬರ್ 15ಕ್ಕೂ ಮುನ್ನ `ಜಿ~ ಕೋಟಾದಡಿ ಹಂಚಿಕೆ ಮಾಡಿ, ಫಲಾನುಭವಿಗಳಿಗೆ ಹಸ್ತಾಂತರ ಮಾಡಿದ್ದ ನಿವೇಶನಗಳ ಮಂಜೂರಾತಿಯನ್ನು ರದ್ದು ಮಾಡುವುದು ಸಮಂಜಸವಲ್ಲ ಎಂಬ ನಿಲುವನ್ನು ಬಿಡಿಎ ತಾಳಿದೆ. ಈಗಾಗಲೇ ಹಸ್ತಾಂತರವಾದ ನಿವೇಶನಗಳಲ್ಲಿ ಹಲವರು ಮನೆ ನಿರ್ಮಿಸಿಕೊಂಡಿದ್ದಾರೆ. ಕೆಲವರು ನಿವೇಶನಗಳನ್ನು ಮಾರಾಟ ಮಾಡಿದ್ದು, ಖರೀದಿದಾರರು ಮನೆ ನಿರ್ಮಿಸಿ ವಾಸವಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಿವೇಶನ ಹಂಚಿಕೆಯನ್ನೇ ರದ್ದು ಮಾಡುವುದು ಸರಿಯಲ್ಲ~ ಎಂಬುದು ಬಿಡಿಎ ವಾದ.

ಆದರೆ, ನಿವೇಶನ ಹಸ್ತಾಂತರಕ್ಕೆ ಬಾಕಿ ಇರುವ ಪ್ರಕರಣಗಳಲ್ಲಿ ಹೈಕೋರ್ಟ್ ಆದೇಶಕ್ಕೆ ತಲೆಬಾಗುವ ತೀರ್ಮಾನಕ್ಕೆ ಬಿಡಿಎ ಬಂದಿದೆ. ಲಭ್ಯವಿರುವ ನಿವೇಶನಗಳನ್ನು ಹರಾಜಿನ ಮೂಲಕ ಮಾರಾಟ ಮಾಡಿ ಬೊಕ್ಕಸ ತುಂಬಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ ಬಿಡಿಎ ಆಡಳಿತ.
 
ಆದರೂ, ಈ ಪ್ರಕರಣದಲ್ಲಿ ವಕೀಲ ವಾಸುದೇವ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ವಿಭಾಗೀಯ ಪೀಠದ ತೀರ್ಪು ಆಧರಿಸಿ ಮುಂದಿನ ಹೆಜ್ಜೆ ಇಡುವ ಚಿಂತನೆಯಲ್ಲಿದೆ ಬಿಡಿಎ.

ಮಗುಮ್ಮಾದ ಸರ್ಕಾರ:ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪಾಲಿಸುವುದಾಗಿ ಪ್ರಮಾಣಪತ್ರ ಸಲ್ಲಿಸಿದ ಬಳಿಕವೂ ರಾಜ್ಯ ಸರ್ಕಾರ ಕೆಲವರಿಗೆ `ಜಿ~ ಕೋಟಾದಡಿ ನಿವೇಶನ ಹಂಚಿಕೆ ಮಾಡಿರುವುದನ್ನು ಮಾಹಿತಿ ಹಕ್ಕು ಕಾರ್ಯಕರ್ತರು ಬಹಿರಂಗಗೊಳಿಸಿದ್ದಾರೆ.

ಈ ವಿಷಯವನ್ನೂ ವಾಸುದೇವ್ ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ. 2010ರ ಡಿಸೆಂಬರ್ 15ಕ್ಕೂ ಮುನ್ನ ಮಾಡಿರುವ ನಿವೇಶನ ಹಂಚಿಕೆಯನ್ನು ರದ್ದುಗೊಳಿಸುವುದು ಕಷ್ಟ ಎಂದು ಹೈಕೋರ್ಟ್‌ಗೆ ತಿಳಿಸಿರುವ ರಾಜ್ಯ ಸರ್ಕಾರ, ನಿವೇಶನಗಳ ಹಸ್ತಾಂತರಕ್ಕೆ ಬಾಕಿ ಇರುವ ಪ್ರಕರಣಗಳ ಕುರಿತು ಯಾವುದೇ ನಿಲುವನ್ನು ಪ್ರಕಟಿಸಿಲ್ಲ.

ನಿವೇಶನ ಹಸ್ತಾಂತರಕ್ಕೆ ಬಾಕಿ ಇರುವ ಪ್ರಕರಣಗಳಲ್ಲೂ ರಾಜ್ಯ ಸರ್ಕಾರ `ಫಲಾನುಭವಿ~ಗಳ ಪರ ವಾಲಿದರೆ ಬಿಡಿಎಗೆ ಸಾವಿರ ಕೋಟಿ ರೂಪಾಯಿ ಹೊರೆಯಾಗಲಿದೆ. ಈ ಆದೇಶಗಳನ್ನು ರದ್ದು ಮಾಡಲು ಮುಂದಾದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರ್ಥಿಕ ಸ್ಥಿತಿ ಸುಧಾರಣೆಗೆ ದಾರಿಯಾಗಲಿದೆ.

ಆದರೆ, ಬಾಕಿ ಪ್ರಕರಣಗಳ ವಿಷಯದಲ್ಲಿ ಮಗುಮ್ಮಾಗಿರುವ ಸರ್ಕಾರ, ನಿವೇಶನ ಹಂಚಿಕೆ ಆದೇಶ ಪಡೆದ ಫಲಾನುಭವಿಗಳು ಮತ್ತು `ಜಿ~ ಕೋಟಾ ವಿರುದ್ಧ ಕಾನೂನು ಸಮರ ನಡೆಸುತ್ತಿರುವವರನ್ನು ದೀರ್ಘಕಾಲದಿಂದ ತುದಿಗಾಲ ಮೇಲೆ ನಿಲ್ಲಿಸಿದೆ.



 (ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT