ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರ ಕನಸು ನನಸಾಗುವುದೇ...?

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಾಕಷ್ಟು ಸವಲತ್ತುಗಳಿದ್ದರೂ, ಸಾಧಿಸುವ ಛಲದ ಕೊರತೆ ಹಲವರದು. ಸೌಲಭ್ಯಗಳ ಸಂಕಷ್ಟದಲ್ಲೂ ಪುಟಿದೆದ್ದು ನಿಲ್ಲಬೇಕು ಎನ್ನುವ ಹಠ ಕೆಲವರದು. ಸಾಧನೆಯ ಬಲದಿಂದ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎನ್ನುವ ತವಕ ಸಾಧಕರದ್ದು..!

ಗ್ರಾಮೀಣ ಪ್ರದೇಶದಲ್ಲಿ ಯುವ ಪ್ರತಿಭೆಗಳಿವೆ. ಆದರೆ ಅವರ ಸಾಧನೆಗೆ ತಕ್ಕ ಬೆಲೆ ದೊರೆಯುತ್ತಿಲ್ಲ ಎನ್ನುವುದೇ ವಿಷಾದ. ಯುವ ಪ್ರತಿಭೆಗಳ ಬಲಕ್ಕೆ ಬೆಂಬಲ ನೀಡುವವರ ಕೊರತೆ ಇದೆ. ಸರಿಯಾದ ಸೌಲಭ್ಯಗಳಿಲ್ಲದೇ, ಕೋಚ್ ನೆರವಿಲ್ಲದೇ ಸಾಕಷ್ಟು ಪದಕ ಜಯಿಸಿದ್ದರೂ, ಅವರಿಗೆ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ.ಇಂತಹ ಯುವ ಪ್ರತಿಭೆಗಳ ಸಾಲಿನಲ್ಲಿ ನಿಲ್ಲುವವರು ಗಂಗಾವತಿಯ ಭಾರ್ಗವಿ ಹಾಗೂ ಹನುಮಂತಪ್ಪ.

ನಾಲ್ಕು ಬಾರಿ ಹೈಜಂಪ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿರುವ ಹನುಮಂತಪ್ಪಗೆ ಅಲ್ಲಿ ಪದಕ ಜಯಿಸಬೇಕು ಎನ್ನುವ ಕನಸು.
 
ಆದರೆ, ಅದಕ್ಕೆ ತಕ್ಕ ಸೌಲಭ್ಯಗಳಿಲ್ಲ. ಆ ಮಟ್ಟಿಗಿನ ಕೋಚ್ ಮಾರ್ಗದರ್ಶನ ಸಿಕ್ಕಿಲ್ಲ. ಆದರೂ 2005, 2006ರ ರಾಜ್ಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಈತನಿಗೆ ಅನೇಕ ಪದಕಗಳು ಕೊರಳು ಸೇರಿವೆ. ಸ್ನೇಹಿತರಿಂದ ಶ್ಲಾಘನೆ ಸಿಕ್ಕಿದೆ. ಆದರೆ, ಪದಕ ಜಯಿಸಲು ಪಟ್ಟ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿಲ್ಲ.

2006ರಲ್ಲಿ ಮುಂಬೈ, 2007ರಲ್ಲಿ ಫರೀದಾಬಾದ್ ಹಾಗೂ ಕೋಲ್ಕತ್ತಗಳಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿದ್ದಾರೆ. ಗ್ರಾಮೀಣ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ಸಾಕಷ್ಟು ಪದಕ, ಪ್ರಶಸ್ತಿಗಳು ಬಂದಿವೆ.
 
ಇತ್ತೀಚಿಗಷ್ಟೇ ಸರ್ಕಾರಿ ನೌಕರಿ ಪಡೆದುಕೊಂಡಿರುವ ಹನುಮಂತಪ್ಪನಿಗೆ ಉನ್ನತ ಅಧಿಕಾರಿಯಾಗಬೇಕು ಎನ್ನುವ ಕನಸು. ಕ್ರೀಡೆಯಲ್ಲಿಯೂ ಮುಂದುವರಿಯಬೇಕು ಎನ್ನುವ ಆಸೆ.

ಇದಕ್ಕಿಂತಲೂ ಭಿನ್ನವಾಗಿರುವ ಭಾರ್ಗವಿ ಅವರ ಕತೆಯೇ ಬೇರೆ. ಈ ಅಥ್ಲೀಟ್‌ಳ ಕೊರಳು ನೋಡಿದರೆ, ಸಾಕು. ಜಯಿಸಿದ ಪದಕಗಳೇ ಭಾರ್ಗವಿ ಅವರ ಸಾಧನೆಯ ಕತೆ ಹೇಳುತ್ತವೆ.

ಮನೆಯಲ್ಲಿರುವ ಪ್ರಶಸ್ತಿ ಪತ್ರಗಳು ಹಾಗೂ ಟ್ರೋಫಿಗಳು ಈ ಸ್ಪರ್ಧಿಯ ಶ್ರಮವನ್ನು ಹೊರಸೂಸುತ್ತವೆ. ಹೈಜಂಪ್, ಲಾಂಗ್ ಜಂಪ್, ಟ್ರಿಪಲ್ ಜಂಪ್ ಹಾಗೂ 4x400ಮೀ. ರಿಲೇನಲ್ಲಿ ಸಾಕಷ್ಟು ಪದಕ ಜಯಿಸಿದ್ದಾರೆ.

ಮೈಸೂರು, ಬೆಂಗಳೂರು, ಗುಲ್ಬರ್ಗ, ಬಿಜಾಪುರ ಹಾಗೂ ಮೂಡುಬಿದಿರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗಳಲ್ಲಿ ಹಲವು ಪದಕಗಳ ಒಡತಿಯಾಗಿದ್ದಾರೆ.

ಸಹಜವಾಗಿಯೇ ಗೆಳೆಯರು, ಗುರುಗಳು ಹಾಗೂ ಮಾರ್ಗದರ್ಶಕರಿಂದ ಉತ್ತಮ ಬೆಂಬಲ ಸಿಕ್ಕಿದೆ. ಆದರೆ, ರಾಷ್ಟ್ರೀಯ ಕೋಚ್ ಮಾರ್ಗದರ್ಶನ ಸಿಕ್ಕರೆ, ಅಲ್ಲಿಯೂ ಆಡುವ ಬಯಕೆ. ಆದು ಸಾಧ್ಯವಾಗುತ್ತಿಲ್ಲ.

8ನೇ ತರಗತಿಯಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿರುವ ಭಾರ್ಗವಿ 40ಕ್ಕೂ ಹೆಚ್ಚು ಪದಕ ಜಯಿಸಿದ್ದಾರೆ. ಶಾಲಾ, ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಹಲವು ಪದಕ ಮಡಿಲು ಸೇರಿವೆ.

ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯಗಳ ಕೊರತೆಯ ನಡುವೆ, ಈ ಸಾಧನೆ ಮಾಡುತ್ತಿದ್ದಾರೆ. ಕನಿಷ್ಠ ಸವಲತ್ತುಗಳು ಸಿಕ್ಕರೆ, ಸಾಕಷ್ಟು ಯುವ ಅಥ್ಲೀಟ್‌ಗಳ ಬಾಳಿಗೆ ಬೆಳಕು ಮೂಡಬಹುದು. ಅವರ ಭವಿಷ್ಯವು ಬಂಗಾರವಾಗುತ್ತದೆ.

ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವ ಈ ಇಬ್ಬರೂ ಅಥ್ಲೀಟ್‌ಗಳಿಗೆ ಉತ್ತಮ ಕೋಚ್‌ಗಳ ಅಗತ್ಯವಿದೆ. ಹೆಚ್ಚಿನ ಸೌಲಭ್ಯವಿಲ್ಲದೇ ಸಾಕಷ್ಟು ಸಾಧನೆ, ಹೆಸರು ಮಾಡಿದ್ದಾರೆ. ಇದು ರಾಷ್ಟ್ರಮಟ್ಟದಲ್ಲಿ ಗೊತ್ತಾಗಬೇಕು ಎನ್ನುವುದು ಹನುಮಂತಪ್ಪ ಹಾಗೂ ಭಾರ್ಗವಿ ಅವರ ಬಯಕೆ.

ಅದಕ್ಕಾಗಿ ನಿತ್ಯವೂ ತಪ್ಪದೇ ಅಭ್ಯಾಸ. ಶಾಲಾ, ಕಾಲೇಜುಗಳಲ್ಲಿ ಸಿಕ್ಕ ಬೆಂಬಲ ಅವರ ಸಾಧನೆಗೆ ಪ್ರೇರಣೆ. ಉತ್ತಮ ಕೋಚ್ ಸಿಕ್ಕರೆ, ಅವರ ಸ್ಪರ್ಧೆಗೆ ಅಗತ್ಯವಿರುವಷ್ಟು ಸೌಲಭ್ಯಗಳು ದೊರೆತರೆ, ಅವರಲ್ಲಿನ ಪ್ರತಿಭೆ ಹೊರ ಹೊಮ್ಮಲು ಸಾಧ್ಯವಾಗುತ್ತದೆ. ಈ ಅಥ್ಲೀಟ್‌ಗಳ ಕನಸು ನನಸಾಗುವುದೇ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT